ಸೋಲಿನ ಸುಳಿಯಲ್ಲಿ ಆಸೀಸ್

7

ಸೋಲಿನ ಸುಳಿಯಲ್ಲಿ ಆಸೀಸ್

Published:
Updated:

ಮೆಲ್ಬರ್ನ್ (ಎಪಿ): ಇಂಗ್ಲೆಂಡ್ ತಂಡ ಆ್ಯಷಸ್ ಟೆಸ್ಟ್ ಕ್ರಿಕೆಟ್ ಟ್ರೋಫಿಯನ್ನು ತನ್ನಲ್ಲೇ ಉಳಿಸಿಕೊಳ್ಳುವ ಹೊಸ್ತಿಲಲ್ಲಿ ಬಂದು ನಿಂತಿದೆ. ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಸರಣಿಯ ನಾಲ್ಕನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ಸೋಲಿನ ಸುಳಿಯಲ್ಲಿದೆ. ಮೂರನೇ ದಿನದಾಟದ ಅಂತ್ಯಕ್ಕೆ ರಿಕಿ ಪಾಂಟಿಂಗ್ ಬಳಗ ತನ್ನ ಎರಡನೇ ಇನಿಂಗ್ಸ್‌ನಲ್ಲಿ 6 ವಿಕೆಟ್‌ಗೆ 169 ರನ್ ಗಳಿಸಿದೆ.ಆತಿಥೇಯ ತಂಡ 246 ರನ್‌ಗಳ ಹಿನ್ನಡೆಯಲ್ಲಿದೆ. ಇನ್ನೂ ಎರಡು ದಿನಗಳ ಆಟ ಬಾಕಿಯುಳಿದಿದ್ದು. ಇಂಗ್ಲೆಂಡ್ ತಂಡ ಗೆಲುವನ್ನು ಹೆಚ್ಚುಕಡಿಮೆ ಖಚಿತಪಡಿಸಿಕೊಂಡಿದೆ. ಇಲ್ಲಿ ಗೆಲುವು ಪಡೆದರೆ ಆ್ಯಂಡ್ರ್ಯೂ ಸ್ಟ್ರಾಸ್ ಬಳಗ ಸರಣಿಯಲ್ಲಿ 2-1 ರಲ್ಲಿ ಮುನ್ನಡೆ ಪಡೆಯಲಿದೆ. ಸಿಡ್ನಿಯಲ್ಲಿ ನಡೆಯುವ ಅಂತಿಮ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ಗೆದ್ದರೂ, ಆ್ಯಷಸ್ ಟ್ರೋಫಿ ಇಂಗ್ಲೆಂಡ್ ತನ್ನಲ್ಲೇ ಉಳಿಸಿಕೊಳ್ಳಲಿದೆ. ಏಕೆಂದರೆ ಕಳೆದ ಬಾರಿ ಇಂಗ್ಲೆಂಡ್ ಗೆಲುವು ಪಡೆದಿತ್ತು. ಸರಣಿ ಡ್ರಾದಲ್ಲಿ ಕೊನೆಗೊಂಡರೆ ಟ್ರೋಫಿಯು ಹಾಲಿ ಚಾಂಪಿಯನ್ನರ ಪಾಲಾಗಲಿದೆ.4 ವಿಕೆಟ್‌ಗೆ 444 ರನ್‌ಗಳಿಂದ ಮಂಗಳವಾರ ಆಟ ಆರಂಭಿಸಿದ ಇಂಗ್ಲೆಂಡ್ ತನ್ನ ಮೊದಲ ಇನಿಂಗ್ಸ್‌ನಲ್ಲಿ 513 ರನ್‌ಗಳಿಗೆ ಆಲೌಟಾಯಿತು. ಈ ಮೂಲಕ 415 ರನ್‌ಗಳ ಮುನ್ನಡೆ ಪಡೆಯಿತು. ಆಸೀಸ್ ಮೊದಲ ಇನಿಂಗ್ಸ್‌ನಲ್ಲಿ ಕೇವಲ 98 ರನ್ ಗಳಿಸಿತ್ತು. ಜೊನಾಥನ್ ಟ್ರಾಟ್ 168 ರನ್ ಗಳಿಸಿ ಔಟಾಗದೆ ಉಳಿದರು. 345 ಎಸೆತಗಳನ್ನು ಎದುರಿಸಿದ ಅವರು 13 ಬೌಂಡರಿ ಸಿಡಿಸಿದರು. ಆಸೀಸ್ ಪರ ಪೀಟರ್ ಸಿಡ್ಲ್ 75 ರನ್ ನೀಡಿ 6 ವಿಕೆಟ್ ಪಡೆದರು.ಭಾರಿ ಹಿನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ತಂಡಕ್ಕೆ ಟಿಮ್ ಬ್ರೆಸ್ನನ್ ಆಘಾತ ನೀಡಿದರು. ಅವರು 26 ರನ್ ನೀಡಿ ಮೂರು ವಿಕೆಟ್ ಕಿತ್ತರು. ಬ್ರೆಸ್ನನ್‌ಗೆ ಉತ್ತಮ ಸಾಥ್ ನೀಡಿದ ಗ್ರೇಮ್ ಸ್ವಾನ್ ಹಾಗೂ ಜೇಮ್ಸ್ ಆ್ಯಂಡರ್‌ಸನ್ ತಲಾ ಒಂದು ವಿಕೆಟ್ ಪಡೆದರು.ಸಂಕ್ಷಿಪ್ತ ಸ್ಕೋರ್: ಆಸ್ಟ್ರೇಲಿಯಾ: ಮೊದಲ ಇನಿಂಗ್ಸ್ 42.5 ಓವರ್‌ಗಳಲ್ಲಿ 98 ಮತ್ತು ಎರಡನೇ ಇನಿಂಗ್ಸ್ 66 ಓವರ್‌ಗಳಲ್ಲಿ 6 ವಿಕೆಟ್‌ಗೆ 169 (ಶೇನ್ ವ್ಯಾಟ್ಸನ್ 54, ಫಿಲಿಪ್ ಹ್ಯೂಸ್ 23, ಸ್ಟೀವನ್ ಸ್ಮಿತ್ 38, ಬ್ರಾಡ್ ಹಡ್ಡಿನ್ ಬ್ಯಾಟಿಂಗ್ 11, ಮಿಷೆಲ್ ಜಾನ್ಸನ್ ಬ್ಯಾಟಿಂಗ್ 6, ಟಿಮ್ ಬ್ರೆಸ್ನನ್ 26ಕ್ಕೆ 3, ಗ್ರೇಮ್ ಸ್ವಾನ್ 23ಕ್ಕೆ 1).ಇಂಗ್ಲೆಂಡ್: ಮೊದಲ ಇನಿಂಗ್ಸ್ 159.1 ಓವರ್‌ಗಳಲ್ಲಿ 513 (ಜೊನಾಥನ್ ಟ್ರಾಟ್ ಔಟಾಗದೆ 168, ಮ್ಯಾಟ್ ಪ್ರಿಯೊರ್ 85, ಗ್ರೇಮ್ ಸ್ವಾನ್ 22, ಪೀಟರ್ ಸಿಡ್ಲ್ 75ಕ್ಕೆ 6, ಮಿಷೆಲ್ ಜಾನ್ಸನ್ 134ಕ್ಕೆ 2, ಬೆನ್ ಹಿಲ್ಫೆನಾಸ್ 83ಕ್ಕೆ 2).

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry