ಸೌಂದರ್ಯಶಾಸ್ತ್ರದಿಂದ ಹೊಸ ಆಲೋಚನೆ- ಮಲ್ಲೇಪುರಂ

7

ಸೌಂದರ್ಯಶಾಸ್ತ್ರದಿಂದ ಹೊಸ ಆಲೋಚನೆ- ಮಲ್ಲೇಪುರಂ

Published:
Updated:

ಬೆಂಗಳೂರು: `ಭಾರತೀಯ ಸೌಂದರ್ಯಶಾಸ್ತ್ರದ ಬಗ್ಗೆ ಮಾತನಾಡುವವರಿಗೆ ತತ್ವಶಾಸ್ತ್ರದ ತಿಳಿವಳಿಕೆ ಇರಬೇಕು~ ಎಂದು ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ ತಿಳಿಸಿದರು.

ಕರ್ನಾಟಕ ಲಲಿತಕಲಾ ಅಕಾಡೆಮಿಯ ಆಶ್ರಯದಲ್ಲಿ ನಗರದ ಕನ್ನಡ ಭವನದಲ್ಲಿ ಗುರುವಾರ ನಡೆದ ವಿಶೇಷ ಉಪನ್ಯಾಸ ಮಾಲಿಕೆಯಲ್ಲಿ `ಭಾರತೀಯ ಸೌಂದರ್ಯಶಾಸ್ತ್ರ~ ಕುರಿತು ಉಪನ್ಯಾಸ ನೀಡಿದರು.`ಸೌಂದರ್ಯಶಾಸ್ತ್ರ ಪ್ರವೇಶವೆಂದರೆ ತತ್ವಶಾಸ್ತ್ರದ ಪ್ರವೇಶದಂತೆ. ಪ್ರಾಚೀನ ಕಾಲದಲ್ಲಿ ಭಾರತೀಯ ಸೌಂದರ್ಯಶಾಸ್ತ್ರವನ್ನು ಭಾರತೀಯ ಕಾವ್ಯ ಮೀಮಾಂಸೆಯ ದೃಷ್ಟಿಯಿಂದಲೂ ಅಧ್ಯಯನ ಮಾಡಲಾಗಿದೆ~ ಎಂದು ಅವರು ಅಭಿಪ್ರಾಯಪಟ್ಟರು.`ಪ್ರಾಚೀನ ಸೌಂದರ್ಯಶಾಸ್ತ್ರವನ್ನು ಹೊಸ ದೃಷ್ಟಿಕೋನದಿಂದಲೂ ನೋಡಲು ಸಾಧ್ಯವಿದೆ. ಸಮುದಾಯ ಸೌಂದರ್ಯದ ಪ್ರತೀಕ ಆಗಿರಬೇಕು. ಉದಾರೀಕರಣ, ಕೊಳ್ಳುಬಾಕ ಸಂಸ್ಕೃತಿಯ ಈ ಯುಗದಲ್ಲಿ ಮನುಷ್ಯನಿಗೆ ಸೌಂದರ್ಯಶಾಸ್ತ್ರ ಹೊಸ ಆಲೋಚನೆಗಳನ್ನು ನೀಡುತ್ತದೆ. ಇದು ಸಮಾಜದ ಏಳಿಗೆಗೆ ಹೊಸ ಚಿಂತನೆ ನೀಡುತ್ತದೆ~ ಎಂದು ಅವರು ತಿಳಿಸಿದರು.`ಭಾರತೀಯ ಸೌಂದರ್ಯಶಾಸ್ತ್ರ ತಾತ್ವಿಕ ಚರ್ಚೆಗೆ ಹಾಗೂ ಆರಾಧನರೂಪಿ ನೆಲೆಗೆ ಮಾತ್ರ ಸೀಮಿತ ಅಲ್ಲ. ಸಮಾಜದ ಭಾಗವಾಗಿ ಈ ಶಾಸ್ತ್ರ ಬೆಳೆದಿದೆ~ ಎಂದರು. ಕರ್ನಾಟಕ ಲಲಿತಕಲಾ ಅಕಾಡೆಮಿಯ ಅಧ್ಯಕ್ಷ ಚಿ.ಸು. ಕೃಷ್ಣಸೆಟ್ಟಿ ಅಧ್ಯಕ್ಷತೆ ವಹಿಸಿ, `ರಾಜ್ಯದ ಮೂಲೆ ಮೂಲೆಗೂ ಅಕಾಡೆಮಿಯ ಚಟುವಟಿಕೆಗಳು ತಲುಪಬೇಕು ಎಂಬ ಉದ್ದೇಶದಿಂದ ಕಾರ್ಯಕ್ರಮಗಳನ್ನು ಹಮ್ಮಿ ಕೊಳ್ಳಲಾಗುತ್ತಿದೆ. ಕಲೆಗಳ ಬಗ್ಗೆ ಸಮಗ್ರ ಮಾಹಿತಿ ನೀಡುವ ಉದ್ದೇಶದಿಂದ ಪ್ರತಿ ತಿಂಗಳ ಮೂರನೇ ಗುರುವಾರ ವಿಶೇಷ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ~ ಎಂದರು.

ಅಕಾಡೆಮಿಯ ರಿಜಿಸ್ಟ್ರಾರ್ ಸುಧೀಂದ್ರ ಉಪಸ್ಥಿತರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry