ಭಾನುವಾರ, ಜೂನ್ 13, 2021
26 °C

ಸೋಲಿನಲ್ಲಿ ನನ್ನ ಪಾತ್ರ ಇಲ್ಲ, ಹೈಕಮಾಂಡ್ ಆದೇಶ ಮೀರಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೋಲಿನಲ್ಲಿ ನನ್ನ ಪಾತ್ರ ಇಲ್ಲ, ಹೈಕಮಾಂಡ್ ಆದೇಶ ಮೀರಲ್ಲ

ಗುಲ್ಬರ್ಗ: `ಡಿ.ವಿ. ಸದಾನಂದ ಗೌಡರನ್ನು ಸಿ.ಎಂ. ಆಗಿ ಒಳ್ಳೆಯ ಆಯ್ಕೆ ಮಾಡಿರುವುದಕ್ಕೆ ಸಂತೃಪ್ತಿ ಇದೆ. ಉತ್ತಮ ಬಜೆಟ್ ಮಂಡಿಸಿದ್ದಾರೆ. ನಾನೇ ಸಿಎಂ ಆಗಿದ್ದರೂ ಅಷ್ಟು ಒಳ್ಳೆಯ ಬಜೆಟ್ ಮಂಡಿಸುತ್ತಿದ್ದೆನೋ ಎಂಬುದು ಗೊತ್ತಿಲ್ಲ~ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.ಗುಲ್ಬರ್ಗಕ್ಕೆ ಭಾನುವಾರ ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಉಡುಪಿ-ಚಿಕ್ಕಮಗಳೂರು ಲೋಕಸಭಾ ಚುನಾವಣೆಯಲ್ಲಿ ಸೋತಿರುವುದಕ್ಕೆ ಬೇಸರವಿದೆ. ಈ ಬಗ್ಗೆ ಪಕ್ಷದ ಮುಖಂಡರೆಲ್ಲ ಸೇರಿಕೊಂಡು ಆತ್ಮಾವಲೋಕನ ಮಾಡಬೇಕು. ಇದು ನನ್ನ ರಾಜಕೀಯ ಬದುಕಿನಲ್ಲಿ (ಗ್ರಾಮ ಪಂಚಾಯಿತಿಯಿಂದ ಸಂಸತ್ ತನಕ) ಪ್ರಚಾರಕ್ಕೆ ಹೋಗದ ಮೊದಲ ಚುನಾವಣೆ ಎಂದ ಅವರು, ನನ್ನ ಮೇಲೆ 8 ಕೇಸುಗಳು ಇನ್ನೂ ಬಾಕಿ ಇವೆ ಎಂದು ಸ್ವತಃ  ಸಿಎಂ ಹೇಳಿದ್ದರು. ಹೀಗಾಗಿ ಯಾರಿಗೂ ಮುಜುಗರ ಬೇಡ ಎಂದು  ಪ್ರಚಾರಕ್ಕೆ ಹೋಗಿರಲಿಲ್ಲ. ಆದರೆ ಅದರಿಂದ ಸೋಲಾಗಲಿಲ್ಲ. ಸೋಲಿನಲ್ಲಿ ನನ್ನ ಪಾತ್ರವೇನೂ ಇಲ್ಲ. ಮುಂದಿನ ಬಾರಿ ಪ್ರಚಾರಕ್ಕೆ ಹೋಗುತ್ತೇನೆ ಎಂದರು.ಯಡಿಯೂರಪ್ಪ ಜೊತೆ 10 ಶಾಸಕರೂ ಇಲ್ಲ ಎಂದು ಬಿಜೆಪಿ ಕಚೇರಿಯಿಂದ ಹೈಕಮಾಂಡ್‌ಗೆ ಮಾಹಿತಿ ಹೋಗುತ್ತಿತ್ತು. ಅದಕ್ಕಾಗಿ ನಮ್ಮ ಬೆಂಬಲಿಗರು ರೆಸಾರ್ಟ್‌ನಲ್ಲಿ ಸೇರಿದ್ದರು. ಅವರ ಒತ್ತಾಯಕ್ಕೆ ಮಣಿದು ಅಲ್ಲಿಗೆ ಹೋಗಿದ್ದೇನೆ. ಆದರೆ ಇದರ ಬಗ್ಗೆ ನನಗೂ ಸಮಾಧಾನವಿಲ್ಲ ಎಂದ ಅವರು, ಮತ್ತೊಮ್ಮೆ ರೆಸಾರ್ಟ್‌ಗೆ ಹೋಗುತ್ತೀರಾ? ಎಂಬ ಪತ್ರಕರ್ತರ ಪ್ರಶ್ನೆಗಳಿಗೆ `ಸಮಾಧಾನ ಇಲ್ಲ~ ಎಂದರು.ಲೋಕಾಯುಕ್ತ ಕೇಸ್ ಖುಲಾಸೆಗೊಂಡ ಕೂಡಲೇ ಅದೇ ಸ್ಥಾನಮಾನ ನೀಡುವುದಾಗಿ ಹೇಳಿ ಹೈಕಮಾಂಡ್ ನನ್ನ ರಾಜೀನಾಮೆ ಪಡೆದದ್ದು ನಿಜ. ಹೀಗಾಗಿ ಸ್ಥಾನಮಾನ ಮತ್ತೆ ಕೇಳಿದ್ದು ನಿಜ. ಈ ಬಗ್ಗೆ ರಾಷ್ಟ್ರೀಯ ನಾಯಕರ ಮೇಲೆ ವಿಶ್ವಾಸವಿದೆ. ಅವರನ್ನು ಪ್ರಶ್ನಿಸುವ ಅಧಿಕಾರ ನನಗಿಲ್ಲ ಎಂದು ಮುಗುಳ್ನಕ್ಕರು.`ಯಾವ ಸ್ಥಾನಮಾನ ಸಿಗದಿದ್ದರೂ ಸಂತಸದಿಂದ ಇರುತ್ತೇನೆ. ನನ್ನ ಶಕ್ತಿಯನ್ನು ಬಳಸಿಕೊಳ್ಳುವುದು ಪಕ್ಷಕ್ಕೆ ಬಿಟ್ಟ ವಿಚಾರ. ಆದರೆ ಬೇರೆ ಪಕ್ಷ ಕಟ್ಟುವ ಪ್ರಶ್ನೆಯೇ ನನ್ನ ಮುಂದೆ ಇಲ್ಲ~ ಎಂದು ಖಡಕ್ ಆಗಿ ಹೇಳಿದ ಅವರು, ಸಿಎಂ ಆಗಿ ಸದಾನಂದ ಗೌಡರನ್ನು ಮುಂದುವರಿಸುವುದು ಹೈಕಮಾಂಡ್‌ಗೆ ಬಿಟ್ಟ ವಿಚಾರ. ಇತ್ತೀಚಿನ ಘಟನಾವಳಿಗಳಿಂದ ಅಭಿವೃದ್ಧಿಗೆ ಧಕ್ಕೆ ಆಗ್ತಾ ಇಲ್ಲ. ಎಲ್ಲ ಸಚಿವರೂ ಕೆಲಸ ಮಾಡ್ತಾ ಇದ್ದಾರೆ ಎಂದು ಸಮರ್ಥಿಸಿಕೊಂಡರು.70 ಮಂದಿ ಶಾಸಕರು ಮಾತ್ರವಲ್ಲ, 120 ಮಂದಿ ಒಟ್ಟುಗೂಡುವ ಕಾರ್ಯಕ್ರಮ ರೂಪಿಸುತ್ತೇನೆ. ಇನ್ನಷ್ಟು ಉತ್ಸಾಹದಿಂದ ಕಾರ್ಯ ನಿರ್ವಹಿಸುತ್ತೇನೆ. ನಮ್ಮ ಪಕ್ಷದವರು ಕರೆದ ಕಾರ್ಯಕ್ರಮಕ್ಕೆ ಹೋಗುತ್ತೇನೆ.ಮಾ.31ರಂದು ಶಿವಮೊಗ್ಗದಲ್ಲಿಯೂ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದು ಪ್ರಶ್ನೆಯೊಂದಕ್ಕೆ ಬಿರುಸಿನ ಪ್ರತಿಕ್ರಿಯೆ ನೀಡಿದರು. ಸಚಿವ ಸಂಪುಟ ವಿಸ್ತರಣೆ ಮುಖ್ಯಮಂತ್ರಿಗಳಿಗೆ ಬಿಟ್ಟ ವಿಚಾರ. ಈ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ ಎಂದು ನಿರಾಕರಿಸಿದರು.  `ನ್ಯಾಯಾಲಯದ ಮುಂದಿರುವ ಪ್ರಕರಣಗಳ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ~ ಎಂದು ಜೊತೆಗಿದ್ದ ಸಚಿವ ರೇಣುಕಾಚಾರ್ಯ ಹೇಳಿದರು. ಶಾಸಕ ಹರೀಶ್, ನಮೋಶಿ  ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.