ಸೌಕರ್ಯ ವಂಚಿತ ಸೂಳೆಬಾವಿ ಹಾಡಿ

7
ಗ್ರಾಮ ಸಂಚಾರ

ಸೌಕರ್ಯ ವಂಚಿತ ಸೂಳೆಬಾವಿ ಹಾಡಿ

Published:
Updated:

ಸೋಮವಾರಪೇಟೆ: ರಾಜ್ಯ ಹಾಗೂ ಕೇಂದ್ರ ಸರಕಾರಗಳು ಗಿರಿಜನರ ಉದ್ಧಾರಕ್ಕಾಗಿ ಹತ್ತು ಹಲವು ಯೋಜನೆಗಳನ್ನು ಜಾರಿಗೆ ತರುತ್ತಿವೆ. ಆದರೆ ಅರ್ಹರಿಗೆ ಅವು ಸಮರ್ಪಕವಾಗಿ ತಲುಪುತ್ತಿಲ್ಲ ಎಂಬುದಕ್ಕೆ ಸೂಳೆಬಾವಿ ಗಿರಿಜನರ ಹಾಡಿ ಉತ್ತಮ ಉದಾಹರಣೆಯಾಗಿದೆ.ತಾಲ್ಲೂಕಿನ ಯಡವನಾಡು ಮೀಸಲು ಅರಣ್ಯದೊಳಗಿರುವ ಸೂಳೆಬಾವಿ ಹಾಡಿಯಲ್ಲಿ 21 ಜೇನು ಕುರುಬ ಕುಟುಂಬಗಳ 48 ಮಂದಿ ವಾಸಿಸುತ್ತಿದ್ದು, ಮೂಲಸೌಕರ್ಯಗಳಿಂದ ವಂಚಿತರಾಗಿ ಕತ್ತಲೆಯಲ್ಲೇ ಬದುಕು ದೂಡುತ್ತಿದ್ದಾರೆ.ಗಿರಿಜನರ ಸಮಗ್ರ ಅಭಿವೃದ್ಧಿ ಕಲ್ಯಾಣ ಇಲಾಖೆ ವತಿಯಿಂದ ಅಭಿವೃದ್ಧಿ ಕಾರ್ಯಕ್ರಮಗಳು ಜಾರಿಯಾಗುತ್ತಲೇ ಇವೆ. ಈ ಕಾರ್ಯಕ್ರಮಗಳಿಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಭಾರಿ ಪ್ರಚಾರದೊಂದಿಗೆ ಭೂಮಿ ಪೂಜೆ ನೆರವೇರಿಸುತ್ತಾರೆ. ಆದರೆ ಯಾವುದೇ ಕಾಮಗಾರಿಗಳು ನಿರ್ದಿಷ್ಟ ಸಮಯದಲ್ಲಿ ಮುಗಿಯುವುದಿಲ್ಲ. ಜತೆಗೆ ಘೋಷಣೆಯಾಗುವ  ಸವಲತ್ತುಗಳು ಅರ್ಹರಿಗೆ ತಲುಪುತ್ತಿಲ್ಲ ಎಂಬುದಕ್ಕೆ ಹಾಡಿಯ ಜನರ ಬದುಕು ಕೈಗನ್ನಡಿಯಾಗಿದೆ.ಈ ಹಾಡಿಯ 10 ಕುಟುಂಬಗಳಿಗೆ ಸರ್ಕಾರಿ ಮನೆಗಳು ಮಂಜೂರಾಗಿದ್ದು, ಇದರಲ್ಲಿ 7 ಮನೆಗಳ ನಿರ್ಮಾಣ ಕೆಲಸ ಪ್ರಾರಂಭವಾಗಿದೆ. ಆದರೆ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ. ಗಂಗಾ ಕಲ್ಯಾಣ ಯೋಜನೆಯಲ್ಲಿ 4 ಲಕ್ಷ ರೂಪಾಯಿ ವೆಚ್ಚದ ಕುಡಿಯುವ ನೀರಿನ ಯೋಜನೆಯಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಕಾಮಗಾರಿ ಪ್ರಾರಂಭವಾಗಿದೆ. ರಿಂಗ್ ಬಾವಿ ನಿರ್ಮಾಣವಾಗಿದ್ದು, ಪೈಪ್‌ಲೈನ್ ಮಾಡಿಲ್ಲ. ನೀರಿನ ಟ್ಯಾಂಕ್ ಇದ್ದರೂ ಉಪಯೋಗಕ್ಕೆ ಬಾರದಂತಾಗಿದೆ.ಸರ್ಕಾರ ಇಲ್ಲಿಯ ಜನರಿಗೆ ಸಾಕಲು ಹಂದಿಮರಿಗಳನ್ನು ನೀಡುವ ಭರವಸೆ ನೀಡಿತ್ತು. ಅದರಂತೆ ಹಂದಿಗೂಡು ನಿರ್ಮಾಣವಾಗಿ ಹಲವು ತಿಂಗಳು ಕಳೆದಿವೆ. ಆದರೆ ಹಂದಿ ಮರಿಗಳನ್ನು ಸರಬರಾಜು ಮಾಡಿಲ್ಲ. ವ್ಯವಸಾಯಕ್ಕೆ ಭೂಮಿಯನ್ನು ಸಮತಟ್ಟು ಮಾಡಿಕೊಟ್ಟು, ಜೋಡಿ ಎತ್ತುಗಳನ್ನು ನೀಡುತ್ತೇವೆ ಎಂದು ಹೇಳಿ ಹೋದ ಅಧಿಕಾರಿಗಳು ಇದುವರೆಗೆ ಹಾಡಿ ಕಡೆ ಬಂದಿಲ್ಲವೆಂದು ನಿವಾಸಿಗಳು ದೂರುತ್ತಾರೆ.ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿದ್ದ ವಿ.ಎಂ. ವಿಜಯ ಅವರ ಅಧಿಕಾರದ ಅವಧಿಯಲ್ಲಿ ಕೇಂದ್ರ ಸರಕಾರದ 4 ಸೋಲಾರ್ ದೀಪಗಳನ್ನು ಹಾಡಿಯಲ್ಲಿ ಅಳವಡಿಸಿದ್ದರು. ಆದರೆ ಅಳವಡಿಸಿ ಮೂರು ತಿಂಗಳಲ್ಲೆೀ ಕೆಟ್ಟು ಹೋದವು. ಇದರ ದುರಸ್ತಿಗೆ ಹಲವು ಬಾರಿ ಮನವಿ ಮಾಡಿದ್ದರೂ ಇಲಾಖಾಧಿಕಾರಿಗಳು ಗಮನ ಹರಿಸಿಲ್ಲ. ಅದರ ಬ್ಯಾಟರಿ ಪೆಟ್ಟಿಗೆ ಮನೆಯ ಸಾಮಾನು ಸರಂಜಾಮು ತುಂಬಿಸುವುದಕ್ಕೆ ಉಪಯೋಗವಾಗುತ್ತಿದೆ. 21 ಕುಟುಂಬಗಳಲ್ಲಿ 8 ಕುಟುಂಬಗಳಿಗೆ ಪಡಿತರ ಚೀಟಿಗಳು ಇನ್ನೂ ದೊರೆತಿಲ್ಲ.ಬೆಳೆದ ಬೆಳೆಗಳು ಕಾಡು ಪ್ರಾಣಿಗಳ ಪಾಲಾಗುತ್ತಿವೆ. ವಿದ್ಯುತ್ ಇಲ್ಲದ ಪರಿಣಾಮ ರಾತ್ರಿಯಿಡೀ ಕತ್ತಲೆಯಲ್ಲೆೀ ಕಾಲ ಕಳೆಯಬೇಕು. ಕೂಲಿ ಸಿಕ್ಕರೆ ಎರಡು ಹೊತ್ತು ಊಟ ಮಾಡಬಹುದು. ಜೋರಾಗಿ ಮಳೆ- ಗಾಳಿ ಬಂದರೆ  ವಾಸದ ಗುಡಿಸಲುಗಳು ನೆಲಸಮವಾಗುವ ಆತಂಕ ಎದುರಿಸುತ್ತಿದ್ದಾರೆ ಇಲ್ಲಿನ ನಿವಾಸಿಗಳು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry