ಗುರುವಾರ , ನವೆಂಬರ್ 21, 2019
20 °C

ಸೌಕರ್ಯ ವಂಚಿತ ನಗರ: ಇಲ್ಲಿ ಕೊರತೆಯೇ ಜೀವನ!

Published:
Updated:

ಬಂಗಾರಪೇಟೆ: ಚಿಕ್ಕ ಚಿಕ್ಕ ಕೊಠಡಿಗಳಂಥ ಮನೆ, ಗುಡಿಸಲಲ್ಲಿ ವಾಸ, ಇಪ್ಪತ್ತು ದಿನಕ್ಕೊಮ್ಮೆ ನೀರು ಪೂರೈಕೆ, ಕಸ ವಿಲೇವಾರಿ ಇಲ್ಲವೇ ಇಲ್ಲ, ಕೆಲ ಕೇರಿಗಳಲ್ಲಿ ಚರಂಡಿ ವ್ಯವಸ್ಥೆ ಇಲ್ಲ. ಬಹತೇಕ ಮನೆಗಳಲ್ಲಿ ಶೌಚಾಲಯ ವ್ಯವಸ್ಥೆಯೇ ಇಲ್ಲ...ಇದು ಪಟ್ಟಣದ 21ನೇ ವಾರ್ಡ್ ದಿಢೀರ್ ನಗರದ ಪರಿಸ್ಥಿತಿ. ಇಲ್ಲಿ 200ಕ್ಕೂ ಹೆಚ್ಚು ಮನೆಗಳಿವೆ. 700ಕ್ಕೂ ಹೆಚ್ಚು ಜನಸಖ್ಯೆ ಹೊಂದಿರುವ ಈ ಬಡಾವಣೆಯಲ್ಲಿ ಮೂಲಸೌಕರ್ಯದ್ದೇ ಸಮಸ್ಯೆ.ಬಹುತೇಕ ಮನೆಗಳಿಗೆ ನೀರಿನ ಸಂಪರ್ಕ ಇಲ್ಲ. 15-20 ದಿನಕ್ಕೆ ಒಮ್ಮೆ ಬೀದಿ ನಲ್ಲಿ ಮೂಲಕ ಅರ್ಧ ಗಂಟೆ ಮಾತ್ರ ನೀರು ಪೂರೈಸಲಾಗುತ್ತಿದೆ. ನಲ್ಲಿಯಲ್ಲಿ ನೀರು ಬಂದಾಗ ಬಿಂದಿಗೆಗಳು ಸಾಲುಗಟ್ಟಿರುತ್ತವೆ. ಒಂದು ಕುಟುಂಬಕ್ಕೆ 8-10 ಬಿಂದಿಗೆ ಮಾತ್ರ ನೀರು ಸಿಗುತ್ತಿದೆ. ಅನಿಯಮಿತ ವಿದ್ಯುತ್ ಕಡಿತದಿಂದ ಸಮಸ್ಯೆ ಮತ್ತಷ್ಟು ಬಿಗಡಾಯಿಸಿದೆ. ನೀರನ್ನು ಶೇಖರಗಾಗಿ ಸಂಪು ಕಟ್ಟಲು ಆಗದ ಕಡು ಬಡತನದಲ್ಲೇ ಇವರ ಜೀವನ.ವಾರಗಟ್ಟಲೆ ಬಿಂದಿಗೆಗಳಲ್ಲೆ ಶೇಖರಣೆ ಮಾಡಿ ಬಳಸುವ ಅನಿವಾರ್ಯ ಉಂಟಾಗಿದೆ. ಪುರಸಭೆ ಸದಸ್ಯರಿಗೆ ದೂರು ನೀಡಿದರೆ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎನ್ನುತಾರೆ ಬಡಾವಣೆಯ ನಿವಾಸಿಗಳಾದ ಮಂಜುಳ, ಮುನಿಯಮ್ಮ, ವಿಜಯ.ಈ ಬಡಾವಣೆ ಪುರಸಭೆಗೆ ಸೇರ್ಪಡೆಗೊಂಡು 10 ವರ್ಷ ಕಳೆದಿದೆಯಾದರೂ ಅಭಿವೃದ್ಧಿಯಾಗಿಲ್ಲ. ಕೆಲ ಬೀದಿಗಳಲ್ಲಿ ಚರಂಡಿ ವ್ಯವಸ್ಥೆಯೇ ಇಲ್ಲ. ಕೆಲವೆಡೆ ಚರಂಡಿ ಇದ್ದರೂ ಸೂಕ್ತ ನಿರ್ವಹಣೆ ಇಲ್ಲದೆ ಮಣ್ಣು ಮುಚ್ಚಿದೆ. ಇದರಿಂದ ಮೋರಿ ನೀರು ಅಲ್ಲಲ್ಲೆೀ ನಿಂತು ದುರ್ವಾಸನೆ ಬೀರುತ್ತಿದೆ. ಬಡಾವಣೆಯ ಮುಖ್ಯರಸ್ತೆಯಲ್ಲೆೀ ಚರಂಡಿ ವ್ಯವಸ್ಥೆ ಇಲ್ಲ. ಸುಮಾರು ನಾಲ್ಕು ತಿಂಗಳಿಂದ ಮೋರಿ ನೀರು ಮುಖ್ಯ ರಸ್ತೆ ಮಧ್ಯದಲ್ಲಿ ಹರಿಯುತ್ತಿದೆ.ಬಡಾವಣೆಯಲ್ಲಿರುವ ಮನೆಗಳು ತೀರ ಚಿಕ್ಕದಾಗಿದ್ದು, ಬಹತೇಕ ಮನೆಗಳಲ್ಲಿ ಶೌಚಾಲಯ ವ್ಯವಸ್ಥೆ ಇಲ್ಲ. ಬೆಳಗಿನ ಎಲ್ಲಾ ಕರ್ಮಗಳಿಗಾಗಿ ಬಯಲು ಶೌಚಾಲಯವನ್ನೆ ಅವಲಂಬಿಸಲಾಗಿದೆ. ಸಮುದಾಯ ಶೌಚಾಲಯವೂ ಇಲ್ಲಿಲ್ಲ.ಬಡಾವಣೆಯ ಅಂಗನವಾಡಿ ಕೇಂದ್ರದಲ್ಲಿ 40 ಮಕ್ಕಳಿದ್ದಾರೆ. ಅಲ್ಲಿಯೂ ನೀರು ಮತ್ತು ಶೌಚಾಲಯ ಸೌಲಭ್ಯವಿಲ್ಲ. ಕಸ ವಿಲೇವಾರಿ ಮಾಡಿ ತಿಂಗಳುಗಳೆ ಕಳೆದಿವೆ. ಬೀದಿಯ ಕೆಲವೆಡೆ ಕಸದ ರಾಶಿಗಳು ತಲೆಎತ್ತಿವೆ. ಇದರಿಂದ ಒಂದೆಡೆ ದುರ್ವಾಸನೆ ಬೀರುತ್ತಿದೆ. ಮತ್ತೊಂದೆಡೆ ಹಾವುಗಳ ಕಾಟವೂ ಹೆಚ್ಚುತ್ತಿದೆ. ಹಲ ಬಾರಿ ಹಾವುಗಳು ಮನೆಗಳಿಗೆ ನುಗ್ಗಿ ಕುಟುಂಬದವರಿಗೆ ಆತಂಕ ಮೂಡಿಸಿದೆ ಎನ್ನುತ್ತಾರೆ ನಿವಾಸಿ ಮುರುಗೇಶ್.ಮನೆಗಳು ಕಟ್ಟಿಕೊಂಡು ಹಲ ವರ್ಷಗಳೆ ಕಳೆದಿವೆ. ಹಕ್ಕುಪತ್ರ ನೀಡುವುದಾಗಿ ಹಲ ಬಾರಿ ಭರವಸೆ ನೀಡಲಾಗಿದೆಯಾದರೂ ಪ್ರಯೋಜನೆ ಆಗಿಲ್ಲ. ಆದರೆ ಕೆಲ ಪ್ರಭಾವಿ ವ್ಯಕ್ತಿಗಳು ಮಾತ್ರ ಹಕ್ಕು ಪತ್ರ ಪಡೆದಿದ್ದಾರೆ. ಅನಕ್ಷರಸ್ಥ ಬಡವರು ಮಾತ್ರ ವಂಚಿತರಾಗಿದ್ದಾರೆ.ಬಂಗಾರಪೇಟೆ-ಮಾರಿಕುಪ್ಪಂ ರೈಲ್ವೆ ಹಳಿಗೆ ಅಂಟಿಕೊಂಡಿರುವ ಈ ಬಡಾವಣೆಯ ಕೇರಿಯಲ್ಲಿ ಎಂಟು ಕುಟುಂಬ ಗುಡಿಸಿಲಲ್ಲೆ ವಾಸಮಾಡುತ್ತಿವೆ. ಆಶ್ರಯ ಯೋಜನೆಯಡಿ ಇದುವರೆಗೂ ಮನೆ ನೀಡಿಲ್ಲ. ಆದರೆ ಕೆಲ ಪ್ರಭಾವಿ ವ್ಯಕ್ತಿಗಳು ಮಾತ್ರ ಯೋಜನೆಯ ಸೌಲಭ್ಯ ಪಡೆದುಕೊಂಡಿದ್ದಾರೆ ಎನ್ನುವುದು ಕೆಲವರ ಆರೋಪ.ಈ ಬಡಾವಣೆಯ ಮೂಲ ಹೆಸರು ಆಶ್ರಯ ಬಡಾವಣೆ. ಕಳೆದ ಕೆಲ ವರ್ಷಗಳ ಹಿಂದೆ ಈ ಬಡಾವಣೆಯಲ್ಲಿ ಕೇವಲ ಮೂರ‌್ನಾಲ್ಕು ಮನೆಗಳಿದ್ದುವು. ಸರ್ಕಾರ ನಿರಾಶ್ರಿತರಿಗೆ ನೀಡಲು ಮೀಸಲಿರಿಸಿರುವ ಭೂಮಿ ಎಂದು ತಿಳಿದ ಕೂಡಲೆ ನಿರಾಶ್ರಿತರು ಈ ಜಾಗದತ್ತ ನುಗ್ಗಿದರು. ರಾತ್ರೋ ರಾತ್ರಿ ಗುಡಿಸಲು ಕಟ್ಟಿಕೊಂಡು ಜೀವಿಸಲು ಮುಂದಾದರು. ಈ ಹಿನ್ನೆಲೆಯಲ್ಲಿ ಈ ಬಡಾವಣೆಯನ್ನು ದಿಢೀರ್ ನಗರ ಎಂದೇ ಕರೆಯುವುದು ವಾಡಿಕೆಯಾಗಿದೆ.

ಪ್ರತಿಕ್ರಿಯಿಸಿ (+)