ಶುಕ್ರವಾರ, ಏಪ್ರಿಲ್ 16, 2021
30 °C

ಸೋಲಿಗರ ಮೇಲೆ ದೌರ್ಜನ್ಯ: ಕ್ರಮಕ್ಕೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಳ್ಳೇಗಾಲ: ಆದಿವಾಸಿ ಸೋಲಿಗರ ಮೇಲೆ ದೌರ್ಜನ್ಯ ಎಸಗಿರುವ ಲೊಕ್ಕನಹಳ್ಳಿ ಬೀಟ್ ಅರಣ್ಯ ರಕ್ಷಕ ರವಿಕುಮಾರ್ ಮತ್ತು ಸಿಬ್ಬಂದಿ ಮೇಲೆ ಸೂಕ್ತ ಕ್ರಮಕೈಗೊಂಡು ಆದಿವಾಸಿಗಳಿಗೆ ರಕ್ಷಣೆ ನೀಡಬೇಕು ಎಂದು ಸರ್ಕಲ್ ಸೋಲಿಗ ಅಭಿವೃದ್ಧಿ ಸಂಘಗಳ ಒಕ್ಕೂಟದ ಅಧ್ಯಕ್ಷ ನಾಗ ಒತ್ತಾಯಿಸಿದರು.ಹನೂರಿನಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಲೊಕ್ಕನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಡಂಚಿನ ಸೇಬಿನಕೋಬೆ ಪೋಡಿನ ಆದಿವಾಸಿಗಳಾದ ಬೇದಮ್ಮ, ಸಿದ್ದಮ್ಮ, ಈರಮ್ಮ, ರಂಗಮ್ಮ, ಜಡೆಯ ಹಾಗೂ ಸಿದ್ದ ಅವರು ಆ.8ರಂದು ಕಾಡಿನಿಂದ ಕಸಬರಿಕೆ ಹುಲ್ಲನ್ನು ಕೋಯ್ದು ತರುತ್ತಿದ್ದರು.

 

ಆಗ ಅರಣ್ಯ ರಕ್ಷಕ ರವಿಕುಮಾರ್ ಮತ್ತು ಸಿಬ್ಬಂದಿ ಹುಲ್ಲಿಗೆ ಬೆಂಕಿ ಹಚ್ಚಿ ನಾಶಪಡಿಸಿ, ಅರಣ್ಯ ಪ್ರವೇಶಿಸದಂತೆ ಎಚ್ಚರಿಕೆ ನೀಡುವ ಮೂಲಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿದ ರು.ಸೇಬಿನ ಕೋಬೆ ಗ್ರಾಮದಲ್ಲಿ 64 ಸೋಲಿಗ ಕುಟುಂಬಗಳು 50-60ವರ್ಷಗಳಿಂದಲೂ ವಾಸಿಸುತ್ತಿವೆ. ಈ ಸೋಲಿಗರು ಬೇಸಾಯ ಮಾಡಿಕೊಂಡು ಜೀವನ ನಡೆಸುತ್ತಿದ್ದು, ಅರಣ್ಯ ಇಲಾಖೆ ವತಿಯಿಂದ ಹಕ್ಕುಪತ್ರಗಳನ್ನೂ ಪಡೆದಿದ್ದಾರೆ. ಆದಿವಾಸಿಗಳು ಅರಣ್ಯದಲ್ಲಿ ದೊರೆಯುವ ಕಿರು ಉತ್ಪನ್ನಗಳನ್ನು ಸಂಗ್ರಹಿಸಿ, ಲ್ಯಾಂಪ್ ಸೊಸೈಟಿಗೆ ಸರಬರಾಜು ಮಾಡುತ್ತಿದ್ದಾರೆ.

 

ಈ ಕೆಲಸಕ್ಕೆ ಅರಣ್ಯ ಇಲಾಖೆ ಅಡ್ಡಿಪಡಿಸಿದರೆ, ನಾವು ಜೀವನ ಸಾಗಿಸುವುದೇ ಕಷ್ಟವಾಗುತ್ತದೆ ಎಂದು ಅಳಲು ತೋಡಿಕೊಂಡರು. ಆದಿವಾಸಿಗಳ ಮೇಲೆ ದೌರ್ಜನ್ಯ ಎಸಗಿರುವ ಅರಣ್ಯ ರಕ್ಷಕ ಮತ್ತು ಸಿಬ್ಬಂದಿ ಮೇಲೆ ಹಿರಿಯ ಅಧಿಕಾರಿಗಳು ತಕ್ಷಣ ಸೂಕ್ತಕ್ರಮ ಜರುಗಿಸಿಬೇಕು. ಈ ಬಗ್ಗೆ ನಿರ್ಲಕ್ಷ್ಯವಹಿಸಿದಲ್ಲಿ  ಅರಣ್ಯಾಧಿಕಾರಿ ವಿರುದ್ಧ ಸೋಲಿಗ ಸಮುದಾಯ ಉಗ್ರ ಹೋರಾಟ ನಡೆಸುತ್ತದೆ ಎಂದು ಎಚ್ಚರಿಸಿದರು. ಕಾರ್ಯದರ್ಶಿ ಡಿ. ಮಹದೇವ ಹಾಜರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.