ಸೊಲ್ಲು ಫಲವಾಗಿ ಬಿರಿದ ಕಾವ್ಯ

7

ಸೊಲ್ಲು ಫಲವಾಗಿ ಬಿರಿದ ಕಾವ್ಯ

Published:
Updated:
ಸೊಲ್ಲು ಫಲವಾಗಿ ಬಿರಿದ ಕಾವ್ಯ

ಸರಿ ಸುಮಾರು ನಲವತ್ತು ವರ್ಷಗಳಲ್ಲಿ ತಾವು ಬರೆದ 265 ಪದ್ಯಗಳ ಜೊತೆಗೆ ನೂರಾಒಂದು ವಚನಗಳನ್ನು ಸೇರಿಸಿ `ಕಾಲ ಕಣ್ಣಿಯ ಹಂಗು~ ಎಂಬ ಹೆಸರಿನಲ್ಲಿ ನಮ್ಮ ನಡುವಿನ ಮುಖ್ಯ ಕವಿ ಎಸ್. ಜಿ. ಸಿದ್ದರಾಮಯ್ಯ ಕಾವ್ಯ ಸಂಪುಟವನ್ನು ಪ್ರಕಟಿಸಿದ್ದಾರೆ.ಈ ಸಂಪುಟಕ್ಕೆ ಈವರೆಗಿನ ಜೋಗಿ ಜಂಗಮ ಕಾವ್ಯ ಎಂಬ ಅಡಿ ಬರಹದ ವಾಕ್ಯವನ್ನು ಸೇರಿಸಿದ್ದಾರೆ. ಜೋಗಿ ಮತ್ತು ಜಂಗಮ ಎಂಬುದನ್ನು ಅವರ ಕಾವ್ಯ ನಾಯಕನ ಮನಸ್ಥಿತಿಯ ಇರುವಿಕೆಯನ್ನು, ಬಯಸುವ ಆಶಯವನ್ನು ಅಭಿವ್ಯಕ್ತಿಸುವ ಪರಿಭಾಷೆಗಳೆಂದೇ ಬಗೆಯಬೇಕು. ಜೋಗಿ ಮತ್ತು ಜಂಗಮರು ಸದಾ ಸಂಚಾರಿ ಭಾವದ ಮನೋನೆಲೆಯ ಅಲೆದಾಡುವ, ಶೋಧಿಸುವ ಪ್ರಕ್ರಿಯೆಯಲ್ಲಿರುವವರು.  ಸ್ಥಾಯಿ ಎಂಬುದು ನಿಲುಗಡೆಯನ್ನು, ಸ್ಥಬ್ಧತೆಯನ್ನು ಸೂಚಿಸುವಂತಹುದು.  ಜೋಗಿ ಜಂಗಮರು ಸಂಚಾರಿ ನೆಲೆಯ, ಚಲನಶೀಲತೆಯ ಬದುಕಿನ ತಳಪದರದ ಸತ್ವವನ್ನು ಶೋಧಿಸಹೊರಟವರು.  ಈ ಶೋಧನೆಯ ಹಾದಿಯಲ್ಲಿ ನೊಂದ ನುಡಿಗಳಿಗೆಲ್ಲ /ಪದವಾಗಲು ಎದೆ ಹಾಸಾಗಲು ಹೆಣಗಿದವರು.ಕನ್ನಡ ಕಾವ್ಯದಲ್ಲಿ ಜೋಗಿ  ಪ್ರಜ್ಞೆ ಹೊಸತಲ್ಲ.   ಜನಪದದಲ್ಲಿ ಬರುವ ಜೋಗಿ ಚಾರಿತ್ರ್ಯ ಶುದ್ಧಿಗೆ ಸಂಕೇತವಾದವನು.  ತನ್ನ ಜೋಳಿಗೆ ತುಂಬ ಜನ ಬದುಕಿನ ಅನುಭವ ದ್ರವ್ಯವನ್ನು ತುಂಬಿಕೊಂಡು ತನ್ನ ಜಂಗಮಶೀಲತೆಯಿಂದ ಸತ್ಯಶುದ್ಧ ನಡೆಯನ್ನು ಬಿತ್ತಲು ಸಂಚಾರ ಮಾಡುವಂಥವನು.ಈ ಜೋಗಿ ಪ್ರಜ್ಞೆ ಸಿದ್ಧರಾಮಯ್ಯನವರ ಕಾವ್ಯದ ಆತ್ಮವಾಗಿ ಹರಿದಾಡಿದೆ.  ಕುಡಿಕೆ ಹೊನ್ನಿಗೆ ಸೋತ ಸರದಾರ ಭೋಗಿಗಳನ್ನು ನೋಡಿದಾಗಲೆಲ್ಲಾ ಕಾಡುವ ಈ ಜೋಗಿಯನ್ನು ಕವಿ  ಚಿಕ್ಕ ಚಂದ್ರಮನಾಗಿ, ಕಣಿಗೂಟ ಹಿಡಿವ ಕೈಯಾಗಿ, ಕಳ್ಳಹೆಸರಿನ ಮೈಯ ನವುರಾಗಿ, ಶಕುನದಕ್ಕಿಯ ಸೊಲ್ಲ ಫಲವಾಗಿ...  ಬಾ ಬಾರೋ ಜೋಗಿ ಎಂದು ಆಹ್ವಾನಿಸುತ್ತಾರೆ.  ಈ ಆಹ್ವಾನದಲ್ಲಿ ಬದುಕಿನ ಚಾರಿತ್ರ್ಯ ಶುದ್ಧಿಯ ಸ್ಥಿರೀಕರಣದ ಒತ್ತು ಕಾಣುತ್ತದೆ. ಈ ಜೋಗಿ ಪ್ರಜ್ಞೆ ಬೇಂದ್ರೆಯವರ ಜೋಗಿ ಪ್ರಜ್ಞೆಗಿಂತ ಭಿನ್ನವಾದುದು. ಬೇಂದ್ರೆಯವರ ಜೋಗಿ ಅಮೂರ್ತತೆಯ, ನಿಗೂಢತೆಯ ಮತ್ತು ಸನಾತನ ತತ್ತ್ವದ ದನಿಯಾಗಿ ಸಂಕೇತನಾಗುತ್ತಾನೆ. ಬೇಂದ್ರೆಯವರ ಜೋಗಿ ಮೇಲ್ನೋಟಕ್ಕೆ ಜನಪದ  ಮೂಲದವನು ಅನ್ನಿಸಿದರೂ ಅವನು ಜನಪದ ಮೂಲದವನಲ್ಲ; ಅವನ ಮೂಲ ನೆಲೆ ಹಾಗೂ ಪ್ರಜ್ಞೆಗಳೆರಡೂ ವೈದಿಕ ನೆಲೆಯಿಂದಲೇ ಅರಳಿದಂಥವು.  ಹೀಗಾಗಿ ಅವನು  ಕೂಗಿ ಕರೆಯುವ ಕೋಗಿಲೆಯ ದನಿ ಬದುಕಿನ ವಾಸ್ತವದ ಘೋರಗಳತ್ತ ಗಂಭೀರವಾಗದೆ ಆತ್ಮಸಾಂಗತ್ಯದ ದನಿಯಾಗಿ ವೈಯಕ್ತಿಕವಾಗಿ ಬಿಡುತ್ತದೆ.ಆದರೆ ಸಿದ್ಧರಾಮಯ್ಯನವರ ಜೋಗಿ ಜನಪದ ನೆಲೆಯಿಂದ ಬಂದವನು.  ಅವನ ಆಗಮನದ ಉದ್ದೇಶವೇ ಜನಬದುಕನ್ನು ಹಸನುಗೊಳಿಸುವುದಾಗಿದೆ.  ವ್ಯಕ್ತಿಗಿಂತ ಸಮುದಾಯಕ್ಕೆ ಇವನಿಗೆ ಆದ್ಯತೆ.  ಸಮುದಾಯದ ಹಸನಾಗುವಿಕೆಯಲ್ಲಿ ವ್ಯಕ್ತಿಯೂ ಐಕ್ಯವಾಗಿರುತ್ತಾನೆ ಎಂಬ ತಿಳಿವಳಿಕೆ ಇರುವಂಥವನು. 

ನೋವು ದುಮ್ಮೋನಗಳಿಂದ ಉದ್ಭವಿಸಿದ ಜನ ಬದುಕಿನ ಸಿಟ್ಟು ನೆತ್ತಿ ಮೇಲುರಿಯುವ ನಿತ್ಯಸತ್ಯದ ಬಗೆಯದು ಎಂಬುದು ಅವನ ಅರಿವು.  ಆ ನೆತ್ತಿಮೇಲೆ ಉರಿಯುವ ನಿತ್ಯಸತ್ಯದ ಸುಡುತಾಪಕ್ಕಿಂತ ಅಧಿಕ ಹೊಟ್ಟೆಯಾಳದ ಬೆಂಕಿ ಎಂಬ ತಿಳಿವಳಿಕೆಯಿರುವುದರಿಂದಲೇ ಸಿದ್ಧರಾಮಯ್ಯನವರ ಜೋಗಿ ಭಿನ್ನ ದನಿಯನ್ನು ಕಾವ್ಯದುದ್ದಕ್ಕೂ ಅಭಿವ್ಯಕ್ತಿಸುತ್ತಾನೆ. 

ಅವನು ಸಮಾಜ ಮುಖಿಯೂ ಜೀವಪರನೂ ಆಗಿ ನಿಲ್ಲುತ್ತಾನೆ.  ಹೀಗಾಗಿ ಅವನು ಜನಬದುಕಿನ ಸೊಲ್ಲಫಲವಾಗಿ, ಪ್ರೀತಿ ತುಂಬಿದ ಕಣ್ಣಮಿಂಚ ಬೆಳಕಲಿ ನೆಲಬದುಕನ್ನು ಫಲಿತಗೊಳಿಸುವ ಆಶಯವನ್ನು ಹೊಂದಿರುತ್ತಾನೆ.  ಈ ದೃಷ್ಟಿಯಿಂದ ಸಿದ್ಧರಾಮಯ್ಯನವರ ಕಾವ್ಯ ಜನಮುಖಿಯಾದುದು.ಸಿದ್ಧರಾಮಯ್ಯನವರಿಗೆ ಅತ್ಯಂತ ಗಾಢವಾದ ಕನ್ನಡ ಕಾವ್ಯ ಪರಂಪರೆಯ ಅರಿವಿದೆಯೆಂಬುದು ಅವರ ಕಾವ್ಯ ಸಂಪುಟವನ್ನು ಓದಿದಾಗ ಅನುಭವಕ್ಕೆ ಬರುತ್ತದೆ.  ಕನ್ನಡ ಕಾವ್ಯದ ಚಾರಿತ್ರಿಕ ಅರಿವಿಲ್ಲದೆ ಕಾವ್ಯ ಬರೆಯುವವರ ಬಗ್ಗೆ ಅಸಮಾಧಾನವಿರುವುದು ಸೂಕ್ಷ್ಮವಾಗಿ ಅಲ್ಲಲ್ಲಿ ಹೊಗೆಮಾಡುತ್ತದೆ, ಸಹ. ಹಳೆಗನ್ನಡ, ನಡುಗನ್ನಡ, ವಚನ ಸಾಹಿತ್ಯ ಮತ್ತು ತತ್ತ್ವಪದಗಳ ಗಾಢವಾದ ಅರಿವು ಅವರಲ್ಲಿ ಎಷ್ಟರ ಮಟ್ಟಿಗೆ ಕೆಲಸ ಮಾಡಿದೆಯೆಂದರೆ, ಅವರ ಕಾವ್ಯವನ್ನು ಓದುತ್ತಿರುವಾಗ ಕನ್ನಡ ಕಾವ್ಯಗಳ ಕಾಲ ಘಟ್ಟದಲ್ಲಿ ಬಂದು ಹೋಗಿರುವ ಅನೇಕರ ಸಾಲುಗಳು ನೆನಪಿಗೆ ಬರುವ ಹಾಗೆ ಅಲೆಗಳ ಸ್ಪರ್ಶವಾಗುತ್ತದೆ.  ಹೊಸಗನ್ನಡದ ಕವಿಗಳು ಕೂಡ ತಮ್ಮ ಧ್ವನಿ ಲಯಗಳಲ್ಲಿ ಸೊಲ್ಲಾಗಿ ಇಣುಕುತ್ತಾರೆ.

 

ಎಲ್ಲದಕ್ಕಿಂತ ಮಿಗಿಲಾಗಿ, ಜನಪದ ಬದುಕಿನ ವಿವಿಧ ಮಗ್ಗಲುಗಳ ಅನುಭವಗಳನ್ನು ಕಟ್ಟಿಕೊಡುವಾಗ ಸಿದ್ಧರಾಮಯ್ಯನವರ ಕಾವ್ಯ ಅತ್ಯಂತ ವಿಫುಲವಾಗಿ ಅಲ್ಲಿನ ಪರಿಭಾಷೆಯನ್ನು ಬಳಸಿಕೊಂಡಿದೆ.   ಜೊತೆಗೆ, ವಚನ ಸಾಹಿತ್ಯ ಮತ್ತು ತತ್ತ್ವ ಪದಗಳ ನುಡಿಗಟ್ಟುಗಳು ಇವರ ಕಾವ್ಯವನ್ನು ಕೈಹಿಡಿದು ನಡೆಸಿವೆ.  ಈ ಕಾರಣದಿಂದಾಗಿಯೇ ಇವರ ಕಾವ್ಯ ಇವರ ಸಮಕಾಲಿನರಲ್ಲೇ ಭಿನ್ನಶೈಲಿ ಮತ್ತು ಸತ್ವವನ್ನು ಪಡೆದುಕೊಂಡಿದೆ.ಇವರ ಕಾವ್ಯ ಕನ್ನಡ ಕಾವ್ಯ ಪರಂಪರೆಯೊಂದರ ಸಮರ್ಥ ಮುಂದುವರಿಕೆಯ ಚಲನೆಯಾಗಿ ಕಂಡು ಬರುವುದು ಈ  ಕಾರಣದಿಂದಲೇ, ಅಜ್ಜಮುತ್ತಜ್ಜರ ವಂಶವಾಹಿಯ ಮುಂದುವರಿಕೆಯ ನಿಜವಾದ ವಾರಸುದಾರರಂತೆ ಇವರು ಕಾಣುತ್ತಾರೆ.ಇವರ ಕಾವ್ಯದಲ್ಲಿ ಮೊಮ್ಮಗನಲ್ಲಿ ಕಾಣುವ ಅಜ್ಜನ ಬಾಹ್ಯರೂಪ ಲಕ್ಷಣಗಳೂ ಧ್ವನಿರಾಗಕಾಕುಗಳೂ ಅನುಭವ ತಿಳುವಳಿಕೆಗಳೂ ಸ್ಪಷ್ಟವಾಗಿ ಗೋಚರಿಸುತ್ತವೆ. ಕನ್ನಡ ಸತ್ವದ ಈ ತೆರನ ಬಳಕೆ-ಬಳಕೆಯಂತಾಗದೆ ಸಹಜ ಗತಿಯಂತೆ ಒಡಮೂಡಿರುವುದು ಇಲ್ಲಿ ಮುಖ್ಯವಾಗುತ್ತದೆ.  ಸಿದ್ಧರಾಮಯ್ಯ ಮಾರ್ಗಸಾಹಿತ್ಯ ಮತ್ತು ಜನಪದ ಸಾಹಿತ್ಯಗಳೆರಡರ ಅಪೂರ್ವ ಸತ್ವಗಳನ್ನೂ ತಮ್ಮ ಕಾವ್ಯದಲ್ಲಿ ಪಡಿಮೂಡಿಸಿಕೊಂಡು ಅಭಿವ್ಯಕ್ತಿಯನ್ನು ಕಂಡುಕೊಂಡಿದ್ದಾರೆ. ಈ ದೃಷ್ಟಿಯಿಂದಲೇ ಇವರ ಜೀವಪರ, ನೆಲಪರವಾದ ಆಶಯಗಳು ಹಕ್ಕು ಸ್ಥಾಪಿಸಿಕೊಳ್ಳಲು ಸಿದ್ಧವಾಗುತ್ತವೆ. ಪಶ್ಚಿಮದ ಕಡೆಯಿಂದ ಪಂಚರಂಗಿಯ ಗಿಡುಗ ರವ್ವ ರವ್ವನೆ ಹಾರಿ ಬಂದು...ಹೊಟ್ಟೆಯ ಮೇಲೆ ಕಣ್ಣೀರಿನ ಬಟ್ಟೆಯನ್ನೇ ಹಾಸಿ, ಮಾತು, ನೋಟ, ಕೂಟಗಳನ್ನೂ ನುಂಗಿ, ಭಯ ಜನಿಸಿ, ಕರಿನೆರಳ ಸರಳಾಗಿ ಪಂಚಭೂತಗಳಲ್ಲಿ ವಂಚನೆಯ ನೋವು ಮೂಡಿಸಿ ವಿಜೃಂಭಿಸಿ ಮೆರೆಯುವಾಗ ಕವಿ ಈ ನೆಲದ ನಿಜವಾದ ವಾರಸುದಾರನನ್ನು ಪ್ರತಿಷ್ಠಾಪಿಸಲು ಪ್ರಯತ್ನಿಸುತ್ತಾರೆ.  ಆಗ ಹಳೆ ಬೇಲಿಯ ಬಳ್ಳಿಸಾಲ ಬುಡದಲ್ಲಿತೇವಾಂಶದ ತವತವರಿನಲ್ಲಿತೆವ ತೆವಳುತ ಪಿಸುಗುಟ್ಟಿದೆ ಎರೆಹುಳ ಯಕ ಯಕ ಯಕಲಾ!ಯಾಕಲಾ? ಎಂದು ಒಂದು ಮೂಳೆರಹಿತ, ಸದಾ ಭುವಿಗೆ ಸತ್ವ ತುಂಬುವ ಗುಪ್ತಭಕ್ತನಂತೆ ಕಾಯಕದಲ್ಲಿ ನಿರತವಾದ ಜಂತುವೊಂದು ಪ್ರಶ್ನಿಸುತ್ತದೆ.  ಈ ನೆಲದ ನಿಜವಾದ ವಾರಸುದಾರ ಈ ಬದುಕಿನಲ್ಲಿ ತಲೆಮಾರುಗಳಿಂದ ಸತ್ವತುಂಬಿದ ಬದುಕನ್ನು ಮಾಡಿದ ವ್ಯಕ್ತಿತ್ವವೇ ಆಗಿರುತ್ತದೆ ಎಂಬ ಹಕ್ಕನ್ನು ಕವಿ ಧ್ವನಿಸುತ್ತಾರೆ. ಈ ಧ್ವನಿಯನ್ನು ಕವಿ  ದೇಸಿ ಎಂದು ಗುರುತಿಸುತ್ತಾರೆ.  ಅದನ್ನು ಅವರು ತವರು ಎಂಬ ಪರಿಭಾಷೆಯಲ್ಲಿ ಕಟ್ಟಲು ಯತ್ನಿಸುತ್ತಾರೆ.  ತವರೆಂಬುದು ಅವ್ವ ಅಪ್ಪ  ತವರೆಂಬುದು ಅಕ್ಕ ಅಣ್ಣ ತವರೆಂಬುದು ತಾನು ತನ್ನದು ಹೊಕ್ಕು ಬಳಕೆ ಬಳಗ ಸಾಲು!...ಭಾವದೇರು ತವರ ಸೂರು ಎಂದು ಅದರ ವ್ಯಾಖ್ಯಾನ ಮಾಡಿದರೂ ಅವರ ಅಂತರಂಗದಲ್ಲಿ -ಅಲ್ಲಿಂದಾಚೆಗೆ ಬೆಳೆದು ನೆಲಜಲ ಊರು ಕೇರಿಯಾಗಿ ವಿಸ್ತರಿಸುತ್ತದೆ.  ಅದೇ ದೇಸಿ ಪ್ರಜ್ಞೆಯ ಮೂಲ ಆಶಯ; ಕವಿಯ ಕಾಣ್ಕೆ. ದೇಸೀ ಸಂಸ್ಕೃತಿಯನ್ನು ಪ್ರಜ್ಞಾಪೂರ್ವಕವಾಗಿ ಕಾವ್ಯಭಾಷೆಯ ಮೂಲಕ ಮಂಡಿಸಲು ಮಾಡುವ ಪ್ರಯತ್ನ ಹೀಗಿದೆ:

 

ದೇಸಿ ಎಂಬುವ ಹೆಸರ ಭಾವಜಾಲಕೆ ಬತ್ತಿ, ದೇಸಿ ಎಂಬುವ ಉಸಿರ ನೆಲದ ಬಾಳಿಗೆ ತಂದೆ ... ದೇಸಿ ಎಂಬುದು ಜೀವ ದೇಸಿ ಎಂಬುದು ಭಾವ ದೇಸಿ ದಿಬ್ಬದಲೀಗ ಕಳ್ಳುಬಳ್ಳಿಯ ತುಡಿತ ಸುತ್ತಲಿನ ಹತ್ತೂರ ಜೀವ ಜಂಗಮ ಮಿಡಿತ ಸಿದ್ಧರಾಮಯ್ಯನವರ ಮೇಲಾಗಿರುವ ಕನ್ನಡ ದೇಸೀಕಾವ್ಯ ಪರಂಪರೆಯ ಪ್ರಭಾವ, ಗ್ರಾಮೀಣ ಸಮುದಾಯದೊಡನೆಯ ಮಿಳಿತ ಮಿಡಿತ, ಆ ಬದುಕಿನ ಬಗೆಗಿರುವ ಅನನ್ಯ ಪ್ರೀತಿ- ತುಸು ಹೆಚ್ಚೇ ಅನ್ನಿಸುವ ಪಕ್ಷಪಾತಪೂರಿತ ಒಲವು-ಇವೆಲ್ಲವೂ ಇವರನ್ನು ದೇಸಿ ಪ್ರಜ್ಞೆಯ ಮಂಡನಕಾರರನ್ನಾಗಿ ಪಡಿ ಮೂಡಿಸಿದೆ. ಹಾಗೆ ನೋಡಿದರೆ ಕನ್ನಡ ಕಾವ್ಯದಲ್ಲಿ ಇಂಥ ಪ್ರಯೋಗಗಳು ನವ್ಯೋತ್ತರ ಕಾಲಘಟ್ಟದಲ್ಲಿ ಅಲ್ಲಲ್ಲಿ-ಅಗಿಂದಾಗ್ಗೆ ನಡೆಯುತ್ತಲೇ ಬಂದಿವೆ.  ಇದು ತಮ್ಮತನದ ಶೋಧದ ಪರಿಣಾಮ;  ಕೀಳರಿಮೆಯನ್ನು ತೊಲಗಿಸಿಕೊಂಡು ಬದುಕನ್ನು ಅದರ ವಾಸ್ತವದ ನೆಲೆಯಲ್ಲಿ ಒಪ್ಪಿಕೊಳ್ಳುವ, ಗ್ರಹಿಸುವ ಪರಿ. ಬಿ.ರಾಜಣ್ಣ, ಶಿವಳ್ಳಿ ಕೆಂಪೇಗೌಡ, ಸಿದ್ಧಲಿಂಗಯ್ಯ, ಕೆ.ಬಿ. ಸಿದ್ಧಯ್ಯ, ಶಿವತೀರ್ಥನ್ ಮತ್ತು ಅನೇಕ ದಲಿತ ಕವಿಗಳು, ಮಹಿಳಾ ಲೇಖಕಿಯರು ಈ ಪ್ರಯತ್ನ ಮಾಡಿದ್ದಾರೆ.  ಆದರೆ ಇಡಿಯಾಗಿ ತಮ್ಮ ಕಾವ್ಯಧರ್ಮದ ಮೂಲ ಸೆಲೆಯನ್ನೇ ದೇಸಿಯನ್ನಾಗಿ ಮಾಡಿಕೊಂಡು ಕಾಯ್ದುಕೊಂಡು ಬಂದ ಕವಿ ಸಿದ್ಧರಾಮಯ್ಯ ಎಂಬುದು ವಿಶೇಷ.ದೇಸಿ ಪ್ರಜ್ಞೆಯ ಮಂಡನೆಯು ಅತಿಯಾದ ವ್ಯಾಮೋಹವಾದಾಗ ಅಪಾಯದಂಚಿಗೂ ಹೋಗಬಹುದು ಎಂಬುದಕ್ಕೆ ಸಿದ್ಧರಾಮಯ್ಯನವರ ಕವಿತೆಗಳೇ ಸಾಕ್ಷಿ ನುಡಿಯುತ್ತವೆ. ದೇಸೀ ಪ್ರಜ್ಞೆ ಎಂಬುದು  ನೆಲ ಮೂಲವಾದಾಗ ಅದರ ಸತ್ವದ ಹರಹು ಪ್ರಜ್ವಲಿಸುತ್ತದೆ. ಆದರೆ ಅದು   ಕುಲಮೂಲದ ಶೋಧನೆಯ ಹಂತಕ್ಕೆ ಇಳಿದಾಗ ಈ ಅಪಾಯದ ಸೂಚನೆಗಳು ಗೋಚರಿಸ ತೊಡಗುತ್ತವೆ.

 

ಸಮುದಾಯ ಬದುಕಿನ ಒಟ್ಟಂದದ ಸ್ವರೂಪದಲ್ಲಿ ಸಂಕುಲದ ಗುಣ ವಿಶೇಷತೆಗಳನ್ನು ಅಭಿವ್ಯಕ್ತಿಸುವ ಮತ್ತು ಅದರ ಮುಂದುವರಿಕೆಯ ಕ್ರಿಯೆಯಾಗಿ ನೆಲಮೂಲ ಪ್ರಜ್ಞೆಯು ಕೆಲಸ ಮಾಡಿದಾಗ ಅದು ದೇಸಿಯೆನ್ನಿಸಿಕೊಳ್ಳುತ್ತದೆ.

 

ಇಲ್ಲದಿದ್ದಲ್ಲಿ ಜಾತಿ ವ್ಯವಸ್ಥೆಯ ಪೋಷಣೆಯ ಸಾಧನವಾಗಿ ಬಿಡುವ ಸಾಧ್ಯತೆ ಇರುತ್ತದೆ. ದೇಸಿ ಹೆಸರಿನಲ್ಲಿ ಕುಲ ದೇವತೆಗಳನ್ನು ವೈಭವೀಕರಿಸಿ ಕೀರ್ತಿಸುವ ಅನೇಕ ಪದ್ಯಗಳು ನಮ್ಮಲ್ಲಿ ಬಂದಿವೆ.

 

ಅಂದರೆ ದೇಸಿ ಎಂಬುದು ಪರಿಮಿತವಾಗಿ ಬಿಡುವ   ತನ್ನ ಆಶಯ ಉದ್ದೇಶಗಳಿಂದ ವಂಚಿತವಾಗಿ ಬಿಡುತ್ತದೆ ಎಂದೇ ಅರ್ಥ. ದೇಸೀ  ಹೆಸರಿನಲ್ಲಿ ಗ್ರಾಮೀಣ ಬದುಕಿನ ಜಾತ್ರೆ, ಆಚರಣೆ, ಹಬ್ಬ  ಹರಿದಿನಗಳು ಸಂಪ್ರದಾಯಗಳು ಮುಂತಾದವುಗಳನ್ನು ಜತನ ಮಾಡಿ ಉಳಿಸಿಕೊಳ್ಳುವುದೆಂದರೆ   ಈ ಎಲ್ಲಾ ವಿಧಿವಿಧಾನಗಳಿಗೂ ಜಾತಿವ್ಯವಸ್ಥೆಯ ಬಂಧಕ್ಕೂ ನಿಕಟವಾದ ಸಂಬಂಧವಿದೆಯೆಂಬುದನ್ನು ಮರೆಯಲಾಗದು.ಆಗ ಗೋಪಾಲಕೃಷ್ಣ ಅಡಿಗರ `ಪುರೋಹಿತರ ನೆಚ್ಚಿ ಪಶ್ಚಿಮಬುದ್ಧಿಯಾದೆವೋ; ಇನ್ನಾದರೂ ಪೂರ್ವ ಮೀಮಾಂಸೆ ಕರ್ಮಕಾಂಡಗಳನ್ನು ಬಗೆಯಬೇಕು~ ಎಂಬ ಮಾತುಗಳಿಗೂ ದೇಸಿ ಪ್ರಜ್ಞೆಯ ಮಂಡನೆಗೂ ಅಂಥ  ವ್ಯತ್ಯಾಸವೇನೂ ಇರುವುದಿಲ್ಲ.

ಅಡಿಗರದು ಭಾರತದ ವೈದಿಕ ಸಂಸ್ಕೃತಿಯ ಪುನರ್‌ಮಂಡನೆಯ ಆಶಯವಾದರೆ, ದೇಸಿ ಪ್ರಜ್ಞೆಯದು ಬಹುಸಂಸ್ಕೃತಿ ಹೆಸರಿನ ಬಹುಜಾತಿ ಮೂಲತನವನ್ನು ಕಾಯ್ದುಕೊಳ್ಳುವುದರಲ್ಲಿ ಸತ್ವವಿದೆಯೆಂಬ ಆಶಯವಾಗಿ ಬಿಡುತ್ತದೆ.ಈ ಬಗ್ಗೆ ನಮ್ಮಲ್ಲಿ ತಲಸ್ಪರ್ಶಿಯಾದ ಚಿಂತನೆಯ ಅವಶ್ಯಕತೆಯಿದೆ.  ಚಾಣಕ್ಯ ತಂತ್ರದ ಸಿಟ್ಟಿಗೆ ಸುಟ್ಟು ಹೋಗುವುದಿಲ್ಲ ಗರುಕೆ  ಎಂದು ಕೊಳ್ಳುವುದು  ಗರಿಕೆ ಬೇರು  ಎಂದರೆ ಏನು? ಅದು ಯಾವುದನ್ನು ಧ್ವನಿಸುತ್ತದೆಯೆಂಬುದು ಮುಖ್ಯ ಪ್ರಶ್ನೆಯಾಗಿಯೇ ಉಳಿದುಬಿಡಬಹುದು.ಸಿದ್ಧರಾಮಯ್ಯ ನಮ್ಮ ಮಹತ್ವದ ಕವಿ ಎಂಬುದರಲ್ಲಿ ಎರಡು ಮಾತಿಲ್ಲ. ಅವರ ಕಾವ್ಯ ಎಲ್ಲಿಯೂ ವಿಜೃಂಭಣೆಯ ಮಾತುಗಳನ್ನು ಆಡುವುದಿಲ್ಲ. ಸತ್ವ ತುಂಬಿಕೊಂಡು ನಿಶ್ಶಬ್ದವಾಗಿ ಆಳವಾಗಿ ಹರಿಯುವ ಗಂಗೆಯ ತೆರದಲ್ಲಿ ಪಡಿಮೂಡಿದೆ.ಮಾತಿಗಿಂತ ಮೌನಕ್ಕೆ, ಮೌನದ ಹಿತವಾದ ಸ್ಪರ್ಶಕ್ಕೆ ಹಾತೊರೆವ ಬೆಚ್ಚಗಿನ ಅನುಭವವನ್ನು ತೆರೆದಿಡುತ್ತದೆ. ಆ ನಿಲುವಿನ ಬಗ್ಗೆ ಕವಿಗೆ ವಿಶೇಷವಾದ ಆಸಕ್ತಿ ಒಲವು  ನಿಶ್ಶಬ್ದಕ್ಕೆ ಕಿವಿಗೊಡದ ಮೇಲೆ ಪಿಸುಮಾತು ಹುಸಿ ಮಾತು ;  ಅನಾದಿಯೆಂಬುದು ನಿಶ್ಶಬ್ದ ನಿಶ್ಶಬ್ದವೆಂದರೆ ನಾದ ಎನ್ನುವಂಥ ವಿಶೇಷವಾದ ಮಾತುಗಳು ಕವಿಯ ಕಾವ್ಯದಲ್ಲಿ ಹೇರಳವಾಗಿದೆ.ಸಿದ್ಧರಾಮಯ್ಯನವರ ಕಾವ್ಯವನ್ನು ಓದುತ್ತಿದ್ದಾಗ ಅವರೆಂದೂ ವರ್ತಮಾನದ ಸತ್ಯಗಳಿಗೆ ಮುಖ ತಿರುಗಿಸಿ ನಡೆದಿಲ್ಲವೆಂಬುದು ಅರಿವಾಗುತ್ತದೆ. ಕಾವ್ಯ ಸದಾ ತನ್ನ ಸುತ್ತಲಿನ ಬದುಕಿಗೆ ಚಾರಿತ್ರಿಕ-ಪೌರಾಣಿಕ-ಜಾನಪದೀಯ ಸತ್ವಗಳ ಬೆಂಬಲದಿಂದ ಪ್ರತಿಕ್ರಿಯೆ ನೀಡುತ್ತಲೇ ಬಂದಿದೆ.

 

ಸಮಾಜದ ಕೆಡುಕುಗಳ ಇಲ್ಲವಾಗುವಿಕೆಯ ಕ್ರಿಯೆ ವ್ಯಕ್ತಿನೆಲೆ, ಕುಟುಂಬನೆಲೆ, ಗ್ರಾಮನೆಲೆಯಿಂದ ಕಟ್ಟಿಕೊಳ್ಳುವ ಗುಣಾತ್ಮಕ ಹಾದಿಯಲ್ಲಿ ನಡೆಯಬೇಕೆಂಬುದು ಕವಿಯ ಬಯಕೆಯಾಗಿದೆ. ಅದರಾಚೆ ವ್ಯಕ್ತಿ ಪ್ರಜ್ಞೆಯ ಅಂತರಂಗ ಶೋಧನೆಯ ಪ್ರಯತ್ನ ಕಾವ್ಯದಲ್ಲಿ ನಿರಂತರವಾಗಿ ನಡೆದಿದೆ. ನಮಗೆ ಇಂಥ ಕಡೆ ಕವಿ ಸಿದ್ಧರಾಮಯ್ಯ ಮಾರ್ಗ ಪ್ರಜ್ಞೆ-ದೇಸಿ ಪ್ರಜ್ಞೆಯಿಂದ ಅತೀತವಾಗಿ ನಿಲ್ಲುತ್ತಾರೆ.ರಾಮಾನುಜನ್ ಅವರು ಭಾರತದ ಮಕ್ಕಳಾಡುವ ಕುಂಟೋಬಿಲ್ಲೆ ಆಟವನ್ನು ಆಫ್ರಿಕಾ-ಜರ್ಮನಿಯ ಗಲ್ಲಿಗಳಲ್ಲಿ ಕಂಡು ಬೆರಗಾಗುವ ಕ್ರಿಯೆ; ಇಡೀ ಪ್ರಕೃತಿಯ ಹಸುರನ್ನು ಕಂಡು ತಮ್ಮ ಆತ್ಮವನ್ನು ಹಸುರ‌್ಗಟ್ಟಿಸಿಕೊಳ್ಳುವ ಕುವೆಂಪು ಅವರ ಸಂವೇದನಾಶೀಲತೆ; ಗುತ್ತಿ ತಿಮ್ಮಿಯರ ಅನುಭಾವತೀತತೆ;ಪುತಿನ ಅವರು ಮುದುಕಿಯ ರಂಗವಲ್ಲಿಯ ಸೊಬಗನ್ನು ಕಂಡು ಚಕಿತರಾಗುವ ನಿಷ್ಕಲ್ಮಶ ಸರಳತೆ-ಇವೆಲ್ಲವೂ ಸಿದ್ಧರಾಮಯ್ಯನವರು ಕಾವ್ಯದ ಅಂತರಂಗದ ವಾಹಿನಿಗಳನ್ನಾಗಿ ಬೆಳೆಸಿರುವುದರಿಂದಲೇ ಒಂದು ಸಾಮಾನ್ಯ ಎರೆಹುಳು ಈ ಬದುಕಿನ ನಿಜವಾದ ವಾರಸುದಾರನಂತೆ  ಯಾಕಲಾ?ಎಂದು ಎಲ್ಲಾ ಬಗೆಯ ಹಿಡಿತಗಳ, ಸ್ಥಾಪಿತ ಮೌಲ್ಯಗಳ ವಿರುದ್ಧ ಸೆಟೆದು ನಿಲ್ಲಲು ಸಾಧ್ಯವಾಗಿದೆ. ಇದೇ ನಿಜವಾದ ಆಧ್ಯಾತ್ಮದ ನಡೆಯ ಪರಿ; ನೆಲಮೂಲ ಕುಲಮೂಲಗಳಾಚೆಗಿನ ಜೀವಪರತೆಯ ಪರಿ.ಈ ಕಾವ್ಯಸಂಪುಟಕ್ಕೆ ಕೆ. ವೈ. ನಾರಾಯಣಸ್ವಾಮಿ ಮೌಲಿಕವಾದ ಪ್ರಸ್ತಾವನೆಯನ್ನು ಬರೆದಿದ್ದಾರೆ. ಆದರೆ ಕಾವ್ಯ ಸಂಪುಟಕ್ಕೆ ಅತಿಯಾದ ಹಿಂಭಾರವಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry