ಸೋರಿಕೆ ತಡೆಯುವ ಕಸರತ್ತು

7

ಸೋರಿಕೆ ತಡೆಯುವ ಕಸರತ್ತು

Published:
Updated:

ಬಡತನ ನಿವಾರಣೆಯ ಪ್ರಯತ್ನವಾಗಿ ಸಾಮಾಜಿಕ ಭದ್ರತೆಯ ಯೋಜನೆಗಳನ್ನು ಕೇಂದ್ರ ಸರ್ಕಾರ ರೂಪಿಸಿ ಅನುಷ್ಠಾನಗೊಳಿಸುತ್ತಿದ್ದರೂ ದಾರಿದ್ರ್ಯ ನಿವಾರಣೆಯಲ್ಲಿ ಯಶಸ್ಸು ಸಿಕ್ಕಿಲ್ಲ. ಸಾಮಾಜಿಕ ಭದ್ರತೆಯ ಈ ಯೋಜನೆಗಳ ಜಾರಿಯಲ್ಲಿ ಸರ್ಕಾರದ ಸೌಲಭ್ಯಗಳು ಮಧ್ಯದಲ್ಲಿ ಸೋರಿ ಹೋಗುತ್ತಿವೆ ಇಲ್ಲವೇ ಅನರ್ಹರ ಪಾಲಾಗುತ್ತಿವೆ.ಇದರಲ್ಲಿ ಭ್ರಷ್ಟ ನೌಕರಶಾಹಿಯೊಂದಿಗೆ ಜನಪ್ರತಿನಿಧಿಗಳೂ ಕೈ ಜೋಡಿಸಿರುವುದನ್ನು ಗಮನಿಸಿರುವ ಕೇಂದ್ರ ಸರ್ಕಾರ ಅರ್ಹ ಬಡವರಿಗೆ ಸಹಾಯಧನದ ಮೊತ್ತವನ್ನು ನೇರವಾಗಿ ತಲುಪಿಸಲು ಕ್ರಮ ಆರಂಭಿಸಿದೆ.ಅರ್ಹ ಫಲಾನುಭವಿಗಳು ಬ್ಯಾಂಕುಗಳಲ್ಲಿ ಖಾತೆಯನ್ನು ಹೊಂದುವುದಕ್ಕೆ ಮತ್ತು ಸರ್ಕಾರದ ಸಬ್ಸಿಡಿಯ ಹಣ ಅವರ ಖಾತೆಗೆ ನೇರವಾಗಿ ಸಂದಾಯವಾಗುವಂತೆ ಮಾಡುವುದು ಈ ಕ್ರಮ.

 

ಕಂಪ್ಯೂಟರ್ ತಾಂತ್ರಿಕತೆಯನ್ನು ಬಳಸಿಕೊಂಡು ಜಾರಿಗೊಳಿಸಲು ಉದ್ದೇಶಿಸಿದ ಈ ಕ್ರಮದಿಂದ, ಸರ್ಕಾರಕ್ಕೆ ಆಗುತ್ತಿರುವ ಸುಮಾರು ಒಂದು ಲಕ್ಷ ಕೋಟಿ ರೂಪಾಯಿ ಆಡಳಿತ ವೆಚ್ಚವನ್ನು ಉಳಿಸಬಹುದೆಂಬ ಸಾಧ್ಯತೆಯೇ ಈ ಕ್ರಮ ಎಷ್ಟು ಉಪಯೋಗಿ ಎಂಬುದನ್ನು ಸೂಚಿಸುತ್ತದೆ.ಫಲಾನುಭವಿಗಳ ವೈಯಕ್ತಿಕ ಖಾತೆಗೆ ನೇರವಾಗಿ ತಲುಪುವಂತೆ ರೂಪಿಸಿದ ಆಧುನಿಕ ತಂತ್ರಜ್ಞಾನ ಆಧಾರಿತ ವಿತರಣಾ ವ್ಯವಸ್ಥೆ, ಸರ್ಕಾರದ ಇನ್ನಿತರ ಸಹಾಯಧನದ ಯೋಜನೆಗಳಿಗೂ ವಿಸ್ತರಣೆಯಾಗುವುದರಿಂದ ಸೌಲಭ್ಯಗಳ ದುರುಪಯೋಗ ನಿವಾರಣೆಯಾಗಬಲ್ಲದು.ಗ್ರಾಮೀಣ ಬಡತನ ನಿವಾರಣೆಯಲ್ಲಿ ಮಹತ್ವದ್ದಾಗಿರುವಂತೆ ರೂಪಿಸಿದ ಉದ್ಯೋಗ ಖಾತರಿ ಯೋಜನೆಯ ಫಲಾನುಭವಿಗಳಿಗೆ ಅನ್ವಯಿಸಲು ಆರಂಭಿಸಿರುವುದು ಸೋರಿಕೆ ಮತ್ತು ಭ್ರಷ್ಟಾಚಾರ ತಡೆಯುವುದರಲ್ಲಿ ಸಹಕಾರಿಯಾಗುತ್ತದೆ.ಕೇಂದ್ರ ಸರ್ಕಾರ ರಸಗೊಬ್ಬರ, ಅಡುಗೆ ಅನಿಲ ಮತ್ತಿತರ ವಸ್ತುಗಳಿಗೆ ಕೊಡುತ್ತಿರುವ ಸಬ್ಸಿಡಿಯನ್ನು ಕೂಡ ಇದೇ ರೀತಿ ಫಲಾನುಭವಿಗಳಿಗೆ ನೀಡುವುದಕ್ಕೂ ಈ ಕ್ರಮ ವಿಸ್ತರಣೆಯಾಗುವುದರ ಪರಿಣಾಮವನ್ನು ಈಗಲೇ ಹೇಳಲಾಗದು.ಫಲಾನುಭವಿಗಳಿಗೆ ಸರ್ಕಾರದ ಸವಲತ್ತುಗಳು ನೇರವಾಗಿ ತಲುಪುವುದಕ್ಕೆ ತಂತ್ರಜ್ಞಾನವನ್ನು ಆಧರಿಸಿ ರೂಪಿಸಿದ ಈ ಕ್ರಮ ಸ್ವಾಗತಾರ್ಹವೇನೋ ಸರಿ. ಆದರೆ ಸಮಸ್ಯೆ ಇರುವುದು ಫಲಾನುಭವಿಗಳನ್ನು ಆಯ್ಕೆ ಮಾಡಿರುವ ರೀತಿಯಲ್ಲಿ.

 

ಸರ್ಕಾರ ಸಬ್ಸಿಡಿ ನೀಡುತ್ತದೆ ಎಂಬ ಕಾರಣಕ್ಕಾಗಿ ಲಕ್ಷಾಂತರ ಸಂಖ್ಯೆಯಲ್ಲಿ ನಕಲಿ ಪಡಿತರ ಚೀಟಿಗಳು ಸೃಷ್ಟಿಯಾಗಿವೆ. ಉದ್ಯೋಗ ಖಾತರಿ ಯೋಜನೆಯಲ್ಲಿ ನಕಲಿ ಜಾಬ್ ಕಾರ್ಡ್‌ಗಳನ್ನು ಸೃಷ್ಟಿಸಿ ಜನಪ್ರತಿನಿಧಿಗಳೂ, ಗುತ್ತಿಗೆದಾರರೂ ಸರ್ಕಾರಿ ನೌಕರರೂ ಹಣವನ್ನು ಕೊಳ್ಳೆ ಹೊಡೆದ ನೂರಾರು ಪ್ರಕರಣಗಳು ಕರ್ನಾಟಕ ರಾಜ್ಯವೊಂದರಲ್ಲಿಯೇ ಬಯಲಿಗೆ ಬಂದಿವೆ.ಹಿಂದೆ ಬಡತನ ನಿವಾರಣೆಯ ಯೋಜನೆಗಳಿಗೆ ನೀಡುವ ಹಣವನ್ನು ರಾಜ್ಯ ಸರ್ಕಾರಗಳು ಬೇರೆ ಉದ್ದೇಶಕ್ಕೆ ಬಳಸುತ್ತವೆ ಎಂದು ಗ್ರಾಮ ಪಂಚಾಯತ್‌ಗಳಿಗೆ ನೇರವಾಗಿ ಹಣವನ್ನು ಕಳುಹಿಸುವ ವ್ಯವಸ್ಥೆಯನ್ನು ಕೇಂದ್ರವು ಆರಂಭಿಸಿತ್ತು.ಅದರಿಂದಲೂ ಹಣದ ಸೋರಿಕೆ ಮತ್ತು ಸೌಲಭ್ಯಗಳ ದುರುಪಯೋಗ ತಪ್ಪಿಸಲಾಗುತ್ತಿಲ್ಲವೆಂದು ಈಗ ಫಲಾನುಭವಿಗಳಿಗೇ ನೇರವಾಗಿ ಹಣ ಕೊಡಲು ಮುಂದಾಗಿದೆ.

 

ಅಂದರೆ, ಬೇರುಮಟ್ಟಕ್ಕೂ ಇಳಿದ ಭ್ರಷ್ಟಾಚಾರವನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ ಎಂಬುದನ್ನು ಕೇಂದ್ರ ಸರ್ಕಾರವೇ ಒಪ್ಪಿಕೊಂಡಂತಾಗಿದೆ.ಭ್ರಷ್ಟರನ್ನು ಮಟ್ಟ ಹಾಕುವ ದಿಟ್ಟತನವನ್ನು ಸರ್ಕಾರ ತೋರದಿದ್ದರೆ ಈ ವ್ಯವಸ್ಥೆಯಲ್ಲಿಯೂ ತೂತು ಕೊರೆಯುವುದು ಭ್ರಷ್ಟರಿಗೆ ಕಷ್ಟವಲ್ಲ. ಅಷ್ಟಕ್ಕೂ ಫಲಾನುಭವಿಗಳ ಖಾತೆಗೆ ಹಣ ಹಾಕುವ ಬ್ಯಾಂಕಿಂಗ್ ಕ್ಷೇತ್ರ ಭ್ರಷ್ಟಾಚಾರ ಮುಕ್ತವೆಂದೇನೂ ಸಾಬೀತಾಗಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry