ಸೊರಗುತ್ತಿರುವ ಐತಿಹಾಸಿಕ ಪುಷ್ಕರಣಿ

7

ಸೊರಗುತ್ತಿರುವ ಐತಿಹಾಸಿಕ ಪುಷ್ಕರಣಿ

Published:
Updated:

ಚನ್ನಗಿರಿ: ಪುಷ್ಕರಣಿಯ ಹೂಳೆತ್ತಲು ಹೋಗಿ ಇಡೀ ಪುಷ್ಕರಣಿಯನ್ನು ಸೊರಗುವಂತೆ ಮಾಡಲಾಗಿದೆ.ತಾಲ್ಲೂಕಿನ ಸಂತೇಬೆನ್ನೂರು ಗ್ರಾಮದಲ್ಲಿ 1558ರಲ್ಲಿ ಪಾಳೇಗಾರ ಕೆಂಗಪ್ಪ ಅಥವಾ ಕೆಂಗಹನುಮಪ್ಪನಾಯಕ ನಿರ್ಮಿಸಿದ ಎಂಬ ಐತಿಹ್ಯ ಇರುವ ದಕ್ಷಿಣ ಭಾರತದಲ್ಲಿಯೇ ಸುಂದರವಾದ ಪುಷ್ಕರಣಿ ಇಂದು ಸೊರಗುತ್ತಿದೆ. ಇತ್ತ ಸಂಪೂರ್ಣ ಹೂಳೆತ್ತುವ ಕಾರ್ಯ ಕೂಡಾ ಮಾಡದೇ, ಇಷ್ಟೇ ಸಾಲದು ಎಂಬಂತೆ ಪುಷ್ಕರಣಿಯ ಮೆಟ್ಟಿಲುಗಳನ್ನು ಕಿತ್ತು ಹಾಕಿ ಆರು ತಿಂಗಳಾದರೂ ಇನ್ನು ಕೂಡಾ ಅವುಗಳನ್ನು ಜೋಡಿಸದೇ ಹಾಗೆಯೇ ಬಿಡಲಾಗಿದೆ.ಈ ಹಿಂದೆ ಜಿಲ್ಲಾಧಿಕಾರಿಯಾಗಿದ್ದ ಅಮರನಾರಾಯಣ ಜಿಲ್ಲೆಯ ಐತಿಹಾಸಿಕ ಸ್ಥಳಗಳಲ್ಲಿರುವ ಹೊಂಡ, ಪುಷ್ಕರಣಿ ಅಥವಾ ಬಾವಿಗಳಲ್ಲಿರುವ ಹೂಳನ್ನು ಎತ್ತಿಸಿ ಹಾಕಲು ತೀರ್ಮಾನಿಸಿದ್ದರು. ಇನ್ನೇನು ಈ ಪುಷ್ಕರಣಿಯ ಕಾಮಗಾರಿ ಆರಂಭಿಸಬೇಕು ಎನ್ನುವಷ್ಟರಲ್ಲಿ ಬೇರೆಡೆಗೆ ವರ್ಗಾವಣೆಯಾಗಿ ಹೋದರು. ನಂತರ ಬಂದ ಜಿಲ್ಲಾಧಿಕಾರಿಯವರು ಈ ಕಾರ್ಯವನ್ನು ಮುಂದುವರಿಸುವಂತೆ ಆದೇಶ ಮಾಡಿದರು.ಸುಮಾರು ` 6 ಲಕ್ಷ ವೆಚ್ಚದಲ್ಲಿ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ಹೂಳೆತ್ತುವ ಕಾರ್ಯವನ್ನು ಸ್ಥಳೀಯ ಗ್ರಾ.ಪಂ. ವಹಿಸಿಕೊಂಡಿತ್ತು. ಆದರೆ, ಕೇವಲ ಅರ್ಧ ಅಡಿಯಷ್ಟು ಮಾತ್ರ ಹೂಳನ್ನು ತೆಗೆದು ಅಪೂರ್ಣ ಕಾಮಗಾರಿ ನಡೆಸಲಾಗಿದೆ. ಈ ಕಾರಣದಿಂದ ತುಂಬಿದ್ದ ಪುಷ್ಕರಣಿಯಲ್ಲಿನ ನೀರನ್ನು ಹೊರಕ್ಕೆ ತೆಗೆದು ಹಾಕಲಾಗಿತ್ತು. ಪ್ರಸ್ತುತ ಪುಷ್ಕರಣಿಯಲ್ಲಿ ಕೇವಲ ಆರೇಳು ಅಡಿಗಳಷ್ಟು ನೀರು ಸಂಗ್ರಹವಾಗಿದೆ. ಇತ್ತ ನೀರು ಇಲ್ಲದೇ ಹಾಗೂ ಕಾಮಗಾರಿಯೂ ಕೂಡಾ ಸಂಪುರ್ಣವಾಗದೇ ತನ್ನ ಅಂದವನ್ನು ಕಳೆದುಕೊಂಡು ಪುಷ್ಕರಣಿ ಸೊರಗುತ್ತಿದೆ ಎಂದು ಗ್ರಾಮದ ಬಸವರಾಜಪ್ಪ, ರಾಜೇಶ್, ರಂಗಪ್ಪ ಅವರು ಬೇಸರ ವ್ಯಕ್ತಪಡಿಸಿದ್ದಾರೆ.ಆರೇಳು ತಿಂಗಳ ಹಿಂದೆ ಕಿತ್ತ ಕಲ್ಲುಗಳನ್ನು ಇದುವರೆಗೂ ಕೂಡಾ ಜೋಡಿಸಲು ಸಾಧ್ಯವಾಗಿಲ್ಲ ಎಂದರೆ ಸಂಬಂಧಪಟ್ಟ ಇಲಾಖೆಯ ನಿರ್ಲಕ್ಷ್ಯವೇ ಇದಕ್ಕೆ ಕಾರಣವಾಗಿದೆ. ಆದ್ದರಿಂದ ಈಗಲಾದರೂ ಅಪೂರ್ಣಗೊಂಡ ಪುಷ್ಕರಣಿಯ ಕಾಮಗಾರಿಯನ್ನು ಮುಕ್ತಾಯಗೊಳಿಸಿ ಪ್ರವಾಸಿಗರ ವೀಕ್ಷಣೆಗೆ ಅನುಕೂಲ ಮಾಡಿಕೊಡಬೇಕೆಂಬುದು ಗ್ರಾಮಸ್ಥರ ಒತ್ತಾಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry