ಸೌಕರ್ಯವಂಚಿತ ಲಂಬಾಣಿ ತಾಂಡ

7

ಸೌಕರ್ಯವಂಚಿತ ಲಂಬಾಣಿ ತಾಂಡ

Published:
Updated:

ಬಾಗೇಪಲ್ಲಿ: ತಾಲ್ಲೂಕಿನ ಮಿಟ್ಟೇಮರಿ ಹೋಬಳಿಯ ಟೆಂಪಯ್ಯ ಕುಂಟಗ್ರಾಮದ ಸುತ್ತಮುತ್ತಲೂ ಗುಡ್ಡಗಾಡು ಪ್ರದೇಶದ ವ್ಯಾಪ್ತಿಯಲ್ಲಿ ತಾಂಡಗಳೇ ಇವೆ. ದಶಕಗಳು ಕಂಡರೂ ಇಲ್ಲಿನ ಜನತೆ ಕನಿಷ್ಠ ಮೂಲಸೌಕರ್ಯದಿಂದ  ವಂಚಿತರಾಗಿದ್ದಾರೆ.ಗ್ರಾಮದಲ್ಲಿ ಸುಮಾರು 25 ಲಂಬಾಣಿ ಮನೆಗಳು ಇದೆ. ಪರಿಶಿಷ್ಟ ಪಂಗಡಕ್ಕೆ ಸೇರಿದ ಜನರು ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿದ್ದಾರೆ. ಗ್ರಾಮದಲ್ಲಿ ಅಭಿವೃದ್ಧಿ ಕಾರ್ಯಗಳು ಆಗಿಲ್ಲ. ಗ್ರಾಮದಿಂದ ಮುಖ್ಯರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಡಾಂಬರೀಕರಣ ಆಗಿಲ್ಲ. ಗುಡಿಸಲು ಮನೆಗಳು ಶಿಥಿಲಾವಸ್ಥೆಯಲ್ಲಿವೆ. ಬಹುತೇಕ ಮನೆಗಳಿಗೆ ಶೌಚಾಲಯವೂ ಇಲ್ಲ ಎಂದು ಗ್ರಾಮಸ್ಥರು ಆರೋಪಿಸುತ್ತಾರೆ.ಕುಡಿಯುವ ನೀರಿಲ್ಲದ ಕಾರಣ ಕೆರೆಯಂಗಳದ ನೀರನ್ನೇ ಕುಡಿಯುತ್ತಿದ್ದೇವೆ. ಗ್ರಾಮಕ್ಕೆ ಕಾಲುದಾರಿಯಲ್ಲಿ ಸಂಚರಿಸಬೇಕು. ಬಡತನ, ಅನಕ್ಷರತೆ ವ್ಯಾಪಕವಾಗಿದೆ. ಗ್ರಾಮದಲ್ಲಿ ಸರ್ಕಾರಿ ಶಾಲೆ ಇದ್ದರೂ ದಾಖಲಾತಿ ಕಡಿಮೆಯಿದೆ. ಅಂಗನವಾಡಿ ಕೇಂದ್ರ ಇಲ್ಲ. ವಿದ್ಯುತ್ ಪೂರೈಕೆ ವ್ಯವಸ್ಥೆಯಿಲ್ಲದ ಕಾರಣ ಕಗ್ಗತ್ತಲಲ್ಲೇ ಜೀವನ ಮಾಡಬೇಕಾದ ಪರಿಸ್ಥಿತಿಯಿದೆ. ನಮ್ಮ ಸಂಕಷ್ಟ-ಸಮಸ್ಯೆಗಳನ್ನು ಕೇಳುವವರಿಲ್ಲ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸುತ್ತಾರೆ.ಗ್ರಾಮದಲ್ಲಿ ರಸ್ತೆ ಸೌಕರ್ಯವಿಲ್ಲ. ಗುಡಿಸಲುಗಳಲ್ಲಿ ವಾಸಿಸಬೇಕಾದ ಕಾರಣ ಸಮಸ್ಯೆ ಅನುಭವಿಸಬೇಕಾಗುತ್ತದೆ. ಬಹುತೇಕ ಮಂದಿ ಅನಾರೋಗ್ಯಕ್ಕೀಡಾಗಿದ್ದು, ಯಾರಿಗೂ ಉತ್ತಮ ಚಿಕಿತ್ಸೆ ದೊರೆಯುತ್ತಿಲ್ಲ. ನಮ್ಮ ಸಂಕಷ್ಟ-ಸಮಸ್ಯೆಗಳು ನಿವಾರಣೆಯಾಗುತ್ತಿಲ್ಲ ಎಂದು ಗ್ರಾಮದ ನಾಗೇನಾಯ್ಕ `ಪ್ರಜಾವಾಣಿ~ಗೆ ತಿಳಿಸಿದರು.ಗ್ರಾಮದಲ್ಲಿ ವಾಸವಾಗಿರುವ ಲಂಬಾಣಿ ಜನಾಂಗದವರ ಜಮೀನನ್ನು ಕೆಲ ಭೂಮಾಲೀಕರು ತಮ್ಮ ವಶಕ್ಕೆ ತೆಗೆದುಕೊಳ್ಳಲು ಯತ್ನಿಸುತ್ತಿದ್ದಾರೆ. ಪ್ರಭಾವಿ ವ್ಯಕ್ತಿಗಳು ಗ್ರಾಮಸ್ಥರ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ. ಇದು ಖಂಡನೀಯ. ಇದರ ವಿರುದ್ಧ ದಲಿತ ಸಂಘರ್ಷ ಸಮಿತಿ ಹೋರಾಟ ಕೈಗೊಳ್ಳಲಿದೆ ಎಂದು ದಲಿತ ಸಂಘರ್ಷ ಸಮಿತಿ ಸಂಚಾಲಕ ಬಿ.ಎನ್.ಗಂಗಾಧರಪ್ಪ ತಿಳಿಸಿದರು.ಬಡ ರೈತರ ಮೇಲೆ ಮಾನಸಿಕ ದೌರ್ಜನ್ಯ ಮಾಡಲಾಗುತ್ತಿದೆ. ರಿಯಲ್ ಎಸ್ಕೇಟ್ ದಂಧೆಯಿಂದ ಜಮೀನನ್ನು ಕಸಿಯುವ ಹುನ್ನಾರ ನಡೆಯುತ್ತಿದೆ. ಈ ಕೂಡಲೇ ಜಿಲ್ಲಾಧಿಕಾರಿ ಗ್ರಾಮಕ್ಕೆ ಭೇಟಿ ನೀಡಿ, ಸ್ಥಳ ಪರಿಶೀಲಿಸಬೇಕು. ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಸಂಘಟನೆಯ ಮತ್ತೊಬ್ಬ ಸಂಚಾಲಕ ಜಿ.ಎಲ್.ರಾಮಾಂಜಿನೇಯಪ್ಪ ಹೇಳಿದರು.ಮುಖಂಡರಾದ ಕಡ್ಡೀಲು ವೆಂಕಟರವಣ, ಅಂಜಿನಪ್ಪ, ಬಿ.ನರಸಿಂಹಪ್ಪ, ಸಿ.ವೈ.ಶ್ರೀನಿವಾಸ್, ಜಿ.ಎಸ್. ನರಸಿಂಹಪ್ಪ, ಲಕ್ಷ್ಮೀನರಸಿಂಹಪ್ಪ, ಎಚ್. ತಿಪ್ಪಣ್ಣ, ಕೆ.ವಿ.ವೆಂಕಟೇಶ್, ವೆಂಕಟೇಶ್, ನಾಗೇಶ, ನಾರಾಯಣ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry