ಮಂಗಳವಾರ, ನವೆಂಬರ್ 19, 2019
28 °C

ಸೊರಬದಲ್ಲಿ ಮಧು ಬಂಗಾರಪ್ಪ ನಾಮಪತ್ರ

Published:
Updated:
ಸೊರಬದಲ್ಲಿ ಮಧು ಬಂಗಾರಪ್ಪ ನಾಮಪತ್ರ

ಸೊರಬ:  ಜೆಡಿಎಸ್ ಅಭ್ಯರ್ಥಿ ಮಧು ಬಂಗಾರಪ್ಪ  ಅವರು ಸೋಮವಾರ ಅಪಾರ ಬೆಂಬಲಿಗರೊಂದಿಗೆ ತೆರೆದ ವಾಹನದಲ್ಲಿ ಮೆರವಣಿಗೆಯಲ್ಲಿ ತೆರಳಿ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಿದರು.ಪಟ್ಟಣದ ರಂಗನಾಥಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಮಧು ಅವರು ತಾಯಿ ಶಕುಂತಲಾ ಬಂಗಾರಪ್ಪ ಅವರ ಆಶೀರ್ವಾದ ಪಡೆದರು. ನಂತರ ಮೆರವಣಿಗೆಯ ಮೂಲಕ ತಾಲ್ಲೂಕು ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು.ಮೆರವಣಿಗೆಯಲ್ಲಿ ಮಾಜಿ ಮುಖ್ಯಮಂತ್ರಿ ದಿ. ಬಂಗಾರಪ್ಪ ಅವರ ಪತ್ನಿ ಶಕುಂತಲಾ ಬಂಗಾರಪ್ಪ, ಮಧು ಅವರ ಸಹೋದರಿ ಸುಜಾತಾ ತಿಲಕ್‌ಕುಮಾರ್ ಮತ್ತು ಅನಿತಾ ಪವನ್     ಕುಮಾರ್ ಪಾಲ್ಗೊಂಡಿದ್ದರು.ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಸೊರಬ ಬ್ಲಾಕ್ ಅಧ್ಯಕ್ಷ ಎಚ್. ಗಣಪತಿ, ಆನವಟ್ಟಿ ಬ್ಲಾಕ್ ಅಧ್ಯಕ್ಷ ಕೆ.ಪಿ.ರುದ್ರಗೌಡ್ರು ಹಾಗೂ ಸಿದ್ದಲಿಂಗಯ್ಯ ಹಾಜರಿದ್ದರು.ಮಧು ಬಂಗಾರಪ್ಪ ಅವರು ನಾಮಪತ್ರ ಸಲ್ಲಿಸಿದ ನಂತರ ಬಂಗಾರಪ್ಪ ಅವರ ಸಮಾಧಿ ಸ್ಥಳದಲ್ಲಿ ಪೂಜೆ ಸಲ್ಲಿಸಿ, ಪ್ರಚಾರ ಸಭೆಯಲ್ಲಿ ಮಾತನಾಡಿದರು.`ಬಂಗಾರಪ್ಪ ಅವರು ಬಡವರಿಗಾಗಿ ಕಟ್ಟಿದ ರಾಜಕಾರಣವನ್ನು ಉಳಿಸಿಕೊಳ್ಳುವ ಸಂದಿಗ್ಧ ಸ್ಥಿತಿಯಲ್ಲಿ ಇಂದು ನಾವಿದ್ದೇವೆ. ಅದಕ್ಕೆ ಪೂರಕ ಎಂಬಂತೆ ಇಂದು ಸಹಸ್ರಾರು ಜನ ಸೇರಿದ್ದನ್ನು ನೋಡಿದರೆ ಎದುರಾಳಿಗಳು ಠೇವಣಿ ಕಳೆದುಕೊಂಡರೂ ಅಚ್ಚರಿ ಪಡಬೇಕಿಲ್ಲ' ಎಂದು ವಿಶ್ವಾಸ ವ್ಯಕ್ತಪಡಿಸಿದರು.ಸಾಗರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಗೋಪಾಲಕೃಷ್ಣ ಬೇಳೂರು, `ಮಧು ಬಂಗಾರಪ್ಪ ಅವರ ಗೆಲುವು ನಮ್ಮೆಲ್ಲರ ಗೆಲುವು ಆಗಬೇಕು. ನನ್ನ ಮೊದಲ ಆದ್ಯತೆ ಮಧು ಅವರನ್ನು ಮಂತ್ರಿ ಮಾಡುವುದು. ಮಾಜಿ ಮುಖ್ಯಮಂತ್ರಿ  ಎಚ್.ಡಿ. ಕುಮಾರಸ್ವಾಮಿ ಅವರ ದೂರದೃಷ್ಟಿ, ನಾಯಕತ್ವದ ಮೇಲೆ ಭರವಸೆಯಿಟ್ಟು ಜೆಡಿಎಸ್ ಸೇರಿದ್ದೇನೆ' ಎಂದರು.   ಶಕುಂತಲಾ ಬಂಗಾರಪ್ಪ ಅಧ್ಯಕ್ಷತೆ ವಹಿಸಿದ್ದರು.ಶಿಕಾರಿಪುರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಚ್.ಟಿ.   ಬಳಿಗಾರ್,ಅನಿತಾ ಮಧು ಬಂಗಾರಪ್ಪ, ಮಹಿಳಾ ಅಧ್ಯಕ್ಷೆ ಶೇಖರಮ್ಮ, ತಾ.ಪಂ. ಅಧ್ಯಕ್ಷ ಸದಾನಂದ ಗೌಡ್ರು, ಕೆ.ಬಿ. ಪ್ರಕಾಶ್, ನಾಗಪ್ಪ ಮೇಷ್ಟ್ರು, ಕೆ.ವಿ. ಗೌಡ್ರು, ಕಡಸೂರು ಸೋಮಣ್ಣ, ಹೇಮಾವತಿ ಕಡ್ಲೇರ್, ಪ್ರಶಾಂತ್ ಮೇಸ್ತ್ರಿ, ಅನಂತ ಕೆಲವೆ, ಗೋವಿಂದ ಕಾಳರಾಜ್, ಫಕ್ಕೀರಪ್ಪ ಹಾಜರಿದ್ದರು.

ಪ್ರತಿಕ್ರಿಯಿಸಿ (+)