ಸೋನಿಯಾ ಗಾಂಧಿಗೆ ಅಮೆರಿಕದಲ್ಲಿ ಶಸ್ತ್ರಚಿಕಿತ್ಸೆ

7

ಸೋನಿಯಾ ಗಾಂಧಿಗೆ ಅಮೆರಿಕದಲ್ಲಿ ಶಸ್ತ್ರಚಿಕಿತ್ಸೆ

Published:
Updated:
ಸೋನಿಯಾ ಗಾಂಧಿಗೆ ಅಮೆರಿಕದಲ್ಲಿ ಶಸ್ತ್ರಚಿಕಿತ್ಸೆ

ನವದೆಹಲಿ: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಗುರುವಾರ ನ್ಯೂಯಾರ್ಕ್‌ನ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ ಎನ್ನಲಾಗಿದೆ. ಆದರೆ ಬಹುತೇಕ  ವಾರದಿಂದ ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳದಿದ್ದುದು ರಾಜಕೀಯ ವಲಯದಲ್ಲಿ ಅಚ್ಚರಿಗೆ ಅಲ್ಲದೆ ಅವರು ಪಡೆಯುತ್ತಿರುವ ಚಿಕಿತ್ಸೆಯ ಸ್ವರೂಪ ಕುರಿತು ತೀವ್ರ ಊಹಾಪೋಹಗಳಿಗೆ ಅವಕಾಶ ನೀಡಿದೆ.ಸೋನಿಯಾಗಾಂಧಿ ಜನರಿಗೆ ಗೊತ್ತಾಗದ ಹಾಗೆ ರಾಷ್ಟ್ರದಿಂದ ಹೊರಗೆ ಹೋಗುತ್ತಿರುವುದು  ಕಳೆದ ಎರಡು ತಿಂಗಳಲ್ಲಿ ಇದು ಎರಡನೇ ಸಲ ಆಗಿದೆ. ಆಗ ಕೂಡ ಅವರು ಅನಾರೋಗ್ಯದ ಕಾರಣದಿಂದಲೇ ದಿಢೀರ್ ವಿದೇಶಕ್ಕೆ ತೆರಳಿದ್ದರು ಮತ್ತು ಅಮೆರಿಕ ರಾಷ್ಟ್ರಕ್ಕೇ ಹೋಗಿದ್ದರು ಎಂದು ಮೂಲಗಳು ಹೇಳಿವೆ. ಮೊದಲ ಪ್ರವಾಸವು ಕಾಯಿಲೆ ಏನೆಂಬುದನ್ನು ತಿಳಿಯುವುದಾಗಿತ್ತು. ಈಗಿನದ್ದು ಶಸ್ತ್ರಚಿಕಿತ್ಸೆಗೆ ಒಳಗಾಗುವುದು ಮತ್ತು ನಂತರದ ಚಿಕಿತ್ಸೆ ಪಡೆಯುವುದು ಸೇರಿದೆ. ಎರಡು ವರ್ಷಗಳ ಹಿಂದೆಯೂ ಅವರು ದೆಹಲಿಯ ಗಂಗಾರಾಮ್ ಆಸ್ಪತ್ರೆಗೆ ದಾಖಲಾಗಿದ್ದರು. ಆಗ ಕೂಡ ಅವರ ಅನಾರೋಗ್ಯದ ವಿವರ ಬಹಿರಂಗಪಡಿಸಿರಲಿಲ್ಲ.ಬಹುತೇಕ ಎಲ್ಲರಿಗೂ ಅಚ್ಚರಿ ಆಗುವಂತೆ ಗುರುವಾರ ಕಾಂಗ್ರೆಸ್ ಪಕ್ಷ ಹೇಳಿಕೆ ನೀಡಿ, ಸೋನಿಯಾ ಅವರು `ವೈದ್ಯಕೀಯ ಕಾರಣಗಳಿಗಾಗಿ~ ಶಸ್ತ್ರಚಿಕಿತ್ಸೆಗೆಂದು ವಿದೇಶಕ್ಕೆ ತೆರಳಿದ್ದಾರೆ.ಚಿಕಿತ್ಸೆಗಾಗಿ ಅವರು ಎರಡು- ಮೂರು ವಾರ ಅಲ್ಲಿರಬೇಕಾಗುತ್ತದೆ ಎಂದು ಹೇಳಿದೆ.ಆದರೆ ಯಾವ ರೀತಿಯ `ಅನಾರೋಗ್ಯ~ ಎಂಬುದನ್ನು ಬಹಿರಂಗಪಡಿಸಿಲ್ಲ ಅಥವಾ ಎಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬುದನ್ನು ಹೇಳಿಲ್ಲ.ಆದರೆ ಕಾಂಗ್ರೆಸ್ ನಾಯಕಿಗೆ ನ್ಯೂಯಾರ್ಕ್ ಆಸ್ಪತ್ರೆಯಲ್ಲಿ ನಡೆಸಿದ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ ಎಂದು ಮೂಲಗಳು ಹೇಳಿವೆ.ಪಕ್ಷದ ಹೊಣೆಗಾರಿಕೆ

ಅನಾರೋಗ್ಯದ ಕಾರಣ ಅವರು ಸುಮಾರು ಒಂದು ತಿಂಗಳವರೆಗೆ ಭಾರತದಿಂದ ಹೊರಗುಳಿಯುವ ಸಾಧ್ಯತೆ ಇರುವುದರಿಂದ ಈ ಅವಧಿಯಲ್ಲಿ ಪಕ್ಷದ ವ್ಯವಹಾರಗಳನ್ನು ರಾಹುಲ್ ಗಾಂಧಿ ನೇತೃತ್ವದ ನಾಲ್ವರ ತಂಡಕ್ಕೆ  ವಹಿಸಲಾಗಿದೆ.ಅರವತ್ತನಾಲ್ಕು ವರ್ಷದ ಸೋನಿಯಾ ಅನಾರೋಗ್ಯದಿಂದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಈ ಕಾರಣ ರಾಹುಲ್, ರಕ್ಷಣಾ ಸಚಿವ ಎ.ಕೆ. ಆಂಟನಿ, ಸೋನಿಯಾ ಅವರ ರಾಜಕೀಯ ಸಹಾಯಕ ಅಹ್ಮದ್ ಪಟೇಲ್ ಮತ್ತು ಪ್ರಧಾನ ಕಾರ್ಯದರ್ಶಿ ಜನಾರ್ದನ ದ್ವಿವೇದಿ ಪಕ್ಷದ ವ್ಯವಹಾರ ನೋಡಿಕೊಳ್ಳುವರು ಎಂದು ನವದೆಹಲಿಯಲ್ಲಿ ಪಕ್ಷದ ಪ್ರಕಟಣೆ ತಿಳಿಸಿದೆ.ಸೋನಿಯಾ ಅಮೆರಿಕದಲ್ಲಿ ಎಲ್ಲಿ, ಯಾವ ಆಸ್ಪತ್ರೆಗೆ ದಾಖಲಾಗಿದ್ದಾರೆ ಮತ್ತು ಅವರು ಯಾವಾಗ ಭಾರತದಿಂದ ತೆರಳಿದರು ಎಂಬ ಬಗ್ಗೆ ಕಾಂಗ್ರೆಸ್ ಅಧಿಕೃತವಾಗಿ ಏನನ್ನೂ ಹೇಳಿಲ್ಲ.

ಅವರ ಕುಟುಂಬವರ್ಗದವರು ಅಥವಾ ವೈದ್ಯರು ಶುಕ್ರವಾರ ಸೋನಿಯಾ ಆರೋಗ್ಯ ಕುರಿತ ಹೇಳಿಕೆಯನ್ನು ಶುಕ್ರವಾರ ಬಿಡುಗಡೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.ಸೋನಿಯಾ ಹೊಟ್ಟೆನೋವಿನ ತೊಂದರೆಗೆ ಸಂಬಂಧಿಸಿದಂತೆ ಅನಾರೋಗ್ಯಕ್ಕೆ ಒಳಗಾಗಿದ್ದರು. ಭಾನುವಾರದಿಂದ ಜ್ವರದಿಂದ ಬಳಲುತ್ತಿದ್ದು ಕಾಂಗ್ರೆಸ್ ಕೇಂದ್ರ ಸಮಿತಿ ಸಭೆಗೆ ಹಾಜರಾಗಲು ಸಾಧ್ಯವಾಗಿರಲಿಲ್ಲ ಎಂದು ಪಕ್ಷದ ಮೂಲಗಳು ಹೇಳಿರುವುದಾಗಿ ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.

`ರಾಹುಲ್‌ಗಾಂಧಿ, ಪುತ್ರಿ ಪ್ರಿಯಾಂಕ ಅವರು ಸೋನಿಯಾ ಅವರೊಂದಿಗಿದ್ದಾರೆ~ ಎಂದು ಪಕ್ಷದ ವಕ್ತಾರ ಮನೀಶ್ ತಿವಾರಿ ವರದಿಗಾರರ ಪ್ರಶ್ನೆಗೆ ಉತ್ತರಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry