ಸೋಮನಾಥ ನಗರ ಸಮಸ್ಯೆಗಳ ಆಗರ

7

ಸೋಮನಾಥ ನಗರ ಸಮಸ್ಯೆಗಳ ಆಗರ

Published:
Updated:
ಸೋಮನಾಥ ನಗರ ಸಮಸ್ಯೆಗಳ ಆಗರ

ಮಸ್ಕಿ: ‘ತಿರುಗಾಡಕ ದಾರಿ ಇಲ್ರಿ, ಮುರಂ ಹಾಕಿ ದಾರಿ ಮಾಡಿ ಕೋಡ್ರಿ ಅಂತಾ ಸದಸ್ಯರಿಗೆ ಹೇಳಿದ್ರ ಏನೂ ಪ್ರಯೋಜನವಾಗಿಲ್ರಿ, ಈ ಸಾರಿ ಚುನಾವ­ಣ್ಯಾಗ ಓಟ ಕೇಳಾಕ ಬರಲಿ, ಅವರ್ರಿಗೆ ಸರಿಯಾಗಿ ಬುದ್ದಿ ಕಲ್ಸತಿವಿ’   ಮಸ್ಕಿಯ 1ನೇ ವಾರ್ಡ್‌­ನಲ್ಲಿ ಬರುವ ಸೋಮನಾಥ ನಗರದ  ನಿವಾಸಿಗಳ ಆಕ್ರೋಶದ ಮಾತುಗಳು.ಐದು ಜನ ಗ್ರಾಮ ಪಂಚಾಯಿತಿ ಸದಸ್ಯರು ಇರುವ ಒಂದನೇ ವಾರ್ಡ್‌ನ ಸೋಮನಾಥ ನಗರದಲ್ಲಿ ಹೆಚ್ಚಾಗಿ ಕೂಲಿ ಕಾರ್ಮಿಕರೇ ವಾಸ ಮಾಡುತ್ತಾರೆ. ಕಲ್ಯಾಣ ನಗರ, ಪಾರ್ವತಿ ನಗರಗಳಲ್ಲಿ  ಹೆಚ್ಚು ಶ್ರೀಮಂತ ವರ್ಗವೇ ಇಲ್ಲಿ ವಾಸ ಮಾಡುತ್ತಿದೆ. ಆದರೆ, ಈ ಮೂರು ನಗರಗಳ ರಸ್ತೆಗಳು ಸಂಪೂರ್ಣ ಹದಗೆಟ್ಟು ಹೋಗಿವೆ. ಜನಪ್ರತಿನಿಧಿಗಳು ಯಾರು ಇತ್ತ ಲಕ್ಷ್ಯ ವಹಿಸುತ್ತಿಲ್ಲ.ಸೋಮನಾಥ ನಗರದಲ್ಲಿ ಇರುವ ಸರ್ಕಾರಿ ಶಾಲೆಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಹಾಳಾಗಿದೆ. ಒಂದೇರಡು ಗಾಡಿ ಮುರಂ ಹಾಕಿಸಿ ದುರಸ್ತಿ ಕೂಡಾ ಮಾಡಿಸಿಲ್ಲ. ರಸ್ತೆ ಮೇಲೆ ನೀರು ನಿಂತು ಕೆಸರು ಗದ್ದೆಯಾಗಿರುವ ರಸ್ತೆಯಲ್ಲಿಯೇ ನಿತ್ಯ ನೂರಾರು ವಿದ್ಯಾರ್ಥಿಗಳು ಶಾಲೆ ಹೋಗುತ್ತಿದ್ದಾರೆ. ಅನೇಕ ವಿದ್ಯಾರ್ಥಿಗಳು ಇದರಲ್ಲಿ ಬಿದ್ದಿದ್ದಾರೆ. ನಿಂತ ನೀರಿನಿಂದ ಸೊಳ್ಳೆಗಳು ಹೆಚ್ಚಾಗಿ ರಾತ್ರಿ ಮಲಗಲು ಆಗುತ್ತಿಲ್ಲ ಎಂದು ದ್ಯಾವಮ್ಮ ಹಾಗೂ ತಿಪ್ಪಣ್ಣ ಸೇರಿದಂತೆ ಹಲವರು ತಮ್ಮ ಅಳಲು ತೋಡಿಕೊಂಡರು.ಗೆದ್ದು ಹೋದ ಗ್ರಾಮ ಪಂಚಾಯಿತಿ ಸದಸ್ಯರು ಜನರನ್ನು ಮರೆತು ಬಿಟ್ಟಿದ್ದಾರೆ. ಈ ಕಡೆ ಒಮ್ಮೆಯೂ ಮುಖ ಹಾಕಿಲ್ಲ ಎಂದು ಸದಸ್ಯರು ವಿರುದ್ಧ ಜನರು ಅಕ್ರೋಶ ವ್ಯಕ್ತಪಡಿಸಿದರು.ಕಲ್ಯಾಣ ನಗರದ ಪರಿಸ್ಥಿತಿಯೂ ಇದಕ್ಕೆ ಹೊರತಾಗಿಲ್ಲ. ಇಲ್ಲಿಯ ಪ್ರಮುಖ ಹಾಗೂ ಉಪರಸ್ತೆಗಳನ್ನು ಒತ್ತುವರಿ ಮಾಡಿಕೊಂಡು ಮನೆಗಳನ್ನು ನಿರ್ಮಿಸಿಕೊಳ್ಳಲಾಗಿದೆ.ಪರಿಣಾಮ ರಸ್ತೆಗಳು ಇಕ್ಕಾಟ್ಟಾಗಿವೆ. ಮಳೆ ಬಂದರೆ ಸಾಕು ಇಲ್ಲಿ ಪಾದಚಾರಿಗಳಿಗೆ ತಿರುಗಾಡಲು ಆಗುತ್ತಿಲ್ಲ. ಇನ್ನೂ ಬೈಕ್‌ ಸವಾರರ ಪರಿಸ್ಥಿತಿಯಂತೂ ಹೇಳತಿರದು.ಈ ನಗರದಲ್ಲಿ 20 ಅಡಿಗಳಷ್ಟು ಅಗಲವಾಗಿರುವ ಇರುವ ರಸ್ತೆಗಳು ಇದೀಗ10 ರಿಂದ 5 ಅಡಿಗಳಿಗೆ ಬಂದು ನಿಂತಿವೆ. ರಸ್ತೆ ಒತ್ತುವರಿಗಾಗಿ ಇಲ್ಲಿ ಸ್ಪರ್ಧೆಯೇ ನಡೆಯುತ್ತಿದೆ. ಇಷ್ಟಾದರೂ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯಾಗಲಿ ಅಥವಾ ಸದಸ್ಯರಾಗಲಿ ಗಮನ ಹರಿಸುತ್ತಿಲ್ಲ ಎಂದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು.ಪಾರ್ವತಿ ನಗರದ ಕತೆಯೂ ಇದಕ್ಕೆ ಭಿನ್ನವಾಗಿಲ್ಲ. ಈ ನಗರದಲ್ಲಿನ ಸಮಸ್ಯೆಗಳಿಗೆ ಇದುವರೆಗೂ ಪರಿಹಾರ ಸಿಕ್ಕಿಲ್ಲ. ಮಸ್ಕಿ ಪಂಚಾಯಿತಿ  ಹೆಚ್ಚಿನ ಸದಸ್ಯರನ್ನು ಹೊಂದಿರುವ ಒಂದನೇ ವಾರ್ಡ್‌ನ ಸದಸ್ಯರು ಜನರ ಕಷ್ಟಕ್ಕೆ ಸ್ಪಂದಿಸುತ್ತಿಲ್ಲ ಎಂಬ ಆರೋಪ ಕೇಳಿಬರುತ್ತಿದೆ.ಅಭಿಮತ

ರಸ್ತೆ ದುರಸ್ತಿಗೆ ಕ್ರಮ


ರಸ್ತೆಗಳು ಹದಗೆಟ್ಟಿರುವುದು ಕಂಡು ಬಂದಿದೆ. ಸತತವಾಗಿ ಸುರಿದ ಮಳೆಯೇ ಇದಕ್ಕೆ ಕಾರಣ, ಈ ರಸ್ತೆಗಳ ಸುಧಾರಣೆಗೆ ಪಂಚಾಯಿತಿ ಗಮನ ಹರಿಸಲಿದ್ದು, ಶೀಘ್ರವೇ  ಸರಿಪಡಿಸ­ಲಾಗುತ್ತದೆ.

ಅಮರೇಶ ಮಸ್ಕಿ, ಅಧ್ಯಕ್ಷರು, ಗ್ರಾಮ ಪಂಚಾಯಿತಿರಸ್ತೆ ಒತ್ತುವರಿ ವರದಿ ಸಲ್ಲಿಕೆ

ಮಸ್ಕಿಯ ಕಲ್ಯಾಣ ನಗರದಲ್ಲಿನ ರಸ್ತೆಗಳನ್ನು ಆಕ್ರಮಿಸಿ ಮನೆಗಳನ್ನು ಕಟ್ಟಿಕೊಂಡಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ವರದಿ ತಯಾರಿಸಿ ಉಪವಿಭಾಗಾಧಿ­ಕಾರಿಗಳಿಗೆ  ಸಲ್ಲಿಸಲಾಗುವುದು, ಅವರಿಂದ ಆದೇಶ ಬಂದ ನಂತರ ಇದರ ಬಗ್ಗೆ ಸೂಕ್ತವಾದ ಕ್ರಮ ಕೈಗೊಳ್ಳಲಾಗುತ್ತದೆ.

– ಚನ್ನಮಲ್ಲಯ್ಯ ಸ್ವಾಮಿ, ಅಭಿವೃದ್ಧಿ ಅಧಿಕಾರಿ, ಗ್ರಾಮ ಪಂಚಾಯಿತಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry