ಸೋಲೇ ಸೋಪಾನ ಯಶಸ್ಸು ಸಾವಧಾನ

7

ಸೋಲೇ ಸೋಪಾನ ಯಶಸ್ಸು ಸಾವಧಾನ

Published:
Updated:
ಸೋಲೇ ಸೋಪಾನ ಯಶಸ್ಸು ಸಾವಧಾನ

`ಮೊದಲನೇ ಸಿನಿಮಾ ದೊಡ್ಡ ಹಿಟ್ ಆಗುವುದು ಅಷ್ಟೇನೂ ಒಳ್ಳೆಯದಲ್ಲ. ಮೊದಲ ಚಿತ್ರವೇ ಯಶಸ್ಸು ಕಂಡರೆ ವ್ಯಕ್ತಿ ಬೆಳೆಯುವುದನ್ನೇ ನಿಲ್ಲಿಸಿಬಿಡುತ್ತಾನೆ. ನಿಮಗೆ ಯಶ, ಕೀರ್ತಿ ಸುಲಭವಾಗಿ ಸಿಕ್ಕಿಬಿಟ್ಟರೆ ಮನಸ್ಸು ಪಕ್ವವಾಗುವುದೇ ಇಲ್ಲ, ನನ್ನ ಪ್ರಕಾರ ಸೋನಂ ಸಿನಿಮಾ ಚೆನ್ನಾಗಿ ಓಡದೇ ಇದ್ದ್ದ್ದದು ಒಳ್ಳೆಯದೇ. ಇದೀಗ ಆಕೆ ನಟನೆಯಲ್ಲಿ ಪಕ್ವವಾಗುವುದು ಹೇಗೆ ಎಂದು ಯೋಚಿಸುತ್ತಿದ್ದಾಳೆ' ಹೀಗೆ ಮಗಳ ಕುರಿತು ವಿಮರ್ಶೆಯ ಮಾತುಗಳನ್ನು ಆಡಿದ್ದು 53ರ ಹರೆಯದ ನಟ ಅನಿಲ್ ಕಪೂರ್.ಬಾಲಿವುಡ್‌ನಲ್ಲಿ ಹಲವು ಸೋಲು, ಗೆಲುವುಗಳನ್ನು ಕಂಡುಂಡು ಪಳಗಿದ ನಟ ಅನಿಲ್ ಕಪೂರ್. ಈಗ ಅವರ ಮಕ್ಕಳಾದ ಸೋನಂ ಮತ್ತು ರಿಯಾ ಸಿನಿಮಾ ರಂಗದ ವಿವಿಧ ಆಯಾಮಗಳಲ್ಲಿ ಕೈಯಾಡಿಸುತ್ತಿದ್ದಾರೆ. ಮಕ್ಕಳ ಮಹತ್ವಾಕಾಂಕ್ಷೆಗಳಿಗೆ ನೀರೆರೆಯುತ್ತಿರುವ ಅನಿಲ್, ಬಾಲಿವುಡ್ ಬಗ್ಗೆ ತಮ್ಮ ನಿಲುವನ್ನೂ ಸ್ಪಷ್ಟಪಡಿಸಿದ್ದಾರೆ.`ಬಾಲಿವುಡ್ ಅತಿ ಕಠಿಣ ಹಾದಿ. ನಿಮ್ಮ ಮಕ್ಕಳು ಎಲ್ಲ ರೀತಿಯಿಂದಲೂ ಗೋಜಿಗೆ ಸಿಲುಕದ, ಸುರಕ್ಷಿತವಾದ ಹಾದಿಯನ್ನು ಆರಿಸಿಕೊಂಡರೆ ನಿರಾಳ ಭಾವವಿರುತ್ತದೆ. ಆದರೆ ಸಿನಿಮಾ ಹಾಗಲ್ಲ. ಇಲ್ಲಿ ಯಶಸ್ಸು ಮತ್ತು ಸೋಲು ಎರಡೂ ಜನರ ಕಣ್ಣಿಗೆ ಬೀಳುತ್ತವೆ. ಬೇರೆ ಕ್ಷೇತ್ರದಲ್ಲಿ ನಿಮಗಿಷ್ಟವಿಲ್ಲವೆಂದರೆ ಇನ್ನೊಂದನ್ನು ಆರಿಸಿಕೊಳ್ಳಬಹುದು. ಇದು ಯಾರಿಗೂ ತಿಳಿಯುವುದೂ ಇಲ್ಲ, ಯಾರೂ ತಲೆ ಕೆಡಿಸಿಕೊಳ್ಳುವುದಿಲ್ಲ. ಆದರೆ ಸಿನಿಮಾ ಹಾಗಲ್ಲ. ಇದು ಸವಾಲಿನ ವೃತ್ತಿ. ಸೋನಂ ಮತ್ತು ರಿಯಾ ಇಲ್ಲೇ ಮುಂದುವರೆಯಲು ನಿರ್ಧರಿಸಿದ್ದಾರೆ. ನಾನೂ ಅವರನ್ನು ಪ್ರೋತ್ಸಾಹಿಸುತ್ತಿದ್ದೇನೆ' ಎಂದಿದ್ದಾರೆ ಅನಿಲ್.ಸೋನಂ ಕಪೂರ್ ಬಾಲಿವುಡ್‌ನಲ್ಲಿ ನಟಿಯಾಗಿ ತಮ್ಮ ಛಾಪು ಮೂಡಿಸಿಕೊಂಡಿದ್ದರೆ, ರಿಯಾ ಕ್ಯಾಮೆರಾ ಹಿಂದೆಯೇ ಇರಲು ಬಯಸಿದ್ದಾರೆ. ಫ್ಯಾಷನ್ ಡಿಸೈನರ್ ಆಗಿದ್ದೂ ರಿಯಾ `ವೇಕ್ ಅಪ್ ಸಿದ್' ಸಿನಿಮಾಗೆ ಸಹ ನಿರ್ದೇಶಕಿಯಾಗಿಯೂ ಆಗಿಯೂ ತೊಡಗಿಕೊಂಡಿದ್ದರು. 2010ರಲ್ಲಿ `ಅಯೇಶಾ' ಚಿತ್ರ ನಿರ್ಮಾಪಕಿಯೂ ಆಗಿ ಬೆಳೆದಿದ್ದು, ಇದೀಗ `ಹೀರೋಗಿರಿ' ಸಿನಿಮಾದಲ್ಲಿ ತೊಡಗಿಕೊಂಡಿದ್ದಾರೆ. ಅನಿಲ್‌ಗೆ ಒಬ್ಬ ಮಗ ಇದ್ದು, ಆತನ ಹೆಸರು ಹರ್ಷವರ್ಧನ್.`ಸುಮ್ಮನೆ ಏನೋ ಮಾಡಿಕೊಂಡು ಸಮಯ ವ್ಯರ್ಥ ಮಾಡುವ ಬದಲು ಅವರು ಅತಿ ಚಿಕ್ಕ ವಯಸ್ಸಿನಲ್ಲಿಯೇ ಕೆಲಸ ಆರಂಭಿಸಿದರು. ಇದರರ್ಥ ಅವರು ಖುಷಿಯಾಗಿಲ್ಲ ಎಂದಲ್ಲ. ಎಲ್ಲ ಹುಡುಗಿಯರಿಗೂ ಸಿಗುವಂತಹ ಖುಷಿ, ಸಂತೋಷವನ್ನು ಅವರೂ ಅನುಭವಿಸಿದ್ದಾರೆ. ಆದರೆ ಅವರಿಗೆ ಕೆಲಸದ ಬಗ್ಗೆ ತುಂಬಾ ಆಸಕ್ತಿ. ವೃತ್ತಿಯ ಬಗ್ಗೆ ಚಿಕ್ಕವಯಸ್ಸಿನಲ್ಲಿಯೇ ಗೌರವ ರೂಢಿಸಿಕೊಂಡಿದ್ದಾರೆ. ಈ ಬಗ್ಗೆ ನನಗೆ ಹೆಮ್ಮೆಯೆನಿಸುತ್ತದೆ' ಎಂದು ಮಕ್ಕಳ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದರು.ರಣಬೀರ್-ಸೋನಂ ಜೋಡಿಯ ಮೊದಲ ಚಿತ್ರ `ಸಾವರಿಯಾ' ಬಾಕ್ಸಾಫೀಸ್‌ನಲ್ಲಿ ಸೋಲುಂಡಾಗ ತಾವು ಗೊಂದಲಕ್ಕೇನೂ ಈಡಾಗಲಿಲ್ಲ ಎನ್ನುವ ಅನಿಲ್ ಸೋಲೇ ಗೆಲುವಿನ ಸೋಪಾನ ಎಂದು ನಂಬಿದವರು. ಸಂಜಯ್‌ಲೀಲಾ ಬನ್ಸಾಲಿ ನಿರ್ದೇಶನದ `ಸಾವರಿಯಾ' ನಿರೀಕ್ಷೆಯನ್ನು ಹುಸಿಯಾಗಿಸಿ ದೊಡ್ಡ ಸೋಲನ್ನು ಅನುಭವಿಸಿತ್ತು.`ನನ್ನ ಪ್ರಕಾರ ಸೋನಂ ಸಿನಿಮಾ ಚೆನ್ನಾಗಿ ಓಡದೇ ಇದ್ದದ್ದು ಒಳ್ಳೆಯದೇ ಆಯಿತು. ರಣಬೀರ್ ಮತ್ತು ಸೋನಂ ಇಬ್ಬರೂ ಒಳ್ಳೆಯ ನಿರ್ದೇಶಕರೊಂದಿಗೆ, ತಮಗೆ ಒಪ್ಪುವಂತಹ, ಒಳ್ಳೆಯ ಸಿನಿಮಾಗಳಲ್ಲಿ ನಟಿಸುವತ್ತ ಚಿಂತಿಸುತ್ತಿದ್ದಾರೆ. ಅವರು ಪಕ್ವವಾಗುವ ಹಾದಿಯಲ್ಲಿದ್ದಾರೆ' ಎಂದು ಅನಿಲ್ ತಮ್ಮ ಅನಿಸಿಕೆಗೆ ಕಾರಣ ಕೊಡುತ್ತಾರೆ.`ನಿನ್ನಿಂದಲೇ ನಾನು ಈ ಮಟ್ಟಕ್ಕೆ ಬರಲು ಸಾಧ್ಯ ಎಂದು ಸೋನಂ ಹೇಳಬಹುದು. ಆದರೆ ಅವರು ಈ ಹಂತಕ್ಕೆ ಬರಲು ಆಕೆಯ ಶ್ರಮವಷ್ಟೇ ಕಾರಣ. ಈ ಕುರಿತು ನನಗೆ ಹೆಮ್ಮೆ ಎನಿಸುತ್ತದೆ. ಆಕೆಯ ಹಾದಿಯೂ ಸುಗಮವಾಗಿರಲಿಲ್ಲ. ಸೋನಂ ಅತಿ ಕಠಿಣ ಹಾದಿಯನ್ನು ಆರಿಸಿಕೊಂಡಿದ್ದಾಳೆ. ಆದರೆ ಅವಳ ಶ್ರಮವೇ ಅವಳಿಗೆ ಒಳ್ಳೆಯ ಪ್ರತಿಫಲ ತರುವುದು ಖಚಿತ. ಈಗ ಅವಳು ವಿಭಿನ್ನ ಪ್ರಾಜೆಕ್ಟ್‌ಗಳಲ್ಲಿ ಕೆಲಸ ಮಾಡುತ್ತಿದ್ದಾಳೆ. ಇದು ಆಕೆಯ ಆತ್ಮವಿಶ್ವಾಸದ ಪ್ರತೀಕ. ನನ್ನ ಮಾತುಗಳಲ್ಲಿ ನಿಮಗೆ ನಂಬಿಕೆಯಿರಲಿ. ಮುಂದೊಂದು ದಿನ ನಿಮಗೇ ತಿಳಿಯುತ್ತದೆ' ಎಂದು ಹೊಗಳಿಕೆಯ ಲಹರಿಗೆ ಇಳಿದು ಮಾತು ಮುಗಿಸಿದರು ಅನಿಲ್.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry