ಭಾನುವಾರ, ನವೆಂಬರ್ 17, 2019
29 °C

ಸೋರುತ್ತಿರುವ ವರಲಕ್ಷ್ಮಿ ದೇಗುಲ

Published:
Updated:

ಯಳಂದೂರು: ತಾಲ್ಲೂಕಿನ ಮದ್ದೂರು ಗ್ರಾಮದ ಬಳಿ ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಒಳಪಡುವ      ವರಲಕ್ಷ್ಮಿ ದೇಗುಲವು ಶಿಥಿಲವಾಗಿದೆ.ಸುಮಾರು 250 ವರ್ಷಕ್ಕೂ ಹಳೆಯದಾದ ಈ ದೇಗುಲದ ಪಕ್ಕದಲ್ಲೇ ಬೂದಿತಿಟ್ಟು ಗ್ರಾಮದ ವ್ಯಾಪ್ತಿಗೆ ಸೇರಿರುವ  ಮಹಾದೇಶ್ವರ ದೇಗುಲವಿದೆ. ಆದರೆ ಇದು ನವೀಕರಣಗೊಂಡು ಕಂಗೊಳಿಸುತ್ತಿದ್ದರೆ ಪಕ್ಕದಲ್ಲಿರುವ ಲಕ್ಷ್ಮೀ ದೇಗುಲದ ಗೋಡೆಗಳ ಮೇಲೆ ಗಿಡಕಂಟಿಗಳು ಬೆಳೆದಿವೆ. ಮೇಲ್ಛಾವಣಿಯಲ್ಲಿ ನೀರು ಒಸರು ತ್ತಿದೆ. ಶಿಥಿಲವಾಗಿರುವ ಈ ದೇಗುಲದ ಬಗ್ಗೆ ಇಲಾಖೆ ನಿರ್ಲಕ್ಷ್ಯ ವಹಿಸಿದೆ ಎಂಬುದು ಗ್ರಾಮದ ಮಂಜುನಾಥ  ದೂರು.ವರಮಹಾಲಕ್ಷ್ಮಿ ಹಬ್ಬದಂದು ಇಲ್ಲಿ ರಥೋತ್ಸವ ಹಾಗೂ ಉತ್ಸವ ಮೂರ್ತಿ ಮೆರವಣಿಗೆ ನಡೆಯುತ್ತಿತ್ತು ಆದರೆ ಕಳೆದ ಆರು ವರ್ಷಗಳಿಂದ ಇದನ್ನೂ ಕೂಡ ನಿಲ್ಲಿಸಲಾಗಿದೆ. ಅಂದು ಕೇವಲ ದೇವರ ಚಿನ್ನಾಭರಣಗಳನ್ನು ಹಾಕಿ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಸುವರ್ಣಾವತಿ ನದಿಯ ದಡದಲ್ಲಿರುವ ಈ ದೇಗುಲ ಸುಂದರ ಪರಿಸರವನ್ನೂ ಹೊಂದಿದೆ. ಪಕ್ಕದಲ್ಲೇ ಇತ್ತೀಚೆಗೆ ಸೇತುವೆಯನ್ನು ನಿರ್ಮಿಸಲಾಗಿದ್ದರೂ ಇದಕ್ಕೆ ಮದ್ದೂರಿನಿಂದ ಸಂಪರ್ಕ ಕಲ್ಪಿಸುವ ರಸ್ತೆ ನಿರ್ಮಾಣವಾಗಿಲ್ಲ. ಶಿವ ಹಾಗೂ ಲಕ್ಷ್ಮಿಯ ದೇಗುಲ ಒಂದೇ ಕಡೆ ಇರುವುದು ಅಪರೂಪವಾಗಿದ್ದು ಇಲ್ಲಿ ಅವೆರಡೂ ಜೊತೆಯಲ್ಲಿವೆ. ಆದರೆ ಬೂದಿತಿಟ್ಟು ಗ್ರಾಮಕ್ಕೆ ಸೇರಿರುವ ಮಹಾದೇಶ್ವರ ದೇಗುಲವನ್ನು ಗ್ರಾಮಸ್ಥರು ನವೀಕರಣಗೊಳಿಸಿದ್ದಾರೆ.ಲಕ್ಷ್ಮಿ ದೇಗುಲದ ಹೆಸರಿನಲ್ಲಿ 1.34 ಎಕರೆ ಜಮೀನು ಸಹ ಇದೆ. ವಾರ್ಷಿಕವಾಗಿ ಇದರಿಂದ ಬರುವ ಬೆಳೆಯ ಆದಾಯದಲ್ಲಿ ಇಲ್ಲಿನ ಅರ್ಚಕರಿಗೆ ಎರಡು ಸಾವಿರ ರೂಪಾಯಿಗಳನ್ನು ಕೊಡಲಾಗುತ್ತಿದೆ. ಇದನ್ನು ಹೊರತುಪಡಿಸಿ ವರ್ಷಕ್ಕೆ ಒಂದು ಸಾವಿರ ರೂಪಾಯಿ ಮಾತ್ರ ಸಂಬಳ ನೀಡಲಾಗುತ್ತಿದೆ.ಇತಿಹಾಸದ ಕುರುಹಗಳಾದ ಐತಿಹಾಸಿಕ ದೇಗುಲಗಳನ್ನು ರಕ್ಷಿಸುವ ಜವಾಬ್ದಾರಿಯನ್ನು ಹೊತ್ತಿರುವ ಮುಜರಾಯಿ ಇಲಾಖೆ ಇದರ ಬಗ್ಗೆ ಈಗಲಾದರೂ ಗಮನ ಹರಿಸಿ ಪ್ರಾಚೀನ ಸ್ಮಾರಕವನ್ನು ರಕ್ಷಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಿ ಎಂಬುದು ಗ್ರಾಮಸ್ಥರ  ಆಗ್ರಹವಾಗಿದೆ.

ಪ್ರತಿಕ್ರಿಯಿಸಿ (+)