ಸೋರುವ ಸೂರು, `ಏಕಲವ್ಯ'ರು...

7

ಸೋರುವ ಸೂರು, `ಏಕಲವ್ಯ'ರು...

Published:
Updated:
ಸೋರುವ ಸೂರು, `ಏಕಲವ್ಯ'ರು...

ಇಲ್ಲಿ ಮಳೆ ಬಂದರೂ ಚಿಂತೆ ಬಾರದಿದ್ದರೂ ಚಿಂತೆ. ಇದು 1984ರಲ್ಲಿ ನಿರ್ಮಾಣ ಗೊಂಡ ಗುಲ್ಬರ್ಗ ಚಂದ್ರಶೇಖರ ಪಾಟೀಲ ಬ್ಯಾಂಡ್ಮಿಂಟನ್ ಒಳಾಂಗಣ ಕ್ರೀಡಾಂಗಣದ ಕತೆ. ರಾಜ್ಯದಲ್ಲಿ ಎರಡನೇ ಅತಿ ದೊಡ್ಡ ಕ್ರೀಡಾಸಮುಚ್ಛಯ ಎಂಬ ಖ್ಯಾತಿಗೆ ಪಾತ್ರವಾದ ಇಲ್ಲಿ ಅಥ್ಲೆಟಿಕ್ ಟ್ರ್ಯಾಕ್, ಟೆನಿಸ್ ಕ್ರಿಡಾಂಗಣ, ಬ್ಯಾಡ್ಮಿಂಟನ್ ಒಳಾಂಗಣ, ಕಬಡ್ಡಿ,  ವಾಲಿಬಾಲ್, ಹಾಕಿ ಸೇರಿದಂತೆ ಬಹುತೇಕ ಎಲ್ಲ ಕ್ರೀಡೆಗಳಿಗೂ ಜಾಗ ಮೀಸಲಿದೆ. ಒಂದೇ ಪ್ರದೇಶದಲ್ಲಿ ಹೀಗೆ ಹಲವು ಕ್ರೀಡೆಗಳಿಗೆ ನೆಲೆ ಸಿಕ್ಕಿರುವುದೊಂದು ವಿಶೇಷವೇ ಹೌದು.ಈ ಪೈಕಿ ಆರು ಅಂಕಣಗಳನ್ನು ಹೊಂದಿದ  ಬ್ಯಾಡ್ಮಿಂಟನ್ ಒಳಾಂಗಣ ಕ್ರೀಡಾಂಗಣದ ಪಾಡು ಹೇಳತೀರದು. ಇದರ ಸೂರು ಸೋರುತ್ತಿದೆ. ಮಳೆ ಬಂದರೆ ಇನ್ನಿಲ್ಲದ ಚಿಂತೆ.  ಇನ್ನೊಂದೆಡೆ ನೀರಿಗೆ ಓವರ್‌ಹೆಡ್ ಟ್ಯಾಂಕ್ ಇಲ್ಲ. ಹೀಗಾಗಿ ಮಳೆ ಬಾರದಿದ್ದರೂ ನೀರು ಸಂಗ್ರಹಕ್ಕೆ ತೊಂದರೆ.ಮಳೆ ಬಂದಾಗ ಸೂರು ಸೋರುವ ಕಾರಣ ಅಂಕಣಕ್ಕೆ ಹಾಸಲಾದ ಮರ ಮೆದುವಾಗಿ ಕೆಲವೆಡೆ ಸೀಳು ಬಿಡುವ ಅಪಾಯವಿದೆ. ಕ್ರೀಡಾಪಟುಗಳು ಅಂಕಣದೊಳಗೆ ನೀರು- ಗಲೀಜು ಹರಿಯದಂತೆ ಕಸರತ್ತು ನಡೆಸುವುದು ಸಾಮಾನ್ಯ ದೃಶ್ಯ. ನೀರು ಸಂಗ್ರಹಗಾರ ಇಲ್ಲದ ಕಾರಣ ಕೆಳಗೆ ಸಿಂಟೆಕ್ಸ್ ಟ್ಯಾಂಕ್‌ನಲ್ಲಿ ನೀರು ತುಂಬಿಡುತ್ತಾರೆ.ಈ ನೀರು ತುಂಬಿ ಚೆಲ್ಲುವ ಮತ್ತು ಶೌಚಾಲಯಗಳಿಗೆ ನೀರು ಕೊಂಡೊಯ್ಯುವಾಗ ನೀರು ಬಿದ್ದು ಅಂಕಣ ಹಾಳಾಗುತ್ತಿದೆ. ನೀರಿನ ಕೊರತೆಯಿಂದ ಶೌಚಾಲಯದಿಂದ ವಾಕರಿಕೆ ಬರುವ ವಾಸನೆ ಬಡಿಯುತ್ತದೆ.

ಆರು ಅಂಕಣ ಹೊಂದಿದ ಈ ಒಳಾಂಗಣಕ್ಕೆ ಸಮರ್ಪಕ ಬೆಳಕಿನ ವ್ಯವಸ್ಥೆಯೇ ಇಲ್ಲ. ಇದರಿಂದ ಸಂಜೆ ಆಟಗಾರರಿಗೆ ಅಭ್ಯಾಸ ನಡೆಸುವುದೂ ಅಸಾಧ್ಯವಾಗಿದೆ.ಕೈ ಕೊಡುತ್ತಿರುವ ವಿದ್ಯುತ್‌ಗೆ ಪರ್ಯಾಯ  ವ್ಯವಸ್ಥೆಯೂ ಇಲ್ಲ. ಹೀಗಾಗಿ ವಿದ್ಯುತ್ ಹೋದರೆ ಇಲ್ಲಿ ಕಗ್ಗತ್ತಲು. ಇದರಿಂದಾಗಿ ಮಹಿಳಾ ಆಟಗಾರರು ಅಭ್ಯಾಸಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಇದಕ್ಕೆ ಎಲ್‌ಇಡಿ ಫೋಕಸ್ ಲೈಟ್ ಮತ್ತು ಇನ್‌ವರ್ಟರ್ ಮೂಲಕ ಪರ್ಯಾಯ ಬೆಳಕಿನ ವ್ಯವಸ್ಥೆಯೇ ಪರಿಹಾರ ಎನ್ನುತ್ತಾರೆ ಸ್ಥಳೀಯ ತಂತ್ರಜ್ಞರು. ಆದರೂ ಸುಮಾರು ಇನ್ನೂರು ಆಟಗಾರರು ಪ್ರತಿನಿತ್ಯ ಅಭ್ಯಾಸ ನಡೆಸುತ್ತಿದ್ದಾರೆ.`ಏಕಲವ್ಯ ಪ್ರಶಸ್ತಿ ನೀಡುವುದಿದ್ದರೆ ಇಲ್ಲಿನ ಆಟಗಾರರಿಗೇ ನೀಡಬೇಕು. ಏಕೆಂದರೆ ಎಲ್ಲಕ್ಕಿಂತ ಮುಖ್ಯವಾಗಿ ಇಲ್ಲಿ ತರಬೇತುದಾರರು ಹಾಗೂ ಸಹಾಯಕ ಸಿಬ್ಬಂದಿಯೇ ಇಲ್ಲ. ಆಟಗಾರರು ಏಕಲವ್ಯರಂತೆ ತಾವೇ ಅಭ್ಯಾಸ ನಡೆಸುತ್ತಾರೆ. ಪ್ರೇಕ್ಷಕರು, ಹಿರಿಯ ಆಟಗಾರರೇ ಇಲ್ಲಿ ದ್ರೋಣಾಚಾರ್ಯರು!ಕ್ರೀಡಾಂಗಣ ಶುಚಿತ್ವ, ಸುಣ್ಣಬಣ್ಣ ಕಾಣದೇ ಶಿಥಿಲಾವಸ್ಥೆಯಲ್ಲಿದೆ. ಉಸಿರಾಡಿದ ಗಾಳಿ ಹೊರ ಹೋಗಲು ಗವಾಕ್ಷಿ ವ್ಯವಸ್ಥೆಯೇ ಇಲ್ಲ. ಇದು ಉಸಿರಾಟಕ್ಕೂ ಹಾನಿಕಾರಕವಾಗಿದೆ. ಎರಡು ದಶಕಕ್ಕೂ ಹಿಂದಿನ ಈ ಕ್ರೀಡಾಂಗಣಕ್ಕೆ ಪುನರ್‌ಜೀವ ನೀಡುವುದು ಅಗತ್ಯ ಎನ್ನುವುದು ಆಟಗಾರರ ಬೇಡಿಕೆ. ಇಲ್ಲಿ ನಿರ್ವಹಣೆ ಸರಿ ಇಲ್ಲದ್ದರಿಂದ ಹಾಗೂ ಮೂಲಸೌಕರ್ಯ ಕಳಪೆಯಾಗಿರುವುದರಿಂದ ರಾಜ್ಯಮಟ್ಟದ ಕೂಟಗಳನ್ನು ನಡೆಸುವುದು ಸಾಧ್ಯವೇ ಇಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry