ಸೋತರೂ ಪೈಪೋಟಿ ನೀಡಿದ ಭಾರತ

7
ಕ್ರಿಕೆಟ್: ಮಿಂಚಿದ ಕುಕ್, ಬೆಲ್, ಟ್ರೆಡ್‌ವೆಲ್; ಇಂಗ್ಲೆಂಡ್ ಶುಭಾರಂಭ

ಸೋತರೂ ಪೈಪೋಟಿ ನೀಡಿದ ಭಾರತ

Published:
Updated:
ಸೋತರೂ ಪೈಪೋಟಿ ನೀಡಿದ ಭಾರತ

ರಾಜ್‌ಕೋಟ್: ಹೊಸ ಕ್ರೀಡಾಂಗಣದಲ್ಲೂ ಹಳೆಯ ಕತೆಯೇ ಮುಂದುವರಿದಿದೆ. ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆಯ ನೂತನ ಕ್ರೀಡಾಂಗಣ ಭಾರತಕ್ಕೆ ಶುಭ ತರಲಿಲ್ಲ. ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಮಹೇಂದ್ರ ಸಿಂಗ್ ದೋನಿ ಬಳಗ ಗೆಲುವಿನ ದಡದಲ್ಲಿ ಎಡವಿತು.ಆದರೆ ಸೋಲುವ ಮುನ್ನ ಪೈಪೋಟಿ ನೀಡಿದ್ದು ಮಾತ್ರ ಸಮಾಧಾನ ನೀಡುವ ಅಂಶ. ಶುಕ್ರವಾರ ನಡೆದ ಹೋರಾಟದಲ್ಲಿ ಒಂಬತ್ತು ರನ್‌ಗಳ ರೋಚಕ ಗೆಲುವಿನ ಮೂಲಕ ಅಲಸ್ಟೇರ್ ಕುಕ್ ಬಳಗ ಐದು ಪಂದ್ಯಗಳ ಸರಣಿಯಲ್ಲಿ 1-0 ರಲ್ಲಿ ಮಹತ್ವದ ಮುನ್ನಡೆ ಪಡೆಯಿತು.ಟಾಸ್ ಗೆದ್ದು ಬ್ಯಾಟ್ ಮಾಡಿದ ಪ್ರವಾಸಿ ತಂಡ 4 ವಿಕೆಟ್‌ಗೆ 325 ರನ್ ಪೇರಿಸಿತು. ಇಯಾನ್ ಬೆಲ್ (85, 96 ಎಸೆತ, 9 ಬೌಂ, 1 ಸಿಕ್ಸರ್) ಮತ್ತು ನಾಯಕ ಕುಕ್ (75, 83 ಎಸೆತ, 11 ಬೌಂ, 1 ಸಿಕ್ಸರ್) ಭರ್ಜರಿ ಬ್ಯಾಟಿಂಗ್ ಇದಕ್ಕೆ ಕಾರಣ.ಕೊನೆಯ ಓವರ್‌ವರೆಗೂ ಗೆಲುವಿನ ಭರವಸೆ ಹುಟ್ಟಿಸಿದ ಭಾರತ 9 ವಿಕೆಟ್‌ಗೆ 316 ರನ್ ಗಳಿಸಲಷ್ಟೇ ಯಶಸ್ವಿಯಾಯಿತು. ಬ್ಯಾಟಿಂಗ್ ಪಿಚ್, ಉತ್ತಮ ಆರಂಭ, ಹಿತಕರ ವಾತಾವರಣ ಎಲ್ಲ ದೊರೆತರೂ ಆತಿಥೇಯರಿಗೆ ಗೆಲುವು ಮಾತ್ರ ದಕ್ಕಲಿಲ್ಲ.ಸವಾಲಿನ ಗುರಿಯನ್ನು ಭಾರತ ಧೈರ್ಯದಿಂದಲೇ ಬೆನ್ನಟ್ಟಿತ್ತು. ಗಂಭೀರ್ ಹಾಗೂ ರಹಾನೆ ಅವರಿಂದ ಉತ್ತಮ ಆರಂಭ ದೊರೆಯಿತು. ಆ ಬಳಿಕ ಯುವರಾಜ್ ಸಿಂಗ್ (61, 54 ಎಸೆತ, 8 ಬೌಂ, 1 ಸಿ.), ಸುರೇಶ್ ರೈನಾ (50, 49 ಎಸೆತ, 7 ಬೌಂ) ಮತ್ತು ದೋನಿ (32. 25 ಎಸೆತ, 4 ಸಿಕ್ಸರ್) ಚೆನ್ನಾಗಿಯೇ ಆಡಿದರು. ಆದರೆ ಇವರಲ್ಲಿ ಯಾರಿಗೂ `ಮ್ಯಾಚ್ ವಿನ್ನರ್' ಎನಿಸಿಕೊಳ್ಳಲು ಆಗಲಿಲ್ಲ.ಉತ್ತಮ ಆರಂಭ: ಗೌತಮ್ ಗಂಭೀರ್ (52, 52 ಎಸೆತ, 7 ಬೌಂ) ಮತ್ತು ಅಜಿಂಕ್ಯ ರಹಾನೆ (47, 57 ಎಸೆತ, 6 ಬೌಂ) ಮೊದಲ ವಿಕೆಟ್‌ಗೆ 16.4 ಓವರ್‌ಗಳಲ್ಲಿ 96 ರನ್ ಸೇರಿಸಿ ಉತ್ತಮ ಆರಂಭ ನೀಡಿದ್ದರು.ಗಂಭೀರ್ ಮತ್ತು ರಹಾನೆ ಬೌಂಡರಿಗಳನ್ನು ಮಾತ್ರ ನೆಚ್ಚಿಕೊಂಡು ಕೂರಲಿಲ್ಲ. ವಿಕೆಟ್ ನಡುವೆ ಚುರುಕಿನ ಓಟದ ಮೂಲಕ ಸ್ಟ್ರೈಕ್ ರೊಟೇಟ್ ಮಾಡುವತ್ತಲೂ ಗಮನ ಹರಿಸಿದರು. ಆದರೆ ಇಬ್ಬರೂ ಟ್ರೆಡ್‌ವೆಲ್‌ಗೆ ವಿಕೆಟ್ `ಉಡುಗೊರೆ'ಯಾಗಿ ನೀಡಿದರು. ತಂಡದಲ್ಲಿ ಸ್ಥಾನ ಕಾಪಾಡಿಕೊಳ್ಳಲು ಬೇಕಾದಷ್ಟು ಸ್ಕೋರ್ ಗಳಿಸಿದ ಬಳಿಕ ಇವರು ಜವಾಬ್ದಾರಿ ಮರೆತು ಆಡಿದಂತೆ ಕಂಡುಬಂತು.ವಿರಾಟ್ ಕೊಹ್ಲಿ (15) ವಿಫಲರಾದರೂ, ಯುವರಾಜ್ ಮತ್ತು ರೈನಾ ನಾಲ್ಕನೇ ವಿಕೆಟ್‌ಗೆ 9 ಓವರ್‌ಗಳಲ್ಲಿ 60 ರನ್ ಜೊತೆಯಾಟ ನೀಡಿದರು. ಇಂಗ್ಲೆಂಡ್ ವಿರುದ್ಧ ಈ ಹಿಂದೆ ಹಲವು ಸ್ಮರಣೀಯ ಇನಿಂಗ್ಸ್‌ಗಳನ್ನು ಕಟ್ಟಿದ್ದ ಯುವಿ ತಂಡವನ್ನು ಗೆಲುವಿನತ್ತ ಕೊಂಡೊಯ್ಯುವರು ಎಂದು ಭಾವಿಸಲಾಗಿತ್ತು. ಆದರೆ ಟ್ರೆಡ್‌ವೆಲ್ ಅಂತಹ ಸಾಧ್ಯತೆ ದೂರಮಾಡಿದರು.ಕೊನೆಯ 15 ಓವರ್‌ಗಳಲ್ಲಿ ಜಯಕ್ಕೆ 128 ರನ್‌ಗಳು ಬೇಕಿದ್ದವು. ದೋನಿ ಬ್ಯಾಟ್‌ನಿಂದ ನಾಲ್ಕು ಸಿಕ್ಸರ್‌ಗಳು ಸಿಡಿದಾಗ ನೆರೆದ ಪ್ರೇಕ್ಷಕರು ಹುಚ್ಚೆದ್ದು ಕುಣಿದರು. ಆದರೆ 45ನೇ ಓವರ್ ಪಂದ್ಯವನ್ನು ಭಾರತದ ಕೈಯಿಂದ ಕಿತ್ತುಕೊಂಡಿತು. ಜೇಡ್ ಡೆರ್ನ್‌ಬಾಕ್ ಈ ಓವರ್‌ನಲ್ಲಿ ದೋನಿ ಹಾಗೂ ಜಡೇಜ ವಿಕೆಟ್ ಪಡೆದು ಬಲವಾದ ಪ್ರಹಾರ ನೀಡಿದರು. ಕೊನೆಯ ಕ್ರಮಾಂಕದ ಆಟಗಾರರು ಶಕ್ತಿಮೀರಿ ಪ್ರಯತ್ನಿಸಿದರೂ ಭಾರತಕ್ಕೆ ಗೆಲುವು ಒಲಿಯಲಿಲ್ಲ.ಬ್ಯಾಟ್ಸ್‌ಮನ್‌ಗಳ ದರ್ಬಾರ್ ನಡೆದ ಪಿಚ್‌ನಲ್ಲೂ ಪ್ರಭಾವಿ ಬೌಲಿಂಗ್ ಪ್ರದರ್ಶನ ನೀಡಿ `ಪಂದ್ಯಶ್ರೇಷ್ಠ' ಎನಿಸಿಕೊಂಡ ಜೇಮ್ಸ ಟ್ರೆಡ್‌ವೆಲ್‌ಗೆ (44ಕ್ಕೆ 4) ಶಹಬ್ಬಾಸ್ ಹೇಳಲೇಬೇಕು.ಕುಕ್ಕಿದ ಕುಕ್, ಬೆಲ್: ಇಂಗ್ಲೆಂಡ್ ತಂಡದ ಇನಿಂಗ್ಸ್ ಕುಕ್ ಮತ್ತು ಬೆಲ್ ಅವರ ಬ್ಯಾಟಿಂಗ್‌ನ ಬಲದಿಂದ ಬೆಳೆದು ನಿಂತಿತು. ಮೊದಲ ವಿಕೆಟ್‌ಗೆ 27.4 ಓವರ್‌ಗಳಲ್ಲಿ 158 ರನ್‌ಗಳು ಮೂಡಿಬಂದವು. ಕೆವಿನ್ ಪೀಟರ್ಸನ್(44, 45 ಎಸೆತ, 4 ಬೌಂಡರಿ, 1 ಸಿ.) ಹಾಗೂ ಎಯೊನ್ ಮಾರ್ಗನ್ (41, 38 ಎಸೆತ, 4 ಬೌಂ, 2 ಸಿಕ್ಸರ್) ಮಧ್ಯದ ಓವರ್‌ಗಳಲ್ಲಿ ಪ್ರಭುತ್ವ ಮೆರೆದರೆ, ಕೊನೆಯಲ್ಲಿ ಸಮಿತ್ ಪಟೇಲ್ (44, 20 ಎಸೆತ, 6 ಬೌಂ, 1 ಸಿಕ್ಸರ್) ಸ್ಕೋರಿಂಗ್‌ನ ವೇಗ ಹೆಚ್ಚಿಸಿದರು.ಎರಡು ಅಭ್ಯಾಸ ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಬೆಲ್ ಆ ಫಾರ್ಮ್‌ನ್ನು ರಾಜ್‌ಕೋಟ್‌ನಲ್ಲೂ ಮುಂದುವರಿಸಿದರು. ಮೊದಲ ಕೆಲವು ಓವರ್‌ಗಳಲ್ಲಿ ಅಲ್ಪ ತಡಕಾಡಿದ ಇಬ್ಬರೂ ಬೇಗನೇ ಹಿಡಿತ ಕಂಡುಕೊಂಡರು. ಪರಿಸ್ಥಿತಿಗೆ ಹೊಂದಿಕೊಂಡ ಬಳಿಕ ಬೌಂಡರಿಗಳು ಸರಾಗವಾಗಿ ಬರಲಾರಂಭಿಸಿದವು.ಬೆಲ್ 15 ರನ್ ಗಳಿಸಿದ್ದ ಸಂದರ್ಭ ಔಟಾಗಬೇಕಿತ್ತು. ಭುವನೇಶ್ವರ್ ಎಸೆತದಲ್ಲಿ ನಿರೀಕ್ಷೆಗಿಂತಲೂ ಹೆಚ್ಚಿನ ಬೌನ್ಸ್ ಪಡೆದ ಚೆಂಡು ಬೆಲ್ ಬ್ಯಾಟ್‌ನ ಅಂಚಿಗೆ ಸವರಿಕೊಂಡು ವಿಕೆಟ್ ಕೀಪರ್ ಹಾಗೂ ಸ್ಲಿಪ್ ಫೀಲ್ಡರ್ ನಡುವೆ ಬೌಂಡರಿಗೆ ಹೋಯಿತು. ಆದರೆ ದೋನಿ ಹಾಗೂ ಸ್ಲಿಪ್‌ನಲ್ಲಿದ್ದ ಅಶ್ವಿನ್ ಕ್ಯಾಚ್ ಪಡೆಯುವ ಪ್ರಯತ್ನವನ್ನೇ ಮಾಡಲಿಲ್ಲ.ಆಗಿಂದಾಗ್ಗೆ ಕ್ರೀಸ್ ಬಿಟ್ಟು ಮುಂದೆ ಬರುತ್ತಿದ್ದ ಬೆಲ್ ರಕ್ಷಣೆ ಹಾಗೂ ಆಕ್ರಮಣವನ್ನು ಮೈಗೂಡಿಸಿಕೊಂಡು ಆಡಿದರು. ಮಾತ್ರವಲ್ಲ ಹೊಡೆತಗಳ ವೇಳೆ ಶಕ್ತಿಯ ಬದಲು ಯುಕ್ತಿಯನ್ನು ಬಳಸಿದರು.ಕುಕ್ ಹಾಗೂ ಬೆಲ್ ಇನಿಂಗ್ಸ್‌ನಲ್ಲಿ ಹೆಚ್ಚಿನ ಆರ್ಭಟ ಇರಲಿಲ್ಲ. ಆದರೂ ರನ್‌ಗಳು ಸರಾಗವಾಗಿ ಹರಿದುಬಂದವು. ಇಬ್ಬರಿಗೂ ಶತಕ ಗಳಿಸುವ ಅದೃಷ್ಟ ಇರಲಿಲ್ಲ. ಬೆಲ್ ರನೌಟಾದರೆ, ಇಂಗ್ಲೆಂಡ್ ನಾಯಕನ ವಿಕೆಟ್ ಸುರೇಶ್ ರೈನಾ ಪಾಲಾಯಿತು.ಆರಂಭಿಕ ಆಟಗಾರರಿಬ್ಬರು14 ರನ್‌ಗಳ ಅಂತರದಲ್ಲಿ ಔಟಾದಾಗ ಇಂಗ್ಲೆಂಡ್ ಮೇಲೆ ಹಿಡಿತ ಸಾಧಿಸುವ ಅವಕಾಶ ಭಾರತಕ್ಕೆ ಲಭಿಸಿತ್ತು. ಪೀಟರ್ಸನ್ ಮತ್ತು ಮಾರ್ಗನ್ ಅದಕ್ಕೆ ಅವಕಾಶ ನೀಡಲಿಲ್ಲ. ಮೂರನೇ ವಿಕೆಟ್‌ಗೆ 76 ರನ್ ಸೇರಿಸಿದರು. ಆ ಬಳಿಕ ಕೀಸ್‌ವೆಟರ್ ಮತ್ತು ಸಮಿತ್ ಆರು ಓವರ್‌ಗಳಲ್ಲಿ 70 ರನ್ ಚಚ್ಚಿದರು.ಇಶಾಂತ್ ಹಾಗೂ ಭುವನೇಶ್ವರ್ ಬೌಲ್ ಮಾಡಿದ ಕೊನೆಯ ಎರಡು ಓವರ್‌ಗಳಲ್ಲಿ ಇಂಗ್ಲೆಂಡ್ 38 ರನ್ ಕಲೆ ಹಾಕಿತು.

ಸ್ಕೋರ್ ವಿವರ : 

ಇಂಗ್ಲೆಂಡ್: 50 ಓವರ್‌ಗಳಲ್ಲಿ 4 ವಿಕೆಟ್‌ಗೆ 325

ಅಲಸ್ಟೇರ್ ಕುಕ್ ಸಿ ರಹಾನೆ ಬಿ ಸುರೇಶ್ ರೈನಾ  75

ಇಯಾನ್ ಬೆಲ್ ರನೌಟ್  85

ಕೆವಿನ್ ಪೀಟರ್ಸನ್ ಸಿ ಕೊಹ್ಲಿ ಬಿ ಅಶೋಕ್ ದಿಂಡಾ 44

ಎಯೊನ್ ಮಾರ್ಗನ್ ಸಿ ಮತ್ತು ಬಿ ದಿಂಡಾ  41

ಕ್ರೆಗ್ ಕೀಸ್‌ವೆಟರ್ ಔಟಾಗದೆ  24

ಸಮಿತ್ ಪಟೇಲ್ ಔಟಾಗದೆ  44

ಇತರೆ: (ವೈಡ್-10, ನೋಬಾಲ್-2)  12

ವಿಕೆಟ್ ಪತನ: 1-158 (ಬೆಲ್; 27.4), 2-172 (ಕುಕ್; 31.1), 3-248 (ಮಾರ್ಗನ್; 41.6), 4-255 (ಪೀಟರ್ಸನ್ 43.5)

ಬೌಲಿಂಗ್: ಭುವನೇಶ್ವರ್ ಕುಮಾರ್ 7-0-52-0, ಇಶಾಂತ್ ಶರ್ಮ 10-2-86-0, ಅಶೋಕ್ ದಿಂಡಾ 8-0-53-2, ಆರ್. ಅಶ್ವಿನ್ 9-0-61-0, ರವೀಂದ್ರ ಜಡೇಜ 10-0-46-0, ಸುರೇಶ್ ರೈನಾ 5-0-18-1, ವಿರಾಟ್ ಕೊಹ್ಲಿ 1-0-9-0

ಭಾರತ: 50 ಓವರ್‌ಗಳಲ್ಲಿ 9 ವಿಕೆಟ್‌ಗೆ 316

ಅಜಿಂಕ್ಯ ರಹಾನೆ ಸಿ ಡೆರ್ನ್‌ಬಾಕ್ ಬಿ ಜೇಮ್ಸ         ಟ್ರೆಡ್‌ವೆಲ್  47

ಗೌತಮ್ ಗಂಭೀರ್ ಸಿ ಬೆಲ್ ಬಿ ಜೇಮ್ಸ              ಟ್ರೆಡ್‌ವೆಲ್  52

ವಿರಾಟ್ ಕೊಹ್ಲಿ ಸಿ ಕೀಸ್‌ವೆಟರ್ ಬಿ ಟಿಮ್ ಬ್ರೆಸ್ನನ್ 15

ಯುವರಾಜ್ ಸಿಂಗ್ ಸಿ ಡೆರ್ನ್‌ಬಾಕ್ ಬಿ             ಜೇಮ್ಸ ಟ್ರೆಡ್‌ವೆಲ್  61

ಸುರೇಶ್ ರೈನಾ ಸಿ ಮತ್ತು ಬಿ ಜೇಮ್ಸ ಟ್ರೆಡ್‌ವೆಲ್  50

ದೋನಿ ಸಿ ರೂಟ್ ಬಿ ಜೇಡ್       ಡೆರ್ನ್‌ಬಾಕ್  32

ರವೀಂದ್ರ ಜಡೇಜ ಬಿ ಜೇಡ್ ಡೆರ್ನ್‌ಬಾಕ್  07

ಆರ್. ಅಶ್ವಿನ್ ಸಿ ಕೀಸ್‌ವೆಟರ್ ಬಿ ಸ್ಟೀವನ್ ಫಿನ್  13

ಭುವನೇಶ್ವರ್ ಕುಮಾರ್ ಔಟಾಗದೆ  20

ಅಶೋಕ್ ದಿಂಡಾ ಬಿ ಟಿಮ್ ಬ್ರೆಸ್ನನ್  03

ಇಶಾಂತ್ ಶರ್ಮ ಔಟಾಗದೆ  07

ಇತರೆ: (ಲೆಗ್‌ಬೈ-1, ವೈಡ್-7, ನೋಬಾಲ್-1)  09

ವಿಕೆಟ್ ಪತನ: 1-96 (ರಹಾನೆ; 16.4), 2-102 (ಗಂಭೀರ್; 18.4), 3-138 (ಕೊಹ್ಲಿ; 25.4), 4-198 (ಯುವರಾಜ್; 34.4), 5-243 (ರೈನಾ; 41.4), 6-271 (ದೋನಿ; 44.2), 7-273 (ಜಡೇಜ; 44.5), 8-297 (ಅಶ್ವಿನ್; 47.3), 9-307 (ದಿಂಡಾ; 48.5)

ಬೌಲಿಂಗ್: ಸ್ಟೀವನ್ ಫಿನ್ 10-0-63-1, ಜೇಡ್ ಡೆರ್ನ್‌ಬಾಕ್ 10-0-69-2, ಟಿಮ್ ಬ್ರೆಸ್ನನ್ 8-0-67-2, ಜೇಮ್ಸ ಟ್ರೆಡ್‌ವೆಲ್ 10-0-44-4, ಜೋ ರೂಟ್ 9-0-51-0, ಸಮಿತ್ ಪಟೇಲ್ 3-0-21-0

ಫಲಿತಾಂಶ: ಇಂಗ್ಲೆಂಡ್‌ಗೆ 9 ರನ್ ಗೆಲುವು

ಪಂದ್ಯಶ್ರೇಷ್ಠ: ಜೇಮ್ಸ ಟ್ರೆಡ್‌ವೆಲ್

ಎರಡನೇ ಏಕದಿನ: ಜ. 15 (ಕೊಚ್ಚಿ)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry