ಗುರುವಾರ , ಜೂನ್ 24, 2021
27 °C

ಸೊರಬದ ಆರಾಧ್ಯ ದೈವ ರಂಗನಾಥಸ್ವಾಮಿ

ಉಮೇಶ್ ಬಿಚ್ಚುಗತ್ತಿ Updated:

ಅಕ್ಷರ ಗಾತ್ರ : | |

ಸೊರಬದ ಆರಾಧ್ಯ ದೈವ ರಂಗನಾಥಸ್ವಾಮಿ

ರಂಗನಾಥಸ್ವಾಮಿ ಸೊರಬ ಪಟ್ಟಣದ ಆರಾಧ್ಯ ದೈವ. ಸುರಭಿ ಎಂಬ ಪವಿತ್ರ ಗೋವು ರಂಗನಾಥನ ವಿಗ್ರಹಕ್ಕೆ ಪ್ರತಿದಿನ ಹಾಲು ಸುರಿಸುತ್ತಿತ್ತು ಎಂಬ ಹಿನ್ನೆಲೆಯಲ್ಲಿ ಸ್ಥಳೀಯ ಗಾವುಂಡನೊಬ್ಬ ದಂಡಾವತಿ ನದಿ ತೀರದಲ್ಲಿ ದೇವಸ್ಥಾನ ನಿರ್ಮಿಸಿದ. `ಸುರಭಿ~ ಗೋವಿನಿಂದಾಗಿ ಪ್ರದೇಶಕ್ಕೆ `ಸುರಭಿಪುರ~ ಎಂಬ ಹೆಸರು ಬಂದಿತು. ಅದು ಕಾಲಕ್ರಮೇಣ `ಸೊರಬ~ ಆಯಿತು ಎಂಬ ನಂಬಿಕೆಯಿದೆ.`ಸೊರಬ~ ಎಂಬ ಹೆಸರು 12ನೇ ಶತಮಾನದ ತಲ್ಲೂರು ಶಾಸನದಲ್ಲಿ ಉಲ್ಲೇಖ ಆಗಿದ್ದು, ನಂತರ ಸಂಸ್ಕೃತದ `ಸುರಭಿಪುರ~ ಹೆಸರು ಬಂದಿದೆ ಎಂದು ಇತಿಹಾಸ ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ. ಮುಖ್ಯರಸ್ತೆಗೆ ಅಭಿಮುಖವಾಗಿ ದೇವಸ್ಥಾನ ಇರುವುದು ಪಟ್ಟಣಕ್ಕೆ ಶೋಭೆ ತಂದಿದೆ. ಹೊರ ಭಾಗದಲ್ಲಿ ಗೋಪುರ ಸಹಿತವಾದ ನೂತನ ಕಟ್ಟಡವಿದ್ದು, ವಾಣಿಜ್ಯ ಮಳಿಗೆಗಳನ್ನು ಸಹ ನಿರ್ಮಿಸಲಾಗಿದೆ.ಒಳ ಭಾಗದಲ್ಲಿ ವಿಜಯನಗರದ ಅರಸರ ಕಾಲದಲ್ಲಿ ನಿರ್ಮಾಣಗೊಂಡಿರುವ  ಶಿಲಾ ದೇಗುಲದಲ್ಲಿ ಸುಂದರ ಕೆತ್ತನೆಯುಳ್ಳ ನವರಂಗ, ಸುಖನಾಸಿ ಕಂಡು ಬರುತ್ತದೆ. ದ್ರಾವಿಡ ಶೈಲಿ ಹೋಲುವ ಗೋಪುರ ಇದೆ. ಕಕ್ಷಾಸನದ ಹೊರಮೈ ಪಟ್ಟಿಕೆಯಲ್ಲಿ ದೇವಾನುದೇವತೆ, ಶೃಂಗಾರ ಶಿಲ್ಪಗಳ ಕಲಾಸಿರಿ ಇದೆ.ಗರ್ಭಗೃಹದಲ್ಲಿ ಸ್ವಾಮಿ ವಿರಾಜಮಾನನಾಗಿದ್ದು, ಅನೇಕ ದಶಕಗಳಿಂದ ಮಂತ್ರಿ ಮಹೋದಯರು, ಉದ್ಯಮಿಗಳು, ಇನ್ನಿತರ ಭಕ್ತಾದಿಗಳ ಸೇವೆ ಪಡೆದಿದ್ದಾನೆ. ವೇದ ಪಂಡಿತ ದಿ. ಗುರುನಾಥಭಟ್ಟರ ಕಾಲದಿಂದ ದೇವಸ್ಥಾನ ರಾಜ್ಯಾದ್ಯಂತ ಗಮನ ಸೆಳೆದಿದೆ.ದೇಗುಲಕ್ಕೆ ಹೊಂದಿಕೊಂಡಂತೆ ಮುಂಭಾಗದಲ್ಲಿ ಕೆಲ ವರ್ಷಗಳ ಹಿಂದೆ ಹೋಮ, ಹವನ, ಧಾರ್ಮಿಕ, ಸಾಮಾಜಿಕ ಹಾಗೂ ವೈವಾಹಿಕ ಕಾರ್ಯಕ್ರಮಗಳಿಗಾಗಿ ಪ್ರಾಂಗಣ ನಿರ್ಮಿಸಲಾಗಿದೆ.ಹೊರಭಾಗದಲ್ಲಿ ಶಿಲಾ ರೂಪದಲ್ಲಿರುವ ನವಗ್ರಹಗಳಿಗೆ ಪ್ರತಿನಿತ್ಯ ಪೂಜೆ ಸಲ್ಲಿಸಲಾಗುತ್ತದೆ. ನಾಗರಕಲ್ಲುಗಳ ದಂಡು ಸಹ ಇದೆ. ಇಂತಹ ಒಂದು ವಿಶೇಷ ದೇಗುಲ ಪಟ್ಟಣದ ವ್ಯಾಪ್ತಿಯಲ್ಲಿಯೇ ಇದ್ದರೂ, ಹೆಚ್ಚಿನ ಪ್ರಗತಿ ಕಾಣದೇ ಇರುವುದು ಪುರವಾಸಿಗಳ ಬೇಸರಕ್ಕೆ ಕಾರಣ ಆಗಿದೆ. ದೇಗುಲದ ಆವರಣವನ್ನು ಸುಂದರಗೊಳಿಸುವ ಯಾವುದೇ ಪ್ರಯತ್ನ ಕಂಡು ಬಂದಿಲ್ಲ. ದೇವಸ್ಥಾನ ಕಳೆ ಕಟ್ಟಲು ಇದರಿಂದ ಹಿನ್ನಡೆ ಉಂಟಾಗಿದೆ.ದೇವಸ್ಥಾನದ ಪಕ್ಕದಲ್ಲಿ ಕಲ್ಯಾಣ ಮಂಟಪ ನಿರ್ಮಾಣ ಕಾರ್ಯ ಸುಮಾರು 20 ವರ್ಷಗಳ ಹಿಂದೆ ಅಂದಿನ ತಹಶೀಲ್ದಾರ್ ನಾಗೋಜಿರಾವ್ ಆಸಕ್ತಿಯ ಫಲವಾಗಿ ಚಾಲನೆ ಪಡೆದಿತ್ತು. ಅಂದು ಒಂದು ಹಂತದ ನಿರ್ಮಾಣ ಪೂರೈಸಿ ಸ್ಥಗಿತಗೊಂಡಿರುವ ಕಾಮಗಾರಿ ಪುನಃ ಮುಂದುವರಿದಿಲ್ಲ.ಇತ್ತೀಚೆಗೆ ಅಗತ್ಯ ಅನುದಾನ ಮಂಜೂರಾಗಿದ್ದರೂ ಕಾಮಗಾರಿಗೆ ಚಾಲನೆ ದೊರೆತಿಲ್ಲ ಎಂದು ಪಟ್ಟಣವಾಸಿಗಳು ಅಲವತ್ತುಗೊಂಡಿದ್ದು, ದೇಗುಲದ ಆವರಣವನ್ನು ಕಂಗೊಳಿಸುವಂತೆ ಮಾಡುವುದರೊಂದಿಗೆ, ಕಲ್ಯಾಣ ಮಂಟಪ ಜನತೆಯ ಕೈ ಸೇರಲು ಅವಕಾಶ ಮಾಡಿಕೊಡುವಂತೆ ಆಗ್ರಹಿಸಿದ್ದಾರೆ.  

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.