ಸೋಮವಾರ ಮಧ್ಯರಾತ್ರಿಯಿಂದಲೇ ಕ್ರಿಸ್‌ಮಸ್ ಸಂಭ್ರಮಾಚರಣೆ

7

ಸೋಮವಾರ ಮಧ್ಯರಾತ್ರಿಯಿಂದಲೇ ಕ್ರಿಸ್‌ಮಸ್ ಸಂಭ್ರಮಾಚರಣೆ

Published:
Updated:

ಚಿಕ್ಕಬಳ್ಳಾಪುರ: ಬಾಲಯೇಸುವಿನ ಜನ್ಮಕಾಲದ ಕ್ಷಣಕ್ಕಾಗಿ ಕಾತರಿಸುತ್ತಿದ್ದ ಭಕ್ತಾದಿಗಳು ಸೋಮವಾರ ಮಧ್ಯರಾತ್ರಿ 12 ಗಂಟೆಯಾಗುತ್ತಲೇ ಸಂಭ್ರಮ ಆಚರಿಸಿಕೊಂಡರು. ವಿಶೇಷ ರೀತಿಯ ದೀಪಾಲಂಕಾರಗೊಂಡಿದ್ದ ಚರ್ಚ್‌ಗಳಲ್ಲಿ ಹರ್ಷೋದ್ಗಾರ ವ್ಯಕ್ತವಾಯಿತು.ಕ್ರಿಸ್‌ಮಸ್ ಸ್ತೋತ್ರಗಳನ್ನು ಪಠಿಸುತ್ತಿದ್ದ ಕ್ರೈಸ್ತ ಸಮುದಾಯದವರು ನಂತರ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡರು. ಯೇಸು ಕ್ರಿಸ್ತ ಸ್ಮರಣೆಯಲ್ಲಿ ಚರ್ಚ್ ಆವರಣದಲ್ಲಿ ನಡೆದ ವಿಶೇಷ ಪ್ರಾರ್ಥನೆ ಸಭೆಯಲ್ಲಿ ಮಕ್ಕಳು, ಪೋಷಕರು ಮತ್ತು ಹಿರಿಯರು ಭಾಗವಹಿಸಿದ್ದರು.ಕ್ರಿಸ್‌ಮಸ್ ಆಚರಣೆ ಮುನ್ನಾ ದಿನಗಳಿಂದಲೇ ನಗರದ ಸೇಂಟ್ ಫ್ರಾನ್ಸಿಸ್ ಕ್ಸೇವಿಯರ್ ಚರ್ಚ್ ಮತ್ತು ಸಿಎಸ್‌ಐ ಕ್ರೈಸ್ಟ್ ಚರ್ಚ್ ಆವರಣದಲ್ಲಿ ವಿಶೇಷ ಸಿದ್ಧತೆ ಮತ್ತು ದೀಪಾಲಂಕಾರ ಮಾಡಲಾಗುತ್ತಿತ್ತು. ಸೋಮವಾರ ರಾತ್ರಿಯಂತೂ ಎರಡೂ ಚರ್ಚ್‌ಗಳ ಆವರಣ ದೀಪಾಲಂಕಾರದಿಂದ ಕಂಗೊಳಿಸುತ್ತಿತ್ತು. ವಿಶೇಷ ಪ್ರಾರ್ಥನೆ ಹಿನ್ನೆಲೆಯಲ್ಲಿ ಮನೆಯಲ್ಲಿದ್ದ ಕುಟುಂಬ ಸದಸ್ಯರೆಲ್ಲ ಚರ್ಚ್‌ಗೆ ರಾತ್ರಿ 9ರಿಂದಲೇ ಆಗಮಿಸತೊಡಗಿದರು. ರಾತ್ರಿ 11 ರಿಂದ 11.30ರವರೆಗೆ ಕ್ರಿಸ್‌ಮಸ್ ಸ್ರೋತ್ರ ಪಠಿಸಿದ ಭಕ್ತಾದಿಗಳು 11.30ರಿಂದ ಮಧ್ಯರಾತ್ರಿ 2ರವರೆಗೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.ಸಿಎಸ್‌ಐ ಕ್ರೈಸ್ಟ್ ಚರ್ಚ್‌ನಲ್ಲಿ ಘನ ಶೈಲಶ್ರೀ ಸುರೇಶ್ ಅವರ ಸಮ್ಮುಖದಲ್ಲಿ ಭಕ್ತಾದಿಗಳು ಸಂಜೆ 6ರ ಸುಮಾರಿಗೆ ಮೇಣದ ಬತ್ತಿಗಳನ್ನು ಹಿಡಿದು ವಿಶೇಷ ಪ್ರಾರ್ಥನೆ ಸಲ್ಲಿಸಿದರು. `ಇಡೀ ವಿಶ್ವದಲ್ಲಿ ಶಾಂತಿ ನೆಲೆಸಲಿ. ಎಲ್ಲರೂ ಪ್ರೀತಿ, ವಿಶ್ವಾಸ ಮತ್ತು ಸೌಹಾರ್ದತೆಯಿಂದ ಬಾಳುವಂತಾಗಲಿ. ಎಲ್ಲರಿಗೂ ಸುಖ-ಸಂತೋಷ ಸಿಗಲಿ. ಬಡವರು ಸೇರಿದಂತೆ ಎಲ್ಲರ ಸಮಸ್ಯೆಗಳನ್ನು ಪರಿಹರಿಸು. ಉತ್ತಮ ಸಮಾಜ ನಿರ್ಮಾಣಕ್ಕೆ ಆಶೀರ್ವಾದ ಇರಲಿ' ಎಂದು ಅವರು ಯೇಸುಕ್ರಿಸ್ತ ಸ್ಮರಣೆಯಲ್ಲಿ ಪ್ರಾರ್ಥಿಸಿದರು. ಕ್ರೈಸ್ತ ಮುಖಂಡರಾದ ಹೆನ್ರಿ ಪ್ರಸನ್ನಕುಮಾರ್, ಅರುಣ್‌ಕುಮಾರ್, ರವಿಕುಮಾರ್, ಜಯಕುಮಾರ್ ಇದ್ದರು.ಸೇಂಟ್ ಫ್ರಾನ್ಸಿಸ್ ಕ್ಸೇವಿಯರ್ ಚರ್ಚ್ ಆವರಣದಲ್ಲಿ ನೂತನ ಕಟ್ಟಡ ನಿರ್ಮಿಸುತ್ತಿರುವ ಹಿನ್ನೆಲೆಯಲ್ಲಿ ನಿರ್ಮಾಣ ಸ್ಥಳದ ಬದಿಯಲ್ಲೇ ಇರುವ ಕಟ್ಟಡದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಚರ್ಚ್‌ನ ಪಾದ್ರಿ ಆರೋಗ್ಯದಾಸ್ ಸಮ್ಮುಖದಲ್ಲಿ ವಿಶೇಷ ಪ್ರಾರ್ಥನೆ ಮಾಡಲಾಯಿತು. `ಈ ಹಿಂದೆ ಮಾಡಿರುವ ಎಲ್ಲ ತಪ್ಪುಗಳನ್ನು ಮನ್ನಿಸು. ಉತ್ತಮ ಮನುಷ್ಯನಾಗಲು ಅವಕಾಶ ಮಾಡಿಕೊಡು. ಇಡೀ ವಿಶ್ವದಲ್ಲಿ ಶಾಂತಿ ನೆಲೆಸಲಿ. ಸಂಕಷ್ಟ-ಸಮಸ್ಯೆಗಳನ್ನು ಸಾಧ್ಯವಾದಷ್ಟು ಬೇಗ ಪರಿಹರಿಸು' ಎಂದು ಯೇಸು ಕ್ರಿಸ್ತನ ನೆನಪಿನಲ್ಲಿ ಮನವಿ ಮಾಡಿಕೊಂಡರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry