ಸೋಲುಂಡ ಮನದಲ್ಲಿ ಗೆಲುವಿನ ಕನವರಿಕೆ

7
ರಣಜಿ ಟ್ರೋಫಿ; ಇಂದಿನಿಂದ ದೆಹಲಿ ವಿರುದ್ಧ ಪಂದ್ಯ, ಸಂಕಷ್ಟದಿಂದ ಪಾರಾಗಲು ಕರ್ನಾಟಕದ ರಣತಂತ್ರ

ಸೋಲುಂಡ ಮನದಲ್ಲಿ ಗೆಲುವಿನ ಕನವರಿಕೆ

Published:
Updated:
ಸೋಲುಂಡ ಮನದಲ್ಲಿ ಗೆಲುವಿನ ಕನವರಿಕೆ

ಬೆಂಗಳೂರು: ಬರಡು ಭೂಮಿಯಲ್ಲಿ ಒಂದು ಹನಿ ನೀರಿಗೆ ಪರಿತಪಿಸುವ ಸಂಕಷ್ಟವಿದೆಯಲ್ಲಾ ಆ ರೀತಿಯ ಪರಿಸ್ಥಿತಿ ಕರ್ನಾಟಕ ತಂಡದ್ದು. ಗೆಲುವೆಂಬುದು ಮರೀಚಿಕೆಯಾಗಿಯೇ ಉಳಿದಿರುವ ಆತಿಥೇಯರಿಗೆ ತವರು ನೆಲದಲ್ಲಿನ ಅಂಗಳದಲ್ಲೂ ಜಯ ಲಭಿಸುತ್ತಿಲ್ಲ. ಈಗ ಕರ್ನಾಟಕದ ಚೊಚ್ಚಲ ಗೆಲುವಿನ ಕಸರತ್ತಿಗೆ ಮತ್ತೊಂದು ವೇದಿಕೆ ಸಜ್ಜುಗೊಂಡಿದೆ.ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ `ಬಿ' ಗುಂಪಿನ ಪಂದ್ಯದಲ್ಲಿ ಕರ್ನಾಟಕ ಹಾಗೂ ದೆಹಲಿ ತಂಡಗಳು ಶನಿವಾರ ಹೋರಾಟ ಆರಂಭಿಸಲಿವೆ. ಸರಿಯಾಗಿ ಹತ್ತು ದಿನಗಳ ಹಿಂದೆ ಒಡಿಶಾ ವಿರುದ್ಧ ಅನುಭವಿಸಿದ್ದ ಹೀನಾಯ ಸೋಲಿನ ಕಹಿ ನೆನಪುಗಳು ಸಾಗರದ ಅಲೆಗಳಂತೆ ಕರ್ನಾಟಕ ತಂಡವನ್ನು ಅಪ್ಪಳಿಸುತ್ತಿವೆ. ಈ ನಿರಾಸೆಯನ್ನು ಮೆಟ್ಟಿ ನಿಂತು ಚೊಚ್ಚಲ ಗೆಲುವು ಪಡೆಯುವ ಹುಮ್ಮಸ್ಸು ವಿನಯ್ ಪಡೆಯದ್ದು.ಈ ಸಲದ ರಣಜಿ ಋತುವಿನಲ್ಲಿ ಮೇಲಿಂದ ಮೇಲೆ ಪಂದ್ಯಗಳನ್ನು ಆಡಿದ್ದ ಕರ್ನಾಟಕ ತಂಡಕ್ಕೆ ವಿಶ್ರಾಂತಿ ಸಿಕ್ಕಿರಲಿಲ್ಲ. ಆದರೆ, ಒಡಿಶಾ ವಿರುದ್ಧದ ಪಂದ್ಯದ ನಂತರ ಹತ್ತು ದಿನ ವಿಶ್ರಾಂತಿ ಲಭಿಸಿತ್ತು. ಕಹಿ ನೆನಪಿನ ಸುರುಳಿ ಮತ್ತೆ ಬಿಚ್ಚಿಕೊಳ್ಳದಂತೆ ಎಚ್ಚರಿಕೆ ವಹಿಸಲು ಕರ್ನಾಟಕ ಒಂದು ವಾರದಿಂದ ಕ್ರೀಡಾಂಗಣದಲ್ಲಿ ಬೆವರು ಸುರಿಸಿದೆ. ಒಡಿಶಾ ವಿರುದ್ಧದ ಪಂದ್ಯದಲ್ಲಿ ಬ್ಯಾಟ್ಸ್‌ಮನ್‌ಗಳು ಅನುಭವಿಸಿದ್ದ ವೈಫಲ್ಯಕ್ಕೆ ಆಯ್ಕೆ ಸಮಿತಿ ಸೂಕ್ತ `ಬಹುಮಾನ' ನೀಡಿದೆ. ಸತತ ವೈಫಲ್ಯ ಅನುಭವಿಸಿದ್ದ ಆರಂಭಿಕ ಬ್ಯಾಟ್ಸ್‌ಮನ್ ಕೆ.ಬಿ. ಪವನ್ ಬದಲು ಕೆ.ಎಲ್. ರಾಹುಲ್‌ಗೆ ಅವಕಾಶ ನೀಡಲಾಗಿದೆ. ಗಾಯಗೊಂಡಿದ್ದ ಅಭಿಮನ್ಯು ಮಿಥುನ್ ಸಹ ಫಿಟ್ ಆಗಿದ್ದಾರೆ.ಈ ರಣಜಿಯಲ್ಲಿ ಕರ್ನಾಟಕದ ಪರ ಒಟ್ಟು ಹೆಚ್ಚು ರನ್ ಕಲೆ ಹಾಕಿರುವ ಗಣೇಶ್ ಸತೀಶ್ (332) ಲಯ ಕಂಡುಕೊಳ್ಳುವುದು ಅಗತ್ಯವಿದೆ. ಸ್ಟುವರ್ಟ್ ಬಿನ್ನಿ, ಸಿ.ಎಂ. ಗೌತಮ್, ಅಮಿತ್ ವರ್ಮಾ, ಮನೀಷ್ ಪಾಂಡೆ ಬ್ಯಾಟಿಂಗ್ ವಿಭಾಗದ ಪ್ರಮುಖ ಶಕ್ತಿಯೆನಿಸಿದ್ದಾರೆ. ಆದರೆ, `ಬಲಿಷ್ಠ' ಬ್ಯಾಟ್ಸ್‌ಮನ್‌ಗಳು ಹಿಂದಿನ ಪಂದ್ಯದ ವೈಫಲ್ಯದಿಂದ ಹೊರಬರಬೇಕಿದೆ. ಬ್ಯಾಟಿಂಗ್ ಕ್ರಮಾಂಕದಲ್ಲಿ ಏನಾದರೂ ಬದಲಾವಣೆ ಸಾಧ್ಯತೆಯಿದೆಯೇ ಎನ್ನುವ ಪ್ರಶ್ನೆ ನಾಯಕ ಆರ್. ವಿನಯ್ ಮುಂದಿಟ್ಟಾಗ, ಮೊಗದಲ್ಲಿ ನಗೆ ಅರಳಿಸಿ `ಕಾದು ನೋಡಿ' ಎನ್ನುವ ಉತ್ತರ ನೀಡಿದರು.ಯಾರು ಹಿತವರು ಈ  ಇಬ್ಬರೊಳಗೆ: ಒಂದೂ ಗೆಲುವು ಪಡೆಯದೆ ಸಂಕಷ್ಟದಲ್ಲಿರುವ ಕರ್ನಾಟಕ ಮುಂದಿಡುವ ಪ್ರತಿ ಹೆಜ್ಜೆಯೂ ಎಚ್ಚರದಿಂದಲೇ ಊರಬೇಕಿದೆ. ಗೆಲುವು ಅನಿವಾರ್ಯವಾಗಿರುವ ಕಾರಣ ಅಂತಿಮ ಹನ್ನೊಂದರ ತಂಡವನ್ನು ಆಯ್ಕೆ ಮಾಡುವುದು ಕರ್ನಾಟಕದ ಮುಂದಿರುವ ಮಹತ್ವದ ಸವಾಲು. ವೇಗದ ಬೌಲರ್‌ಗಳಿಗೆ ಪಿಚ್ ನೆರವು ನೀಡಲಿರುವ ಕಾರಣ ವೇಗಿಗಳಾದ ಎಚ್.ಎಸ್.ಶರತ್ ಮತ್ತು ಎಸ್.ಎಲ್. ಅಕ್ಷಯ್ ನಡುವೆ ಪೈಪೋಟಿ ನಡೆಯುತ್ತಿದೆ. ಆದ್ದರಿಂದ ಯಾರು ಹಿತವರು ಈ ಇಬ್ಬರೊಳಗೆ ಎನ್ನುವ ಪ್ರಶ್ನೆಗೆ ಶನಿವಾರ ಬೆಳಿಗ್ಗೆ ಉತ್ತರ ಸಿಗಲಿದೆ.ಕೊನೆಯ ಸ್ಥಾನ: ಕರ್ನಾಟಕ ನಾಲ್ಕು ಪಂದ್ಯಗಳನ್ನು ಆಡಿದ್ದು ಐದು ಪಾಯಿಂಟ್‌ನೊಂದಿಗೆ ಅಂಕ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ವಿನಯ್ ಬಳಗ ಮೂರು ಪಂದ್ಯಗಳಲ್ಲಿ ಡ್ರಾ ಸಾಧಿಸಿ ಒಡಿಶಾ ವಿರುದ್ಧ ಸೋಲು ಕಂಡಿತ್ತು. ಆದರೆ, ಎದುರಾಳಿ ದೆಹಲಿ ಐದು ಪಂದ್ಯಗಳನ್ನಾಡಿದ್ದು 11 ಅಂಕ ಗಳಿಸಿದೆ. ಆದರೆ ಈ ತಂಡಕ್ಕೆ ಹಿಂದಿನ ಪಂದ್ಯದಲ್ಲಿ ಹರಿಯಾಣ ವಿರುದ್ಧ ಎದುರಾದ ಸೋಲು ಅರಗಿಸಿಕೊಳ್ಳಲು ಆಗುತ್ತಿಲ್ಲ.ಪುಟಿದೇಳುವ ವಿಶ್ವಾಸ: ಉತ್ತಮ ಬ್ಯಾಟ್ಸ್‌ಮನ್‌ಗಳನ್ನು ಹೊಂದಿರುವ ಶಿಖರ್ ಧವನ್ ನೇತೃತ್ವದ ದೆಹಲಿ ತಂಡ ಪುಟಿದೇಳುವ ವಿಶ್ವಾಸದಲ್ಲಿದೆ. 19 ವರ್ಷದೊಳಗಿನವರ ವಿಶ್ವಕಪ್ ಗೆದ್ದ ಭಾರತ ತಂಡದ ನೇತೃತ್ವ ವಹಿಸಿಕೊಂಡಿದ್ದ ಉನ್ಮುಕ್ತ್ ಚಾಂದ್, ಮೋಹಿತ್ ಶರ್ಮಾ, ಮಿಥುನ್ ಮನ್ಹಾಸ್ ಪ್ರಮುಖ ಆಟಗಾರರಿದ್ದಾರೆ. ವೇಗಿಗಳಾದ ವಿಕಾಸ್ ಮಿಶ್ರಾ, ಸುಮಿತ್ ಪ್ರಭಾವಿ ಬೌಲರ್‌ಗಳಾಗಿದ್ದಾರೆ. ಗಾಯಗೊಂಡಿದ್ದ ಆಶಿಶ್ ನೆಹ್ರಾ ಚೇತರಿಸಿಕೊಂಡಿದ್ದು ಕಣಕ್ಕಿಳಿಯುವ ಸಾಧ್ಯತೆಯಿದೆ. ಆದ್ದರಿಂದಲೇ ಈ ಎಡಗೈ ವೇಗಿ ಒಂದು ವಾರದಿಂದ ಬೌಲಿಂಗ್ ಅಭ್ಯಾಸ ನಡೆಸಿದ್ದಾರೆ.ಸಂಖ್ಯಾ ಬಲ: ರಣಜಿ ಇತಿಹಾಸದಲ್ಲಿ ಉಭಯ ತಂಡಗಳು 14 ಸಲ ಮುಖಾಮುಖಿಯಾಗಿವೆ. ನಾಲ್ಕು ಪಂದ್ಯಗಳಲ್ಲಿ ಕರ್ನಾಟಕ ಮತ್ತು ಒಂದು ಪಂದ್ಯದಲ್ಲಿ ದೆಹಲಿ ಗೆಲುವು ಸಾಧಿಸಿದೆ. ಒಂಬತ್ತು ಪಂದ್ಯಗಳು ಡ್ರಾದಲ್ಲಿ ಅಂತ್ಯ ಕಂಡಿವೆ. ದೆಹಲಿ ವಿರುದ್ಧದ ಅಂಕಿ ಸಂಖ್ಯೆ ಆತಿಥೇಯ ತಂಡದ ವಿಶ್ವಾಸಕ್ಕೆ ಬಲ ನೀಡಬಹುದು.   ತಂಡಗಳು 

ಕರ್ನಾಟಕ: ಆರ್ ವಿನಯ್ ಕುಮಾರ್ (ನಾಯಕ), ರಾಬಿನ್ ಉತ್ತಪ್ಪ, ಕೆ.ಎಲ್. ರಾಹುಲ್, ಗಣೇಶ್ ಸತೀಶ್, ಮನೀಷ್ ಪಾಂಡೆ, ಸಿ.ಎಂ. ಗೌತಮ್, ಕುನಾಲ್ ಕಪೂರ್, ಸ್ಟುವರ್ಟ್ ಬಿನ್ನಿ, ಅಭಿಮನ್ಯು ಮಿಥುನ್, ಕೆ.ಪಿ. ಅಪ್ಪಣ್ಣ, ಎಚ್.ಎಸ್. ಶರತ್, ಅಮಿತ್ ವರ್ಮಾ, ಎಸ್.ಎಲ್. ಅಕ್ಷಯ್, ಎಸ್.ಕೆ. ಮೊಯಿನುದ್ದೀನ್ ಹಾಗೂ ಕೆ.ಬಿ. ಪವನ್.ದೆಹಲಿ: ಶಿಖರ್ ಧವನ್ (ನಾಯಕ), ಉನ್ಮುಕ್ತ್ ಚಾಂದ್, ಮೋಹಿತ್ ಶರ್ಮ, ಮಿಥುನ್ ಮಿನ್ಹಾಸ್, ವೈಭವ್ ರಾವಲ್, ರಜತ್ ಭಾಟಿಯಾ, ಪುನಿತ್ ಬಿಸ್ಟ್, ಆಶಿಶ್ ನೆಹ್ರಾ, ಸುಮಿತ್ ನರ್ವಾಲ್, ಪರ್ವಿಂದರ್ ಸಾಂಗ್ವಾನ್, ಪವನ್ ಸುಯಾಲ್, ಪ್ರದೀಪ್ ಅವಾನ, ಎಸ್. ವರುಣ್, ಮಿಲಿಂದ್ ಕುಮಾರ್ ವಿಕಾಸ್ ಮಿಶ್ರಾ.ಅಂಪೈರ್: ರೋಹಾ ಆರ್. ಪಂಡಿತ್ ಹಾಗೂ ಆರ್.ಎಂ. ದೇಶಪಾಂಡೆ. ಪಂದ್ಯದ ರೆಫರಿ: ರಾಜೇಂದ್ರ ಜಡೇಜ.

ಪಂದ್ಯದ ಆರಂಭ: ಬೆಳಿಗ್ಗೆ 9.30ರಿಂದ 12.00. ಮಧ್ಯಾಹ್ನ 12.40ರಿಂದ 2.40. 3ರಿಂದ ಸಂಜೆ 4.30ರವರೆಗೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry