ಮಂಗಳವಾರ, ಜೂನ್ 15, 2021
27 °C

ಸೋಮಣ್ಣ ವಿರುದ್ಧದ ಪ್ರಕರಣ: ಇಂದು ಬಿ ವರದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ವಸತಿ ಸಚಿವ ವಿ.ಸೋಮಣ್ಣ, ಅವರ ಪತ್ನಿ ಶೈಲಜಾ ಮತ್ತು ಇತರರ ವಿರುದ್ಧ ಸಾಫ್ಟ್‌ವೇರ್ ಎಂಜಿನಿಯರ್ ರವಿಕೃಷ್ಣಾ ರೆಡ್ಡಿ ಸಲ್ಲಿಸಿರುವ ಖಾಸಗಿ ದೂರಿನಲ್ಲಿರುವ ಆರೋಪಗಳಲ್ಲಿ ಹುರುಳಿಲ್ಲ ಎಂದು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ (ಲೋಕಾಯುಕ್ತ) ವಿಶೇಷ ನ್ಯಾಯಾಲಯಕ್ಕೆ ಬುಧವಾರ `ಬಿ~ ವರದಿ ಸಲ್ಲಿಸಲು ಲೋಕಾಯುಕ್ತ ಪೊಲೀಸರು ತೀರ್ಮಾನಿಸಿದ್ದಾರೆ.ರವಿಕೃಷ್ಣಾ ರೆಡ್ಡಿ ಅವರಿಗೆ ಸೋಮವಾರ ನೋಟಿಸ್ ನೀಡಿರುವ ಲೋಕಾಯುಕ್ತ ಪೊಲೀಸರು, `ನಾಗದೇವನಹಳ್ಳಿಯಲ್ಲಿನ 22 ಗುಂಟೆ ಭೂಮಿಯನ್ನು ಭೂಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡುವಲ್ಲಿ ಅಕ್ರಮ ನಡೆದಿದೆ ಎಂಬುದಕ್ಕೆ ಸೂಕ್ತ ಸಾಕ್ಷ್ಯಾಧಾರಗಳು ಲಭ್ಯವಾಗಿಲ್ಲ.ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಮುಕ್ತಾಯಗೊಳಿಸುವಂತೆ (ಬಿ) ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗುವುದು. ತಾವು ತನಿಖಾ ವರದಿಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಬಹುದು~ ಎಂದು ತಿಳಿಸಿದ್ದಾರೆ.`ಕೆಂಗೇರಿ ಹೋಬಳಿ ನಾಗದೇವನಹಳ್ಳಿಯಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಸ್ವಾಧೀನಪಡಿಸಿಕೊಂಡಿದ್ದ 22 ಗುಂಟೆ ಭೂಮಿಯನ್ನು ಯಡಿಯೂರಪ್ಪ ಅವರು ಅಧಿಕಾರ ದುರ್ಬಳಕೆ ಮಾಡಿಕೊಂಡು ಭೂಸ್ವಾಧೀನ ಪ್ರಕ್ರಿಯೆಯಿಂದ ಕೈಬಿಟ್ಟಿದ್ದಾರೆ. ಸೋಮಣ್ಣ ಸಚಿವ ಸ್ಥಾನದ ಪ್ರಭಾವ ಬಳಸಿ ಈ ಆದೇಶ ಪಡೆದಿದ್ದಾರೆ. ಅವರ ಪತ್ನಿ ಶೈಲಜಾ ಮತ್ತು ಭೂಮಿ ಮೂಲ ಮಾಲೀಕ ಡಿ.ಲಿಂಗಯ್ಯ ಅಕ್ರಮದಲ್ಲಿ ಭಾಗಿಯಾಗಿದ್ದಾರೆ~ ಎಂದು ಆರೋಪಿಸಿ ರವಿಕೃಷ್ಣಾ ರೆಡ್ಡಿ ಕಳೆದ ನವೆಂಬರ್ 17ರಂದು ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದರು.ಈ ಬಗ್ಗೆ ತನಿಖೆ ನಡೆಸಿ, ವರದಿ ಸಲ್ಲಿಸುವಂತೆ ಲೋಕಾಯುಕ್ತ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎನ್.ಕೆ.ಸುಧೀಂದ್ರ ರಾವ್  ನ.21ರಂದು ಆದೇಶ ಹೊರಡಿಸಿದ್ದರು.ನಾಲ್ಕು ತಿಂಗಳ ಕಾಲ ತನಿಖೆ ನಡೆಸಿದ ಬೆಂಗಳೂರು ನಗರ ಲೋಕಾಯುಕ್ತ ಡಿವೈಎಸ್‌ಪಿ ಪ್ರಸನ್ನ ವಿ.ರಾಜು, ದೂರಿನಲ್ಲಿರುವ ಆರೋಪಗಳಲ್ಲಿ ಹುರುಳಿಲ್ಲ ಎಂದು ವರದಿ ಸಲ್ಲಿಸಲು ನಿರ್ಧರಿಸಿದ್ದಾರೆ.ಮೂಲಗಳ ಪ್ರಕಾರ ನಾಗದೇವನಹಳ್ಳಿ 22 ಗುಂಟೆ ಭೂಮಿಯನ್ನು ಬಿಡಿಎ ವಶದಲ್ಲಿರುವಾಗಲೇ ಸೋಮಣ್ಣ ಅವರ ಪತ್ನಿ ಖರೀದಿಸಿದ್ದರು. ಅಲ್ಲಿ ಕಟ್ಟಡಗಳನ್ನೂ ನಿರ್ಮಿಸಿದ್ದರು. ವಾಸ್ತವಿಕವಾಗಿ ಭೂಮಿ ವಶಕ್ಕೆ ಪಡೆದುಕೊಳ್ಳುವವರೆಗೂ ಭೂಸ್ವಾಧೀನ ಪ್ರಕ್ರಿಯೆ ಅಂತಿಮಗೊಳ್ಳುವುದಿಲ್ಲ ಎಂದು ವಿವಿಧ ನ್ಯಾಯಾಲಯಗಳು ನೀಡಿರುವ ತೀರ್ಪಿನ ಪ್ರಕಾರ ಈ ಆರೋಪವನ್ನು ಕೈಬಿಡಲಾಗಿದೆ.ದೂರಿನಲ್ಲಿ ಉಲ್ಲೇಖಿಸಿರುವ ಸ್ವತ್ತನ್ನು ಭೂಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡುವಂತೆ ಸೋಮಣ್ಣ ಅವರು ಎಸ್.ಎಂ.ಕೃಷ್ಣ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲೇ ಅರ್ಜಿ ಸಲ್ಲಿಸಿದ್ದರು. ನಂತರ ಮುಖ್ಯಮಂತ್ರಿಯಾದ ಧರ್ಮಸಿಂಗ್ ಅವರಿಗೂ ಅರ್ಜಿ ಸಲ್ಲಿಸಿದ್ದು, 22 ಗುಂಟೆ ಭೂಮಿ ಭೂಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡುವಂತೆ ಅವರು ಎರಡು ಬಾರಿ ಆದೇಶಿಸಿದ್ದರು.ಎಚ್.ಡಿ.ಕುಮಾರಸ್ವಾಮಿ ಕೂಡ ಒಮ್ಮೆ ಇಂತಹ ನಿರ್ದೇಶನ ನೀಡಿದ್ದರು. ನಂತರ ಯಡಿಯೂರಪ್ಪ ಅವರಿಗೂ ಸೋಮಣ್ಣ ಅರ್ಜಿ ಸಲ್ಲಿಸಿದ್ದರು. ಹಿಂದಿನ ಮುಖ್ಯಮಂತ್ರಿಗಳ ತೀರ್ಮಾನದಂತೆ ಆದೇಶ ಹೊರಡಿಸಲುಅವರೂ ನಿರ್ದೇಶನ ನೀಡಿದ್ದರು ಎಂಬುದು ತನಿಖೆಯಲ್ಲಿ ಪತ್ತೆಯಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.ತನಿಖಾ ವರದಿಯನ್ನು ಲೋಕಾಯುಕ್ತದ ಕಾನೂನು ಘಟಕ ಮತ್ತು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಅವರಿಗೆ ಸಲ್ಲಿಸಲಾಗಿತ್ತು. ಅದನ್ನು ಪರಿಶೀಲಿಸಿದ  ಕಾನೂನು ಘಟಕದ ಮುಖ್ಯಸ್ಥರು ಮತ್ತು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್, ಆರೋಪಿಗಳ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆ ಅಡಿಯಲ್ಲಿ ಆರೋಪಪಟ್ಟಿ ಸಲ್ಲಿಸಲು ಸಾಧ್ಯವಿಲ್ಲದ ಹಿನ್ನೆಲೆಯಲ್ಲಿ `ಬಿ~ ವರದಿ ಸಲ್ಲಿಸುವಂತೆ ಶಿಫಾರಸು ಮಾಡಿದ್ದರು. ಅದರ ಆಧಾರದಲ್ಲೇ `ಬಿ~ ವರದಿ ಸಲ್ಲಿಸಲಾಗುತ್ತಿದೆ ಎಂದು ಗೊತ್ತಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.