ಸೋಮವಾರಪೇಟೆ: ಗೊಂದಲದ ಗೂಡಾದ ಸಂತೆ

7

ಸೋಮವಾರಪೇಟೆ: ಗೊಂದಲದ ಗೂಡಾದ ಸಂತೆ

Published:
Updated:

ಸೋಮವಾರಪೇಟೆ: ಹೈಟೆಕ್ ಮಾರುಕಟ್ಟೆ ನಿರ್ಮಿಸುವ ತುರ್ತಿನಲ್ಲಿ ಪರ್ಯಾಯ ವ್ಯವಸ್ಥೆ ಕಲ್ಪಿಸದೆ ಇಲ್ಲಿನ ಸೋಮವಾರದ ಅತಿದೊಡ್ಡ ಸಂತೆಯಲ್ಲಿ ಗೊಂದಲ ಉಂಟಾಗಿ ಗ್ರಾಹಕರು ಮತ್ತು ವ್ಯಾಪಾರಸ್ಥರು ಪರದಾಡಬೇಕಾಯಿತು.ಇಲ್ಲಿನ ಮಾರುಕಟ್ಟೆ ಪ್ರಾಂಗಣವನ್ನು ಹೈಟೆಕ್ ಆಗಿ ಪರಿವರ್ತಿಸುವ ರೂ.1.25 ಕೋಟಿ ಕಾಮಗಾರಿಯನ್ನು ಇಲ್ಲಿನ ಪಟ್ಟಣ ಪಂಚಾಯಿತಿಯು ಕೈಗೆತ್ತಿಕೊಂಡಿದೆ. ಹೀಗಾಗಿ ಹಿಂದೆ ಇದ್ದ ಕಟ್ಟಡಗಳನ್ನು ಕೆಡವಿ ಹಾಕಲಾಗಿದೆ. ಆದರೆ ಎಂದಿನಂತೆ ಸಂತೆ ನಡೆಯಲು ಪರ್ಯಾಯ ಮಾರ್ಗವನ್ನು ಮಾತ್ರ ಪಂಚಾಯಿತಿಯು ಕಲ್ಪಿಸದೇ ಇದ್ದುದರಿಂದ ಜನರು ತೊಂದರೆ ಅನುಭವಿಸಬೇಕಾಯಿತು.ಸೋಮವಾರ ಸಾವಿರಾರು ಜನರು ಗ್ರಾಮೀಣ ಪ್ರದೇಶದಿಂದ ಎಂದಿನಂತೆ ವಾರದ ದಿನಸಿ ಮತ್ತು ತರಕಾರಿಗಳನ್ನು ಕೊಳ್ಳಲು ಸಂತೆ ಪ್ರದೇಶಕ್ಕೆ ಬಂದರೆ ಹೊರ ಜಿಲ್ಲೆಗಳಿಂದಲೂ ಮಾಮೂಲಿ ವ್ಯಾಪಾರಸ್ಥರು ಬಂದಿದ್ದರು. ಮಾರುಕಟ್ಟೆಯಲ್ಲಿ ಕೆಲಸ ನಡೆಯುತ್ತಿದ್ದರಿಂದ ಜಾಗವಿಲ್ಲದೆ ಕಲ್ಲು ಮಣ್ಣಿನ ರಾಶಿಯ ನಡುವೆಯೇ ವ್ಯಾಪಾರ ವಹಿವಾಟು ನಡೆಸಬೇಕಾಯಿತು.ಮಾರುಕಟ್ಟೆ ಕಾಮಗಾರಿ ಮುಗಿಯಲು ಕಡಿಮೆ ಎಂದರೂ ಇನ್ನೂ 3 ತಿಂಗಳ ಕಾಲಾವಕಾಶ ಬೇಕಾಗುತ್ತದೆ. ಸ್ಥಳದ ಅಭಾವವಿರುವ ಇಲ್ಲಿ ಇನ್ನು ಮುಂದೆ ಸಂತೆಯನ್ನು ನಡೆಸುವುದು ಕಷ್ಟವೇ ಸರಿ. ಮುಂದಿನ ವಾರದಿಂದ ಕಂಬ ನಿಲ್ಲಿಸಲು ಗುಂಡಿಗಳನ್ನು ತೆಗೆಯುವ ಕಾರ್ಯ ಆರಂಭಗೊಳ್ಳುವುದರಿಂದ ಇನ್ನಷ್ಟು ಅಡಚಣೆಗಳು ಎದುರಾಗುವ ಸಂಭವವಿದೆ.ಹೀಗಾಗಿ ಸಂತೆಯ ವ್ಯಾಪಾರ ನಡೆಸಲು ಪರ್ಯಾಯ ಮಾರ್ಗ ಕಲ್ಪಿಸಬೇಕೆನ್ನುವುದು ಹಲವು ವ್ಯಾಪಾರಸ್ಥರು ಹೇಳಿದರೆ ಇನ್ನು ಕೆಲವರು ಸಂತೆಯನ್ನು ಬೇರೆಡೆ ಸ್ಥಳಾಂತರಿಸಿದರೆ ಗ್ರಾಹಕರ ಅಭಾವದಿಂದ ನಷ್ಟವಾಗಬಹುದೆಂಬ ಆತಂಕವನ್ನೂ ವ್ಯಕ್ತಪಡಿಸುತ್ತಾರೆ. ಸಂತೆಯನ್ನು ಇಲ್ಲಿನ ಆರ್‌ಎಂಸಿ ಜಾಗಕ್ಕೆ ಸ್ಥಳಾಂತರಿಸಿದರೆ ಪಟ್ಟಣ ಪಂಚಾಯಿತಿಗೆ ಸಿಗುವ ಆದಾಯ ಮಾಯವಾಗುತ್ತದೆ ಎಂಬ ಉದ್ದೇಶದಿಂದ ಪಂಚಾಯಿತಿಯ ಆಡಳಿತ ಇದಕ್ಕೆ ಹೆಚ್ಚಿನ ಮಹತ್ವ ನೀಡಿಲ್ಲ ಎಂಬುದು ಸಾರ್ವಜನಿಕರ ಆಕ್ಷೇಪವಾಗಿದೆ. ಆದಷ್ಟು ಬೇಗನೆ ಈ ಕಾಮಗಾರಿ ಮುಗಿಸಲು ಪಂಚಾಯಿತಿ ಕ್ರಮ ಕೈಗೊಳ್ಳಬೇಕೆಂದು ಜನರು ಆಗ್ರಹಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry