ಸೋರುತ್ತಿದೆ ಯುದ್ಧ ನೌಕೆ..

ಗುರುವಾರ , ಮೇ 23, 2019
31 °C

ಫಲಿತಾಂಶ (ಮುನ್ನಡೆ+ಗೆಲುವು) 0/542LIVE

ಸೋರುತ್ತಿದೆ ಯುದ್ಧ ನೌಕೆ..

Published:
Updated:

ಕಾರವಾರ: ಏಷ್ಯಾದಲ್ಲೇ ದೊಡ್ಡದಾಗಿರುವ ನೌಕಾನೆಲೆ ಇಲ್ಲಿ ಸ್ಥಾಪಿಸಿರುವ ಹಿನ್ನೆಲೆಯಲ್ಲಿ ನಗರದ ರವೀಂದ್ರನಾಥ ಟ್ಯಾಗೋರ ಕಡಲತೀರದಲ್ಲಿ ಯುದ್ಧನೌಕೆ ಸಂಗ್ರಹಾಲಯ ಸ್ಥಾಪಿಸಲಾಗಿದೆ. ಆದರೆ, ನಿರ್ವಹಣೆ ಸಮಸ್ಯೆಯಿಂದಾಗಿ ಯುದ್ಧ ನೌಕೆಯ ಕೆಲವು ಭಾಗಗಳು ಶಿಥಿಲಾವಸ್ಥೆ ತಲುಪಿದೆ.ಇದು ಯುದ್ಧನೌಕೆ ಮಾದರಿ ಸಂಗ್ರಹಾಲಯವಲ್ಲ. ಸೇವೆಯಿಂದ ನಿವೃತ್ತಿ ಹೊಂದಿರುವ ನೌಕೆಯನ್ನೇ ತಂದು ಸಂಗ್ರಹಾಲಯವನ್ನಾಗಿ ಮಾಡಲಾಗಿದೆ. ದೇಶದ ಮುಂಬೈ, ಕೇರಳ ಬಿಟ್ಟರೆ ಯುದ್ಧನೌಕೆ ಇರುವುದು ಕಾರವಾರದಲ್ಲಿ ಮಾತ್ರ!ಕಾರವಾರದ ಟ್ಯಾಗೋರ ಕಡಲತೀರದಲ್ಲಿರುವ `ಐಎನ್‌ಎಸ್ ಚಪಲ್~ ಯುದ್ಧನೌಕೆ  1976 ದೇಶ ಸೇವೆಗೆ ಸೇರ್ಪಡೆಗೊಂಡಿತ್ತು. 24 ವರ್ಷಗಳ ಕಾಲ ದೇಶದ ಸಮುದ್ರ ಗಡಿಯಲ್ಲಿ ಗಸ್ತು ನಡೆಸಿದ ನೌಕೆ 2005ರ ಮೇನಲ್ಲಿ ಸೇವೆಯಿಂದ ನಿವೃತ್ತಿ ಹೊಂದಿತು.ದೇಶದ ಪ್ರತಿಷ್ಠಿತ ನೌಕಾನೆಲೆ ಯೋಜನೆ ನಿರ್ಮಾಣ ಆಗುತ್ತಿರುವ ಹಿನ್ನೆಲೆಯಲ್ಲಿ ಇಲ್ಲಿ ಯುದ್ಧನೌಕೆ ಸಂಗ್ರಹಾಲಯ ನಿರ್ಮಿಸಲು ರಕ್ಷಣಾ ಇಲಾಖೆ ಐಎನ್‌ಎಸ್ ಚಪಲ್ ಯುದ್ಧನೌಕೆಯನ್ನು ಜಿಲ್ಲಾಡಳಿತಕ್ಕೆ ಹಸ್ತಾಂತರಿತು. 2006ರ ನ. 7ರಂದು ಈ ಯುದ್ಧನೌಕೆಯನ್ನು ಟ್ಯಾಗೋರ ಕಡಲತೀರಕ್ಕೆ ತಂದು ಸಂಗ್ರಹಾಲಯವನ್ನಾಗಿ ಮಾಡಲಾಯಿತು.ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿರುವ ಬಾಲಭವನ ಸಮಿತಿ ಯುದ್ಧನೌಕೆಯ ನಿರ್ವಹಣೆ ಜವಾಬ್ದಾರಿ ಹೊತ್ತುಕೊಂಡಿತು. ಯುದ್ಧನೌಕೆ ನಿರ್ವಹಣೆಗೆ ಬಾಲಭವನ ಸಮಿತಿ  ತೋರಿದ ನಿರ್ಲಕ್ಷ್ಯದಿಂದಾಗಿ ಇಡೀ ಯುದ್ಧ ನೌಕೆ ತುಕ್ಕು ಹಿಡಿಲಾರಂಭಿಸಿದೆ.ಸುಮಾರು 39.6 ಮೀಟರ್ ಉದ್ದವಿರುವ 270 ಟನ್ ಭಾರದ ಈ ನೌಕೆಯ ಎಲ್ಲ ಮೂಲೆಗಳು ಸೋರುತ್ತಿವೆ. ನೀರಿನ ಹನಿ ಬೀಳುತ್ತಿರುವುದರಿಂದ ಎಂಜಿನ್, ಕಂಟ್ರೋಲ್, ರಡಾರ್ ರೂಂ, ಅಡುಗೆ ಮನೆ, ಕಮಾಂಡರ್ ಕೊಠಡಿ ಹೀಗೆ ನೌಕೆಯಲ್ಲಿರುವ ಎಲ್ಲ ಭಾಗದಲ್ಲಿರುವ ಉಪಕರಣಗಳು ತುಕ್ಕು ಹಿಡಿಯುತ್ತಿವೆ.