ಸೋರುತಿದೆ ಜ್ಞಾನದೇಗುಲ

7

ಸೋರುತಿದೆ ಜ್ಞಾನದೇಗುಲ

Published:
Updated:

ಮಳವಳ್ಳಿ: ಗ್ರಾಮದಲ್ಲಿರುವ ಬಹುತೇಕ ರಸ್ತೆ ಸಿಮೆಂಟ್‌ನಿಂದ ನಿರ್ಮಾಣಗೊಂಡಿವೆ. ಶಾಲೆಯಲ್ಲಿ ಉತ್ತಮ ಕಂಪ್ಯೂಟರ್ ವ್ಯವಸ್ಥೆ ಇದೆ. ಹಾಲು ಉತ್ಪಾದಕರ ಸಂಘ ಉತ್ತಮ ಸ್ಥಿತಿಯಲ್ಲಿದೆ. ಇವು ತಾಲ್ಲೂಕಿನ ಕಿರುಗಾವಲು ಹೋಬಳಿಯ ದುಗ್ಗನಹಳ್ಳಿ ಗ್ರಾಮದಲ್ಲಿ ಕಂಡು ಬರುವ ಅಂಶಗಳು.ಪಟ್ಟಣದಿಂದ 10 ಕಿ.ಮೀ.ದೂರದಲ್ಲಿ ದುಗ್ಗನಹಳ್ಳಿ ಗ್ರಾಮವಿದ್ದು, 3 ಸಾವಿರಕ್ಕೂ ಹೆಚ್ಚಿನ ಜನಸಂಖ್ಯೆಯಿದೆ. ಹಿಂದೆ ಕಿರುಗಾವಲು ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿತ್ತು. ಶಾಸಕಿಯಾಗಿದ್ದ ಎಂ.ಕೆ.ನಾಗಮಣಿ ನಾಗೇಗೌಡ ಅವರು, ಗ್ರಾಮವನ್ನು ಸುವರ್ಣ ಗ್ರಾಮಯೋಜನೆಯಡಿ ಅಳವಡಿಸಿದ್ದರಿಂದ ಬಹುತೇಕ ರಸ್ತೆಗಳು ಸಿಮೆಂಟ್‌ನಿಂದ ಕೂಡಿದ್ದು ಸ್ವಚ್ಚವಾಗಿವೆ.ಈ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಚಿಪುರ, ಮುದ್ದೇಗೌಡನದೊಡ್ಡಿ, ಹುಲ್ಲೇಗಾಲ, ಮಾದಹಳ್ಳಿ ಗ್ರಾಮಗಳು ಸೇರಿವೆ. ಎರಡು ವರ್ಷದಲ್ಲಿ ಮಹಾತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ಒಂದು ಕೋಟಿ ರೂಪಾಯಿ ಬಳಸಿಕೊಂಡು ಬಾಕ್ಸ್ ಚರಂಡಿ, ರಾಜೀವಗಾಂಧಿ ಸೇವಾ ಕೇಂದ್ರ ನಿರ್ಮಾಣ, ಕೆರೆ ಹೂಳೆತ್ತುವುದು ಸೇರಿದಂತೆ ಹಲವು ಕಾಮಗಾರಿ ಮಾಡಲಾಗಿದೆ.ಗ್ರಾಮದಲ್ಲಿ  ಪ್ರಾಥಮಿಕ ಆರೋಗ್ಯ ಕೇಂದ್ರ, ಪಶು ಆಸ್ಪತ್ರೆ, ಸರ್ಕಾರಿ ಪದವಿಪೂರ್ವ ಕಾಲೇಜು ಹಾಗೂ ಪ್ರೌಢಶಾಲೆ, ಅಂಚೆ ಕಚೇರಿ ಇದೆ. ಗ್ರಾಮದಲ್ಲಿ ಬ್ಯಾಂಕ್ ಪ್ರಾರಂಭವಾದರೆ ಇನ್ನೂ, ಹೆಚ್ಚಿನ ಅನುಕೂಲವಾಗುತ್ತದೆ ಎನ್ನುತ್ತಾರೆ ಗ್ರಾಮ ಪಂಚಾಯಿತಿ ಉಪಾದ್ಯಕ್ಷ ಶಿವನಂಜು. ಗ್ರಾಮದಲ್ಲಿ ಚರಂಡಿ ಹೂಳು ತುಂಬಿಕೊಂಡರೆ ಸದಸ್ಯೆರೆಲ್ಲರೂ ಸೇರಿ ಸ್ವಚ್ಚ ಗೊಳಿಸುತ್ತಾರೆ ಎನ್ನುತ್ತಾರೆ ಗ್ರಾಮದ ಮುಖಂಡ ನಾಗರಾಜು.ಪ್ರಾಥಮಿಕ ಶಾಲೆ ಕೊಠಡಿಗಳೆರಡು ಶಿಥಿಲಾವಸ್ಥೆಯಲ್ಲಿದ್ದು, ಅವುಗಳನ್ನು ಕೆಡವಿ, ಅಲ್ಲಿ ಹೊಸ ಕೊಠಡಿ ನಿರ್ಮಾಣ ಮಾಡಬೇಕು, ಕಂಪ್ಯೂಟರ್‌ವುಳ್ಳ ಕಟ್ಟಡವು ಅಲ್ಪ ಮಳೆ ಬಿದ್ದರೂ ಸೋರುತ್ತದೆ. ಅದನ್ನು ಸರಿಪಡಿಸಬೇಕು ಎಂಬುದು ವಿದ್ಯಾರ್ಥಿಗಳ ಆಶಯ.ಗ್ರಾಮದಲ್ಲಿ 35 ವರ್ಷಗಳ ಹಿಂದೆ ನಿರ್ಮಾಣ ಮಾಡಲು 30 ಗುಂಟೆ ವಿಸ್ತೀರ್ಣದಲ್ಲಿ ನಿವೇಶನಗಳನ್ನು ಗುರುತಿಸಿ, ಫಲಾನುಭವಿಗಳನ್ನು ಆಯ್ಕೆ ಮಾಡಿ ಹಕ್ಕುಪತ್ರ ವಿತರಿಸಲಾಗಿತ್ತು. ಆದರೆ ಅಲ್ಲಿ ಇಲ್ಲಿಯವರೆಗೂ ಮನೆಗಳ ನಿರ್ಮಾಣವಾಗಿಲ್ಲ. ಮನೆಗಳ ನಿರ್ಮಾಣ ಮಾಡಿಕೊಡುವ ಕೆಲಸ ಆಗಬೇಕಿದೆ ಎನ್ನುವುದು ಫಲಾನುಭವಿಗಳ ಆಗ್ರಹ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry