ಸೌಂದರ್ಯದ ನಶೆ, ಚರಿತ್ರೆಯ ಪಶೆ

7

ಸೌಂದರ್ಯದ ನಶೆ, ಚರಿತ್ರೆಯ ಪಶೆ

Published:
Updated:

ಗೋವಾ ಗಡಿಯಂಚಿನಲ್ಲಿ ಇರುವ ಕರ್ನಾಟಕದ ಕಾರವಾರ ಒಂದು ಸುಂದರ ನಗರ. ಐತಿಹಾಸಿಕ ಸ್ಮಾರಕಗಳು, ರಮಣೀಯ ಕಡಲತೀರಗಳು, ವೈಭವೋಪೇತ ರೆಸಾರ್ಟ್‌ಗಳು, ದ್ವೀಪಸಮೂಹಗಳು ಹಾಗೂ ಪ್ರಾಚೀನ ದೇವಾಲಯ-ಮಸೀದಿಗಳಿಂದಾಗಿ ಕಾರವಾರಕ್ಕೆ ವಿಶಿಷ್ಟ ಸೌಂದರ್ಯ.

ರವೀಂದ್ರನಾಥ ಟ್ಯಾಗೋರರಿಂದ `ಕರ್ನಾಟಕದ ಕಾಶ್ಮೀರ~ ಎಂದು ಕರೆಸಿಕೊಂಡ ಹೆಮ್ಮೆ ಈ ಊರಿನದು. ಕಡಲತಡಿಯಗುಂಟ ಹಬ್ಬಿರುವ ಈ ನಗರದ ಒಂದು ಪಾರ್ಶ್ವದಲ್ಲಿ ಕಾಳಿ ನದಿಯು ಸಮುದ್ರ ಸೇರುವ ಸಂಗಮ ಸ್ಥಳವಿದೆ.

ಸಂಗಮದಿಂದ ಅನತಿ ದೂರದಲ್ಲಿರುವ ಬೃಹತ್ ಸೇತುವೆಯ ಮೂಲಕ ರಾಷ್ಟ್ರೀಯ ಹೆದ್ದಾರಿ 17 ಹಾದುಹೋಗಿದೆ. ಸೇತುವೆಯು ಮುಗಿಯುತ್ತಿದ್ದಂತೆಯೇ ಕಡಿದಾದ ಗುಡ್ಡವೊಂದನ್ನು ವಿಭಜಿಸಿ ರಸ್ತೆ ನಿರ್ಮಿಸಲಾಗಿದೆ.ಈ ಗುಡ್ಡದ ತುದಿಯಲ್ಲಿದೆ ಸದಾಶಿವಗಡ ಕೋಟೆ.ಕಾರವಾರದಿಂದ ಸುಮಾರು 4 ಕಿಮೀ ದೂರದಲ್ಲಿರುವ ಸದಾಶಿವಗಡ ಎಂಬ ಊರಿನಲ್ಲಿರುವ ಈ ಕೋಟೆಗೆ ಐತಿಹಾಸಿಕ ಹಿನ್ನೆಲೆಯಿದೆ. ಸದಾಶಿವಗಡದ ಮೂಲ ಹೆಸರು ಚಿತ್ತಕುಲ. ಮೌರ್ಯರು, ಚಾಲುಕ್ಯರು, ಹೊಯ್ಸಳರು, ವಿಜಯನಗರದ ಅರಸರು, ಬಿಜಾಪುರದ ಸುಲ್ತಾನರು ಸೇರಿದಂತೆ ಅನೇಕರು ಈ ಪ್ರದೇಶದಲ್ಲಿ ಆಳ್ವಿಕೆ ನಡೆಸಿದ್ದಾರೆ.ಅನೇಕರನ್ನು ಸಲಹಿದ ಪುರಾತನ ಕೋಟೆ 16ನೇ ಶತಮಾನದಲ್ಲಿ ಪೋರ್ಚುಗೀಸರ ದಾಳಿಯಿಂದ ಘಾಸಿಗೊಂಡಿತ್ತು. ಹಾನಿಗೊಳಗಾದ ಈ ಕೋಟೆಯನ್ನು ಸೋಂದೆಯ ಅರಸನಾದ ಸದಾಶಿವಲಿಂಗರಾಜನು ಪುನರ್ ನಿರ್ಮಿಸಿದನು.

ಆತನ ಕಾಲಾನಂತರ ಬಸವಲಿಂಗರಾಜನು 1715ರಲ್ಲಿ ತನ್ನ ತಂದೆಯ ನೆನಪಿಗಾಗಿ ಈ ಕಾವಲುಕೋಟೆಗೆ  ಸದಾಶಿವಗಡ ಕೋಟೆ ಎಂದು ನಾಮಕರಣ ಮಾಡಿದನು. ಕೋಟೆಯ ತಳದಲ್ಲಿರುವ ಊರನ್ನು ಸದಾಶಿವಗಡವೆಂದು ಕರೆಯಲಾಯಿತು. ಆದರೆ 1783ರಲ್ಲಿ ಜನರಲ್ ಮ್ಯಾಥ್ಯೂಸ್ ನೇತೃತ್ವದ ಬ್ರಿಟಿಷ್ ಪಡೆ ಕೋಟೆಯನ್ನು ಭಾಗಶಃ ಧ್ವಂಸ ಮಾಡಿತು.ಸುಮಾರು 60 ಅಡಿ ಎತ್ತರದಲ್ಲಿರುವ ಸದಾಶಿವಗಡ ಕೋಟೆ ಇರುವ ಗುಡ್ಡದ ನಡುಭಾಗದಲ್ಲಿ ಶಾಂತಾದುರ್ಗಾ ದೇವಿಯ ದೇವಸ್ಥಾನ ಇದೆ. 1665ರಲ್ಲಿ ಶಿವಾಜಿ ಈ ದೇಗುಲವನ್ನು ನಿರ್ಮಿಸಿದ. ಮರಾಠರು ಕ್ಷಾತ್ರ ತೇಜಸ್ಸಿನಿಂದ ಪ್ರಜ್ವಲಿಸುತ್ತಿದ್ದ ಸಮಯದಲ್ಲಿ ಶಿವಾಜಿಯು ಕಾರವಾರ ಮತ್ತು ಅಂಕೋಲಗಳನ್ನು ಆಕ್ರಮಿಸಿಕೊಂಡ.ನಂತರ ಬಿಜಾಪುರ ಸುಲ್ತಾನರೊಂದಿಗೆ ಒಪ್ಪಂ ಮಾಡಿಕೊಂಡು ಹೊರಟಾಗ ಶ್ರೀದೇವಿಯ ವಿಗ್ರಹವನ್ನು ಪ್ರತಿಷ್ಠಾಪಿಸಿ, ಮಂದಿರದ ಉಸ್ತುವಾರಿಯನ್ನು ಸ್ಥಳೀಯ ಭಂಡಾರಿಗಳಿಗೆ ನೀಡಿದರೆನ್ನಲಾಗಿದೆ. ದೇವಾಲಯದ ಕೆಳಭಾಗದಲ್ಲಿ ಸೂಫೀಸಂತ ಶಾ ಶಂಸುದ್ದೀನ್ ಖರಬತ್ ಅಲಿಯಾಸ್ ಕರಿಮುದ್ದೀನ್ ಗೌಸ್-ಎ-ಅಜಮ್ ಅಬ್ದುಲ್ ಖಾದಿರ್ ಸಮಾಧಿಯಿದೆ. ದೇಗುಲ- ಮಸೀದಿ ಎರಡರಿಂದಾಗಿ ಈ ಸ್ಥಳವು ಹಿಂದೂ ಮುಸ್ಲಿಂ ಭಾವೈಕ್ಯತೆಯ ರೂಪಕದಂತಿದೆ.ಸದಾಶಿವಗಡದಿಂದ ಗುಡ್ಡದ ತಳಭಾಗದಲ್ಲಿರುವ ಕಿರಿದಾದ ರಸ್ತೆಯನ್ನೇರುತ್ತ 300 ಮೀ ಸಾಗಿದರೆ ಕೋಟೆಯ ಪ್ರವೇಶದ್ವಾರವು ಕಾಣಸಿಗುತ್ತದೆ. ಕೋಟೆಯ ಬಲಿಷ್ಠ ಗೋಡೆಗಳನ್ನು ಹಾಗೂ ಅವುಗಳನ್ನು ಆವರಿಸಿರುವ ದಟ್ಟ ಸಸ್ಯಸಂಕುಲಗಳನ್ನು ನೋಡುತ್ತ ಮುಂದೆ ಸಾಗಿದರೆ ಸಮತಟ್ಟಾದ ಸ್ಥಳದಲ್ಲಿ ಉಪಹಾರ ಗೃಹ ಹಾಗೂ ಖಾಸಗಿ ರೆಸಾರ್ಟ್‌ಗಳು ಸಿಗುತ್ತವೆ.

ಆನಂತರ ಉದ್ಯಾನವೊಂದು ಎದುರಾಗುತ್ತದೆ. ಇದರ ಅಂಚಿನಲ್ಲಿಯೇ ಕೋಟೆಯ ಗೋಡೆ, ಕಲ್ಲಿನ ತೋಪು, ಗೋಪುರ ಹಾಗೂ ಕಲ್ಲಿನ ಕುದುರೆಗಳಿವೆ. ಈ ಕುದುರೆಯ ಹೊಟ್ಟೆಯಲ್ಲಿ ಒಬ್ಬ ಮನುಷ್ಯನು ಕುಳಿತಿರಬಹುದಾದಷ್ಟು ಜಾಗವಿದೆ. ಶತ್ರುಗಳ ಚಲನವಲನಗಳನ್ನು ವೀಕ್ಷಿಸಲೆಂದೇ ಈ ಕುದುರೆಯನ್ನು  ತಯಾರಿಸಲಾಗಿತ್ತಂತೆ.

ಈ ಎತ್ತರದ ಸ್ಥಳದಿಂದ ಕಾಣುವ ದೃಶ್ಯಾವಳಿ ವರ್ಣನಾತೀತ. ಪಶ್ಚಿಮದಿಕ್ಕಿನಲ್ಲಿ ಕೂರ್ಮಗಡ, ಮಾದ್ಲಿಂಗಡ, ದೇವಗಡ ಹಾಗೂ ಅಂಜುದೀವ್ ದ್ವೀಪಗಳನ್ನೊಳಗೊಂಡ, ಕಾರವಾರದಿಂದ ಮಾಜಾಳಿವರೆಗಿನ ವಿಶಾಲ ಕಡಲತೀರ ಹಾಗೂ ಪೂರ್ವದಲ್ಲಿ ಕಾಳಿ ಕಣಿವೆಯ ಸೊಬಗು ಕಣ್ಮನ ಸೂರೆಗೊಳ್ಳುತ್ತದೆ.ಕಾಳಿ ಸೇತುವೆಯ ಅಗಾಧತೆ ಹಾಗೂ ಗುಡ್ಡವನ್ನು ಇಬ್ಭಾಗಿಸಿ ಕಣಿವೆ ನಿರ್ಮಿಸಿ ಹಾವಿನಂತೆ ಚಲಿಸಿರುವ ರಸ್ತೆಗಳ ಮನೋಹರ ಸೌಂದರ್ಯವು ಮನಸೂರೆಗೊಳ್ಳುತ್ತದೆ. ವಿಭಜಿತ ಗುಡ್ಡದ ಇನ್ನೊಂದು ತುದಿಯನ್ನೇರಲು ಮೆಟ್ಟಿಲುಗಳಿವೆ. ಅಲ್ಲಿಂದಲೂ ಕಾಳಿ ಸಂಗಮದ ಸೌಂದರ್ಯವನ್ನು ಸವಿಯಬಹುದು.ಸೂರ್ಯಾಸ್ತ ಹಾಗೂ ಸೂರ್ಯೋದಯದ ಸೌಂದರ್ಯ ಕಣ್ತುಂಬಿಕೊಳ್ಳಲು ಸದಾಶಿವಗಡ ಕೋಟೆ ಪ್ರಶಸ್ತ ಸ್ಥಳ.  ಪ್ರಕೃತಿಪ್ರಿಯರಿಗೆ ಕೋಟೆಯು ಹೇಳಿಮಾಡಿಸಿದ ಪರಿಸರ. ಕದ್ರಾ ಆಣೆಕಟ್ಟು, ವಜ್ರ ಜಲಪಾತ, ದೇವಭಾಗ್, ಕೂರ್ಮಗಡ, ಕಾಳೀದ್ವೀಪ, ರವೀಂದ್ರನಾಥ ಟ್ಯಾಗೋರ್ ಕಡಲತೀರ, ಕಾರವಾರ ಬಂದರು ಮುಂತಾದವು ಸದಾಶಿವಗಡಕ್ಕೆ ಸಮೀಪದಲ್ಲಿವೆ.

ಸದಾಶಿವಗಡದವರೆಗೆ ಬರಲು ಕರ್ನಾಟಕ ಹಾಗೂ ಗೋವಾ ರಾಜ್ಯಸಾರಿಗೆ ಬಸ್ಸುಗಳಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry