ಮಂಗಳವಾರ, ಜೂನ್ 15, 2021
25 °C

ಸೋಮವಾರ, 2–3–1964

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಾರತದೊಡನೆ ಕಾಶ್ಮೀರದ ಸಂಪೂರ್ಣ

ಸೇರ್ಪಡೆಗೆ ಎಲ್ಲ ಆತಂಕ ನಿವಾರಣೆ


ಜಮ್ಮು, ಮಾ. 1 – ಭಾರತ ಗಣರಾಜ್ಯದ ಇತರ ಭಾಗಗಳೊಡನೆ ತಮ್ಮ ರಾಜ್ಯದ ಸೇರ್ಪಡೆಗೆ ಇರುವ ಅಡ್ಡಿ  – ಆತಂಕಗಳನ್ನೆಲ್ಲಾ ನಿವಾರಿಸಲು ನಿರ್ಧರಿಸಲಾಗಿದೆಯೆಂದು ಜಮ್ಮು ಮತ್ತು ಕಾಶ್ಮೀರದ ನೂತನ ಪ್ರಧಾನಿ ಶ್ರೀ ಜೆ. ಎಂ. ಸಾದಿಕ್‌ ಇಂದು ಇಲ್ಲಿ ಘೋಷಿಸಿದರು.ರಾಜ್ಯದ ಪ್ರಧಾನಿಯಾದ ನಂತರ ಅವರು ನಡೆಸಿದ ಮೊಟ್ಟ ಮೊದಲ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡುತ್ತಾ ರಾಷ್ಟ್ರದ ಇತರ ಭಾಗಗಳಿಂದ  ತಮ್ಮ ರಾಜ್ಯ ಬೇರೆಯಾಗಿ ಇರುವುದರಿಂದ ತಮ್ಮ ರಾಜ್ಯವು ಹಿಂದುಳಿದಿರಲು ಹಾಗೂ ಪ್ರಾಂತೀಯ ಭಾವನೆ ವೃದ್ಧಿಯಾಗಲು ಅವಕಾಶವಾಗುವುದೆಂದು ಹೇಳಿ ಈ ಪರಿಸ್ಥಿತಿ ಮುಂದುವರಿಯಲು ಬಿಡಲು ಸಾಧ್ಯವಿಲ್ಲವೆಂದರು.

ವಿದೇಶಿ ಬಂಡವಾಳ ಹೂಡಿಕೆಗೆ

ಅವಕಾಶ ನೀಡುವ ಬಗ್ಗೆ ಕೇಂದ್ರದ ಪರಿಶೀಲನೆ


ನವದೆಹಲಿ, ಮಾ. 1 – ಸರ್ಕಾರಿ ಕ್ಷೇತ್ರಕ್ಕೆ ಸೇರಿದ ಪೆಟ್ರೋಲಿಯಂ  ರಾಸಾಯನಿಕ ಹಾಗೂ ಯಂತ್ರ ತಯಾರಿಕೆ ಕೈಗಾರಿಕೆಗಳಲ್ಲಿ ಅದರಲ್ಲೂ ವಿಶೇಷವಾಗಿ ವಿದ್ಯುಚ್ಛಕ್ತಿಗೆ ಸಂಬಂಧಿಸಿದ ಯಂತ್ರ ತಯಾರಿಕೆಯಲ್ಲಿ ವಿದೇಶಿ ಬಂಡವಾಳ ಹೂಡಿಕೆಗೆ ಅವಕಾಶ ನೀಡುವ ಪ್ರಶ್ನೆಯನ್ನು ಕೇಂದ್ರ ಸರ್ಕಾರ ಪರಿಶೀಲಿಸುತ್ತಿದೆಯೆಂದು ತಿಳಿದು ಬಂದಿದೆ.

ಮುಂಬರುವ ಐದು ಅಥವಾ ಹತ್ತು ವರ್ಷಗಳಲ್ಲಿ ವಿದೇಶಿ ಸಾಲಗಳ ವಾಪಸಾತಿ ಹೊಣೆ ಅಧಿಕಗೊಳ್ಳುತ್ತಿರುವುದು ಹಾಗೂ ನಾಲ್ಕನೆ

ಪಂಚವಾರ್ಷಿಕ ಯೋಜನೆಯನ್ನು ಪೂರೈಸಲು ಅಧಿಕ ಪ್ರಮಾಣದಲ್ಲಿ ವಿದೇಶಿ ವಿನಿಮಯ ಬೇಕಾಗಿರುವುದು ಈ ಪ್ರಶ್ನೆಯ ಪರಿಶೀಲನೆಗೆ ಮೂಲ ಕಾರಣವಾಗಿದೆ.

ಭಾರತದ ರಕ್ಷಣೆಗಾಗಿ ಹಣ ಪೋಲು

ಮಾಡದಿರಲು ಅಮೆರಿಕಕ್ಕೆ ಅಯೂಬ್‌ ಹಿತೋಕ್ತಿ


ಕರಾಚಿ, ಮಾ. 1 – ಚೀನದೊಡನೆ ಯುದ್ಧ ಮಾಡುವುದಕ್ಕಾಗಿ ಭಾರತದ ರಕ್ಷಣಾ ಶಕ್ತಿ ಸಂವರ್ಧನೆಗಾಗಿ ನಿಮ್ಮ ಹಣವನ್ನು ಪೋಲು ಮಾಡಬೇಡಿ ಎಂದು ಅಮೆರಿಕಕ್ಕೆ ಪಾಕ್‌ ಅಧ್ಯಕ್ಷ ಅಯೂಬ್‌ ಖಾನ್‌ರವರು ಬುದ್ಧಿವಾದ ನುಡಿದಿದ್ದಾರೆ. ರಾಷ್ಟ್ರವನ್ನುದ್ದೇಶಿಸಿ ಮಾಡಿದ ಮಾಸಿಕ ಭಾಷಣದಲ್ಲಿ, ಚೀನದಿಂದ ಭಾರತ ಉಪಖಂಡಕ್ಕೆ ಅಪಾಯ­ವೇನೂ ಇಲ್ಲವೆಂದೂ ಘೋಷಿಸಿದರಲ್ಲದೆ, ಭಾರತ ಚೀನದ ಜತೆ ಎಂದಿಗೂ ಯುದ್ಧ ಮಾಡುವುದಿಲ್ಲವೆಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.