ಶುಕ್ರವಾರ, ನವೆಂಬರ್ 15, 2019
22 °C

ಸೋಮಶೇಖರ ರೆಡ್ಡಿ `ಡೋಲಾಯಮಾನ'

Published:
Updated:

ಬಳ್ಳಾರಿ: ಇತ್ತೀಚೆಗೆ ನಡೆದ ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪಕ್ಷದ ಹೀನಾಯ ಸೋಲಿನಿಂದ ಕಂಗೆಟ್ಟಿರುವ ಶಾಸಕ, ಕೆಎಂಎಫ್ ಅಧ್ಯಕ್ಷ ಜಿ.ಸೋಮಶೇಖರ ರೆಡ್ಡಿ, ಮೇ 5ರಂದು ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಹಿಂಜರಿಯುತ್ತಿದ್ದಾರೆಯೇ?2008ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಬಳ್ಳಾರಿ ನಗರ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದು, ಕೆಎಂಎಫ್ ಅಧ್ಯಕ್ಷ ಸ್ಥಾನವನ್ನೂ ಪಡೆದಿದ್ದ ಬಿಎಸ್‌ಆರ್ ಕಾಂಗ್ರೆಸ್ ಪಕ್ಷದ ಸೋಮಶೇಖರ ರೆಡ್ಡಿ, ಚುನಾವಣೆಯ ಕಾವು ಏರುತ್ತಿದ್ದರೂ ಸ್ಪರ್ಧೆಯ ಕುರಿತು ಅಂತಿಮ ನಿರ್ಧಾರ ಕೈಗೊಳ್ಳದಿರುವುದು ಈ ಪ್ರಶ್ನೆ ಹುಟ್ಟುಹಾಕಿದೆ.ಚುನಾವಣೆಯ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಇದೇ 10ರಂದು ಆರಂಭಗೊಳ್ಳಲಿರುವ ಹಿನ್ನೆಲೆಯಲ್ಲಿ, ಪಕ್ಷದ ಸಂಸ್ಥಾಪಕ ಬಿ.ಶ್ರೀರಾಮುಲು ಮಂಗಳವಾರ ಪಕ್ಷದ 124 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸ್ದ್ದಿದಾರೆ. ಆದರೆ, ಪಟ್ಟಿಯಲ್ಲಿ ಬಳ್ಳಾರಿ ನಗರ ಕ್ಷೇತ್ರದ ಅಭ್ಯರ್ಥಿಯ ಹೆಸರು ಇಲ್ಲದಿರುವುದು, ಸೋಮಶೇಖರ ರೆಡ್ಡಿ ಸ್ಪರ್ಧೆಗೆ ಸಂಬಂಧಿಸಿದ ಊಹಾಪೋಹಗಳಿಗೆ ಎಡೆಮಾಡಿಕೊಟ್ಟಿದೆ.ಕಳೆದ ಬಾರಿಯ ಚುನಾವಣೆಯಲ್ಲಿ ಜಿಲ್ಲೆಯ ಕಂಪ್ಲಿ ಕ್ಷೇತ್ರದಿಂದ ಬಿಜೆಪಿ ಮೂಲಕ ಸ್ಪರ್ಧಿಸಿ ಗೆದ್ದಿದ್ದ ಟಿ.ಎಚ್. ಸುರೇಶಬಾಬು ಇತ್ತೀಚೆಗಷ್ಟೇ ಶಾಸಕ ಸ್ಥಾನಕ್ಕೂ, ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ನೀಡಿ ಕಂಪ್ಲಿ ಕ್ಷೇತ್ರದಿಂದ ಬಿಎಸ್‌ಆರ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಪ್ರಕಟಿಸಿದ್ದಾರೆ.ಆದರೆ, ಇದುವರೆಗೂ ಸೋಮಶೇಖರ ರೆಡ್ಡಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವ ಹಾಗೂ ಬಳ್ಳಾರಿ ನಗರ ಕ್ಷೇತ್ರದಿಂದ ಸ್ಪರ್ಧಿಸುವ ಕುರಿತು ಪ್ರಸ್ತಾಪವನ್ನೇ ಮಾಡದಿರುವುದು, ಚುನಾವಣೆ ಸಮೀಪಿಸುತ್ತಿದ್ದರೂ ಪ್ರಚಾರ ಕಾರ್ಯ ಕೈಗೊಳ್ಳದಿರುವುದು ಪಕ್ಷವು ಈ ಕ್ಷೇತ್ರದಿಂದ ಬೇರೊಬ್ಬ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಸುಳಿವು ನೀಡಿದೆ.ಮಹಾನಗರ ಪಾಲಿಕೆ ಚುನಾವಣೆಯಲ್ಲಿ 35 ಸ್ಥಾನಗಳ ಪೈಕಿ ಬಿಎಸ್‌ಆರ್ ಕಾಂಗ್ರೆಸ್ ಕೇವಲ 6 ಸ್ಥಾನಗಳಲ್ಲಿ ಮಾತ್ರ ಜಯಿಸಿದ್ದು, ಕಾಂಗ್ರೆಸ್ ಪರ ಅಲೆ ಇರುವುದು ಈ ಹಿಂಜರಿತಕ್ಕೆ ಪ್ರಮುಖ ಕಾರಣ ಎಂದೂ ಹೇಳಲಾಗುತ್ತಿದೆ.ನಾಗೇಂದ್ರ ಸಹ ದೂರ: ತಮ್ಮ ಜತೆಗೇ ಗುರುತಿಸಿಕೊಂಡಿದ್ದ ಕೂಡ್ಲಿಗಿ ಶಾಸಕ ಬಿ.ನಾಗೇಂದ್ರ ಬಿಜೆಪಿ ತೊರೆದರೂ ಬಿಎಸ್‌ಆರ್ ಕಾಂಗ್ರೆಸ್ ಪಕ್ಷದಿಂದ ದೂರ ಸರಿದು, ಪಕ್ಷೇತರರಾಗಿ ಸ್ಪರ್ಧಿಸುವುದಾಗಿ ನಿರ್ಧರಿಸಿರುವುದರಿಂದ ಪಕ್ಷದ ಮುಖಂಡರಲ್ಲಿ ಚಿಂತೆ ಮೂಡಿಸಿದ್ದು, ಕೂಡ್ಲಿಗಿ ಕ್ಷೇತ್ರದಿಂದಲೂ ಬೇರೊಬ್ಬ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಅನಿವಾರ್ಯತೆಗೆ ಪಕ್ಷ ಒಳಗಾಗಿದೆ.ಶಿವಪ್ಪಗೂ ಸ್ಥಾನವಿಲ್ಲ: ಬಳ್ಳಾರಿ ಜಿಲ್ಲಾಧಿಕಾರಿಯಾಗಿದ್ದ ನಿವೃತ್ತ ಐಎಎಸ್ ಅಧಿಕಾರಿ ಬಿ.ಶಿವಪ್ಪ, ಆರು ತಿಂಗಳ ಹಿಂದೆಯೇ ಶ್ರೀರಾಮುಲು ನೇತೃತ್ವದ ಪಕ್ಷ ಸೇರಿಕೊಂಡು ಜಿಲ್ಲೆಯ ಸಿರುಗುಪ್ಪ ಕ್ಷೇತ್ರದಿಂದ ಸ್ಪರ್ಧಿಸಲು ಆಸಕ್ತಿ ತೋರಿದ್ದರು.

ಆದರೆ, ಅವರಿಗೂ ಟಿಕೆಟ್ ಘೋಷಿಸದಿರುವುದಕ್ಕೆ ಅವರ ಅನಾಸಕ್ತಿಯೇ ಕಾರಣ ಎಂದು ತಿಳಿದುಬಂದಿದೆ.

 

ಪ್ರತಿಕ್ರಿಯಿಸಿ (+)