`ಸೋನಿಯಾ ಜನ್ಮದಿನದಂದು ಕೆಜೆಪಿ ಸಮಾವೇಶ'

7
ಬಿಜೆಪಿ ಕೆಣಕಿದ ಸಿದ್ದರಾಮಯ್ಯ

`ಸೋನಿಯಾ ಜನ್ಮದಿನದಂದು ಕೆಜೆಪಿ ಸಮಾವೇಶ'

Published:
Updated:

ಸುವರ್ಣ ವಿಧಾನಸೌಧ (ಬೆಳಗಾವಿ): ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬಿಜೆಪಿಗೆ ಅವಮಾನ ಮಾಡುವುದಕ್ಕಾಗಿಯೇ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಜನ್ಮದಿನದಂದು ಕರ್ನಾಟಕ ಜನತಾ ಪಕ್ಷದ (ಕೆಜೆಪಿ) ಸಮಾವೇಶ ಮಾಡುತ್ತಿದ್ದಾರಾ?ಆಡಳಿತ ಪಕ್ಷದವರನ್ನು ಛೇಡಿಸಲು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಶುಕ್ರವಾರ ವಿಧಾನಸಭೆಯಲ್ಲಿ ಎತ್ತಿದ ಈ ಪ್ರಶ್ನೆ ಕೆಲಕಾಲ ಸ್ವಾರಸ್ಯಕರ ಚರ್ಚೆಗೆ ಕಾರಣವಾಯಿತು. ಇದೇ ಚರ್ಚೆ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಮತ್ತು ಸಿದ್ದರಾಮಯ್ಯ ನಡುವೆ ವಾಕ್ಸಮರಕ್ಕೂ ವೇದಿಕೆ ಒದಗಿಸಿತು.`ತಮಿಳುನಾಡಿಗೆ ನೀರು ಬಿಡುವ ವಿಷಯದಲ್ಲಿ ಇಚ್ಛಾಶಕ್ತಿ ಪ್ರದರ್ಶನ ಮಾಡಬೇಕಾಗಿದ್ದ ಬಿಜೆಪಿ ಒಡೆದ ಮನೆ ಆಗಿದೆ. ಯಡಿಯೂರಪ್ಪ ಅವರ ಜೊತೆ ಹಲವು ಸಚಿವರು, ಶಾಸಕರು ಗುರುತಿಸಿಕೊಂಡಿದ್ದಾರೆ. ಬಿಜೆಪಿ ಹಲವು ಗುಂಪುಗಳಾಗಿ ಒಡೆದುಹೋಗಿದೆ. ಸರ್ಕಾರವೇ ಅಸಹಾಯಕ ಸ್ಥಿತಿ ತಲುಪಿದೆ' ಎಂದು ಸಿದ್ದರಾಮಯ್ಯ ಮಾತಿನ ನಡುವೆ ಆಡಳಿತ ಪಕ್ಷದವರನ್ನು ತಿವಿದರು.`ಗುಂಪುಗಾರಿಕೆ ಇರುವುದೇ ಕಾಂಗ್ರೆಸ್‌ನಲ್ಲಿ. ನಿಮ್ಮ ಪಕ್ಷದಲ್ಲಿ ಎಷ್ಟು ಗುಂಪುಗಳಿವೆ ಎಂಬುದು ಎಲ್ಲರಿಗೂ ಗೊತ್ತು. ಎಲ್ಲ ಒಳಗೊಳಗೇ ಗುಂಪುಗಾರಿಕೆ ಮಾಡುತ್ತಾರೆ' ಎಂದು ಈಶ್ವರಪ್ಪ ತಿರುಗೇಟು ನೀಡಿದರು. `ನಮ್ಮ ಪಕ್ಷದವರು ನಿಮ್ಮ ತರ ಬೀದಿಗೆ ಬಂದಿದ್ದೀವಾ? ನಾವೆಲ್ಲ ಒಗ್ಗಟ್ಟಾಗಿಯೇ ಇದ್ದೇವೆ' ಎಂದು ಪ್ರತಿಪಕ್ಷ ನಾಯಕರು ಉತ್ತರ ನೀಡಿದರು.ಡಿಸೆಂಬರ್ 9 ಸೋನಿಯಾ ಗಾಂಧಿಯವರ ಜನ್ಮದಿನ. ಅದೇ ದಿನ ಯಡಿಯೂರಪ್ಪ ಹಾವೇರಿಯಲ್ಲಿ ಸಮಾವೇಶ ಮಾಡುತ್ತಿದ್ದಾರೆ ಎಂಬ ಮಾತು ಶಾಸಕರೊಬ್ಬರಿಂದ ಬಂತು. `ನೋಡಿ ನಮ್ಮ ನಾಯಕಿಯ ಜನ್ಮದಿನದಂದು ಸಮಾವೇಶ ಮಾಡಿ ಯಡಿಯೂರಪ್ಪ ಬಿಜೆಪಿಗೆ ಅವಮಾನ ಮಾಡುತ್ತಿದ್ದಾರೆ' ಎಂದು ಸಿದ್ದರಾಮಯ್ಯ ಮತ್ತೆ ಬಿಜೆಪಿಯನ್ನು ಕೆಣಕಿದರು.`ನಿಮ್ಮ ನಾಯಕಿ ಜನ್ಮದಿನವನ್ನು ನೀವೇ ಆಚರಿಸೋದಿಲ್ಲ ಅಲ್ವಾ? ಅದಕ್ಕೆ ಯಡಿಯೂರಪ್ಪನವರು ಮಾಡ್ತಿದ್ದಾರೆ ಬಿಡಿ. ನೇರವಾಗಿ ಹೊಸ ಪಕ್ಷ ಕಟ್ಟುತ್ತಾ ಇದ್ದಾರೆ ಅಷ್ಟೆ' ಎಂದು ಈಶ್ವರಪ್ಪ ಹೇಳಿದರು.ಡಿ.9ರ ಬಳಿಕ ನೋಡಿ: `ಅದೆಲ್ಲಾ ಇರಲಿ. ಯಡಿಯೂರಪ್ಪ ಜೊತೆ ಹೋಗೋ ಶಾಸಕರು, ಸಚಿವರನ್ನು ಪಕ್ಷದಿಂದ ಕಿತ್ತುಹಾಕಿ' ಎಂದು ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿಯವರಿಗೆ ಸಲಹೆ ನೀಡಿದರು. `ಡಿ.9ರ ನಂತರ ನೋಡಿ' ಎಂಬ ಉತ್ತರ ಆ ಕಡೆಯಿಂದ ಬಂತು. `ಕ್ರಮ ತಗೊಂಡರೆ ನಿಮಗೆ ಭೇಷ್ ಅಂತೀನಿ' ಎಂದರು ವಿಪಕ್ಷ ನಾಯಕ.`ಯಡಿಯೂರಪ್ಪ ಏನಾದರೂ ಮಾಡಲಿ ನಮಗೆ ಆ ಬಗ್ಗೆ ಚಿಂತೆ ಇಲ್ಲ. ರಾಷ್ಟ್ರೀಯ ಪಕ್ಷಗಳಲ್ಲಿ ಶಿಸ್ತು ಮುಖ್ಯ. ಪಕ್ಷದ ವಿರುದ್ಧ ನಡೆಯುವವರ ಮೇಲೆ ಕ್ರಮ ಜರುಗಿಸುವುದು ಅಗತ್ಯ. ಆ ಕೆಲಸ ಮಾಡಿ' ಎಂದು ಹುರಿದುಂಬಿಸಿದರು.ಕೆಲ ಹೊತ್ತಿನ ನಂತರ ಮತ್ತೆ ಮಾತು ರಾಜಕೀಯದತ್ತ ಹೊರಳಿತು. `ನೀವು (ಕಾಂಗ್ರೆಸ್‌ನವರು) ಏನೇ ಮಾಡಿದರೂ ಅಧಿಕಾರಕ್ಕೆ ಬರಲ್ಲ ಬಿಡಿ. ಅವ್ರ (ಕಾಂಗ್ರೆಸ್) ನಿಮ್ಮನ್ನ ಮುಖ್ಯಮಂತ್ರಿಯನ್ನಾಗಿಯೂ ಮಾಡಲ್ಲ' ಎಂದು ಈಶ್ವರಪ್ಪ ಅವರು ಸಿದ್ದರಾಮಯ್ಯ ಅವರನ್ನು ಕೆಣಕಿದರು.`ಬರುವ ಚುನಾವಣೆಯಲ್ಲಿ ಕಾಂಗ್ರೆಸ್ 120 ಸ್ಥಾನ ಗಳಿಸುವುದು ಖಚಿತ. ಈಗಲೇ ನಾನು ಈ ಬಗ್ಗೆ ಬರೆದುಕೊಡುತ್ತೇನೆ' ಎಂದು ವಿರೋಧ ಪಕ್ಷದ ನಾಯಕರು ಸವಾಲು ಹಾಕಿದರು. `ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಕಾಂಗ್ರೆಸ್ ಘೋಷಿಸಲಿ' ಎಂದು ಪರಿಸರ ಸಚಿವ ಎಸ್.ಶಿವಣ್ಣ ಕಿಚಾಯಿಸಿದರು.`ನಾನು ಮುಖ್ಯಮಂತ್ರಿ ಆಗಬೇಕು ಅಂತ ನೀವೇ ಬಯಸುವಾಗ ನಮ್ಮ ಪಕ್ಷದವರು ಬಿಡುತ್ತಾರಾ' ಎಂದು ಸಿದ್ದರಾಮಯ್ಯ ಮರುಪ್ರಶ್ನೆ ಹಾಕಿದರು.ಸದನದಲ್ಲಿ `ಮೈಲಾರಿ'ಗಳ ಕಾದಾಟ!ಶುಕ್ರವಾರ ವಿಧಾನಸಭೆಯಲ್ಲಿ ಮೂರು ರಾಜಕೀಯ ಪಕ್ಷಗಳ ನಾಯಕತ್ವ ವಹಿಸಿದ್ದವರೂ ಕುರುಬ ಸಮುದಾಯದವರೇ ಆಗಿದ್ದರು.

ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು ದೆಹಲಿಗೆ ತೆರಳಿರುವುದರಿಂದ ದಿನದ ಮಟ್ಟಿಗೆ ಆಡಳಿತ ಪಕ್ಷವನ್ನು ಮುನ್ನಡೆಸುವ ಹೊಣೆಗಾರಿಕೆ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹೆಗಲೇರಿತ್ತು. ಇದೇ ರೀತಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ರೇವಣ್ಣ ಸದನಕ್ಕೆ ಗೈರು ಹಾಜರಾಗಿದ್ದರಿಂದ ಉಪ ನಾಯಕ ಬಂಡೆಪ್ಪ ಕಾಶೆಂಪುರ ಪಕ್ಷದ ಶಾಸಕರ ನೇತೃತ್ವ ವಹಿಸಿದ್ದರು. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಎಂದಿನಂತೆ ಕಾಂಗ್ರೆಸ್‌ನ ನಾಯಕತ್ವ ವಹಿಸಿದ್ದರು.ಕಾವೇರಿ ವಿವಾದ ಕುರಿತ ಚರ್ಚೆಯ ನಡುವೆ ಮಾತು ರಾಜಕೀಯದತ್ತ ಸಾಗಿದಾಗ ಈಶ್ವರಪ್ಪ ಮತ್ತು ಸಿದ್ದರಾಮಯ್ಯ ನಡುವೆ ವಾಕ್ಸಮರ ನಡೆಯುತ್ತಿತ್ತು. ಅಷ್ಟರಲ್ಲಿ ಬಂಡೆಪ್ಪ ಅವರು ಎದ್ದು ನಿಂತು, `ರಾಜಕೀಯ ಬೇಡ, ಕಾವೇರಿ ಬಗ್ಗೆ ಮಾತನಾಡಿ' ಎಂದು ಅಸಮಾಧಾನ ಹೊರಹಾಕಿದರು.ಆಗ, ಸಭಾಧ್ಯಕ್ಷರ ಪೀಠದ ಎದುರು ಧರಣಿಯಲ್ಲಿದ್ದ ಚಿಕ್ಕನಾಯಕನಹಳ್ಳಿ ಶಾಸಕ ಸಿ.ಬಿ.ಸುರೇಶ್‌ಬಾಬು, `ಮೂರು ಮೈಲಾರಿಗಳನ್ನು (ಕುರುಬರನ್ನು) ಕಾದಾಟಕ್ಕೆ ಬಿಟ್ಟು ಎಲ್ಲರೂ ಮಜಾ ತಗೋತಿದ್ದಾರೆ' ಎಂದು ಹಾಸ್ಯಚಟಾಕಿ ಹಾರಿಸಿದರು. ಒಂದು ಕ್ಷಣ ಇಡೀ ಸದನ ನಗೆಗಡಲಲ್ಲಿ ತೇಲಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry