ಸೊಳ್ಳೆ ಸಾಮ್ರಾಜ್ಯ: ವಿಜಾಪುರ ಮಂದಿ ತತ್ತರ

7

ಸೊಳ್ಳೆ ಸಾಮ್ರಾಜ್ಯ: ವಿಜಾಪುರ ಮಂದಿ ತತ್ತರ

Published:
Updated:

ವಿಜಾಪುರ: ನಗರದಲ್ಲೆಗ ಸೊಳ್ಳೆಗಳದ್ದೇ ಸಾಮ್ರಾಜ್ಯ. ಮನೆ-ಕಚೇರಿ, ಬೀದಿ-ಮಾರುಕಟ್ಟೆ... ಹೀಗೆ ಎಲ್ಲಿ ಹೋದರೂ ಈ ಸೊಳ್ಳೆಗಳ ಕಾಟ ತಪ್ಪುತ್ತಿಲ್ಲ. ಕುಳಿತರೆ-ನಿಂತರೆ ಸಾಕು. ಮುತ್ತಿಕೊಳ್ಳುವ ಸೊಳ್ಳೆಗಳು ಮನುಷ್ಯರ ರಕ್ತ ಹೀರುವ ಜೊತೆಗೆ ಸಾಂಕ್ರಾಮಿಕ ರೋಗಗಳನ್ನು ಅವರಿಗೆ ಉಚಿತವಾಗಿ ಉಡುಗೊರೆ ನೀಡುತ್ತಿವೆ!ಜಿಲ್ಲೆಯಲ್ಲಿ ಈಗಾಗಲೆ ಚಿಕೂನ್ ಗುನ್ಯಾ, ಮಾರಕ ಡೆಂಗೆ ಮತ್ತಿತರ ಸಾಂಕ್ರಾಮಿಕ ರೋಗಗಳು ಕಾಣಿಸಿಕೊಂಡಿವೆ. ಡೆಂಗೆಗೆ ಮಕ್ಕಳೂ ಬಲಿಯಾಗಿದ್ದಾರೆ. ಡೆಂಗೆ-ಚಿಕೂನ್ ಗುನ್ಯಾ ರೋಗ ಹರಡಲು ಸೊಳ್ಳೆಗಳೇ ಮೂಲ ಕಾರಣ. ಇದು ಎಲ್ಲರಿಗೂ ಗೊತ್ತಿರುವ ಸಂಗತಿಯೇ.`ವಿಜಾಪುರದಲ್ಲಿ ಸೊಳ್ಳೆಗಳ ಹಾವಳಿ ಹೆಚ್ಚಾಗಿದ್ದರೂ ಅವುಗಳ ನಿಯಂತ್ರಣಕ್ಕೆ ಫಾಗಿಂಗ್ (ಧೂಮೀಕರಣ) ಮಾಡುತ್ತಿಲ್ಲ. ತೆರೆದ ಚರಂಡಿ, ಕೊಳಚೆ ಇರುವೆಡೆ ಕ್ರಿಮಿ-ಕೀಟ ನಾಶಕ ಸಿಂಪಡಿಸುತ್ತಿಲ್ಲ. ಕೆಲ ಬಡಾವಣೆಗಳಲ್ಲಿ ಕಸವನ್ನೂ ಸರಿಯಾಗಿ ತೆಗೆಯುತ್ತಿಲ್ಲ. ನಾಗರಿಕರ ಆರೋಗ್ಯ ರಕ್ಷಣೆಗೆ ನಗರಸಭೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ~ ಎಂಬುದು ಜನಸಾಮಾನ್ಯರ ಆರೋಪ.`ನಗರದಲ್ಲಿ ಸೊಳ್ಳೆಗಳ ಹಾವಳಿ ವಿಪರೀತವಾಗಿದೆ. ಮನೆಗಳಲ್ಲಿ ಫ್ಯಾನ್ ಹಚ್ಚಿಕೊಂಡರೆ ಆ ಗಾಳಿಯ ರಭಸಕ್ಕೆ ಸೊಳ್ಳೆ ಹತ್ತಿರ ಸುಳಿಯಲ್ಲ. ಈಗ ಹಗಲಿರುಳೂ ವಿದ್ಯುತ್ ಕೈಕೊಟ್ಟಿರುತ್ತದೆ. ವಿದ್ಯುತ್ ಕೈಕೊಟ್ಟಾಗ ಸೊಳ್ಳೆಗಳು ನಮ್ಮನ್ನು ಮುತ್ತಿಕೊಳ್ಳುತ್ತವೆ. ಸೊಳ್ಳೆ ಬತ್ತಿ, ಲಿಕ್ವಿಡ್‌ಗಳನ್ನು ಬಳಸಿ ಸಾಕಾಗಿದೆ. ಸೊಳ್ಳೆಗಳ ಕಾಟದಿಂದ ನಿದ್ರೆ ಬರದೆ ನಾವೆಲ್ಲ ಜಾಗರಣೆ ಮಾಡುತ್ತಿದ್ದರೆ ನಗರಸಭೆ ಮಾತ್ರ ನಿದ್ರೆಯಲ್ಲಿ ಇರುವಂತೆ ಕಾಣುತ್ತಿದೆ~ ಎಂದು ಅವರು ಆಕ್ರೋಶ ವ್ಯಕ್ತಪಡಿಸುತ್ತಾರೆ.`ವಿಜಾಪುರ ನಗರಸಭೆಯಲ್ಲಿ ಫಾಗಿಂಗ್ ಯಂತ್ರಗಳಿವೆ. ಪಂಚಾಯಿತಿಗಳಲ್ಲಿಯೂ ಸಾಕಷ್ಟು ಯಂತ್ರಗಳಿವೆ. ಅಲ್ಲಿಂದ ಹೆಚ್ಚುವರಿ ಯಂತ್ರಗಳನ್ನು ತರಿಸಿ ಇಡೀ ನಗರದಲ್ಲಿ ಫಾಗಿಂಗ್ ಮಾಡಿದರೆ ಸೊಳ್ಳೆಗಳ ಹಾವಳಿ ನಿಯಂತ್ರಣಕ್ಕೆ ಬರಬಹುದು. ಆದರೆ, ಆ ಬಗ್ಗೆ ನಗರಸಭೆ ಚಿಂತಿಸುತ್ತಿಲ್ಲ. ನಗರಸಭೆಗೆ ಬಿಸಿ ಮುಟ್ಟಿಸಿ ಕೆಲಸ ಮಾಡಿಸುವ ಯತ್ನವನ್ನೂ ಜಿಲ್ಲಾ ಆಡಳಿತ ಮಾಡುತ್ತಿಲ್ಲ~ ಎಂದು ಹೆಸರು ಬಹಿರಂಗ ಪಡಿಸಲು ಒಲ್ಲದ ನಗರಸಭೆಯ ಸದಸ್ಯರೊಬ್ಬರು ಹೇಳುತ್ತಾರೆ.`ಜಿಲ್ಲೆಯಲ್ಲಿ ಸಾಂಕ್ರಾಮಿಕ ರೋಗ ಹರಡುತ್ತಿವೆ. ಸೊಳ್ಳೆಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು. ನಿಯಮಿತವಾಗಿ ಫಾಗಿಂಗ್ ಮಾಡಬೇಕು. ನೀರು ಹೆಚ್ಚು ಸಮಯದ ವರೆಗೆ ನಿಲ್ಲದಂತೆ ನೋಡಿಕೊಳ್ಳಬೇಕು. ಕುಡಿಯುವ ನೀರಿನೊಂದಿಗೆ ಕಲುಷಿತ ನೀರು ಸೇರದಂತೆ ಎಚ್ಚರಿಕೆ ವಹಿಸಬೇಕು ಎಂದು ಜಿಲ್ಲೆಯ ಎಲ್ಲ ಸ್ಥಳೀಯ ಸಂಸ್ಥೆಗಳಿಗೆ ಪತ್ರ ಬರೆದು ವಿನಂತಿಸಿದ್ದೇವೆ. ವಿಜಾಪುರ ನಗರಸಭೆಯೂ ಸೇರಿದಂತೆ ನಮ್ಮ ಮನವಿಗೆ ಯಾವ ಸ್ಥಳೀಯ ಸಂಸ್ಥೆಗಳೂ ಸ್ಪಂದಿಸುತ್ತಿಲ್ಲ~ ಎಂದು ಆರೋಗ್ಯ ಇಲಾಖೆಯ ಸಾಂಕ್ರಾಮಿಕ ರೋಗ ನಿಯಂತ್ರಣ ವಿಭಾಗದ ಅಧಿಕಾರಿಯೊಬ್ಬರು ಆರೋಪಿಸುತ್ತಾರೆ.`ಫಾಗಿಂಗ್ ಎಂಬುದು ಒಂದು ಜೋಕ್. ಅಧಿಕಾರಿಗಳು-ರಾಜಕಾರಣಿಗಳ ಮನೆಗಳು ಇರುವ ಪ್ರದೇಶದಲ್ಲಿ ಒಂದು ಯಂತ್ರದಿಂದ ಫಾಗಿಂಗ್ ಮಾಡುತ್ತಾರೆ. ಅದರ ಭಾವಚಿತ್ರ ತೆಗೆಸಿ ಪತ್ರಿಕೆಗಳ ಕಚೇರಿಗೆ ಕಳಿಸಿ ನಗರದ ತುಂಬೆಲ್ಲ ಫಾಗಿಂಗ್ ಮಾಡುತ್ತಿದ್ದೇವೆ ಎಂದು ಬಿಂಬಿಸುತ್ತಾರೆ. ಅದರಂತೆ ಫೈಲ್‌ನ್ನೂ ಸಹ ತಯಾರು ಮಾಡುತ್ತಾರೆ~ ಎಂದು ನಗರಸಭೆಯ ಸಿಬ್ಬಂದಿಯೊಬ್ಬರು ಹೇಳಿದರು.`ಕಸ ಸಂಗ್ರಹಿಸುವ ಗುತ್ತಿಗೆದಾರರಿಗೆ ಬಿಲ್ಲು ಪಾವತಿಸಿಲ್ಲ ಎಂಬ ಕಾರಣಕ್ಕೆ ನಗರಸಭೆಯವರು 90ಕ್ಕೂ ಹೆಚ್ಚು ಜನರ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿದ್ದಾರೆ.ಇಡೀ ನಗರದ ಜನತೆ ಸೊಳ್ಳೆಗಳ ಹಾವಳಿಯಿಂದ ತತ್ತರಿಸಿದ್ದರೂ ಅವುಗಳ ನಿಯಂತ್ರಣಕ್ಕೆ ನಗರಸಭೆಯವರು ಯಾವುದೇ ಕ್ರಮ ಕೈಗೊಂಡಿಲ್ಲ. ಇದು ನಗರಸಭೆಯ ಕಾರ್ಯವೈಖರಿಗೆ ಹಿಡಿದ ಕನ್ನಡಿ~ ಎಂದು ಮಹಿಳೆಯೊಬ್ಬರು ಹಿಡಿಶಾಪ ಹಾಕಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry