ಶುಕ್ರವಾರ, ನವೆಂಬರ್ 22, 2019
22 °C

ಸೋನಿಯಾ ಬರದೇ ಪರಿಹಾರ ಇಲ್ಲ?

Published:
Updated:

ನವದೆಹಲಿ: ಕೆಲವು ವಿಧಾನಸಭೆ ಕ್ಷೇತ್ರಗಳ ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ನಿಟ್ಟಿನಲ್ಲಿ ಕಾಂಗ್ರೆಸ್‌ನಲ್ಲಿ ತಲೆದೋರಿರುವ ಬಿಕ್ಕಟ್ಟು ಹಾಗೇ ಮುಂದುವರಿದಿದ್ದು ವಿದೇಶಕ್ಕೆ ಹೋಗಿರುವ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಹಿಂತಿರುಗಿದ ನಂತರವೇ ಕಗ್ಗಂಟಾಗಿರುವ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸುವ ಸಂಭವವಿದೆ.ಕೇಂದ್ರ ಸಚಿವರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಕೆ.ಎಚ್. ಮುನಿಯಪ್ಪ ಅವರ ಮಕ್ಕಳಿಗೆ ಟಿಕೆಟ್ ನೀಡುವ ವಿಷಯದಲ್ಲಿನ ಗೊಂದಲವೂ ಪರಿಹಾರವಾಗಿಲ್ಲ.ಸೋನಿಯಾ ಗಾಂಧಿ ಇದೇ 5ರಂದು ದೆಹಲಿಗೆ ವಾಪಸಾದ ನಂತರ ಬಿಕ್ಕಟ್ಟು ಬಗೆಹರಿಯಬಹುದೆಂದು ಉನ್ನತ ಮೂಲಗಳು `ಪ್ರಜಾವಾಣಿ'ಗೆ ತಿಳಿಸಿವೆ. ತಮ್ಮ ಮಕ್ಕಳಿಗೆ ಟಿಕೆಟ್ ಸಿಗುವುದೇ ಎನ್ನುವ ಆತಂಕ ಇನ್ನೂ ಹಿರಿಯ ಮುಖಂಡರಲ್ಲಿದೆ. ಈ ಬಗೆಗೆ `ಅಭ್ಯರ್ಥಿಗಳ ಆಯ್ಕೆ ಸಮಿತಿ' ಅಧ್ಯಕ್ಷರು ಹಾಗೂ ಸದಸ್ಯರ ಜತೆ ಸಮಾಲೋಚನೆ ನಡೆಸಿದ್ದಾರೆ.`ಸಚಿವರ ಮಕ್ಕಳಿಗೆ ಟಿಕೆಟ್ ಕೊಡಬಾರದು' ಎನ್ನುವುದು ಪಕ್ಷದ ನೀತಿ ಇರಬಹುದು. ಈ ಹಿನ್ನೆಲೆಯಲ್ಲಿ ಟಿಕೆಟ್ ತಡೆ ಹಿಡಿದಿರಬಹುದೆಂದು ಮೂಲಗಳು ಸ್ಪಷ್ಟಪಡಿಸಿವೆ.ಎಐಸಿಸಿ ಕಚೇರಿ ಮುಂದೆ ಧರಣಿ:  ಈ ಮಧ್ಯೆ, ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಸ್ಥಳೀಯರಿಗೇ ಟಿಕೆಟ್ ನೀಡುವಂತೆ ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರು ಸೋಮವಾರ ಎಐಸಿಸಿ ಕಚೇರಿ ಮುಂದೆ ಧರಣಿ ನಡೆಸಿದರು. ಈ ಕ್ಷೇತ್ರದ ಟಿಕೆಟ್‌ಗಾಗಿ ಲಾಬಿ ಮಾಡುತ್ತಿರುವ ತೇಜಸ್ಪಿನಿ ಗೌಡ ಹೊರಗಿನವರಾಗಿದ್ದು, ಕ್ಷೇತ್ರದ ಪರಿಚಯವಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಇದನ್ನು ಮಹಿಳೆಯರಿಗೆ ಕೊಡುವುದಾದರೆ ಸ್ಥಳೀಯರಿಗೇ ಕೊಡಿ ಎಂದು ಒತ್ತಾಯಿಸಿದರು.ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ  ಬೆಂಗಳೂರಿಗೆ ಹಿಂತಿರುಗಿದ ಬಳಿಕ ರಾಜಧಾನಿ ರಾಜಕೀಯ ಚಟುವಟಿಕೆ ತಣ್ಣಗಾಯಿತು. ಕೇಂದ್ರ ಚುನಾವಣಾ ಸಮಿತಿ ಒಪ್ಪಿಗೆ ನೀಡಿರುವ ಸುಮಾರು 200 ಹೆಸರುಗಳಲ್ಲಿ ಒಂದು ನೂರಕ್ಕೂ ಹೆಚ್ಚು ಹೆಸರಿನ ಮೊದಲ ಪಟ್ಟಿಯನ್ನು ಒಂದೆರಡು ದಿನದಲ್ಲಿ ಬಿಡುಗಡೆ ಮಾಡುವ ನಿರೀಕ್ಷೆ ಇದೆ.

ಉಳಿದ ಹೆಸರಿನ ಎರಡನೇ ಪಟ್ಟಿಯನ್ನು ಐದನೇ ತಾರೀಖಿನ ಬಳಿಕ ಪ್ರಕಟಿಸುವ ನಿರೀಕ್ಷೆ ಇದೆ ಎಂದು ಮೂಲಗಳು ಖಚಿತಪಡಿಸಿವೆ.

ಪ್ರತಿಕ್ರಿಯಿಸಿ (+)