ಶನಿವಾರ, ಮೇ 8, 2021
20 °C

ಸೌಂದರ್ಯ `ವೃದ್ಧಿ' ಎಂಬ ಉದ್ಯಮ

ಸುಶೀಲಾ ಡೋಣೂರ Updated:

ಅಕ್ಷರ ಗಾತ್ರ : | |

ದಿನಗಳೆದಂತೆ ಚರ್ಮ ಸುಕ್ಕಾಗಬಹುದು, ಮುಖಕಾಂತಿ ಕುಗ್ಗಬಹುದು, ಸೌಂದರ್ಯದ ಮಾಸಬಹುದು. ಆದರೆ ಸೌಂದರ್ಯ ವೃದ್ಧಿ ಎಂಬ ಉದ್ಯಮ ಕ್ಷೇತ್ರದ ಚೆಲುವು ಕುಂದುವುದಿಲ್ಲ. ಅದು ವರ್ಷದಿಂದ ವರ್ಷಕ್ಕೆ ತನ್ನ ಹೊಳಪನ್ನು ಹೆಚ್ಚಿಸಿಕೊಳ್ಳುತ್ತಲೇ ಸಾಗಿದೆ. ದಿನದಿಂದ ದಿನಕ್ಕೆ ಹೊಸ ಮೆರುಗು ಪಡೆದುಕೊಳ್ಳುತ್ತಿರುವ ಈ ಸೌಂದರ್ಯ ರಕ್ಷಣೆ ಸಾಮಗ್ರಿಗಳ ತಯಾರಿಕೆ ಮತ್ತು ಮಾರಾಟದ ಕ್ಷೇತ್ರ ಮುಂದಿನ ನೂರಾರು ವರ್ಷಗಳ ಕಾಲ ಬಣ್ಣ ಕಳೆದುಕೊಳ್ಳಲು ಸಾಧ್ಯವೇ ಇಲ್ಲ.ಬದಲಾಗಿ ಇನ್ನೂ ಹೊಸ ರಂಗು ಪಡೆದುಕೊಳ್ಳುತ್ತಾ ಜಗತ್ತನ್ನಾಳುವ ಕ್ಷೇತ್ರವಾಗಲಿದೆ ಎನ್ನುತ್ತಾರೆ ತಜ್ಞರು.

`ಸೌಂದರ್ಯ ವೃದ್ಧಿಸುವ ಕ್ಷೇತ್ರ' ಈ ಹೊತ್ತಿನ ಮಟ್ಟಿಗೆ ಕೇವಲ ಒಂದು ಉದ್ಯಮ ವಲಯವಲ್ಲ. ಹೆಚ್ಚು ವ್ಯಾಪಕ, ಹತ್ತಾರು ಮಜಲು, ಸೀಮಾತೀತ ಕ್ಷೇತ್ರ. ತನ್ನ ಒಡಲಲ್ಲಿ ಅಪರಿಮಿತ ಅವಕಾಶಗಳನ್ನು ಹುದುಗಿಸಿ ಇಟ್ಟುಕೊಂಡಿರುವ ಮಹತ್ವದ ಉದ್ಯಮ-ಉದ್ಯೋಗದ ವಲಯ.

ಹೆಜ್ಜೆ ಗುರುತು...1991ರಿಂದ ಈಚೆಗೆ ಉದಾರೀಕರಣದ ಪರಿಣಾಮ ಭಾರತೀಯರ ಜೀವನಶೈಲಿ, ಬದುಕಿನ ಗುಣಮಟ್ಟ, ಮನೋಭಾವ ಹಾಗೂ ಆಚಾರ-ವಿಚಾರಗಳಲ್ಲಿ ಸಾಕಷ್ಟು ಬದಲಾವಣೆಗಳಾದವು. ಅದೇ ಸಂದರ್ಭದಲ್ಲಿ ಈ ಬೆಳವಣಿಗೆಯ ಲಾಭ ಪಡೆದ ಸೌಂದರ್ಯವರ್ಧಕ ಹಾಗೂ ಸೌಂದರ್ಯ ಸೇವೆಗಳ ಉದ್ಯಮವೂ ಬೃಹತ್ ಪ್ರಮಾಣದಲ್ಲಿ ಪ್ರಚಾರ ಆರಂಭಿಸಿತು.ಅಲ್ಲಿಯವರೆಗೂ ಕೇವಲ ಫ್ಯಾಷನ್ ಲೋಕದ ಲತಾಂಗಿಯರ ಮುಖದ ಮೇಲೆ ಹೊಳೆಯುತ್ತಿದ್ದ ರಂಗು, ನಂತರದ ದಿನಗಳಲ್ಲಿ ಕಾಲೇಜು ಕ್ಯಾಂಪಸ್‌ನಲ್ಲಿ ನಿಂತ ಹುಡುಗಿಯರ ಮುಖದ ಮೇಲೂ ಹರಡಿತು. ರ‌್ಯಾಂಪ್ ಮೇಲೆ ಹೆಜ್ಜೆ ಹಾಕುವ ಬೆಕ್ಕಿನ ನಡಿಗೆಯ ಹುಡುಗಿಯರಷ್ಟೇ ಅಲ್ಲದೇ, ಗ್ಲಾಮರಸ್‌ಗೆ ಸಂಬಂಧಿಸಿದ ಇತರ ವೃತ್ತಿಗಳಲ್ಲಿ ತೊಡಗಿಕೊಂಡ ವನಿತೆಯರೂ ಕಣ್ಣು ಕೋರೈಸುವ ಪ್ರಸಾಧನಗಳ ಮೋಡಿಗೆ ಒಳಗಾದರು.ದಶಕದ ಹಿಂದಷ್ಟೇ ತಿರುಗಿ ನೋಡಿದರೆ ಸೌಂದರ್ಯವರ್ಧಕಗಳು ಫ್ಯಾಷನ್ ಲೋಕದ ಸ್ವತ್ತಾಗಿಯೇ ಉಳಿದಿದ್ದವು. ಅದು ಬಿಟ್ಟರೆ, ಮೇಲ್ಮಧ್ಯಮ ವರ್ಗದ ದುಡಿಯುವ ಮಹಿಳೆಯರಲ್ಲಿ ಸಾಂದರ್ಭಿಕವಾಗಿ ಬಳಕೆಯಾಗುತ್ತಿದ್ದವು. ನಂತರದ ದಿನಗಳಲ್ಲಿ ವಿದೇಶಿ ಸಂಸ್ಕೃತಿಯ ಅನುಕರಣೆ, ಸಿನಿಮಾ, ರಿಯಾಲಿಟಿ ಷೋ, ಧಾರಾವಾಹಿಗಳ ಪ್ರಭಾವದಿಂದಾಗಿ ಮಧ್ಯಮ ವರ್ಗದ ಗೃಹಿಣಿಯರೂ ಬ್ರಾಂಡೆಡ್ ಸೌಂದರ್ಯವರ್ಧಕಗಳ ಮತ್ತು ಸೇವೆಗಳ ಸೆಳೆತಕ್ಕೆ ಸಿಕ್ಕರು.ಮೊದಲೆಲ್ಲ ಸಭೆ- ಸಮಾರಂಭಗಳಿಗಷ್ಟೇ ಸೀಮಿತವಾಗಿದ್ದ ಮುಖಕಾಂತಿ ವರ್ಧಕಗಳು ನಂತರದ ದಿನಗಳಲ್ಲಿ ಸಾಮಾನ್ಯ ಜನರ ದಿನಬಳಕೆಯ ಸಾಮಗ್ರಿಗಳ ಪಟ್ಟಿಗೆ ಸೇರಿದವು. ಇತ್ತೀಚೆಗಂತೂ ಸೌಂದರ್ಯವರ್ಧಕಗಳು ಮನೆ ಮನೆಯ ಮಾತಾಗಿವೆ. ಜಿಲ್ಲೆ-ತಾಲ್ಲೂಕು ಮಟ್ಟದಲ್ಲಿಯೂ ಬ್ಯೂಟಿ ಸಲೂನ್, ಸ್ಪಾಗಳು ಮೊಳಕೆಯೊಡೆದಿವೆ. ಪರಿಣಾಮ ಗ್ರಾಮಾಂತರ ಮಹಿಳೆಯರೂ ಸಭೆ-ಸಮಾರಂಭಗಳಿಗೆ ತೆರಳುವ ಮುನ್ನಾದಿನ ಪಾರ್ಲರ್‌ಗಳ ಬಾಗಿಲಿಗೆ ಹೋಗಿ ನಿಲ್ಲುವುದು ಸಾಮಾನ್ಯ ಎನಿಸಿಬಿಟ್ಟಿದೆ.ದಶಕಗಳ ಹಿಂದೆ ಸೌಂದರ್ಯ ವರ್ಧಕಗಳ ಬಳಕೆ ಚರ್ಮ ಅಥವಾ ಕೇಶದ ಹಾನಿಗೆ ಕಾರಣವಾಗುತ್ತದೆ ಎಂಬ ಭಯವಿತ್ತು. ಆದರೆ ನಿರಂತರ ಸಂಶೋಧನೆ ಹಾಗೂ ಹೊಸ ಪ್ರಯತ್ನಗಳ ಫಲವಾಗಿ ಉತ್ತನ್ನಗಳ ಗುಣಮಟ್ಟದಲ್ಲಿ ಗಣನೀಯ ಸುಧಾರಣೆ ಕಂಡು ಬಂದಿದೆ. ಮಾತ್ರವಲ್ಲ, ಚರ್ಮದ ಅಂಗಾಂಶಗಳಿಂದ ಕೂದಲಿನ ಬೇರಿನವರೆಗೂ ದುರಸ್ತಿ ಕಾರ್ಯದ ಚಿಕಿತ್ಸೆ ಪ್ರಚಲಿತ ವಿದ್ಯಮಾನವಾಗಿ ಬೆಳೆಯುತ್ತಿದೆ.ಕಡಿಮೆ ಅವಧಿಯಲ್ಲಿ ಬಹಳ ವೇಗದ ಯಶಸ್ಸು ಗಳಿಸಿರುವ ಹಾಗೂ ಅಭಿವೃದ್ಧಿ ಹಾದಿಯಲ್ಲಿಯೇ ಸಾಗುತ್ತಿರುವ ಸೌಂದರ್ಯ ವೃದ್ಧಿ ಸಾಮಗ್ರಿಗಳ ಉದ್ಯಮದ ಈ ಬೆಳವಣಿಗೆಗೆ ಹಲವು ಕಾರಣಗಳನ್ನು ಗುರುತಿಸಬಹುದು:ಜನರಲ್ಲಿ ಖರೀದಿಸುವ ಸಾಮರ್ಥ್ಯ ಹೆಚ್ಚಳ

* ಹೆಚ್ಚುತ್ತಿರುವ ಫ್ಯಾಷನ್ ಪ್ರಜ್ಞೆ

*  ಸುಲಭ ಲಭ್ಯ ಸೌಂದರ್ಯ ವರ್ಧಕ ಮತ್ತು ಸೇವೆಗಳು

*  ಹೆಚ್ಚಿದ ಹೊರನೋಟ, ಪ್ರದರ್ಶನದ ಮಹತ್ವ ಇತ್ಯಾದಿ.ಉದ್ಯಮದ ವಿವಿಧ ಮಜಲು

ಸೌಂದರ್ಯ ಕ್ಷೇತ್ರವನ್ನು ಐದು ಭಾಗಗಳಲ್ಲಿ ವಿಂಗಡಿಸಬಹುದು.

* ಚರ್ಮ ಆರೈಕೆ(ಸ್ಕಿನ್ ಕೇರ್) ಶೇ 27

*ಕೇಶ ಆರೈಕೆ (ಹೇರ್ ಕೇರ್) ಶೇ 20

* ಮೇಕಪ್ ಶೇ 20

* ಸುಗಂಧ ದ್ರವ್ಯ ಶೇ 10

*  ಇತರೆ  ಶೇ 23ಚರ್ಮದ ಆರೈಕೆ

ಸೌಂದರ್ಯವರ್ಧಕಗಳ ಒಟ್ಟಾರೆ ಮಾರುಕಟ್ಟೆಯಲ್ಲಿ ಶೇ 27ರಷ್ಟು ದೊಡ್ಡ ಪಾಲನ್ನು ತನ್ನದಾಗಿಸಿಕೊಂಡಿರುವ ಚರ್ಮ ಆರೈಕೆ ಉತ್ಪನ್ನಗಳ ವ್ಯಾಪ್ತಿ ಬಹಳ ವೈವಿಧ್ಯಮಯ. ಮಾಯಿಶ್ಚರೈಸರ್, ಕ್ಲೆನ್ಸರ್, ಟೋನರ್ಸ್‌, ಮುಖದ ಮೇಲಿನ ಮೊಡವೆ, ಕಪ್ಪು ಕಲೆ ಹಾಗೂ ಸುಕ್ಕು ನಿವಾರಕಗಳು, ಮುಖಕಾಂತಿ ಹೆಚ್ಚಿಸುವ, ಗೌರವರ್ಣ ನೀಡುವ ಜೆಲ್ ಮತ್ತು ಕ್ರೀಮ್‌ಗಳು ಸೇರಿದಂತೆ ವಿವಿಧ ಉತ್ಪನ್ನಗಳಿಗೆ ನಿರಂತರ ಬೇಡಿಕೆ ಇದೆ.ಕೇಶ ಆರೈಕೆ

ಒಟ್ಟು ಮಾರುಕಟ್ಟೆಯ ಶೇ 20ರಷ್ಟು ಪಾಲು ಪಡೆದಿರುವ ಕೇಶ ಆರೈಕೆ ಉತ್ಪನ್ನಗಳಲ್ಲಿ ಶಾಂಪೂ ಅತಿಹೆಚ್ಚು ಬಳಕೆಯಾಗುವ ದ್ರವ್ಯ. ನಂತರದ ಸ್ಥಾನದಲ್ಲಿ ಹೇರ್ ಕಂಡೀಷನರ್, ಸ್ಟೈಲಿಂಗ್ ಮತ್ತು ಕಲರಿಂಗ್ ಉತ್ಪನ್ನಗಳು ಸೇರಿವೆ. ಕೂದಲು ರಿಪೇರಿ ಚಿಕಿತ್ಸೆ, ಸ್ಪಾ ಚಿಕಿತ್ಸೆ, ಕೂದಲು ಕಸಿ (transplants) ಕೂದಲು ನೇಯ್ಗೆ (hair weaves) ಮುಂತಾದ ಹೊಸ ಸೇವೆಗಳೂ ಈ ವಿಭಾಗದ ಹೊಸ ವಿದ್ಯಮಾನ.ಚರ್ಮದ ಆರೈಕೆ ಹಾಗೂ ಕೇಶ ಆರೈಕೆಗಾಗಿ ಶೇ 80ರಷ್ಟು ಮಹಿಳೆಯರು ತಿಂಗಳಿಗೊಮ್ಮೆ ಬ್ಯೂಟಿ ಸಲೂನ್ ಅಥವಾ ಸ್ಪಾಗಳಿಗೆ ಭೇಟಿ ನೀಡುತ್ತಾರೆ. ರೂ 500ರಿಂದ ರೂ 5000ದವರೆಗೂ ಖರ್ಚು ಮಾಡುತ್ತಾರೆ.

ಮೇಕಪ್

ಮುಖ ಸೌಂದರ್ಯಕ್ಕೆ ಸಂಬಂಧಿಸಿದ ಫೌಂಡೇಷನ್, ಲಿಪ್‌ಸ್ಟಿಕ್, ಲಿಪ್‌ಲೈನರ್, ಲಿಪ್‌ಬಾಮ್, ನೇಲ್‌ಪಾಲಿಶ್, ನೇಲ್ ಎನಾಮಲ್, ಐಬ್ರೊ ಪೆನ್ಸಿಲ್ಸ್, ಮಸ್ಕರಾ, ಐ ಲೈನರ್ ಮುಂತಾದವನ್ನು ಈ ಪಟ್ಟಿಗೆ ಸೇರಿಸಬಹುದು.  ಸಭೆ-ಸಮಾರಂಭಗಳಿಗೆ ಹೋಗುವಾಗ ಶೇ 72ರಷ್ಟು ಮಹಿಳೆಯರು ಪಾರ್ಲರ್‌ಅಥವಾ ಸಲೂನ್ ಸ್ಪಾಗಳಿಗೆ ಮೇಕಪ್‌ಗಾಗಿ ಭೇಟಿ ನೀಡುತ್ತಾರೆ ಎಂಬುದು ಗಮನಾರ್ಹ ಅಂಶ.ಸುಗಂಧ ದ್ರವ್ಯ

ಕೆಲ ವರ್ಷಗಳಿಂದೀಚೆಗೆ ಹೆಚ್ಚು ವ್ಯಾಪಕವಾಗುತ್ತಿದೆ ಈ ಪರಿಮಳ ದ್ರವ್ಯದ ಮಾಯೆ. ಮಾರುಕಟ್ಟೆಯ ಶೇ 10ರಷ್ಟು ಪಾಲು ಪಡೆದುಕೊಂಡಿದ್ದರೂ ಇತರೆ ಉತ್ಪನ್ನಗಳಿಗಿಂತ ಹೆಚ್ಚು ವೇಗವಾಗಿ ಬೇಡಿಕೆ ಗಿಟ್ಟಿಸಿಕೊಳ್ಳುತ್ತಿರುವ ಉತ್ಪನ್ನವೆಂದೇ ಗುರುತಿಸಲಾಗಿದೆ.ಪುರುಷರನ್ನೂ ಆಕರ್ಷಿಸಿರುವ ಈ ಉತ್ಪನ್ನಗಳ ಶ್ರೇಣಿ, ಅತಿಹೆಚ್ಚು ಆದಾಯ ತರುವ ವಲಯವೂ ಹೌದು. ಹೆಚ್ಚು ಕಾಲ ಬಾಳಿಕೆ ಬರುವ, ವಿಭಿನ್ನ ಪರಿಮಳ ಬೀರುವ ಹೊಸ ಉತ್ಪನ್ನಗಳು ದಿನಕ್ಕೊಂದರಂತೆ ಹುಟ್ಟಿಕೊಳ್ಳುತ್ತಿವೆ. ಸದ್ಯ ಅಸ್ತಿತ್ವದಲ್ಲಿರುವ ಉತ್ಪನ್ನಗಳೂ ದಿನದಿನಕ್ಕೆ ಹೊಸರೂಪದಲ್ಲಿ ಮರು ಹುಟ್ಟು ಪಡೆಯುತ್ತಿವೆ.ಇತರೆ ಸೌಂದರ್ಯವರ್ಧಕಗಳು

ಸ್ನಾನದ ಸಾಬೂನು, ಶಾಂಪೂ, ಶೇವಿಂಗ್ ಉತ್ಪನ್ನಗಳು ಸೇರಿದಂತೆ ಇತರೆ ಸೌಂದರ್ಯ ವರ್ಧಕ ಉತ್ಪನ್ನಗಳ ಮಾರುಕಟ್ಟೆ ಪಾಲು ಶೇ 23ರಷ್ಟಿದೆ. ಇವುಗಳು ವರ್ಗ, ಶ್ರೇಣಿ, ವಯೋಮಾನದ  ಮಿತಿಯಿಲ್ಲದೆ ನಗರ- ಗ್ರಾಮೀಣ ಭಾಗದ ಬಹುತೇಕರು ಬಳಸುವ ಸಾಮಗ್ರಿಗಳಾಗಿವೆ.ಪುರುಷರ ಸೌಂದರ್ಯವರ್ಧಕ

ಇತ್ತೀಚಿನ ದಿನಗಳಲ್ಲಿ ಪುರುಷರ ಸೌಂದರ್ಯ ವರ್ಧಕಗಳಿಗೂ ಬೇಡಿಕೆ  ಹೆಚ್ಚಿದೆ ಎನ್ನುತ್ತದೆ ್ಕಘೆಇಖ ವರದಿ. ವಿಶೇಷವಾಗಿ ತಮಗಾಗಿಯೇ ಬಿಡುಗಡೆಯಾದ ಹೊಸ ಉತ್ಪನ್ನಗಳತ್ತ ಪುರುಷರು ಹೆಚ್ಚು ಆಕರ್ಷಿತರಾಗುತ್ತಾರೆ. ವಿದೇಶಿಗರ ಅನುಕರಣೆ, ಬದಲಾದ ಜೀವನಶೈಲಿ, ಮಾರುಕಟ್ಟೆ ಜಾಹೀರಾತು ಮೊದಲಾದ ಅಂಶಗಳು ಈ ವಲಯದ ಉದ್ಯಮ ವೃದ್ಧಿಗೆ ಕಾರಣವಾಗಿವೆ. 2015ರ ವೇಳೆಗೆ ಈ ಉದ್ಯಮ ವಿಭಾಗ ಶೇ 18ರಷ್ಟು ಅಭಿವೃದ್ಧಿ ಸಾಧಿಸಲಿದೆ ಎನ್ನುತ್ತದೆ RNCOS ವರದಿ.ಕೂದಲಿಗೆ ಹಚ್ಚುವ ಕ್ರೀಂ, ಜೆಲ್, ಶೇವಿಂಗ್ ಪರಿಕರಗಳು ಸೇರಿದಂತೆ ಪುರುಷರ ಶೃಂಗಾರ ಸಾಧನಗಳು ಭಾರತದಲ್ಲಿ ಒಟ್ಟುರೂ 4000 ಕೋಟಿ ಮೌಲ್ಯದ ಮಾರುಕಟ್ಟೆ ಹೊಂದಿವೆ. ಸುಗಂಧದ್ರವ್ಯಗಳ ಮಾರುಕಟ್ಟೆ ನಂತರದ ಸ್ಥಾನ ಪಡೆದಿದೆ. ಈ ಮಾರುಕಟ್ಟೆ ಗಾತ್ರರೂ1300 ಕೋಟಿಯಷ್ಟಿದೆ ಎನ್ನುತ್ತದೆ `ನೀಲ್ಸನ್' ಅಧ್ಯಯನ ವರದಿ.ಭಾರತೀಯ ಪುರುಷರು ಹೆಚ್ಚು ಗಮನಹರಿಸುವುದು ಎರಡು ವಿಚಾರಗಳತ್ತ. ಮುಖದ ಒರಟುತನ ಹೋಗಲಾಡಿಸಿ ಹೊಳಪು ನೀಡುವ ಉತ್ಪನ್ನಗಳು, ಎರಡನೆಯದು ದೇಹದ ದುರ್ಗಂಧ ದೂರ ಮಾಡುವ ಡಿಯೊಡರೆಂಟ್ಸ್. ಈ ಅಂಶಗಳನ್ನು ಗಮನದಲ್ಲಿಟ್ಟುಕೊಂಡೇ ದೇಶೀಯ  ಮತ್ತು ವಿದೇಶಿ ಕಂಪೆನಿಗಳು ಹೆಚ್ಚು ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡುತ್ತಲೇ ಇವೆ.ಉದ್ಯಮ-ವೃತ್ತಿ

ಭಾರತೀಯ ಸಾಮಾಜಿಕ ಮೌಲ್ಯ ಬದಲಾಗುತ್ತಿವೆ. ಜಾಗತಿಕವಾಗಿ ಮಹಿಳೆಯರ ಆದ್ಯತೆಗಳೂ ಬದಲಾಗುತ್ತಿವೆ. ಸೌಂದರ್ಯದ ಬಗ್ಗೆ ಮಹಿಳೆಯರಲ್ಲಿ ಹೆಚ್ಚು ಜಾಗೃತಿ ಮೂಡುತ್ತಿದೆ. ಎಲ್ಲಾ ಕ್ಷೇತ್ರಗಳ ದುಡಿಯುವ ವರ್ಗದ ಮಹಿಳೆಗೆ, ಇಂದು ಸೌಂದರ್ಯವರ್ಧಕಗಳು ನಿತ್ಯದ ಅಗತ್ಯಗಳಲ್ಲಿ ಒಂದು ಎನಿಸಿವೆ.ಗೃಹಿಣಿಯರೂ ಸೌಂದರ್ಯ ರಕ್ಷಣೆಗೆ ಹೆಚ್ಚು ಗಮನ ನೀಡುತ್ತಿದ್ದಾರೆ. ಹೀಗಾಗಿ ಸೌಂದರ್ಯ ವರ್ಧನೆ ಎಂಬುದು  ಉದ್ಯಮವಾಗಿಯಷ್ಟೇ ಅಲ್ಲ, ಸೇವಾ ವೃತ್ತಿಯಾಗಿಯೂ ವೇಗವಾಗಿ ಬೆಳೆಯುತ್ತಿದೆ.ಸಾಮಾನ್ಯ ಬ್ಯೂಟಿಷಿಯನ್ ಡಿಪ್ಲೊಮಾ ವ್ಯಾಸಂಗ ಮಾಡಿದವರಿಂದ ಆರಂಭಿಸಿ ವಿಶೇಷ ತರಬೇತಿ ಪಡೆದ ಪರಿಣಿತರವರೆಗೂ ವಿವಿಧ ಸ್ಥರಗಳಲ್ಲಿ ಉತ್ತಮ ದುಡಿಮೆ, ನೌಕರಿ ಅವಕಾಶಗಳಿವೆ. ಕಾಲ್ ಸೆಂಟರ್, ಏರ್‌ಲೈನ್ಸ್, ಆತಿಥ್ಯ ಉದ್ಯಮದಂತೆಯೇ ಸೌಂದರ್ಯ ರಕ್ಷಣೆ ಅಥವಾ ಸೌಂದರ್ಯ ವೃದ್ಧಿ ಸೇವೆಗಳು ಎಂಬ ವಿಭಾಗದತ್ತಲೂ ಆಕರ್ಷಿತರಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಅದಕ್ಕೆ ತಕ್ಕಂತೆ ಭಾರತದಲ್ಲಿ ಸೌಂದರ್ಯ ಕ್ಷೇತ್ರದಲ್ಲಿ ಅಪೂರ್ವ ಅವಕಾಶಗಳ ಸಾಲೂ ಬೆಳೆಯುತ್ತಿದೆ.ಭಾರತದಲ್ಲಿ 10 ಲಕ್ಷಕ್ಕೂ ಅಧಿಕ ಸಲೂನ್‌ಗಳು ಕಾರ್ಯನಿರ್ವಹಿಸುತ್ತಿವೆ. ಪ್ರತಿ ತಿಂಗಳು ಸಾಮಾನ್ಯ ವರಮಾನದ ಮಧ್ಯಮ ವರ್ಗದ ಜನ ಕೇಶಆರೈಕೆ ಹಾಗೂ ಗ್ರೂಮಿಂಗ್‌ಗೆಂದುರೂ200ರಿಂದ 2000ದವರೆಗೂ ಖರ್ಚು ಮಾಡುತ್ತಾರೆ ಎಂಬ ಅಂದಾಜಿದೆ.ಸಲೂನ್ ಉದ್ಯಮದ ಬೆಳವಣಿಗೆಯಲ್ಲಿ ಶೇ 85ರಷ್ಟು ಪಾಲು ಮಹಿಳೆಯರದೇ ಆಗಿದೆ. ನಂತರದ ಸ್ಥಾನವನ್ನು ಪುರುಷರ ಕೇಶವಿನ್ಯಾಸ ಹಂಚಿಕೊಂಡಿದೆ. ತರಬೇತಿ, ಶಿಕ್ಷಣ, ಕ್ರಿಯಾಶೀಲತೆ, ಸೃಜನಶೀಲತೆ, ವಾಕ್ ಚಾತುರ್ಯ ಮೊದಲಾದ ಗುಣಗಳ ಆಧಾರದ ಮೇಲೆ ಮಾಸಿಕರೂ5000ರಿಂದರೂ 50,000ದವರೆಗೂ ಇಲ್ಲಿ ಸಂಬಳ ಪಡೆಯಬಹುದು.ವೃತ್ತಿ ವೈವಿಧ್ಯ-ಬೇಡಿಕೆ

ಬ್ಯೂಟಿ ಸಲೂನ್ ವ್ಯವಸ್ಥಾಪಕರು, ಸಹಾಯಕ ವ್ಯವಸ್ಥಾಪಕರು

ಬ್ಯೂಟಿ ಸಲೂನ್ ನಿರ್ದೇಶಕರು, ಸಹಾಯಕ ನಿರ್ದೇಶಕರು

ಸೃಜನಾತ್ಮಕ ನಿರ್ದೇಶಕರು

ಸ್ಪಾ ನಿರ್ದೇಶಕರು, ಸ್ಪಾ ವ್ಯವಸ್ಥಾಪಕರು, ಸ್ಪಾ ಸಹಾಯಕ ವ್ಯವಸ್ಥಾಪಕರು

ಸೌಂದರ್ಯ ಚಿಕಿತ್ಸಕರು, ಸಲಹೆಗಾರರು,   ಸಮಾಲೋಚಕರು

ದೈಹಿಕ(ಫಿಟ್‌ನೆಸ್) ತರಬೇತುದಾರರು

 ಅಂಗಮರ್ದನ(ಮಸಾಜ್) ಚಿಕಿತ್ಸಕರು

 ಕೇಶ ವಿನ್ಯಾಸಗಾರರು

 ಉಗುರು ಕಲೆ ತಜ್ಞರು

 ಕಾಸ್ಮೆಟಿಕ್ಸ್ ಮಾರಾಟ ವ್ಯವಸ್ಥಾಪಕರು, ಪ್ರತಿನಿಧಿಗಳು

 ಅರೋಮಾ ಚಿಕಿತ್ಸಕರುಆದರೆ, ಇದು ಕೇವಲ ಉತ್ತಮ  ಅಂಕಗಳ ಪಟ್ಟಿಯನ್ನು ಹಿಡಿದುಕೊಂಡ  ಬರುವವರನ್ನಷ್ಟೇ ಸ್ವಾಗತಿಸುವ ಕ್ಷೇತ್ರವಲ್ಲ. ಇಲ್ಲಿ ಅಂಕಗಳಿಗಿಂತ ಸೃಜನಶೀಲ ಮನಸ್ಸು ಹಾಗೂ ನೈರ್ಮಲ್ಯ ಪ್ರಜ್ಞೆಗೆ ಆದ್ಯತೆ. ಶೈಕ್ಷಣಿಕ ಜ್ಞಾನದೊಂದಿಗೆ ಪ್ರಾಯೋಗಿಕ ಒಳನೋಟ, ಗ್ರಾಹಕರೊಂದಿಗೆ ಹಿತವಾಗಿ, ಸಿಹಿಯಾಗಿ ಮಾತನಾಡುವ ಚಾತುರ್ಯವೂ ಅಗತ್ಯ.ಸವಾಲುಗಳು

ಇಂದು ಸೌಂದರ್ಯ ವೃದ್ಧಿ ಎಂಬ ಕ್ಷೇತ್ರ ವಿಶಾಲ ವ್ಯಾಪ್ತಿ ಹೊಂದಿರುವುದೇನೊ ನಿಜ. ಹಾಗಿದ್ದೂ ಈ ಕ್ಷೇತ್ರ ತೊಡಕು-ತೊಂದರೆಗಳಿಂದ ಮುಕ್ತವಾಗಿದೆ ಎನ್ನುವಂತಿಲ್ಲ. ಸಾಮಾನ್ಯವಾಗಿ ಯಾವುದೇ ಉತ್ಪನ್ನ ಹೊಸದಾಗಿ ಮಾರುಕಟ್ಟೆಗೆ ಬರಬೇಕಾದರೂ ಬೆಲೆ ಹಾಗೂ ಗುಣಮಟ್ಟದ ಬಗ್ಗೆ ಗಮನಹರಿಸಲೇ ಬೇಕು. ಭಾರತೀಯರ ಆದ್ಯತೆಗಳು ಹಾಗೂ       ಬಜೆಟ್‌ಗೆ ಸರಿಹೊಂದುವಂತೆ ಯೋಜನೆ ರೂಪಿಸುವುದೂ ಮುಖ್ಯ.ಭಾರತದ ಮಾರುಕಟ್ಟೆಯಲ್ಲಿ ಬೆಲೆ ಮತ್ತು ಗುಣಮಟ್ಟ ಮುಖ್ಯ ಪಾತ್ರ ವಹಿಸುತ್ತವೆ. ಇಲ್ಲಿ ಮೂರು ರೀತಿಯ ಗ್ರಾಹಕರು ಹೊಸ ಉತ್ಪನ್ನಗಳ ಭವಿಷ್ಯ ನಿರ್ಧರಿಸುತ್ತಾರೆ.ಗುಣಮಟ್ಟದ ಬಗ್ಗೆ ರಾಜಿಯಾದರೂ ಬೆಲೆಯಲ್ಲಿ ರಾಜಿಯಾಗದ ಗ್ರಾಹಕ

* ಬೆಲೆಯಲ್ಲಿ ರಾಜಿಯಾದರೂ ಗುಣಮಟ್ಟದಲ್ಲಿ ರಾಜಿಯಾಗದ ಗ್ರಾಹಕ

* ಬೆಲೆ ಹಾಗೂ ಗುಣಮಟ್ಟ ಎರಡರಲ್ಲೂ ತನ್ನದೇ ಆದ ನಿಲುವು ಹೊಂದಿರುವ ಗ್ರಾಹಕ.ಈ ಮೂರೂ ಪ್ರಕಾರದ ಗ್ರಾಹಕರ ಮನಸ್ಥಿತಿ ಹಾಗೂ ಆಯಾ ಕಾಲಕ್ಕೆ ಮಾರುಕಟ್ಟೆಯಲ್ಲಿ ಚಾಲ್ತಿಯಲ್ಲಿರುವ ಟ್ರೆಂಡ್ ಎಂಬ ಸಂಗತಿ ಗಮನದಲ್ಲಿ ಇಟ್ಟುಕೊಳ್ಳಲೇಬೇಕು.ವಿದೇಶಿ ಉತ್ಪನ್ನಗಳ ಪೈಪೋಟಿ, ಸಮರ್ಥ ಹಾಗೂ ಕೌಶಲಯುತ ವೃತ್ತಿಪರರ ಕೊರತೆ, ನೋಂದಣಿ ಕೆಲಸದಲ್ಲಿ ವಿಳಂಬ, ಪರವಾನಗಿ ಪಡೆಯುವಾಗ ಕಿರಿಕಿರಿ, ಅಗತ್ಯ ವಸ್ತುಗಳ ಬೆಲೆ ಏರಿಕೆ ಮುಂತಾದ ಸವಾಲುಗಳನ್ನೂ ಈ ಉದ್ಯಮ ಎದುರಿಸುತ್ತಿದೆ.`ಸೌಂದರ್ಯವರ್ಧಕಗಳ ಯುಗ'

ಜಗತ್ತು ಬದಲಾಗುತ್ತಿದೆ, ಭಾರತವೂ ಹೊರತಾಗಿಲ್ಲ. ಈಗ ಸೌಂದರ್ಯ ನೋಡುವವರ ಕಣ್ಣಲ್ಲಲ್ಲ, ಬದಲಾಗಿ `ಅಂಗರಾಗ'ಗಳಲ್ಲಿದೆ. ಅಂತೆಯೇ ನಿಮ್ಮ ಯಶಸ್ಸಿನಲ್ಲಿ ಸಾಮರ್ಥ್ಯದಷ್ಟೇ ದೊಡ್ಡ ಪಾಲನ್ನು ಇಂದು ಸೌಂದರ್ಯ ತನ್ನದಾಗಿಸಿಕೊಂಡಿದೆ. ಹೀಗಾಗಿ 21ನೇ ಶತಮಾನವನ್ನು `ಸೌಂದರ್ಯವರ್ಧಕಗಳ ಯುಗ' ಎಂದು ಕರೆದರೂ ತಪ್ಪಿಲ್ಲ. ವಯೋಮಾನ, ಲಿಂಗ, ಅಂತಸ್ತು ಯಾವುದೇ ಅಂತರವಿಲ್ಲದೇ ಪ್ರತಿಯೊಬ್ಬರ ಆದ್ಯತೆಯಾಗಿದೆ ದೇಹ ಸೌಂದರ್ಯ.`ನೀವು ಹೇಗಿದ್ದೀರಿ ಎನ್ನುವುದು ಮುಖ್ಯವಲ್ಲ; ನಿಮ್ಮನ್ನು ನೀವು ಹೇಗೆ ತೋರ್ಪಡಿಸಿಕೊಳ್ಳುತ್ತೀರಿ ಎನ್ನುವುದೇ ಮುಖ್ಯ'. ಇದು ಇಂದಿನ ಜೀವನ ಶೈಲಿಯ ವ್ಯಾಖ್ಯಾನ.`ನೀವೂ ಸ್ವ-ಉದ್ಯೋಗಿಯಾಗಿ'

ನಿಮ್ಮ ಕೈಯಲ್ಲಿ ಬ್ಯೂಟಿಕೇರ್‌ಗೆ ಸಂಬಂಧಿಸಿದ ಪ್ರಮಾಣಪತ್ರ ಹಾಗೂ ಒಂದಷ್ಟು ಪ್ರಾಯೋಗಿಕ ಅನುಭವ ಇದ್ದರೆ ಸಾಕು. ನೀವು ನಿಮ್ಮದೇ ಬ್ಯೂಟಿ ಸಲೂನ್ ತೆರೆಯಬಹುದು.

`ಆದರೆ ಇದು ಇತರೆ ಉದ್ಯಮಗಳಂತೆ ಅಲ್ಲ. ಇಲ್ಲಿ ಕೇವಲ ವ್ಯವಹಾರ ಬುದ್ಧಿ ಇದ್ದರಷ್ಟೇ ಸಾಲದು. ಜತೆಗೆ ಸೃಜನಶೀಲ ಹಾಗೂ ಕ್ರಿಯಾಶೀಲ ಮನಸ್ಸು ಕೆಲಸ ಮಾಡಬೇಕಾಗುತ್ತದೆ' ಎನ್ನುತ್ತಾರೆ ಮೆರಿಟೊರಿಯಸ್ ತರಬೇತಿ ಕೇಂದ್ರದ ವ್ಯವಸ್ಥಾಪಕ ನಿರ್ದೇಶಕಿ ಕೆ.ಭವಾನಿ.

ನಿಮ್ಮ ಸಲೂನ್ ಎಷ್ಟು ವೈಶಿಷ್ಟ್ಯಪೂರ್ಣ ಎಂಬ ಸಂಗತಿ ವ್ಯವಹಾರದ ಏಳು-ಬೀಳು ನಿರ್ಧರಿಸುವ ಪ್ರಮುಖ ಅಂಶಗಳಲ್ಲಿ ಒಂದು ಎನ್ನುವ ಅವರು, ಹೊಸದಾಗಿ ಸಲೂನ್/ಸ್ಪಾ ಆರಂಭಿಸುವಾಗ ಗಮನಿಸಬೇಕಾದ ಐದು ಅಂಶಗಳನ್ನು ಇಲ್ಲಿ ವಿವರಿಸಿದ್ದಾರೆ:

* ಯೋಜನೆ

*  ಕಾರ್ಯರೂಪ

* ಅಗತ್ಯ ಉಪಕರಣಗಳ ಖರೀದಿ ಮತ್ತು ಸಿಬ್ಬಂದಿ ನೇಮಕ

* ಬಂಡವಾಳ, ವಿಮೆ, ಪರವಾನಿಗೆ, ನೋಂದಣಿ ಹಾಗೂ ಇತರೆ ಕೆಲಸಗಳು

* ಮಾರ್ಕೆಟಿಂಗ್, ಪ್ರಚಾರ ಹಾಗೂ ಜಾಹಿರಾತು

ಯೋಜನೆ: ಪೂರ್ವಾಪರ ಆಲೋಚಿಸದೇ, ಸೂಕ್ತ ರೀತಿಯಲ್ಲಿ ಮಾನಸಿಕ ಹಾಗೂ ಆರ್ಥಿಕ ತಯಾರಿ ಮಾಡಿಕೊಳ್ಳದೇ ತರಾತುರಿಯಲ್ಲಿ ಆರಂಭವಾಗುವ ಅದೆಷ್ಟೊ ಸಲೂನ್/ಪಾರ್ಲರ್‌ಗಳು ಕೆಲವೇ ತಿಂಗಳಲ್ಲಿ ಬಾಗಿಲು ಮುಚ್ಚುವುದೂ ಉಂಟು. ಆದ್ದರಿಂದ ವ್ಯಾಪಾರ ಆರಂಭಿಸುವ ಮೊದಲು ಪರಿಪೂರ್ಣವಾದ, ವೃತ್ತಿಪರ ಯೋಜನಾ ವರದಿಯೊಂದನ್ನು ಸಿದ್ಧಪಡಿಸಿಕೊಳ್ಳಿ. ನಿಮ್ಮ ಸಲೂನ್‌ನ ವಿಸ್ತಾರ, ತಗುಲಬಹುದಾದ ವೆಚ್ಚ, ಅಗತ್ಯ ಉಪಕರಣಗಳು, ಅಲಂಕಾರಿಕ ವಸ್ತುಗಳು, ಸಿಬ್ಬಂದಿ ಇತ್ಯಾದಿ ಅಂಕಿ-ಅಂಶ ಗಮನದಲ್ಲಿಟ್ಟುಕೊಳ್ಳಿ.

ಕಾರ್ಯರೂಪ: ಯೋಜನೆ ತಯಾರಿಸುವುದು ಸುಲಭ. ಆದರೆ ಅದನ್ನು ಕಾರ್ಯರೂಪಕ್ಕೆ ತರುವಾಗ ಸಾಕಷ್ಟು ಅಡ್ಡಿ-ಆತಂಕ ಎದುರಾಗಬಹುದು. ಸ್ಪರ್ಧಾತ್ಮಕ ಮನೋಭಾವದಿಂದ ಅವನ್ನು ಎದುರಿಸಿ ಪರಿಣಾಮಕಾರಿ ಪರಿಹಾರ ಮಾರ್ಗನ್ನು ಕಂಡುಕೊಳ್ಳುತ್ತಾ ಯೋಜನೆಯನ್ನು ಯಶಸ್ವಿಯಾಗಿ ಕಾರ್ಯರೂಪಕ್ಕೆ ತರುವುದು ಬಹಳ ಮುಖ್ಯ.

ಅಗತ್ಯ ಉಪಕರಣ ಖರೀದಿ:  ತರಬೇತಿ ಪಡೆದ ಸಂಸ್ಥೆಯ ಸಿಬ್ಬಂದಿ, ಅಲ್ಲಿನ ಶಿಕ್ಷಕರು, ಸ್ನೇಹಿತರ ನೆರವಿನಿಂದ ಅಗತ್ಯ ಉಪಕರಣಗಳ ಪಟ್ಟಿ ಮಾಡಿಕೊಂಡೇ ಖರೀದಿಗೆ ಹೋಗಿ. ಪಟ್ಟಿಯಿಲ್ಲದೇ ಖರೀದಿಗೆ ಹೋದರೆ ಅಲ್ಲಿ ನಿಮಗೆ ಅಗತ್ಯವಿಲ್ಲದ ವಸ್ತುಗಳನ್ನೂ ತುಂಬಿ ಕಳುಹಿಸಬಹುದು. ಇದು ನಿಮ್ಮ ಹಣಕಾಸಿನ ಹೊರೆ ಹೆಚ್ಚಿಸುತ್ತದೆ.

ಒಂದು ಸಾಧಾರಣ ಸಲೂನ್ ಆರಂಭಕ್ಕೆ ಅಗತ್ಯವಾದ ಸಾಮಗ್ರಿ

* ವೃತ್ತಿಪರ ಸ್ವಾಗತ ಮೇಜು

* ಗ್ರಾಹಕರೊಂದಿಗೆ ಉತ್ತಮ ಬಾಂಧವ್ಯ ಬೆಳೆಸಬಲ್ಲ ವೃತ್ತಿಪರ ಸಿಬ್ಬಂದಿ

*  ವಿವಿಧ ಸೌಂದರ್ಯವರ್ಧಕ ಉತ್ಪನ್ನ, ಉಪಕರಣಗಳನ್ನು ಜೋಡಿಸಿಡಲು ಆಕರ್ಷಕ ಕಪಾಟು, ಬೀರುಗಳು

*  ಗ್ರಾಹಕರ ಕೂದಲು ವಿನ್ಯಾಸಕ್ಕಾಗಿ ಅತ್ಯಾಧುನಿಕ ರಿವಾಲ್ವಿಂಗ್ ಕುರ್ಚಿ

*  ಆರಾಮದಾಯಕ ಸುಖಾಸನ, ದಿವಾನಾ (ಐಬ್ರೊ, ವ್ಯಾಕ್ಸಿಂಗ್, ಫೇಶಿಯಲ್ ಮಾಡುವಾಗ ಬೇಕಾಗುತ್ತವೆ)

*  ಹೇರ್ ಡ್ರೈಯರ್, ಕಟಿಂಗ್ ಉಪಕರಣಗಳು

*  ವಾಷ್ ಬೇಸಿನ್/ಟ್ರಾಲಿ

*  ಉಗುರು ಸ್ವಚ್ಚಗೊಳಿಸಲು ಮತ್ತು ಟ್ರಿಮ್ ಮಾಡಲು ಉಪಕರಣಗಳು

*  ಸೋಫಾ, ಟಿ.ವಿ ಸೆಟ್ ಅಥವಾ ಮ್ಯೂಸಿಕ್ ಸಿಸ್ಟೆಂ. ಗೋಡೆ ಮೇಲೆ ಆಕರ್ಷಕ ಪೇಂಟಿಂಗ್ಸ್(ಗ್ರಾಹಕರು ಸರದಿಗಾಗಿ ಕಾಯುತ್ತಾ ಕೂರುವ ಸ್ಥಳದಲ್ಲಿ)

ಬಂಡವಾಳ, ವಿಮೆ, ಪರವಾನಿಗೆ, ನೋಂದಣಿ ಮತ್ತಿತರ ಕೆಲಸ: ನಿಮ್ಮ ಬ್ಯೂಟಿ ಸಲೂನ್ ನೋಂದಾಯಿಸುವ ಮೊದಲು ನೀವು ಅದಕ್ಕೊಂದು ಆಕರ್ಷಕ ಮತ್ತು ವೃತ್ತಿಪರ ಹೆಸರಿಡಬೇಕು.

ಸಲೂನ್ ಯಾವ ರೀತಿ ಸೇವೆಗಳನ್ನು ಒಳಗೊಂಡಿರಬೇಕು ಎಂಬ ಬಗ್ಗೆ ಮೊದಲು ನಿಮಗೆ ಸ್ಪಷ್ಟತೆ ಇರಬೇಕು. ಕೇವಲ ಚರ್ಮ ಹಾಗೂ ಕೇಶ ಆರೈಕೆಯೇ ಅಥವಾ ಮಸಾಜ್, ಅರೋಮಾ ಥೆರಪಿ ಸೇರಿದಂತೆ ಎಲ್ಲ ರೀತಿಯ ಸೇವೆಗಳೂ ಇರುತ್ತವೆಯೇ ಎಂಬುದನ್ನು ನೋಂದಣಿ ಮಾಡುವಾಗ ಮತ್ತು ಪರವಾನಗಿ ಪಡೆಯುವಾಗ ಸ್ಪಷ್ಟಪಡಿಸಬೇಕಾಗುತ್ತದೆ.

ರಾಸಾಯನಿಕಯುಕ್ತ ಉತ್ಪನ್ನಗಳ ಬಳಕೆಯಿಂದ ಉಂಟಾಗಬಹುದಾದ ಅಡ್ಡಪರಿಣಾಮಗಳು, ಕೆಲಸಗಾರರ ಜವಾಬ್ದಾರಿ ಹಾಗೂ ಹೊಣೆಗಾರಿಕೆ, ಗ್ರಾಹಕರ ಜವಾಬ್ದಾರಿಗಳು ಮುಂತಾದ ವಿಚಾರಗಳ ಬಗ್ಗೆ ಸ್ಪಷ್ಟವಾದ ಒಪ್ಪಂದ ಪತ್ರ ಸಿದ್ಧಪಡಿಸಿಟ್ಟುಕೊಳ್ಳಿ. ನಿಮ್ಮ ಸಂಸ್ಥೆಗೆ ವಿಮೆ ಮಾಡಿಸುವುದನ್ನು ಮರೆಯದಿರಿ. ಇದಕ್ಕೆ ವಕೀಲರ ನೆರವು ಪಡೆಯಬಹುದು.

ಇದೆಲ್ಲಕ್ಕೂ ಮುನ್ನ, ಸ್ವಂತ ಸಂಸ್ಥೆ ಆರಂಭಕ್ಕೆ ಬೇಕಾದ ಆರ್ಥಿಕ ಚೈತನ್ಯ ನಿಮ್ಮಲ್ಲಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ಕನಿಷ್ಠ ್ಙ50,000ದಿಂದ ಗರಿಷ್ಠ ್ಙ50 ಲಕ್ಷದವರೆಗೂ ವಿನಿಯೋಗಿಸಿ ಸಲೂನ್ ಅಥವಾ ಸ್ಪಾ ಆರಂಭಿಸಬಹುದು. ಸಾಲದ ಅಗತ್ಯ ಬಿದ್ದರೆ ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ಮಹಿಳಾ ಉದ್ಯಮಿಗಳಿಗೆ ವಿವಿಧ ಯೋಜನೆಗಳಿದ್ದು, ಮಾಹಿತಿ ಪಡೆದು ಬಳಸಿಕೊಳ್ಳಬಹುದು.

ಯಾವುದೇ ಒಂದು ಉದ್ಯಮದ ಗತಿ, ವೇಗ ಹಾಗೂ ಯಶಸ್ಸನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸುವುದು ಮಾರ್ಕೆಟಿಂಗ್, ಪ್ರಚಾರ ಹಾಗೂ ಜಾಹಿರಾತು. ನಿಮ್ಮ ಸಲೂನ್, ಅಲ್ಲಿ ಲಭ್ಯವಿರುವ ಸೇವೆ ಹಾಗೂ ವೈಶಿಷ್ಟ್ಯಗಳ ಬಗ್ಗೆ ಮಾಹಿತಿ ನೀಡುವ ಕೈಪಿಡಿ, ಕಿರುಹೊತ್ತಿಗೆ, ವಿಸಿಟಿಂಗ್ ಕಾರ್ಡ್ ಸಿದ್ಧಪಡಿಸಿಕೊಳ್ಳಿ. ಮಾರ್ಕೆಟಿಂಗ್ ಹಾಗೂ ಜಾಹಿರಾತು ಸಂದರ್ಭದಲ್ಲಿ ಇವು ಸಹಾಯಕ.

ಮಹಿಳೆ ಮತ್ತು ಮೇಕಪ್

ಪ್ರತಿ ಐವರಲ್ಲಿ ನಾಲ್ಕು ಮಹಿಳೆಯರು ಮೇಕಪ್ ಬಳಸುತ್ತಾರೆ. ಪ್ರತಿ ಮಹಿಳೆ ದಿನದಲ್ಲಿ ಕನಿಷ್ಠ 20 ನಿಮಿಷ ಮೇಕಪ್‌ನಲ್ಲಿ ಸಮಯ ಕಳೆಯುತ್ತಾರೆ

ಶೇ 86ರಷ್ಟು ಮಹಿಳೆಯರು ಮೇಕಪ್‌ನಿಂದ ತಮ್ಮ ಇಮೇಜ್ ಬೆಳೆಯುತ್ತದೆ ಎಂದುಕೊಂಡಿದ್ದರೆ, ಶೇ 82ರಷ್ಟು ಮಹಿಳೆಯರು ಮೇಕಪ್‌ನಿಂದ ಆತ್ಮವಿಶ್ವಾಸ ಹೆಚ್ಚುತ್ತದೆ ಎಂದು ನಂಬಿದ್ದಾರೆ.

ಶೇ 77ರಷ್ಟು ಮಹಿಳೆಯರು ತಮ್ಮ ಹೆಚ್ಚುವರಿ ಆದಾಯವನ್ನು ಸೌಂದರ್ಯ ಮತ್ತು ಆರೋಗ್ಯ ಉತ್ಪನ್ನಗಳಿಗಾಗಿ ಖರ್ಚು ಮಾಡುತ್ತಾರೆ. ಶೇ 76ರಷ್ಟು ಮಹಿಳೆಯರು ನಿತ್ಯ ಲಿಪ್‌ಸ್ಟಿಕ್ ಅಥವಾ ಲಿಪ್‌ಗ್ಲಾಸ್ ಬಳಸುತ್ತಾರೆ. ಶೇ 65ರಷ್ಟು ಮಹಿಳೆಯರು ಮಸ್ಕರಾ, ಶೇ 63ರಷ್ಟು ಮಹಿಳೆಯರು ಐಶಾಡೊ, ಶೇ 62ರಷ್ಟು ಮಹಿಳೆಯರು ಐಲೈನರ್, ಶೇ 22ರಷ್ಟು ಮಹಿಳೆಯರು ಲಿಪ್ ಪೆನ್ಸಿಲ್ ಬಳಸುತ್ತಾರೆ

ಶೇ 57ರಷ್ಟು ಮಹಿಳೆಯರು ಪ್ರತಿ ಆರು ತಿಂಗಳಿಗೊಮ್ಮೆ ಸೌಂದರ್ಯವರ್ಧಕಗಳಿಗಾಗಿಯೇ ವಿಶೇಷ ಬಜೆಟ್ ಸಿದ್ಧಪಡಿಸಿಕೊಳ್ಳುತ್ತಾರೆ. ಶೇ 50ರಷ್ಟು ಮಹಿಳೆಯರು ಮೇಕಪ್‌ನಿಂದ ತಮ್ಮ ಚಾರ್ಮ್ ಹೆಚ್ಚುತ್ತದೆ ಮತ್ತು ತಮ್ಮ ಹಾಗೂ ಸುತ್ತಲಿನವರ ಉತ್ಸಾಹ ಹೆಚ್ಚುತ್ತದೆ ಎಂಬ ಅಭಿಪ್ರಾಯ ಹೊಂದಿದ್ದಾರೆ

ಭಾರತದಲ್ಲಿ ಪ್ರತಿ ಎರಡು ನಿಮಿಷಕ್ಕೆ ಒಂದು ಲಿಪ್‌ಸ್ಟಿಕ್ ಮತ್ತು ಒಂದು ಐಶಾಡೊ ಮಾರಾಟವಾಗುತ್ತದೆ (ನೀಲ್ಸನ್ ವರದಿ)ಭಾರತದ ಸೌಂದರ್ಯ ಉದ್ಯಮದಲ್ಲಿ ಇದೀಗ ಹರ್ಬಲ್ ಹಾಗೂ ಆಯುರ್ವೇದ ಉತ್ಪನ್ನಗಳ ಗಾಳಿ ಮತ್ತೆ ಬೀಸಿದೆ. ದೈನಂದಿನ ಬಳಕೆಗೆ ರಾಸಾಯನಿಕ ಮುಕ್ತ ಉತ್ಪನ್ನಗಳ ಹುಡುಕಾಟದಲ್ಲಿರುವವರಿಗೆ ಹರ್ಬಲ್ ಉತ್ಪನ್ನಗಳು ಪರ್ಯಾಯ ಆಯ್ಕೆಗಳಾಗಿವೆ. ಮುಂದಿನ ದಿನಗಳಲ್ಲಿ ಹರ್ಬಲ್ ಉತ್ಪನ್ನಗಳ ವಹಿವಾಟು ಶೇ 7ರಷ್ಟು ಅಭಿವೃದ್ಧಿ ಸಾಧಿಸುವ ನಿರೀಕ್ಷೆ ಇದೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಡುತ್ತಾರೆ.

ಭಾರತದಲ್ಲಿ ಸೌಂದರ್ಯ ಪ್ರಜ್ಞೆ ಬೆಳೆದಂದಿನಿಂದಲೂ ಹರ್ಬಲ್ ಮತ್ತು ಆಯುರ್ವೇದ ಸೌಂದರ್ಯವರ್ಧಕಗಳ ಪಾಲು ದೊಡ್ಡದಿದೆ. ಆದರೆ ನಂತರದ ದಿನಗಳಲ್ಲಿ ವಿದೇಶಿ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಿತು. ಆದರೆ ಇದೀಗ ಮತ್ತೆ ಸೌಂದರ್ಯಪ್ರಿಯರು ಹಿತ್ತಲಗಿಡದ ಮದ್ದಿಗೆ ಮರಳುತ್ತಿದ್ದಾರೆ. ಈ ಅಂಶವನ್ನು ಗಮನದಲ್ಲಿಟ್ಟುಕೊಂಡು ಅನೇಕ ಕಂಪೆನಿಗಳು ಈ ರೀತಿಯ ಉತ್ಪನ್ನಗಳ ಅಭಿವೃದ್ಧಿಯಲ್ಲಿ ತೊಡಗಿವೆ. ಬಯೋಟೆಕ್, ಹಿಮಾಲಯ, ಬ್ಲಾಸಮ್, ಡಾಬರ್, ಲೋಟಸ್ ಮುಂತಾದವುಗಳನ್ನು ಹೆಸರಿಸಬಹುದು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.