ಸೋಲಿಗೆ ಹೆದರಬೇಕಿಲ್ಲ: ದೇವೇಗೌಡ

ಶುಕ್ರವಾರ, ಜೂಲೈ 19, 2019
28 °C

ಸೋಲಿಗೆ ಹೆದರಬೇಕಿಲ್ಲ: ದೇವೇಗೌಡ

Published:
Updated:

ಅರಕಲಗೂಡು: ಸೋಲಿನಿಂದ ಧೃತಿಗೆಡದೇ ಪಕ್ಷ ಸಂಘಟಿಸಿ ಮುಂದಿನ ಹೋರಾಟಕ್ಕೆ ಕಾರ್ಯಕರ್ತರು ಸಜ್ಜುಗೊಳ್ಳುಬೇಕು ಎಂದು ಮಾಜಿ ಪ್ರಧಾನಿ ಎಚ್. ಡಿ.ದೇವೇಗೌಡ ತಿಳಿಸಿದರು.ಪಟ್ಟಣದ ಶಿಕ್ಷಕರ ಭವನದಲ್ಲಿ ಬುಧವಾರ ನಡೆದ ತಾಲ್ಲೂಕು ಜೆಡಿಎಸ್. ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.ಕೆಲವು ಭಿನ್ನಾಭಿಪ್ರಾಯಗಳು ತಾಲ್ಲೂಕಿನಲ್ಲಿ ಪಕ್ಷದ ಸೋಲಿಗೆ ಕಾರಣ ಎಂಬುದು ತಮ್ಮ ಗಮನಕ್ಕೂ ಬಂದಿದೆ. ಸಮಸ್ಯೆಗಳ ಬಗ್ಗೆ ಕುಳಿತು ಚರ್ಚಿಸಿ ಸರಿಪಡಿಸಿ ಕೊಂಡು ಒಗ್ಗಟ್ಟಿನಿಂದ ಕಾರ್ಯ ನಿರ್ವಹಿಸುವುದು ಅಗತ್ಯ ಎಂದರು.ಸೋಲಿಗೆ ಹೆದರಿ ರಾಜಕಾರಣದಿಂದ ವಿಮುಖರಾಗುವುದು ಸರಿಯಲ್ಲ ಎಂದು ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ಅವರಿಗೆ ಬುದ್ದಿ ಮಾತು ಹೇಳಿದ ಗೌಡರು ಸೋಲಿಗೆ ಎದೆಗುಂದಬೇಕಿಲ್ಲ. ನಾನು ಸಹ ಚುನಾವಣೆಯಲ್ಲಿ ಎರಡು ಬಾರಿ ಸೋತಿದ್ದೇನೆ. ರಾಜಕಾರಣಿ ಪ್ರತಿ ಹಂತದಲ್ಲೂ ವಿದ್ಯಾರ್ಥಿಯಂತೆ ಕೆಲಸ ಮಾಡುವ ಮೂಲಕ ಯಶಸ್ಸನ್ನು ಗಳಿಸಬೇಕಿದೆ ಎಂದರು.ಸಭೆಯಲ್ಲಿ ಪಾಲ್ಗೊಂಡಿದ್ದ ಮಾಜಿ ಸಚಿವ ಎಚ್.ಡಿ.ರೇವಣ್ಣ, ಕೆಲವು ಮಾಧ್ಯಮಗಳಲ್ಲಿ ಕಳೆದ ಒಂಬತ್ತು ವರ್ಷಗಳಿಂದ ಜಿಲ್ಲೆಗೆ ದೇವೇಗೌಡರು ನೀಡಿದ ಕೊಡುಗೆಯಾದರೂ ಏನು ಎಂದು ಪ್ರಶ್ನಿಸಲಾಗಿದೆ. ದೇವೇಗೌಡರು ಜಿಲ್ಲೆಗೆ ಏನು ಮಾಡಿದ್ದಾರೆ ಎಂಬುದು ಜನತೆಗೆ ತಿಳಿದಿದೆ ಎಂದರು.ಸಭೆಯ ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ಮಾತನಾಡಿ ರಾಜಕಾರಣದಲ್ಲಿ ಪ್ರಾಮಾಣಿಕವಾಗಿ ನಡೆದುಕೊಂಡು ಬಂದಿದ್ದೇನೆ. ಶೋಷಿತರ, ಬಡವರ, ರೈತರ ಪರ ಧ್ವನಿ ಎತ್ತಿ ಹೋರಾಟ ನಡೆಸಿದ್ದೇನೆ, ಆದರೂ ಜನತೆ ತಮ್ಮ ಕೈ ಹಿಡಿಯದಿರುವುದು ತಮಗೆ ಬೇಸರ ಮೂಡಿಸಿದೆ.ಜನತೆಯನ್ನು ವಂಚಿಸಿ ನಾಟಕೀಯ ರಾಜಕಾರಣ ನಡೆಸಲು ತಮ್ಮಿಂದ ಸಾಧ್ಯವಿಲ್ಲ. ನಾಯಕತ್ವವನ್ನು ಬೇರೆಯವರಿಗೆ ವಹಿಸುವಂತೆ ತಿಳಿಸಿ ತಾವು ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿದ್ದು ಕಾರ್ಯ ನಿರ್ವಹಿಸುವುದಾಗಿ ಹೇಳಿದರು.ಪಕ್ಷದ ರಾಜ್ಯ ಘಟಕದ ಉಪಾಧ್ಯಕ್ಷ ಕೆ.ಸತೀಶ್, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷೆ ಸಾಕಮ್ಮ, ಜಿಲ್ಲಾ ಪಂಚಾಯಿತಿ ಸದಸ್ಯರಾದ ವಿ.ಎ.ನಂಜುಂಡ ಸ್ವಾಮಿ, ಭಾಗ್ಯಮ್ಮ, ಸರೋಜಮ್ಮ, ಪಾರ್ವತಮ್ಮ, ನಾಗಮಣಿ, ತಾ.ಪಂ. ಮಾಜಿ ಅಧ್ಯಕ್ಷರಾದ ಯೋಗೇಶ್, ಸಂತೋಷ್‌ಗೌಡ, ಪಕ್ಷದ ಮುಖಂಡ ರಾದ ಮುದ್ದನಹಳ್ಳಿ ರಮೇಶ್, ಎ.ಆರ್. ಜನಾರ್ಧನ ಗುಪ್ತ ಸಭೆಯಲ್ಲಿ ಉಪಸ್ಥಿತರಿದ್ದರು. ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಸಿ.ರಂಗಸ್ವಾಮಿ ಸ್ವಾಗತಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry