ಮಂಗಳವಾರ, ನವೆಂಬರ್ 12, 2019
28 °C

ಸೋರುವ ತಾರಸಿಗೆ `ರಾಸಾಯನಿಕ'

Published:
Updated:
ಸೋರುವ ತಾರಸಿಗೆ `ರಾಸಾಯನಿಕ'

ಸುಡುವ ಬೇಸಿಗೆಯ ದಿನಗಳ ಮುಗಿಯುತ್ತಿದ್ದಂತೆಯೇ ಮುಂಗಾರು ಕಾಲಿಡಲಿದೆ. ಮಳೆಗಾಲ ಹತ್ತಿರವಾಗುತ್ತಿದ್ದಂತೆಯೇ ಹಳೆಯ ಮನೆಗಳನ್ನು ರಿಪೇರಿ ಮಾಡಿಸುವ, ನಿರ್ಮಾಣ ಹಂತದ ಕಟ್ಟಡಗಳನ್ನು ತರಾತುರಿಯಲ್ಲಿ ಪೂರ್ಣಗೊಳಿಸುವ ಚಟುವಟಿಕೆ ಎಲ್ಲೆಲ್ಲೂ ಕಂಡು ಬರುತ್ತದೆ.ಹೀಗೆ ತರಾತುರಿಯಲ್ಲಿ ಕೆಲಸ ಪೂರ್ಣಗೊಳಿಸಿದರೆ ಕಟ್ಟಡಗಳಲ್ಲಿ ಅದರಲ್ಲೂ ಕಳಪೆ ಗುಣಮಟ್ಟದ ಮರಳನ್ನು ಬಳಸಿದ ಕಾಂಕ್ರೀಟ್ ಮನೆಗಳು ಐದರಿಂದ ಆರು ತಿಂಗಳಲ್ಲೇ, ಸೋರುವುದು, ಮೇಲ್ಮೈ ಬಿರುಕು ಬಿಡುವುದು ಮೊದಲಾದ ಸಮಸ್ಯೆಗಳಿಗೆ ತುತ್ತಾಗುತ್ತವೆ.ತಾರಸಿ (ಟೆರೇಸ್), ಬಾತ್‌ರೂಂ ಕೆಳಭಾಗ ತೇವಾಂಶದಿಂದ ಸೋರುವುದು ಸೇರಿದಂತೆ ಗೋಡೆಗಳಲ್ಲಿ ಬಿರುಕು(ಏರ್‌ಕ್ರ್ಯಾಕ್ಸ್) ಮೂಡುತ್ತವೆ. ಇದರಿಂದ ನಿಧಾನವಾಗಿಯಾದರೂ ಕಟ್ಟಡಕ್ಕೆ ಹಾನಿಯಾಗುತ್ತವೆ. ಅಷ್ಟೇ ಅಲ್ಲ, ಮನೆಯಲ್ಲಿ ವಾಸ ಮಾಡುವವರಿಗೆ ಅತಿಥಿ, ಅಭ್ಯಾತರೆದುರು, ನೆರೆಮನೆಯವರ ಮುಂದೆ ಮುಜುಗರ ಅನುಭವಿಸಬೇಕಾದ ಪ್ರಸಂಗವೂ ಎದುರಾಗುತ್ತದೆ.ಈ ಮೇಲಿನ ಸಮಸ್ಯೆಗೆ ಪರಿಹಾರವಾಗಿ, ಮಾಲೀಕರು ಮನೆಯ ಗೋಡೆ, ತಾರಸಿಯಲ್ಲಿ ಹಾನಿಗೊಳಗಾದ ಭಾಗವನ್ನು ಒಡೆದು ಹಾಕಿ ಹೊಸದಾಗಿ ಕಾಂಕ್ರೀಟ್ ಭರ್ತಿ ಮಾಡಿಸುತ್ತಾರೆ. ಇನ್ನೂ ಬಾತ್‌ರೂಂ(ಸ್ನಾನದ ಮನೆ)ಗಳಲ್ಲಿ ಸಮಸ್ಯೆ ಕಂಡು ಬಂದರೆ ಗೋಡೆಗೆ ಅಂಟಿಸಿದ ಸುಂದರ ವಿನ್ಯಾಸದ ಟೈಲ್ಸ್‌ಗಳನ್ನೇ ಒಡೆದು ರಿಪೇರಿ ಮಾಡಿಸುತ್ತಾರೆ. ಇದರಿಂದ ಹೆಚ್ಚು ಹಣವೂ ವೆಚ್ಚವಾಗುತ್ತದೆ. ಮನೆಯ ಗೋಡೆ, ತಾರಸಿಗಳ ಗುಣಮಟ್ಟ, ಚೆಂದ ಎರಡೂ ಹಾಳಾಗುತ್ತದೆ.ಇಂಥ ಅನಗತ್ಯ ವೆಚ್ಚವನ್ನು ತಪ್ಪಿಸಲು ಒಂದು ಸಮರ್ಪಕ ಪರಿಹಾರವೂ ಇದೆ. ಅದುವೇ, ರಾಸಾಯನಿಕ ಬಳಕೆ. ಗುಣಮಟ್ಟದ ರಾಸಾಯನಿಕಗಳನ್ನು ಬಳಸಿ ಸೋರುವ ತಾರಸಿ, ಬಾತ್‌ರೂಂ ತಾರಸಿ ತೇವಾಂಶ ಹಾಗೂ ನೀರು ಕುಡಿದು ಬಣ್ಣಗೆಡುವ, ಬಿರುಕು ಬಿಡುವ ಗೋಡೆಗಳ ಸಮಸ್ಯೆಗಳಿಗೆ ಉತ್ತಮ ಪರಿಹಾರ ಕಂಡುಕೊಳ್ಳಬಹುದು.`ಮಲೆನಾಡು ಪ್ರದೇಶಗಳಲ್ಲೂ ಈ ರೀತಿಯ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತದೆ. ಅಲ್ಲಿ ಧಾರಾಕಾರ ಮಳೆ ಸುರಿಯುವುದರಿಂದ ತಾರಸಿ, ಗೋಡೆಗಳು ತೇವವಾಗುವುದು, ಬಣ್ಣ ಕಿತ್ತುಬರುವುದು ಸಾಮಾನ್ಯ.ಇತ್ತೀಚೆಗೆ ನಗರ ಪ್ರದೇಶಗಳಲ್ಲಿ ಅಪಾರ್ಟ್‌ಮೆಂಟ್, ಕಟ್ಟಡಗಳನ್ನು ಕಟ್ಟುವವರು ಫಿಲ್ಟರ್ ಮರಳನ್ನು ಹೆಚ್ಚಾಗಿ ಬಳಸುವುದರಿಂದ ಈ ಸಮಸ್ಯೆಗಳು ಹೆಚ್ಚಾಗಿ ಕಂಡು ಬರುತ್ತಿವೆ. ತಾರಸಿ, ಬಾತ್‌ರೂಂ ಸೇರಿದಂತೆ ಓವರ್‌ಹೆಡ್ ಟ್ಯಾಂಕ್‌ಗಳಲ್ಲೂ ತೇವಾಂಶದ ಸಮಸ್ಯೆ ಕಂಡು ಬರುತ್ತದೆ. ಇಂಥ ಸಮಸ್ಯೆಗಳಿಗೆ ಎಸ್‌ಬಿಆರ್, ಸೆಮ್‌ಸಿಲ್, ಬ್ರಶ್‌ಬಾಂಡ್ ಸೇರಿದಂತೆ 60ರಿಂದ 100 ಬಗೆಯ ರಾಸಾಯನಿಕ ಪದಾರ್ಥಗಳನ್ನು ಬಳಸಿ ಶಾಶ್ವತವಾಗಿ ಪರಿಹಾರ ಕಂಡುಕೊಳ್ಳಬಹುದು' ಎನ್ನುತ್ತಾರೆ ಬೆಂಗಳೂರಿನ ಲಗ್ಗೆರೆಯ ಸುಜಾ ವಾಟರ್ ಪ್ರೂಫಿಂಗ್ ಸಲ್ಯೂಷನ್ಸ್‌ನ ಅಶೋಕ್(ಮೊ: 99458 43699).`ತಾರಸಿಯಲ್ಲಿ ತೇವಾಂಶ ಸಂಗ್ರಹ, ನೀರು ನಿಂತು ತೊಟ್ಟಿಕ್ಕುವ ಸಮಸ್ಯೆ ಕಂಡು ಬಂದರೆ ಮೊದಲಿಗೆ ಆ ಭಾಗದಲ್ಲಿ ದೂಳು ತೆಗೆದು ನೀರಿನಿಂದ ಸ್ವಚ್ಛ ಮಾಡಬೇಕು. ಸಮಸ್ಯೆ ಇರುವ ಜಾಗಕ್ಕೆ ರಾಸಾಯನಿಕ ಪದಾರ್ಥಗಳನ್ನು ಭರ್ತಿ ಮಾಡಬೇಕು. ಈ ರೀತಿ ಎರಡು ಬಾರಿ ರಾಸಾಯನಿಕಗಳನ್ನು ಸೋರುವ ಅಥವಾ ತೇವಾಂಶ ಸಮಸ್ಯೆ ಇರುವ ಭಾಗಕ್ಕೆ ಮೆತ್ತಬೇಕು. ಇದಾದ ನಾಲ್ಕು ಗಂಟೆಗಳ ನಂತರ ಸಮಸ್ಯೆ ಕಂಡು ಬಂದ ಜಾಗದಲ್ಲಿ ಕಟ್ಟೆ ಕಟ್ಟಿ ಸ್ವಲ್ಪ ನೀರು ನಿಲ್ಲುವಂತೆ ಮಾಡಬೇಕು. ರಿಪೇರಿ ಮಾಡಿದ ನಂತರವೂ ನೀರು ಸೋರುತ್ತಿದೆಯೋ, ಇಲ್ಲವೋ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು' ಎನ್ನುವುದು ಅವರ ಕಿವಿಮಾತು.ಸ್ನಾನದ ಕೋಣೆಯಲ್ಲಿ ನೆಲದಲ್ಲಿ ನೀರು ಸೋರಿಕೆ ಆಗುವ, ಗೋಡೆಗಳಲ್ಲಿ ತೇವಾಂಶ ಸಂಗ್ರಹವಾಗುವ ಸಮಸ್ಯೆಗೂ ಪರಿಹಾರವಿದೆ. ಟೈಲ್ಸ್‌ಗಳನ್ನು ಅಂಟಿಸಲು ಮಧ್ಯೆ ಕಾಂಕ್ರೀಟ್ ಮಾಡಿದ ಜಾಗದಲ್ಲಿ ನೀರು ಬಿದ್ದು, ಕೆಳ ಮಹಡಿಯ ನಿವಾಸಿಗಳಿಗೆ ತೊಂದರೆಯಾಗುತ್ತದೆ. ಜತೆಗೆ ಕಟ್ಟಡಕ್ಕೂ ಹಾನಿಯಾಗುತ್ತದೆ. ಇಂಥ ಸಂದರ್ಭಗಳಲ್ಲಿ ಮಾಲೀಕರು ನೆಲಕ್ಕೆ ಹಾಸಿದ ಟೈಲ್ಸ್‌ಗಳನ್ನೇ ಒಡೆಸಿ ಹೊಸದಾಗಿ ನೆಲಹಾಸು ಹಾಕಿಸಿ ಕಾಂಕ್ರೀಟ್ ಮಾಡಿಸುತ್ತಾರೆ. ಇದರಿಂದ ಹೆಚ್ಚು ಹಣ ವ್ಯರ್ಥವಾಗುತ್ತದೆ. ಬದಲಿಗೆ ಮೊದಲಿದ್ದ ಟೈಲ್ಸ್‌ಗಳನ್ನೂ ಒಡೆಯದೆ ರಿಪೇರಿ ಸಾಧ್ಯವೇ ಪರಿಶಿಲಿಸಬೇಕು. ಎರಡು ಟೈಲ್ಸ್‌ಗಳ ನಡುವಿನ ಕಿರಿದಾದ ಜಾಗಕ್ಕೆ `ಸ್ಲರಿ ಗ್ರೌಟಿಂಗ್' ಭರ್ತಿ ಮಾಡಬೇಕು. ಆಗ ಆ ಜಾಗದಲ್ಲಿ ನೀರು ಸೋರಿಕೆ ಅಥವಾ ತೇವಾಂಶ ಸಂಗ್ರಹ ಸಮಸ್ಯೆ ಶಾಶತ್ವವಾಗಿ ಇಲ್ಲವಾಗುತ್ತದೆ' ಎನ್ನುತ್ತಾರೆ ಅಶೋಕ್.ತಾರಸಿ ಸೋರುವುದು, ಗೋಡೆ ಬಿರುಕು-ತೇವಾಂಶ ಸಮಸ್ಯೆಗಳಿಗೆ ಹೀಗೆ ಸುಲಭದಲ್ಲಿ ರಾಸಾಯನಿಕ ಬಳಕೆ ವಿಧಾನದಲ್ಲಿ ಪರಿಹಾರ ಒದಗಿಸುವ ಸಂಜನಾ, ಐಕಾನ್, ಸಿಲಿಕಾನ್ ಮೊದಲಾದ ಹತ್ತಾರು ವಾಟರ್ ಪ್ರೂಫಿಂಗ್ ಸಲ್ಯೂಷನ್ಸ್ ಕಂಪೆನಿಗಳು ಬೆಂಗಳೂರಿನಲ್ಲಿವೆ ಎನ್ನುತ್ತಾರೆ.ತಾರಸಿ, ಬಾತ್‌ರೂಂ ಅಲ್ಲದೇ ಸಂಪ್‌ಗಳಲ್ಲೂ ನೀರು ಸೋರುವ ಸಮಸ್ಯೆ ಕಂಡು ಬರುತ್ತದೆ. ಓವರ್‌ಹೆಡ್ ಟ್ಯಾಂಕ್ ಮತ್ತು ಸಂಪ್‌ಗಳಿಗೆ ಇಡೀ ರಾತ್ರಿ ನೀರು ಭರ್ತಿ ಮಾಡಿದ್ದರೂ ಬೆಳಿಗ್ಗೆಎದ್ದು ನೋಡಿದರೆ ಬಹಳಷ್ಟು ನೀರು ಖಾಲಿಯಾಗಿರುತ್ತದೆ. ಕಾರಣ ಸಣ್ಣದಾಗಿಯೇ ಆದರೂ ಸೋರುವಿಕೆ ಸಮಸ್ಯೆ ಅಲ್ಲಿರುತ್ತದೆ. ಇಲ್ಲವೇ ತೇವಾಂಶ ಸಮಸ್ಯೆಯಾದರೂ ಇರುತ್ತದೆ.ಇದಕ್ಕೆ ತಕ್ಷಣದ ಪರಿಹಾರವಾಗಿ ಮನೆ ಮಾಲೀಕರೇ ಹೊಸದಾಗಿ ಗಾರೆ ಮಾಡಿಸುತ್ತಾರೆ. ಇದು ಸರಿಯಾದ ಪರಿಹಾರವಲ್ಲ, ಹಣವೂ ವ್ಯರ್ಥ.

ಇದಕ್ಕೆ ಬದಲಾಗಿ ತೇವಾಂಶ ಕಂಡುಬಂದ ಜಾಗದಲ್ಲಿ `ಜಿಯೊಫ್ಯಾಬ್ರಿಕ್ ಕೆಮಿಕಲ್' ಲೇಪಿಸುವ ಮೂಲಕ ಕಡಿಮೆ ವೆಚ್ಚದಲ್ಲಿ ಸಂಪ್ ಸೋರಿಕೆ ತಡೆಗಟ್ಟಬಹುದು. ಹಾಗೆಯೇ ಗೋಡೆಗಳಲ್ಲಿ ಬಿರುಕು ಕಂಡು ಬಂದರೆ `ಡೈ ಕಟ್ಟಿಂಗ್' ಯಂತ್ರದ ಮೂಲಕ ವಿವಿಧ ರಾಸಾಯನಿಕಗಳನ್ನು ಮಿಶ್ರ ಮಾಡಿ ಬಿರುಕು ಬಿಟ್ಟ ಜಾಗಕ್ಕೆ ಮೆತ್ತಿಸುವ ಮೂಲಕ ಸಮಸ್ಯೆಗೆ ಉತ್ತಮ ಪರಿಹಾರ ಕಂಡುಕೊಳ್ಳಬಹುದು.`ಸಾಲ ಮಾಡಿ, ಲಕ್ಷಾತರ ರೂಪಾಯಿ ವೆಚ್ಚ ಮಾಡಿ ಕಟ್ಟಿದ ಮನೆಗಳಲ್ಲಿ ತಾರಸಿ ಸೋರದಂತೆ, ಗೋಡೆ ಬಿರುಕು ಬಿಡದಂತೆ, ಕಟ್ಟಡ ಭದ್ರವಾಗಿ  ದೀರ್ಘ ಕಾಲ ಬಾಳಿಕೆ ಬರುವಂತೆ ನೋಡಿಕೊಳ್ಳಲು ಅನೇಕ ರಾಸಾಯನಿಕ ಪದಾರ್ಥಗಳಿವೆ. `ಸೆಮ್‌ಸಿಲ್ ಫ್ಲೆಕ್ಸಿ' ರಾಸಾಯನಿಕ ಬಳಸುವುದರಿಂದ ಗೋಡೆಯ ಹೊರಭಾಗದಲ್ಲಿ ಬಿರುಕು ಮೂಡದಂತೆ ತಡೆಯಬಹುದು. ಇದು ಸಮಸ್ಯೆ ಕಾಣಿಸಿಕೊಳ್ಳುವುದಕ್ಕೂ ಮುನ್ನವೇ ತೆಗೆದುಕೊಳ್ಳುವ ಮುಂಜಾಗ್ರತೆ ಕ್ರಮ.

ಅಲ್ಲದೆ, ಈ ಕ್ರಮದಿಂದಾಗಿ ಮನೆಯ ಮೇಲೆ ಬೀಳುವ ಸೂರ್ಯನ ಬಿರುಬಿಸಿಲ ತಾಪದಲ್ಲಿ  ಕೆಲವಂಶವಾದರೂ (ಶೇ 5ರಿಂದ 8ಡಿಗ್ರಿ ಸೆಲ್ಸಿಯಸ್) ಕಡಿಮೆಯಾಗುವಂತೆ ಮಾಡಬಹುದು. ಆ ಮೂಲಕ ಮನೆಯ ಒಳಗಿನ ಭಾಗವನ್ನು ತಂಪಾಗಿರುವಂತೆಯೂ ಮಾಡಬಹುದು ಎನ್ನುವುದು ಅಶೋಕ್ ಅವರ ದೀರ್ಘಕಾಲದ ವೃತ್ತಿಯ ಅನುಭವದ ಮಾತು.30x40 ಅಡಿ ಉದ್ದ-ಅಗಲದ ಮನೆಯ ತಾರಸಿಯಲ್ಲಿ ಕಂಡುಬರುವ  ನೀರು ಸೋರಿಕೆ ಸಮಸ್ಯೆಗೆ ಹೊಸದಾಗಿ ಸಿಮೆಂಟ್ ಮಾಡಿಸುವ ಬದಲು ರಾಸಾಯನಿಕ ಬಳಕೆ ಮೂಲಕ ಪರಿಹಾರ ಕಂಡುಕೊಂಡರೆ ಒಟ್ಟು ರಿಪೇರಿ ವೆಚ್ಚದಲ್ಲಿ ಕನಿಷ್ಠ ಶೇ 70ರಷ್ಟು ಹಣವಾದರೂ ಉಳಿತಾಯವಾಗುತ್ತದೆ. ಈ ವಿಧಾನ ಹೊಸದೇನೂ ಅಲ್ಲ. ಆದರೆ ಈ ಬಗ್ಗೆ ಜನರಿಗೆ ಹೆಚ್ಚಿನ ಮಾಹಿತಿ ಇಲ್ಲ' ಎನ್ನುತ್ತಾರೆ ಅಶೋಕ್.

ಪ್ರತಿಕ್ರಿಯಿಸಿ (+)