ಗುರುವಾರ , ಜನವರಿ 23, 2020
26 °C

ಸೊಳ್ಳೆ ಬತ್ತಿ ಹಚ್ಚಿಕೊಂಡು ರಾತ್ರಿ ಇರಬೇಕಾಗ್ತದ...

ಪ್ರಜಾವಾಣಿ ವಾರ್ತೆ / –ಎಚ್.ಎಸ್. ಶ್ರೀಹರಪ್ರಸಾದ್. Updated:

ಅಕ್ಷರ ಗಾತ್ರ : | |

ಮರಿಯಮ್ಮನಹಳ್ಳಿ: ರೋಗಿಗಳ ಪಾಲಿಗೆ ವರವಾಗಬೇಕಿದ್ದ ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರ ಹಲವಾರು ಮೂಲಸಮಸ್ಯೆ­ಗಳಿಂದ ನರಳುತ್ತಿದೆ. ಅತ್ತ ಆರಕ್ಕೇರದೆ, ಇತ್ತ ಮೂರಕ್ಕಿಳಿಯದ ಸ್ಥಿತಿಯಲ್ಲಿದ್ದು, ಚಿಕಿತ್ಸೆಗಾಗಿ ಎದುರು ನೋಡುತ್ತಿದೆ. 1964ರಲ್ಲಿ ದಾನ ನೀಡಿದ ಐದು ಎಕರೆ ಪ್ರದೇಶದಲ್ಲಿ ಪ್ರಾರಂಭವಾದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ 33 ಹಳ್ಳಿಗಳು ಒಳ­ಗೊಂಡಿದೆ.

ಪಟ್ಟಣದ ಮಧ್ಯೆ ರಾಜ್ಯ ಹೆದ್ದಾರಿ 25, ಹೊರವಲಯದಲ್ಲಿ ರಾಷ್ಟ್ರೀಯ ಹೆದ್ದಾರಿ­13 ಹಾದುಹೋಗುತ್ತಿದ್ದು, ನಿತ್ಯ ಅಪಘಾತ ಸಂಭವಿಸುತ್ತವೆ. ಹಲವಾರು ಕಾರ್ಖಾನೆಗಳು ತಲೆ ಎತ್ತುತ್ತಿದ್ದು, ಕೈಗಾರಿಕಾ ವಲಯವಾಗಿ ಮಾರ್ಪಡುತ್ತಿದೆ. ಸೌಲಭ್ಯಗಳಿಂದ ವಂಚಿತ­ವಾದ ಕೇಂದ್ರದಿಂದಾಗಿ ಪ್ರತಿಯೊಂದಕ್ಕೂ ಹೊಸಪೇಟೆಯ ಸರ್ಕಾರಿ ಆಸ್ಪತ್ರೆಯನ್ನೇ ಅವಲಂಬಿಸಬೇಕಾದ ದುಃಸ್ಥಿತಿಯಿದೆ.ಕೇಂದ್ರಕ್ಕೆ ಪಟ್ಟಣದ ಎ, ಬಿ, ಡಣಾಯ­ಕನಕೆರೆ, ಚಿಲಕನಹಟ್ಟಿ, ಜಿ.ನಾಗಲಾಪುರ, ಡಣಾಪುರ ಸೇರಿದಂತೆ ಆರು ಉಪಕೇಂದ್ರಗಳನ್ನು ಹೊಂದಿದೆ. ಕೇಂದ್ರ ವೈದ್ಯರನ್ನು ಹೊಂದಿದ್ದರು, ಬಂದಂತಹ ರೋಗಿಗಳಿಗೆ ಮೂಲಸೌಕರ್ಯದ ಕೊರತೆ ಕಾಡುತ್ತಿದೆ. ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸುವಂತೆ ಹಲವು ಬಾರಿ ಮನವಿ ಸಲ್ಲಿಸಿ, ಪ್ರತಿಭಟನೆ ಮಾಡಿ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಪ್ರಯೋಜನವಾಗದಿರುವದು ಸ್ಥಳೀಯರ ಅಸಹನೆಗೆ ಕಾರಣವಾಗಿದೆ.1964ರಲ್ಲಿ 20 ಸಾವಿರ ಜನಸಂಖ್ಯೆಗೆ ಅನುಗುಣವಾಗಿ ಪ್ರಾಥಮಿಕ ಆರೋಗ್ಯ ಕೇಂದ್ರ ತೆರೆಯಲಾಗಿತ್ತು. ಐದು ದಶಕದ ಹೊಸ್ತಿಲಲ್ಲಿರುವ ಕೇಂದ್ರ ಪ್ರಾಥಮಿಕ ಹಂತದಲ್ಲೇ ಇದೆ. ಸುತ್ತಮುತ್ತಲ ಕಾರ್ಖಾನೆಗಳ ಕೂಲಿ ಕಾರ್ಮಿಕರು ಸೇರಿದಂತೆ ಸುಮಾರು 80 ಸಾವಿರ ಜನಸಂಖ್ಯೆ ಇದ್ದು, ಕೇಂದ್ರ ಹೆಚ್ಚಿನ ಒತ್ತಡ ಎದುರಿಸುತ್ತಿದೆ.

ನಿತ್ಯ ಗ್ರಾಮಸ್ಥರು, ಕಾರ್ಖಾನೆಗಳ ಕೂಲಿಕಾರ್ಮಿಕರು ಸೇರಿದಂತೆ 80 ಜನ ಹೊರರೋಗಿಗಳು ಚಿಕಿತ್ಸೆ ಪಡೆದರೆ, ತಿಂಗಳಲ್ಲಿ 30 ಜನ ಒಳರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರವೊಂದರಲ್ಲಿ ಹೆರಿಗೆ ಆಗುವುದರಲ್ಲಿ ಎರಡನೇ ಸ್ಥಾನದಲ್ಲಿದೆ. ತಿಂಗಳಲ್ಲಿ ಎರಡು ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಶಿಬಿರಗಳು ನಡೆಯುತ್ತಿದ್ದು, 35 ಜನ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿದ್ದಾರೆ.ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಒಳಗಾದ ಮಹಿಳೆಯರಿಗೆ ಹಾಸಿಗೆಗಳ ಸೌಲಭ್ಯ, ಕುಡಿಯುವ ನೀರು ಹಾಗೂ ಶೌಚಾಲಯದ ಸಮಸ್ಯೆಇದ್ದು, ಕುಡಿಯಲು ಹೊರಗಡೆಯಿಂದ ತರಬೇಕಾಗಿದೆ. ಕುಡಿಯುವ ನೀರಿನ ಪೈಪ್‌ಲೈನ್‌ ಹಾಕಿದ್ದರು ಒಂದು ಹನಿ ನೀರು ಬಂದಿಲ್ಲ. ಈ ಬಗ್ಗೆ ಸ್ಥಳೀಯ ಆಡಳಿತಕ್ಕೆ ಹಲವಾರು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಸಂಜೆಯಾದರೆ ಸೊಳ್ಳೆಗಳ ಹಾವಳಿ ಹೆಚ್ಚಾಗುತ್ತಿದ್ದು, ಸೊಳ್ಳೆಬತ್ತಿ ಹಚ್ಚಿಕೊಂಡು ವಾರ್ಡ್‌ಗಳಿರಬೇಕಾದ ಸ್ಥಿತಿ ನಿರ್ಮಾಣವಾಗಿದೆ.ಕೇಂದ್ರದಲ್ಲಿ ಇಬ್ಬರು ಎಂಬಿಬಿಎಸ್, ಒಬ್ಬರು ಆಯುಷ್ ವೈದ್ಯರಿದ್ದರೂ, ಕಾರ್ಯನಿರ್ವಹಿಸುವುದು ಮಹಿಳಾ ಹಾಗೂ ಆಯುಷ್ ವೈದ್ಯರು ಮಾತ್ರ. ಮತ್ತೊಬ್ಬ ವೈದ್ಯರನ್ನು ಬೇರೆಡೆ ನಿಯೋಜನೆ ಮಾಡಿದ್ದರಿಂದ ತೊಂದರೆಯಾಗುತ್ತಿದೆ. ಮಹಿಳಾ ವೈದ್ಯರು ಕಾರ್ಯ ನಿಮಿತ್ತ ಹೋದರೆ ಆಯುಷ್ ವೈದ್ಯರು ನಿರ್ವಹಿಸಬೇಕಾಗಿದೆ.

ಕೇಂದ್ರದಲ್ಲಿ ಹಲವಾರು ಸಿಬ್ಬಂದಿಯ ಕೊರತೆಯಿದ್ದು, ನೇತ್ರ ಸಹಾಯಕರು ಸೇರಿದಂತೆ ಕಿರಿಯ ಮಹಿಳಾ ಮತ್ತು ಪುರುಷ ಆರೋಗ್ಯ ಸಹಾಯಕರ 3 ಹುದ್ದೆ, ಒಂದು ಹಿರಿಯ ಆರೋಗ್ಯ ಸಹಾಯಕ, ಗ್ರೂಪ್‌ ಡಿ ಒಂದು ಹುದ್ದೆ ಖಾಲಿಯಿದೆ. ವಾಹನ ಇದ್ದರೂ ಚಾಲಕ ಇಲ್ಲದ್ದರಿಂದ ವ್ಯಾಪ್ತಿಯಲ್ಲಿ ಬರುವ ಅಂಗನವಾಡಿ, ಶಾಲೆಗಳು, ಗ್ರಾಮಗಳ ಭೇಟಿಗೆ ಅನಾನೂಕೂಲವಾಗಿದೆ ಎನ್ನುತ್ತಾರೆ ವೈದ್ಯರು. ಇನ್ನು ಸಿಬ್ಬಂದಿ ವಾಸಿಸುವ 8 ವಸತಿಗೃಹಗಳು ಮಳೆ ಬಂದರೆ ಸಂಪೂರ್ಣ ಸೋರುತ್ತಿದ್ದು, ವಾಸ ಮಾಡಲು ಸಿಬ್ಬಂದಿ ಹಿಂದು ಮುಂದು ನೋಡುವಂತಾಗಿದ್ದರೂ ಇಲಾಖೆ ಮಾತ್ರ ಗಮನಹರಿಸಿಲ್ಲ.ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸುವಂತೆ ಹಲವಾರು ಸಂಘಸಂಸ್ಥೆಗಳು ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ, ಜತೆಗೆ ಶಾಸಕ, ಸಚಿವರ ಗಮನಕ್ಕೆ ತಂದರೂ ಭರವಸೆ ನೀಡಿದರೆ ಹೊರತು ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ ಮುಂದಾಗಿಲ್ಲ ಎನ್ನುತ್ತಾರೆ ಸಾರ್ವಜನಿಕರು.

ಇಲಾಖೆಯ ಪ್ರಕಾರ 20 ಸಾವಿರ ಜನಸಂಖ್ಯೆಗೊಂದು ಪ್ರಾಥಮಿಕ ಆರೋಗ್ಯ ಇರಬೇಕಿದ್ದು, ಸದ್ಯ ಕೇಂದ್ರ ವ್ಯಾಪ್ತಿಯ ಜನಸಂಖ್ಯೆ 80 ಸಾವಿರ ದಾಟಿದೆ. ಆರು ಹಾಸಿಗೆಯ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯವನ್ನಾಗಿ ಮೇಲ್ದರ್ಜೆಗೇರಿಸುವ ಜತೆಗೆ ಇನ್ನೂ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರ ತೆರೆಯಲು ಕ್ರಮ ಕೈಗೊಳ್ಳಬೇಕೆಂಬುದು ನಾಗರಿಕರ ಆಗ್ರಹ.

–ಎಚ್.ಎಸ್. ಶ್ರೀಹರಪ್ರಸಾದ್.

ಪ್ರತಿಕ್ರಿಯಿಸಿ (+)