ಬಾಲಭವನ ಸಮಿತಿಯಲ್ಲಿ ಅನುದಾನದ ಕೊರತೆ ಇರುವುದರಿಂದ ಯುದ್ಧನೌಕೆ ಸಂಗ್ರಹಾಲಯದ ನಿರ್ವಹಣೆಯನ್ನು ಜು. 12ರಂದು ನಗರಭೆಗೆ ಹಸ್ತಾಂತರ ಮಾಡಲಾಗಿದೆ. ಸದ್ಯ ನಗರಸಭೆ ನೀಡಿದ ಹಣದಿಂದ ಯುದ್ಧನೌಕೆ ಮೇಲೆ ದೊಡ್ಡ ಪ್ಲಾಸ್ಟಿಕ್ ಹೊದಿಕೆ ಹಾಕಲಾಗಿದ್ದು ಕೆಲವು ಭಾಗದಲ್ಲಿ ಸೋರುವುದು ನಿಂತಿದೆ.ಯುದ್ಧನೌಕೆ ಸಂಗ್ರಹಾಲಯ ವೀಕ್ಷಣೆ ಮಾಡುವವರು ಟಿಕೆಟ್ ಪಡೆಯಬೇಕು. ಆರು ವರ್ಷದ ಅವಧಿಯಲ್ಲಿ ಅಂದಾಜು ರೂ. 25 ಲಕ್ಷ ರೂಪಾಯಿ ಟಿಕೆಟ್‌ನಿಂದ ಸಂಗ್ರಹವಾಗಿದೆ. ಬಲ್ಬ್, ಗಾರ್ಡ್‌ನ ಸ್ವಚ್ಛ ಮಾಡುವುದು ಹೀಗೆ ಸಣ್ಣಪುಟ್ಟ ಖರ್ಚು ಮತ್ತು ಸಿಬ್ಬಂದಿ ವೇತನ ಹೊರತುಪಡಿಸಿದರೆ ಬೇರೆ ಯಾವ ಕೆಲಸಕ್ಕೂ ಹಣ ಖರ್ಚು ಮಾಡಿಲ್ಲ. ಇಷ್ಟರಲ್ಲೇ ಹಣ ಖರ್ಚಾಗಿದೆ!ಯುದ್ಧನೌಕೆ ಸಂಗ್ರಹಾಲಯದಲ್ಲಿ ಆರಂಭದಲ್ಲಿ ಭಾರತ ಮತ್ತು ಪಾಕಿಸ್ತಾನದ ಮಧ್ಯೆ 1971ರಲ್ಲಿ ನಡೆದ ಯುದ್ಧಕ್ಕೆ ಸಂಬಂಧಿಸಿದ ಕಿರುಚಿತ್ರವೊಂದನ್ನು ತೋರಿಸಲಾಗುತ್ತದೆ. ಈ ಚಿತ್ರ ತೋರಿಸುವ ಪ್ರಾಜೆಕ್ಟರ್ ಕೆಟ್ಟು ನಾಲ್ಕು ತಿಂಗಳು ಕಳೆದರೂ ಅದನ್ನು ದುರಸ್ತಿ ಮಾಡಿಲ್ಲ.ನಾಲ್ಕು ದಶಕಗಳ ಹಿಂದೆಯೇ ಈ ಯುದ್ಧನೌಕೆ ನಿರ್ಮಾಣವಾಗಿದ್ದರೂ ಅತ್ಯಾಧುನಿಕ ತಂತ್ರಜ್ಞಾನ ಹೊಂದಿದೆ. ಮೆಕ್ಯಾನಿಕಲ್, ಎಲೆಕ್ಟ್ರಿಕಲ್ ಓದುತ್ತಿರುವ ಎಂಜಿನಿಯರಿಂಗ್ ಪಾಲಿಟೆಕ್ನಿಕ್ ವಿದ್ಯಾರ್ಥಿಗಳಿಗೆ ಈ ನೌಕೆ ಅಧ್ಯಯನದ ವಸ್ತುವೂ ಆಗಿದೆ. ಆದರೆ, ನಿರ್ವಹಣೆ ಸಮಸ್ಯೆ ಯುದ್ಧನೌಕೆಯನ್ನು ಕಾಡುತ್ತಿದೆ.“ಯುದ್ಧನೌಕೆ ಇದೇ ಎಂದು ತುಂಬಾ ಆಸಕ್ತಿಯಿಂದ ನೋಡಲು ಬಂದಿದ್ದೇವೆ. ಆದರೆ, ನೌಕೆಯ ಮೇಲೆ ಪ್ಲಾಸ್ಟಿಕ್ ಹೊದಿಕೆ ಹಾಕಲಾಗಿದ್ದು ನೌಕೆಯ ಮೇಲ್ಭಾಗವನ್ನು ಸರಿಯಾಗಿ ನೋಡಲು ಸಾಧ್ಯವಾಗಿಲ್ಲ” ಎಂದು ಯುದ್ಧನೌಕೆ ನೋಡಲು ಬಂದ ಎಸ್. ದಿನೇಶ ಹೇಳಿದರು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry