ಶುಕ್ರವಾರ, ನವೆಂಬರ್ 22, 2019
26 °C

ಸೋನಿಯಾ, ರಾಹುಲ್ ಕ್ಷೇತ್ರಗಳಲ್ಲಿ ವಿದ್ಯುತ್ ಕಡಿತ

Published:
Updated:

ಲಖನೌ (ಐಎಎನ್‌ಎಸ್): ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಉಪಾಧ್ಯಕ್ಷ ರಾಹುಲ್ ಗಾಂಧಿ ಪ್ರತಿನಿಧಿಸುವ ಸಂಸದೀಯ ಕ್ಷೇತ್ರಗಳಾದ ರಾಯ್‌ಬರೇಲಿ ಮತ್ತು ಅಮೇಥಿ ನಗರಗಳಿಗೆ ಇನ್ನು ಮುಂದೆ ಸತತ 24 ಗಂಟೆ ವಿದ್ಯುತ್ ಪೂರೈಕೆ ಇರುವುದಿಲ್ಲ.ಸತತ ವಿದ್ಯುತ್ ಪೂರೈಕೆಗೆ ಸಂಬಂಧಿಸಿದಂತೆ ರಾಯ್‌ಬರೇಲಿ ಮತ್ತು ಅಮೇಥಿ ನಗರಗಳಿಗೆ ಇದ್ದ ವಿಶೇಷ ಸ್ಥಾನಮಾನವನ್ನು ಉತ್ತರ ಪ್ರದೇಶ ವಿದ್ಯುತ್ ನಿಗಮ (ಯುಪಿಪಿಸಿಎಲ್) ಹಿಂಪಡೆದಿರುವುದು ಇದಕ್ಕೆ ಕಾರಣ. ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷದ (ಎಸ್‌ಪಿ) ಮಧ್ಯೆ ಭಿನ್ನಾಭಿಪ್ರಾಯ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅಧಿಕಾರದಲ್ಲಿರುವ ಸಮಾಜವಾದಿ ಪಕ್ಷ ಈ ಕ್ರಮ ಕೈಗೊಂಡಿದೆ ಎನ್ನಲಾಗಿದೆ.ಸತತ ವಿದ್ಯುತ್ ಪೂರೈಕೆ ಸಂಬಂಧ ಒಂಬತ್ತು ತಿಂಗಳ ಹಿಂದೆ ತೆಗೆದುಕೊಂಡ ನಿರ್ಧಾರ ಗುರುವಾರ ಹಿಂತೆಗೆದುಕೊಂಡ ಬಳಿಕ ಎರಡೂ ನಗರಗಳಲ್ಲಿ ನಾಲ್ಕು ಗಂಟೆ ವಿದ್ಯುತ್ ಸರಬರಾಜು ಸ್ಥಗಿತಗೊಂಡಿತ್ತು.`ಬೇಸಿಗೆಯಲ್ಲಿ ವಿದ್ಯುತ್‌ಗೆ ಭಾರಿ ಬೇಡಿಕೆ ಇದೆ. ಎಲ್ಲ ಜಿಲ್ಲೆಗಳಿಗೆ ವಿದ್ಯುತ್ ಪೂರೈಕೆ ಸರಿದೂಗಿಸಬೇಕಾಗಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ' ಎಂದು ಅಧಿಕಾರಿಯೊಬ್ಬರು ತಮ್ಮ ಕ್ರಮವನ್ನು ಸಮರ್ಥಿಸಿಕೊಂಡರು.ಮೈನ್‌ಪುರಿ (ಸಮಾಜವಾದಿ ಪಕ್ಷದ ಅಧ್ಯಕ್ಷ ಮುಲಾಯಂ ಸಿಂಗ್ ಯಾದವ್ ಪ್ರತಿನಿಧಿಸುವ ಕ್ಷೇತ್ರ), ಕನೌಜ್ (ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರ ಪತ್ನಿ ಡಿಂಪಲ್ ಯಾದವ್), ಇಟಾವ (ಯಾದವ್ ಕುಟುಂಬದ ತವರು ಜಿಲ್ಲೆ), ಸಂಭಾಲ್ (ಮುಲಾಯಂ ಸಹೋದರ ಸಂಬಂಧಿ ಧರ್ಮೇಂದ್ರ ಸಿಂಗ್ ಯಾದವ್) ಮತ್ತು ರಾಮ್‌ಪುರ - ಈ ಮುಂತಾದೆಡೆ ಸತತ 24ಗಂಟೆ ವಿದ್ಯುತ್ ಪೂರೈಕೆ ಮುಂದುವರಿಸಲಾಗಿದೆ.`ನಿಜವಾಗಲೂ ವಿದ್ಯುತ್ ಸಮಸ್ಯೆ ಇದ್ದರೆ, ಕೆಲವು ಜಿಲ್ಲೆಗಳಲ್ಲಿ ಮಾತ್ರ ನಿರಂತರವಾಗಿ ವಿದ್ಯುತ್ ಪೂರೈಕೆ ಮುಂದುವರಿಸಿರುವುದು ಏಕೆ. ಇದರ ಹಿಂದೆ ರಾಜಕೀಯ ಇದೆ' ಎಂದು ಕಾಂಗ್ರೆಸ್ ವಕ್ತಾರ ಅಮರನಾಥ್ ಅಗರವಾಲ್ ಆರೋಪಿಸಿದ್ದಾರೆ.

ಪ್ರತಿಕ್ರಿಯಿಸಿ (+)