ಭಾನುವಾರ, ಜೂನ್ 20, 2021
28 °C

ಸೋಲ್‌ನಲ್ಲಿ ಪರಮಾಣು ಭದ್ರತೆ ಸಮಾವೇಶ:ಅಣ್ವಸ್ತ್ರ ಭಯೋತ್ಪಾದನೆ ವಿರುದ್ಧ ಭಾರತದ ನಿಲುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೋಲ್‌ನಲ್ಲಿ ಪರಮಾಣು ಭದ್ರತೆ ಸಮಾವೇಶ:ಅಣ್ವಸ್ತ್ರ ಭಯೋತ್ಪಾದನೆ ವಿರುದ್ಧ ಭಾರತದ ನಿಲುವು

ಸೋಲ್ (ಪಿಟಿಐ/ಐಎಎನ್‌ಎಸ್): ಪರಮಾಣು ಭಯೋತ್ಪಾದನೆ ಬೆದರಿಕೆ ವಿರುದ್ಧ ತನ್ನ ನಿಲುವು ಸ್ಪಷ್ಟಪಡಿಸುವುದು ಹಾಗೂ ಜಾಗತಿಕ ಸಮುದಾಯದ ಸಹಕಾರ ಕೋರಲು ಭಾರತ ಬದ್ಧವಾಗಿದೆ ಎಂದು ಪ್ರಧಾನಿ ಮನಮೋಹನ್ ಸಿಂಗ್ ಅವರು ಹೇಳಿದ್ದಾರೆ.ಇಲ್ಲಿ ನಡೆಯಲಿರುವ ಪರಮಾಣು ಭದ್ರತೆ ಸಮಾವೇಶದಲ್ಲಿ ಪಾಲ್ಗೊಳ್ಳುವ ಸಲುವಾಗಿ ಸಿಂಗ್ ಅವರು ನಾಲ್ಕು ದಿನಗಳ ಭೇಟಿಗಾಗಿ ಶನಿವಾರ ಬಂದಿಳಿದರು. ಸಮಾವೇಶದಲ್ಲಿ ಅಮೆರಿಕ, ಚೀನಾ ಸೇರಿದಂತೆ ಜಗತ್ತಿನ ಪ್ರಮುಖ 57 ರಾಷ್ಟ್ರಗಳು ಪಾಲ್ಗೊಳ್ಳಲಿವೆ. ಪರಮಾಣು ಅಸ್ತ್ರಗಳಿಂದ ಜಗತ್ತು ಮುಕ್ತವಾಗಬೇಕು ಎನ್ನುವ ಆಶಯ ಭಾರತದ್ದಾಗಿದೆ ಎಂದು ಸಿಂಗ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ, ರಷ್ಯಾ ಅಧ್ಯಕ್ಷ ಡಿಮಿಟ್ರಿ ಮೆಡ್ವಡೇವ್, ಚೀನಾ ಅಧ್ಯಕ್ಷ ಹು ಜಿಂಟಾವೊ ಸೇರಿದಂತೆ 45 ದೇಶಗಳ ಪ್ರಮುಖರು ಹಾಗೂ ಇತರ 13 ದೇಶಗಳ ಉಪ ಪ್ರಧಾನಿಗಳು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಅಲ್ಲದೆ ಆಸ್ಟ್ರೇಲಿಯಾ, ಜಪಾನ್, ಇಂಡೋನೇಷಿಯಾ, ಫ್ರಾನ್ಸ್ ಮತ್ತು ವಿಶ್ವಸಂಸ್ಥೆಯ ಪ್ರಮುಖರು ಸಮಾವೇಶದಲ್ಲಿ ಉಪಸ್ಥಿತರಿರುವರು.ಪಾಕಿಸ್ತಾನ ಪ್ರಧಾನ ಮಂತ್ರಿ ಯೂಸುಫ್ ರಜಾ ಗಿಲಾನಿ ಅವರೂ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದು, ಪ್ರಧಾನಿ ಸಿಂಗ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸುವ ಸಾಧ್ಯತೆ ಇದೆ. ಪ್ರಮುಖವಾಗಿ ಇಂಧನ ಕ್ಷೇತ್ರದಲ್ಲಿನ ಅಭಿವೃದ್ಧಿಗೆ ಆದ್ಯತೆ ನೀಡಿರುವ ಭಾರತ, ಪರಮಾಣು ಇಂಧನದ ಯೋಜನೆ ಬಗ್ಗೆ ಒಲವು ತೋರಿದೆ. ಇದರಿಂದ ದೇಶದ ಇಂಧನ ಭದ್ರತೆಗೆ ಸಹಕಾರಿಯಾಗಲಿದೆ. ಇದಕ್ಕೆ ಸಾರ್ವಜನಿಕರ ಸಹಕಾರವೂ ಅಗತ್ಯವಾಗಿದೆ.ಪರಮಾಣು ಭದ್ರತೆ ಮತ್ತು ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುವುದಾಗಿ ದೇಶದ ಜನರಿಗೆ ಭರವಸೆ ನೀಡುವುದಾಗಿ ಅವರು ಸ್ಪಷ್ಟಪಡಿಸಿದರು. ಕಳೆದ ವರ್ಷ ಜಪಾನ್‌ನ ಫುಕುಷಿಮಾನದಲ್ಲಿನ ಪರಮಾಣು ದುರಂತದ ನಂತರ ಪರಮಾಣು ಇಂಧನ ಸುರಕ್ಷತೆಯ ಬಗ್ಗೆ ಹೆಚ್ಚು ನಿಗಾ ವಹಿಸಿರುವುದಾಗಿ ಹೇಳಿದರು. ಇದೇ ಅಂಶ ಹಾಗು ಅಣ್ವಸ್ತ್ರ ಪ್ರಸರಣ ನಿಷೇಧಕ್ಕೆ ಸಮಾವೇಶದಲ್ಲಿ ಭಾರತ ಒತ್ತು ನೀಡಲಿದೆ ಎಂದರು.ಪರಮಾಣು ಭಯೋತ್ಪಾದನೆ ಬೆದರಿಕೆ ವಿರುದ್ಧ ಯಾವ ರೀತಿಯಲ್ಲಿ ಕಾರ್ಯತಂತ್ರ ರೂಪಿಸಬೇಕು ಎನ್ನುವುದು ಸಮಾವೇಶದ ಪ್ರಮುಖ ಅಂಶವಾಗಿದೆ ಎಂದು ವಿದೇಶಾಂಗ ಕಾರ್ಯದರ್ಶಿ ರಂಜನ್ ಮಥಾಯ್ ತಿಳಿಸಿದರು. ಸಮಾವೇಶದ ಹಿನ್ನೆಲೆಯಲ್ಲಿ ದಕ್ಷಿಣ ಕೊರಿಯಾ ಅಧ್ಯಕ್ಷ ಲೀ ಮಯೂಂಗ್‌ಬಾಕ್ ಮತ್ತು ಇತರ ದೇಶಗಳ ಪ್ರಮುಖರನ್ನು ಪ್ರಧಾನಿ ಸಿಂಗ್ ಅವರು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ. ಭಾರತ- ದಕ್ಷಿಣ ಕೊರಿಯಾ ನಡುವಣ ವೀಸಾ ವಿತರಣೆ ವ್ಯವಸ್ಥೆಯನ್ನು ಸರಳಗೊಳಿಸುವ ಕುರಿತ ಒಪ್ಪಂದಕ್ಕೆ ಉಭಯ ಮುಖಂಡರು ಸಹಿ ಹಾಕುವ ನಿರೀಕ್ಷೆ ಇದೆ.ಚೀನಾ, ಅಮೆರಿಕ ಜತೆ ಸ್ನೇಹ: ಚೀನಾ ಹಾಗೂ ಅಮೆರಿಕ ಜತೆಗೆ ಭಾರತ ಉತ್ತಮ ಸ್ನೇಹ ಸಂಬಂಧ ಹೊಂದಲು ಬಯಸುತ್ತದೆ ಎಂದು ಸಿಂಗ್ ದಕ್ಷಿಣ ಕೊರಿಯಾದ ದೈನಿಕ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.