ಶುಕ್ರವಾರ, ಜೂನ್ 25, 2021
27 °C

ಸೋನಾಕ್ಷಿ ಸಣ್ಣಗಾದದ್ದು...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಂಬೆಗಾಲಿಟ್ಟುಕೊಂಡೇ ಬಾಲಿವುಡ್ ಓಣಿಗೆ ಕಾಲಿಟ್ಟ ಸೋನಾಕ್ಷಿ ಸಿನ್ಹಾ ತನ್ನ ಬಗಲಲ್ಲೇ ಯಶಸ್ಸು ಇಟ್ಟುಕೊಂಡು ಬಂದವರು. ನಟನೆ ಬಗ್ಗೆ ನನಗೆ ಏನೇನೂ ಗೊತ್ತಿಲ್ಲ ಎಂದು ಹೇಳುತ್ತಿದ್ದಾಗಲೇ `ದಬಾಂಗ್~ ಸಿನಿಮಾ ಈಕೆಯ ಅಭಿನಯ ಸಾಮರ್ಥ್ಯ, ಚೆಲುವು ಹಾಗೂ ಅದೃಷ್ಟ ಎಲ್ಲಕ್ಕೂ ಕನ್ನಡಿ ಹಿಡಿಯಿತು.2010ರಲ್ಲಿ ತೆರೆಕಂಡ ದಬಾಂಗ್ ಆ ಕಾಲಘಟ್ಟದಲ್ಲಿ ಅತಿ ಹೆಚ್ಚು ಹಣಗಳಿಕೆ ಮಾಡಿದ ಖ್ಯಾತಿಗೂ ಪಾತ್ರವಾಯಿತು.ದಬಾಂಗ್ ಸಿನಿಮಾ ಬಿಡುಗಡೆಯ ನಂತರ ಎಲ್ಲರೂ ಸೋನಾಕ್ಷಿ ಕುರಿತು ಮಾತನಾಡತೊಡಗಿದರು. ಲಯನ್ ಆಫ್ ಖಾನ್ಸ್ ಎನಿಸಿಕೊಂಡಿರುವ ಸಲ್ಮಾನ್ ಖಾನ್ ಈ ಚಿತ್ರದ ಮುಖ್ಯ ಭೂಮಿಕೆಯಲ್ಲಿದ್ದರೂ ಅವರ ವರ್ಚಸ್ಸಿನಿಂದ ಈಕೆ ಮುಕ್ಕಾಗಲಿಲ್ಲ.ನಾಯಕ ಪ್ರಧಾನ ಚಿತ್ರವಾದರೂ ಚುಲ್‌ಬುಲ್ ಪಾಂಡೆ (ಸಲ್ಮಾನ್ ಖಾನ್)ಗಿಂತಲೂ ಹೆಚ್ಚು ಎತ್ತರದಲ್ಲಿ ನಿಂತ ಬೆಡಗಿ ಈಕೆ. ಆ ಚಿತ್ರದ ತನ್ನ ಪಾತ್ರ ಕುರಿತು ಬಂದ ಭರಪೂರ ಪ್ರತಿಕ್ರಿಯೆಗಳಿಂದ ಸೋನಾಕ್ಷಿ ಸಿನ್ಹಾ ಅವರಲ್ಲಿ ಆತ್ಮವಿಶ್ವಾಸ ಬೆಳೆಯಿತು. ಈ ಚಿತ್ರ ರಾತ್ರಿ ಕಳೆದು ಬೆಳಗಾಗುವುದರಲ್ಲಿ ಈಕೆಗೆ ಸ್ಟಾರ್‌ಗಿರಿ ತಂದು ಕೊಟ್ಟಿತು.ಈ ಕಾರಣದಿಂದಾಗಿಯೇ ತನ್ನ ವೃತ್ತಿಜೀವನ, ಬಾಲಿವುಡ್ ಇಂಡಸ್ಟ್ರಿ ಹಾಗೂ ತಮ್ಮ ದೃಢಸಂಕಲ್ಪಗಳ ಬಗ್ಗೆ ಪ್ರಬುದ್ಧವಾಗಿ ಮಾತನಾಡುವಷ್ಟು ಧೈರ್ಯ ಸೋನಾಕ್ಷಿಯವರಿಗೆ ಬಂದಿದೆ.ಶತ್ರುಘ್ನ ಸಿನ್ಹಾ ಹಾಗೂ ಪೂನಂ ಸಿನ್ಹಾರ ಮುದ್ದಿನ ಮಗಳಾದ ಸೋನಾಕ್ಷಿ ತಮಗೆ  ಸಿಕ್ಕ ಯಶಸ್ಸಿನಿಂದ ಉಬ್ಬಿ ಮೆರೆಯಲಿಲ್ಲ. ದಬಾಂಗ್ ಚೆಲುವೆ ಸೋನಾಕ್ಷಿ ಆ ಸಮಯದಲ್ಲಿ ಯುವಜನತೆಯ ನೆಚ್ಚಿನ ನಟಿ ಎನಿಸಿಕೊಂಡರು. ಇಂದಿಗೂ ತಮ್ಮದೇ ತಾರಾವರ್ಚಸ್ಸು ಅಭಿಮಾನಿಗಳ ಹೃದಯದಲ್ಲಿ ಅಭಿಮಾನವನ್ನು ಶಾಶ್ವತವಾಗಿ ಉಳಿಸಿಕೊಂಡಿದ್ದಾರೆ. ಆ ಮಟ್ಟಿಗೆ ಅವರು ಜಾಣರೇ ಹೌದು.ಸೋನಾಕ್ಷಿ ಸಿನ್ಹಾ ಸಿನಿಮಾ ಪ್ರವೇಶ ಆಕಸ್ಮಿಕ. ಲ್ಯಾಕ್ಮೆ ಫ್ಯಾಷನ್ ಶೋನಲ್ಲಿ ರ‌್ಯಾಂಪ್ ಮೇಲೆ ಕ್ಯಾಟ್ ವಾಕ್ ಮಾಡುತ್ತಿದ್ದಾಗ ಖುಲಾಯಿಸಿದ ಅದೃಷ್ಟ ಇದು. ಈ ಸಂದರ್ಭದಲ್ಲಿ `ದಬಾಂಗ್~ ಸಿನಿಮಾಕ್ಕಾಗಿ ಹೊಸ ಮುಖದ ಶೋಧನೆಗೆಂದು ಬಂದಿದ್ದ ನಿರ್ಮಾಪಕ ಅರ್ಬಾಜ್ ಖಾನ್ ಹಾಗೂ ನಟ ಸಲ್ಮಾನ್ ಖಾನ್ ಅವರ ಚಿತ್ತವನ್ನು ಸೆಳೆದರು. ಅಲ್ಲಿಂದ ಸೋನಾಕ್ಷಿ ಮುಟ್ಟಿದ್ದೆಲ್ಲಾ ಚಿನ್ನ.ಚೆನ್ನಾಗಿ ತಿಂದುಂಡುಕೊಂಡು ಗುಂಡಗಿದ್ದ ಸೋನಾಕ್ಷಿ ದೇಹತೂಕ ಕಡಿಮೆ ಮಾಡಿಕೊಳ್ಳಲು ಸಾಕಷ್ಟು ಶ್ರಮ ಹಾಕಿದರು. ತಮ್ಮ ತೂಕದ ವಿಚಾರ ಹೊರಗೆ ಹಗುರ ಮಾತಿಗೆ ಆಹಾರವಾಗದಂತೆ ಎಚ್ಚರವನ್ನೂ ವಹಿಸಿದರು. ತಮ್ಮ ತೂಕ ಕಡಿಮೆ ಮಾಡಿಕೊಳ್ಳಲು ಸಾಕಷ್ಟು ವರ್ಕೌಟ್ ಕೂಡ ಮಾಡಿದರು.ಸೋನಾಕ್ಷಿ ಸಿನಿಮಾಗೆ ಕಾಲಿಡುವ ಮುಂಚೆ ಯಾವುದೇ ನಟನೆ ಕುರಿತ ತರಬೇತಿ ಹಾಗೂ ಕ್ಯಾಮೆರಾ ಲೈಟ್‌ಗಳನ್ನು ಎದುರಿಸಿದ್ದಿಲ್ಲ. ಅವರಿಗೆ ಈ ವಿಷಯದಲ್ಲಿ ಮಾರ್ಗದರ್ಶನ ಹಾಗೂ ಅಭಿನಯ ಹೇಗಿರಬೇಕೆಂದು ತಿಳಿವಳಿಕೆ ನೀಡಿದ್ದು ನಟ ಸಲ್ಮಾನ್ ಖಾನ್.ಮುಂದೆ ದಬಾಂಗ್ ಸಿನಿಮಾದಲ್ಲಿನ ಆಕೆಯ ನಟನೆ ಎಲ್ಲರ ಕಣ್ಣು ಕುಕ್ಕಿತಷ್ಟೇ ಅಲ್ಲದೆ ಅಪಾರ ಮೆಚ್ಚುಗೆಯನ್ನು ತಂದುಕೊಟ್ಟಿತು. ಸಲ್ಮಾನ್ ಖಾನ್ ಅವರಿಂದ ನಟನೆಯ ಪಾಠ ಹೇಳಿಸಿಕೊಂಡ ಸೋನಾಕ್ಷಿ ಆತ ಬಾಡಿ ಫಿಟ್‌ನೆಸ್ ಬಗ್ಗೆ ಹೊಂದಿರುವ ಕಾಳಜಿ ನೋಡಿ ಬೆರಗಾದರು. ಮುಂದೆ ಖುದ್ದು ಅವರೂ ಆತನ ಫಿಟ್‌ನೆಸ್ ಮಂತ್ರವನ್ನು ತಮ್ಮ ಜೀವನದಲ್ಲೂ ಅಳವಡಿಸಿಕೊಂಡರು. ಸೋನಾಕ್ಷಿ ಈಗ ನಟನೆ ಹಾಗೂ ಚೆಲುವು ಎರಡರ ಸಂಗಮ.ಸೋನಾಕ್ಷಿಗೆ ಸಿನಿಮಾದಲ್ಲಿ ನಾಯಕನಿಗೆ ಮುತ್ತಿಡುವುದು ಹಾಗೂ ಅಗತ್ಯಕ್ಕಿಂತ ಹೆಚ್ಚು ಮೈತೋರುವುದರಲ್ಲಿ ನಂಬಿಕೆಯಿಲ್ಲವಂತೆ. ನಟಿಸಿರುವ ಇದುವರೆಗಿನ ಎಲ್ಲ ಚಿತ್ರದ ಚಿತ್ರಕಥೆಯನ್ನು ಆಕೆಯ ತಂದೆ-ತಾಯಿಯೇ ಓಕೆ ಮಾಡಿದ್ದಾರಂತೆ. ಈ ವಿಷಯದಲ್ಲಿ ಸೋನಾಕ್ಷಿ ಕೂಡ ತಂದೆ ತಾಯಿಯನ್ನು ಸಂಪೂರ್ಣವಾಗಿ ನಂಬುತ್ತಾರೆ. ಅವರ ನಿರ್ಣಯಗಳನ್ನು ಗೌರವಿಸುತ್ತಾರೆ.`ನನಗೆ ಸಾಕಷ್ಟು ಅವಕಾಶಗಳು ಬರುತ್ತಿವೆ. ಆದರೆ, ಯಾವ ಸಿನಿಮಾದಲ್ಲಿ ನಟಿಸಬೇಕು ಎಂಬ ವಿಚಾರವನ್ನು ನನ್ನ ತಂದೆ ತಾಯಿಗಳೇ ನೋಡಿಕೊಳ್ಳುತ್ತಾರೆ. ಅವರು ಇಷ್ಟಪಡುವ ಚಿತ್ರಕಥೆಗಳಲ್ಲಿ ಮಾತ್ರ ನಾನು ನಟಿಸುತ್ತೇನೆ.ದೊಡ್ಡ ಬ್ಯಾನರ್‌ಗಳಲ್ಲಿ ನಟಿಸು ಎಂದು ಹೇಳಿದರೆ ನಾನು ಖಂಡಿತವಾಗಿಯೂ ನಟಿಸುತ್ತೇನೆ~ ಎಂದು ನಕ್ಕು ನುಡಿಯುತ್ತಾರೆ. ಅಂದಹಾಗೆ, `ದಬಾಂಗ್~ ನಂತರ ಸೋನಾಕ್ಷಿ ಅಭಿನಯದ ಒಂದೂ ಚಿತ್ರ ಬಿಡುಗಡೆಯಾಗಿಲ್ಲ. ಆದರೂ ಅವರು ಸದಾ ಸುದ್ದಿಯಲ್ಲಿರುತ್ತಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.