ಸೋಪಾನದಲ್ಲಿ ಸೋಲು!

7

ಸೋಪಾನದಲ್ಲಿ ಸೋಲು!

Published:
Updated:
ಸೋಪಾನದಲ್ಲಿ ಸೋಲು!

ಸಿಲಿಕಾನ್ ಸಿಟಿಯಲ್ಲಿ ಪಾದಚಾರಿ ಮೇಲ್ಸೇತುವೆಗಳು ಹಾಗೂ ಅಂಡರ್‌ಪಾಸ್‌ಗಳ ಅವೈಜ್ಞಾನಿಕ ಕಾರ್ಯಯೋಜನೆಗಳ ಫಲಶ್ರುತಿಯಾಗಿ ದುಡ್ಡು ಹೇಗೆ ಪೋಲಾಗುತ್ತಿದೆ ಎಂಬುದನ್ನು ಮೊದಲ ಹಂತದಲ್ಲಿ ಕಂಡಿದ್ದೇವೆ. ಅಂಗವಿಕಲರು, ಹಿರಿಯ ನಾಗರಿಕರು, ಮಕ್ಕಳು ಹಾಗೂ ಮಹಿಳೆಯರೂ ಇವುಗಳ ಬಳಕೆದಾರರು ಎಂಬುದನ್ನು ನಿರ್ಲಕ್ಷಿಸಿರುವ,ಬಳಕೆದಾರಸ್ನೇಹಿಯಲ್ಲದ ಯೋಜನೆಗಳಿವು. 

ಹೆಸರಿಗಷ್ಟೇ `ಪಾಸ್~!

ಕೆ. ಆರ್. ವೃತ್ತದಿಂದ ರಿಸರ್ವ್ ಬ್ಯಾಂಕ್‌ವರೆಗೂ ಮೂರು ಅಂಡರ್‌ಪಾಸ್ (ಸಬ್‌ವೇ)ಗಳಿವೆ. ಈ ಪೈಕಿ ರಿಸರ್ವ್ ಬ್ಯಾಂಕ್ ಮುಂಭಾಗದಲ್ಲಿರುವ ಅಂಡರ್‌ಪಾಸ್‌ನ ಒಳ-ಹೊರಗೆ `ಆರೋಗ್ಯಕರ~ ವಾತಾವರಣವನ್ನು ಕಾಣಬಹುದು. ಎಂಎಂ ಕೋರ್ಟ್ ಸಮೀಪವಿರುವ ಅಂಡರ್‌ಪಾಸ್ ಸಹ ಪರವಾಗಿಲ್ಲ ಎಂಬಂತಿದೆ. ಆದರೆ ವೃತ್ತಕ್ಕೆ ತೀರಾ ಸಮೀಪದಲ್ಲಿ ಅಂದರೆ ಯುವಿಸಿ ಕಾಲೇಜಿನ ಬಳಿ ನಿರ್ಮಿಸಲಾಗಿರುವ ಅಂಡರ್‌ಪಾಸ್ ಕಾನೂನುಬಾಹಿರ ಚಟುವಟಿಕೆಗಳಿಗೆ ಹೆಚ್ಚಾಗಿ ಬಳಕೆಯಾಗುತ್ತಿದೆ ಎಂಬುದು ನಾಗರಿಕರ ದೂರು.

ಕ್ಯಾಮೆರಾ ಕಂಡು ಬೆಚ್ಚಿದ ನಾಗರಾಜ ಎಂಬ ಹಿರಿಯ ನಾಗರಿಕ ಈ ಅಂಡರ್‌ಪಾಸ್ ನಟೋರಿಯಸ್ ಎಂದು ಬಣ್ಣಿಸಿಬಿಟ್ಟರು. `ಕತ್ತಲಾಗುತ್ತಿದ್ದಂತೆ ಇಲ್ಲಿಗೆ `ಯಾರ‌್ಯಾರೋ~ ಬಂದು `ಏನೇನೋ~ ಚಟುವಟಿಕೆ ನಡೆಸ್ತಾರೆ. ಇದು ಮೂತ್ರದೊಡ್ಡಿಯೋ, ಕಸದತೊಟ್ಟಿಯೋ ತಿಳಿಯುತ್ತಿಲ್ಲ. ಮರ್ಯಾದಸ್ಥರು ಇಲ್ಲಿ ಬರುವಂತಿಲ್ಲ~ ಎಂದು ಅವರು ದೂರಿಕೊಂಡರು.
ಡೇಂಜರಸ್!

ಮೂಗು ಮುಚ್ಚಿಕೊಂಡಾದರೂ ಈ ಸಬ್‌ವೇ ಬಳಸೋಣವೆಂದರೆ ಇದು ಭಯಂಕರ ಡೇಂಜರಸ್ ಸ್ಪಾಟ್. ರಸ್ತೆಯಲ್ಲಿ ಜನಸಂಚಾರವಿರುವಾಗ ಅದರೊಳಗೆ ಓಡಾಡಬಹುದು. ಆರು-ಆರೂವರೆ ಮೇಲೆ ಒಂಟಿಯಾಗಿ ಬಿಡಿ ಇಬ್ಬರು ಹೆಣ್ಣುಮಕ್ಕಳೂ ಅಲ್ಲಿಂದ ಹೋಗೋದು ಕಷ್ಟ. ಅದಕ್ಕೆ ನಾವು ದೂರ ಆದ್ರೂ ಪರವಾಗಿಲ್ಲಾಂತ ಎಸ್‌ಜೆಪಿ ಬಳಿಯ ಸಬ್‌ವೇ ಬಳಸ್ತೇವೆ. ಇದು ಎಲ್ಲಾ ಸೀಸನ್‌ನ ಸಮಸ್ಯೆ. ಆದರೆ ಮಳೆಗಾಲದಲ್ಲಿ ಈ ಸಬ್‌ವೇ ನೀರಿನ ತೊಟ್ಟಿಯಂತಾಗಿರುತ್ತದೆ. ಅಲ್ಲೊಂದು ಇಲ್ಲೊಂದು ಇಟ್ಟಿಗೆ ಇಟ್ಟಿರ‌್ತಾರೆ. ಅದರ ಮೂಲಕವೇ ನಡೆಯಬೇಕು. ಇದ್ದೂ ಪ್ರಯೋಜನವಿಲ್ಲದಂತಾಗಿದೆ. ಹೆಸರಿಗಷ್ಟೇ ಪಾಸ್. ಬೇರೆಲ್ಲ ರೀತಿಯಿಂದ ಇವು ಫೇಲ್!

-ಸುಮಾ ಮತ್ತು ವಾಣಿಶ್ರೀ,

ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ವಿದ್ಯಾರ್ಥಿನಿಯರು, ಯುವಿಸಿಇ ಕಾಲೇಜು, ಕೆ. ಆರ್. ವೃತ್ತ

ಬಿಬಿಎಂಪಿ ಕೂಡ ಹಲವಾರು ಪಾದಚಾರಿ ಮೇಲ್ಸೇತುವೆ ಹಾಗೂ ಅಂಡರ್‌ಪಾಸ್‌ಗಳನ್ನು ನಿರ್ಮಿಸಿದ್ದರೂ ಅವುಗಳು ನಿಷ್ಪ್ರಯೋಜಕವಾಗಿರುವುದು ಇದೇ ಕಾರಣಕ್ಕೆ. ಮಲ್ಲೇಶ್ವರ ಐದನೇ ಅಡ್ಡರಸ್ತೆ ಹಾಗೂ ಕೆ. ಆರ್. ವೃತ್ತದಲ್ಲಿರುವ ಅಂಡರ್‌ಪಾಸ್‌ಗಳಲ್ಲಿ ಈ ವಾಸ್ತವಾಂಶವನ್ನು ಕಾಣಬಹುದು.ಹಾಗಿದ್ದರೆ ಈ ಯೋಜನೆಗಳು ಸೋತಿದ್ದೆಲ್ಲಿ ಎಂಬುದನ್ನು ವೈಜ್ಞಾನಿಕ ಹಾಗೂ ನಾಗರಿಕ ದೃಷ್ಟಿಕೋನದಿಂದ ಪರಿಶೀಲಿಸೋಣ.ಹತ್ತಲು ಮೆಟ್ಟಿಲು...

ಅಂಡರ್‌ಪಾಸ್ ಪ್ರವೇಶಿಸಲು, ಹೊರಬರಲು ಹತ್ತಾರು ುಟ್ಟಿಲುಗಳಿರುವುದೇ ಸಮಸ್ಯೆಯ ಮೂಲ. ಸ್ಕೈವಾಕ್‌ಗಳಂತೂ ಆಕಾಶಕ್ಕೆ ಏಣಿ ಇಟ್ಟಂತಿರುತ್ತವೆ ಬಿಡಿ. ಗಾಲಿ ಕುರ್ಚಿ ಬಳಸುವ ಅಸಹಾಯಕರು ಹಾಗೂ ವಯಸ್ಸಾದವರು ಇದನ್ನು ಬಳಸುವುದು ಹೇಗೆ? ಅವರಿಗಾಗಿ ಪ್ರತ್ಯೇಕ `ಜಾರುದಾರಿ~ ಎಲ್ಲಿಯೂ ಇಲ್ಲ.(ಅಂಗವಿಕಲ ವ್ಯಕ್ತಿಗಳು/ಸಮಾನ ಅವಕಾಶಗಳು, ಹಕ್ಕುಗಳ ರಕ್ಷಣೆ ಮತ್ತು ಪೂರ್ಣಪ್ರಮಾಣದ ಪಾಲ್ಗೊಳ್ಳುವಿಕೆ/ ಕಾಯ್ದೆ 1995ರ ಸೆಕ್ಷನ್ 44 ಮತ್ತು 45ರ ಸ್ಪಷ್ಟ ಉಲ್ಲಂಘನೆಯಿದು.)ಕತ್ತಲ ದಾರಿ...

ಅಂಡರ್‌ಪಾಸ್‌ಗಳಲ್ಲಿ ಗಾಳಿ ಬೆಳಕಿನ ವ್ಯವಸ್ಥೆ ಇಲ್ಲದಿರುವುದು ಯೋಜನೆಯ ವಿನ್ಯಾಸದಲ್ಲಿನ ವೈಫಲ್ಯಕ್ಕೆ ನಿದರ್ಶನ. ಇಕ್ಕಟ್ಟಾಗಿರುವ ಅಂಡರ್‌ಪಾಸ್‌ಗಳು ಹಗಲಿನಲ್ಲೂ ಕತ್ತಲಗೂಡುಗಳಾಗಿರುವ ಕಾರಣ ಇವುಗಳಲ್ಲಿ ಹಾದುಹೋಗಲು ಮುಖ್ಯವಾಗಿ ಮಹಿಳೆಯರು, ಯುವತಿಯರು ಹಿಂದೇಟು ಹಾಕುತ್ತಾರೆ. ಲೈಂಗಿಕ ಕಿರುಕುಳ, ಪಿಕ್‌ಪಾಕೆಟ್, ಸರಗಳ್ಳತನ ನಡೆದರೂ ಇಲ್ಲಿ ಕೇಳುವವರೇ ಇಲ್ಲ. ಎಲ್ಲೆಂದರಲ್ಲಿ ಮೂತ್ರವಿಸರ್ಜನೆ ಮಾಡುವ ಪುರುಷರಿಗೆ ಈ ಅಂಡರ್‌ಪಾಸ್‌ಗಳು ಸುರಕ್ಷಿತ ಸ್ಥಳ!ಇವೆಲ್ಲದರ ನಡುವೆ, ರಸ್ತೆಬದಿ ವ್ಯಾಪಾರಿಗಳು ಅಂಡರ್‌ಪಾಸ್‌ಗಳನ್ನು ತಮ್ಮ ಶಾಶ್ವತ  ವ್ಯಾಪಾರಸ್ಥಳವಾಗಿ ಮಾರ್ಪಡಿಸಿಕೊಂಡಿರುವುದು ಪಾದಚಾರಿಗಳ ಸುಲಲಿತ ಸಂಚಾರಕ್ಕೆ ಅಡ್ಡಿಯುಂಟು ಮಾಡುತ್ತದೆ.ವಿದೇಶಗಳಲ್ಲಿ ಇಂತಹ ಅಂಡರ್‌ಪಾಸ್‌ಗಳನ್ನು ನೋಡಿ ನಮ್ಮ ಬಿಬಿಎಂಪಿ, ಬಿಡಿಎ ಆರ್ಕಿಟೆಕ್ಟ್‌ಗಳು ಕಲಿಯಬೇಕು. ಹಾಗಂತ, ವಿದೇಶದಲ್ಲಿರುವಂತ  ಸುಶಿಕ್ಷಿತ, ಪರಿಣತ ಆರ್ಕಿಟೆಕ್ಟ್‌ಗಳು, ಎಂಜಿನಿಯರ್‌ಗಳು ನಮ್ಮಲ್ಲಿ ಇಲ್ಲವೆಂದಲ್ಲ. ಬಿಬಿಎಂಪಿ, ಬಿಡಿಎದಲ್ಲಿ ಹಾಗೂ ಖಾಸಗಿ ನಿರ್ಮಾಣ ಕ್ಷೇತ್ರದಲ್ಲಿ ಅಷ್ಟೇ ಗುಣಮಟ್ಟದ, ದೂರದೃಷ್ಟಿಯ ಕಾರ್ಯಯೋಜನೆಗಳನ್ನು ತಯಾರಿಸಬಲ್ಲ `ಪಂಡಿತರು~ ಇದ್ದಾರೆ. ಆದರೆ ಅವರ ಅನುಭವ, ಪಾಂಡಿತ್ಯ ಎಲ್ಲಿಯೂ ಬಳಕೆಯಾಗಿಲ್ಲವೆಂಬುದು ದುರಂತ.ವಿದೇಶದಲ್ಲಿನ ಕಾರ್ಯಯೋಜನೆಗಳು, ಕಾಮಗಾರಿಗಳು ಬಳಕೆದಾರಸ್ನೇಹಿಯಾಗಿರುವುದೇ ಅವುಗಳ ಯಶಸ್ಸಿನ ಗುಟ್ಟು. ಅಂದರೆ, ಉತ್ತಮ ಬೆಳಕಿನ ವ್ಯವಸ್ಥೆಯೊಂದಿಗೆ ಗಾಲಿಕುರ್ಚಿಯಲ್ಲೂ ಎಲ್ಲಿಗೆ ಬೇಕಾದರೂ ಅಡ್ಡಾಡಬಹುದಾದ ರ‌್ಯಾಂಪ್, ಎಲ್ಲಾ ವಯೋಮಾನದವರಿಗೂ ಬಳಸಲು ಸಹಕಾರಿಯಾಗುವಂತಹ ವಿನ್ಯಾಸ ಅವುಗಳ ಹೈಲೈಟ್. ಅಂಡರ್‌ಪಾಸ್‌ನಲ್ಲಿ ವಿಪುಲ ಬೆಳಕಿನ ವ್ಯವಸ್ಥೆಯಿದ್ದಾಗ ಅದು ನಿರ್ಜನ ಪ್ರದೇಶ ಅನಿಸುವುದಿಲ್ಲ. ಮಹಿಳೆಯರೂ, ಮಕ್ಕಳೂ ನಿರ್ಭಿಡೆಯಿಂದ ಬಳಸಬಹುದು.  ಸುಲಭ ನಿರ್ವಹಣೆಯೂ ಸಾಧ್ಯ.ಇಂತಹ ಕಾರ್ಯಯೋಜನೆಗಳ ತಯಾರಿ, ವಿನ್ಯಾಸ, ನಿರ್ಮಾಣದ ಪ್ರಕ್ರಿಯೆಯಲ್ಲಿ ಸಾರ್ವಜನಿಕರನ್ನು ತೊಡಗಿಸಿಕೊಳ್ಳುವುದರಿಂದ ಅವುಗಳ ಬಳಕೆಗೆ ಜನರನ್ನು ಪ್ರೇರೇಪಿಸಿದಂತಾಗುತ್ತದೆ. ತನ್ಮೂಲಕ ಅವುಗಳ ನಿರ್ವಹಣೆ ಮತ್ತು ಸುರಕ್ಷತೆಯಲ್ಲೂ ಅವರು ಪಾಲ್ಗೊಳ್ಳಬಹುದು. ಸಂಬಂಧಿತ ಪ್ರದೇಶದ `ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ~ (ಆರ್‌ಡಬ್ಲ್ಯೂಎ)ಗಳನ್ನೂ ಇದರಲ್ಲಿ ಒಳಪಡಿಸಬಹುದು.ಉದ್ಯಮಿಗಳು, ಅಂಗಡಿ ಮಾಲೀಕರು, ಹಾಗೂ ಮನೆಗಳನ್ನೂ ಈ ಪ್ರಕ್ರಿಯೆಯಲ್ಲಿ ಬಳಸಿಕೊಳ್ಳಬಹುದು. ಇದು ವೈಯಕ್ತಿಕ ಅಥವಾ ಸಾರ್ವಜನಿಕ-ಖಾಸಗಿ ಜಂಟಿ ಸಹಭಾಗಿತ್ವ ಮಾದರಿಯಲ್ಲಿ ಬಳಸಿಕೊಂಡಲ್ಲಿ ಬಿಬಿಎಂಪಿ/ಬಿಡಿಎಗೆ ಆರ್ಥಿಕ ಹೊರೆಯೂ ಕಡಿಮೆಯಾಗುತ್ತದೆ!ಉತ್ತಮ ಗುಣಮಟ್ಟದ ನಿರ್ಮಾಣ, ವಿನ್ಯಾಸ ಹಾಗೂ ಯಥೇಚ್ಛ ಬೆಳಕಿನ ವ್ಯವಸ್ಥೆಯಿದ್ದಲ್ಲಿ ಅಂಡರ್‌ಪಾಸ್‌ಗಳಲ್ಲಿಯೂ ಜಾಹೀರಾತುಗಳು ರಾರಾಜಿಸಬಹುದು. ಸ್ಥಳೀಯಾಡಳಿತ ಸಂಸ್ಥೆಗೆ ಮತ್ತೊಂದು ರೀತಿಯ ಆರ್ಥಿಕ ಮೂಲ!

(ನಾಳಿನ ಸಂಚಿಕೆಗೆ)

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry