ಸೊರಬ ಬರ ಘೋಷಣೆಗೆ ಒತ್ತಾಯ
ಶಿವಮೊಗ್ಗ: ಸೊರಬ ತಾಲ್ಲೂಕಿನಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದ್ದು, ಬರದ ಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ತಾಲ್ಲೂಕನ್ನು ಬರಪೀಡಿತ ಪ್ರದೇಶ ಎಂದು ಘೋಷಿಸುವಂತೆ ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ಮಧು ಬಂಗಾರಪ್ಪ ಆಗ್ರಹಿಸಿದರು.
ಸೊರಬದ ಜೆಡಿಎಸ್ ಮುಖಂಡರ ನಿಯೋಗದೊಂದಿಗೆ ಬೆಂಗಳೂರಿನಲ್ಲಿ ಶುಕ್ರವಾರ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರನ್ನು ಗೃಹ ಕಚೇರಿ `ಕೃಷ್ಣಾ~ದಲ್ಲಿ ಭೇಟಿ ಮಾಡಿದ ಅವರು, ಮಳೆ ಕೊರತೆಯಿಂದ ಸೊರಬ ತಾಲ್ಲೂಕಿನ ನಾನಾ ಕಡೆಗಳಲ್ಲಿ ಬರ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಟ್ಟರು.
ಸೊರಬದ ಬಹುತೇಕ ಭಾಗ ಅರೆ ಮಲೆನಾಡಿನಿಂದ ಕೂಡಿದ್ದು ರೈತರು, ಮಳೆಯನ್ನೇ ಆಶ್ರಯಿಸಿ ಬೆಳೆ ಬೆಳೆಯುತ್ತಿದ್ದಾರೆ. ಅದರೆ, ಈ ವರ್ಷ ಮುಂಗಾರು ಮಳೆ ಕೈಕೊಟ್ಟಿರುವುದರಿಂದ ರೈತರು ಇದುವರೆಗೂ ಬಿತ್ತನೆ ಕಾರ್ಯ ಮಾಡಿಲ್ಲ. ಪೂರ್ವ ಮುಂಗಾರಿಗೆ ಬಿತ್ತನೆ ಮಾಡಿದ ಬತ್ತ, ರಾಗಿ, ಜೋಳ ಮುಂತಾದ ಬೆಳೆಗಳು ಕೂಡ ಬಿಸಿಲಿನಿಂದ ಬಾಡುತ್ತಿವೆ.
ಬೆಳೆ ಕಾಣದ ರೈತರು ಕಂಗಾಲಾಗಿದ್ದಾರೆ. ಉದ್ಯೋಗ ಇಲ್ಲದೇ ಗುಳೆ ಹೋಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ತಕ್ಷಣವೇ ಸೊರಬ ತಾಲ್ಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಬೇಕು. ಜತೆಗೆ ಅಗತ್ಯವಾದ ಪರಿಹಾರ ಬಿಡುಗಡೆ ಮಾಡಬೇಕು ಎಂದು ಮನವಿ ಮಾಡಿದರು. ನಿಯೋಗದಲ್ಲಿ ಮುಖಂಡರಾದ ಜಗದೀಶ್, ತುಕ್ಕಪ್ಪ, ರಮೇಶಪ್ಪ ತಾಳಗುಪ್ಪ, ಭಾಸ್ಕರಶೆಟ್ಟಿ ಉಪಸ್ಥಿತರಿದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.