ಸೌಜನ್ಯದ ವರ್ತನೆಗೆ ಪೊಲೀಸರಿಗೆ ತರಬೇತಿ

7

ಸೌಜನ್ಯದ ವರ್ತನೆಗೆ ಪೊಲೀಸರಿಗೆ ತರಬೇತಿ

Published:
Updated:

ಗಂಗಾವತಿ: ನಗರದಲ್ಲಿ ಮುಂದಿನ ನವೆಂಬರ್‌ನಲ್ಲಿ ನಡೆಯುವ 78ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ನಗರಕ್ಕೆ ಆಗಮಿಸುವ ಸಾಹಿತಿಗಳೊಂದಿಗೆ ಸೌಜನ್ಯಯುತರಾಗಿ ವರ್ತಿಸಲು ತಮ್ಮ ಇಲಾಖೆಯ ಸಿಬ್ಬಂದಿಗೆ ಸೂಕ್ತ ತರಬೇತಿ ಕೊಡಿಸಲಾಗುವುದು ಎಂದು ಜಿಲ್ಲಾ ಎಸ್ಪಿ ಬಿ.ಎಸ್. ಪ್ರಕಾಶ ಹೇಳಿದರು. 

ಇಲಾಖಾವಾರು ತನಿಖೆ ನಿಮಿತ್ತ ಗಂಗಾವತಿ ಉಪ ವಿಭಾಗ ಕಚೇರಿಗೆ ಶುಕ್ರವಾರ ಎಸ್ಪಿ ಪ್ರಕಾಶ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದರು.ಸಮ್ಮೇಳನ ಎಂದರೆ ಸವಾಲಿನ ಕೆಲಸ. ಈ ಹಿಂದೆ ಗದಗ ಸಮ್ಮೇಳನದಲ್ಲಿ ಕಾರ್ಯ ನಿರ್ವಹಿಸಿದ ಅನುಭವ ತಮಗಿದೆ. ಸಮ್ಮೇಳನದ ಭದ್ರತೆಗೆ ಒಟ್ಟು 700-800 ಸಿಬ್ಬಂದಿ ಅವಶ್ಯವಾಗಲಿದೆ. ಈ ಬಗ್ಗೆ ತಕ್ಕಷ್ಟು ಏರ್ಪಾಡು ಮಾಡಿಕೊಳ್ಳಲಾಗುತ್ತಿದೆ ಎಂದು ವಿವರಿಸಿದರು.ಸಾಹಿತಿಗಳು ಮೂಲತಃ ಭಾವಜೀವಿಗಳು, ತುಂಬ ಸೂಕ್ಷ್ಮ ಮನಸ್ಸಿನವರಾಗಿದ್ದರಿಂದ ಅವರೊಂದಿಗೆ ಸಹಜವಾಗಿ ವ್ಯವಹರಿಸುವುದು ಕಷ್ಟಸಾಧ್ಯ. ತಮ್ಮ ಸಿಬ್ಬಂದಿ ಸಾಹಿತಿಗಳೊಂದಿಗೆ ಅತ್ಯಂತ ಸೌಜನ್ಯಯುತವಾಗಿ ವರ್ತಿಸಲು ಸೂಕ್ತ ತರಬೇತಿ ನೀಡಲಾಗುವುದು.ಒಂದೊಂದು ಭಾಗದ ಸಾಹಿತಿಗಳದ್ದು ಒಂದೊಂದು ವ್ಯಕ್ತಿತ್ವ ಇರುತ್ತದೆ. ಹೈದರಾಬಾದ್-ಕರ್ನಾಟಕ, ಉತ್ತರ ಕರ್ನಾಟಕ, ಉತ್ತರ ಕನ್ನಡ, ದಕ್ಷಿಣ ಕನ್ನಡ ಭಾಗದ ಸಾಹಿತಿಗಳ ಭಾವ-ವೇಷದಲ್ಲಿ ವಿಭಿನ್ನತೆ ಇರುವುದರಿಂದ ಪೊಲೀಸರಿಗೆ ಸೂಕ್ತ ತಿಳಿವಳಿಕೆ ನೀಡಲಾಗುವುದು ಎಂದರು.ನನ್ನ ಗಮನಕ್ಕೆ ತನ್ನಿ: ನಗರ ಸೇರಿದಂತೆ ತಾಲ್ಲೂಕಿನಾದ್ಯಂತ ಕಾನೂನುಬಾಹಿರ ಮಟ್ಕಾ ಮತ್ತು ಇಸ್ಪೀಟ್ ಜೂಜಾಟ ನಡೆಯುತ್ತಿರುವ ವರದಿಗಳು ಮೇಲಿಂದ ಮೇಲೆ ನನ್ನ ಗಮನಕ್ಕೆ ಬರುತ್ತಿವೆ. ಈ ಹಿನ್ನೆಲೆ ಕಟ್ಟುನಿಟ್ಟಿನ ಕ್ರಮ   ಕೈಗೊಳ್ಳುವಂತೆ ಅಧೀನ ಅಧಿಕಾರಿಗಳಿಗೆ ಸೂಚಿಸಲಾಗಿದೆ.ಆದೇಶದ ಮಧ್ಯೆಯೂ ಎಲ್ಲಿಯಾದರೂ ಮಟ್ಕಾ ಜೂಜಾಟ ನಡೆಯುತ್ತಿರುವ      ಬಗ್ಗೆ ಕಂಡು ಬಂದಲ್ಲಿ ಅಥವಾ ಮಾಹಿತಿ ದೊರೆತಲ್ಲಿ ನೇರವಾಗಿ ಸಾರ್ವಜನಿಕರು  ನನ್ನ ದೂರವಾಣಿ 94808-03701ಗೆ ಕರೆ ಮಾಡಿ ಮಾಹಿತಿ ನೀಡಬಹುದು.ಜಿಲ್ಲಾ ಎಸ್ಪಿ ಕಚೇರಿಯಿಂದಲೇ ವಿಶೇಷ ತಂಡವನ್ನು ಕಳುಹಿಸಿ ದಾಳಿ ಮಾಡಿಸಲಾಗುವುದು ಎಂದರು.

ಕೊಪ್ಪಳ ಜಿಲ್ಲೆಯಲ್ಲಿ ಕಾನೂನು ಬಾಹಿರ ಚಟುವಟಿಕೆ ನಿಯಂತ್ರಣಕ್ಕೆ ಇಲಾಖೆಯೊಂದಿಗೆ ಸಾರ್ವಜನಿಕರು ಸಹಕರಿಸಬೇಕೆಂದು ಮನವಿ ಮಾಡಿದರು.ಸಂಯಮ ವರ್ತನೆ: ನಗರಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್ ಶಿವಕುಮಾರ ಸೇರಿದಂತೆ ಕೆಲ ಸಿಬ್ಬಂದಿ        ವರ್ತನೆಯ ಬಗ್ಗೆ ಸಾರ್ವಜನಿಕ ದೂರುಗಳು ಬಂದಿದ್ದು, ವರ್ತನೆ ಬದಲಿಸಿಕೊಳ್ಳುವಂತೆ  ಸಲಹೆ ನೀಡಲಾಗಿದೆ. ಸಾರ್ವಜನಿಕರೊಂದಿಗೆ    ಅನುಚಿತವಾಗಿ ವರ್ತಿಸಿದ ಸ್ವಾಮಿ ಎಂಬ ಪೇದೆಯ ಬಗ್ಗೆ ಇಲಾಖಾವಾರು ತನಿಖೆ ನಡೆದಿದೆ.ಪೊಲೀಸ್ ಇಲಾಖೆಯ ಸಿಬ್ಬಂದಿ ಸಾರ್ವಜನಿಕರೊಂದಿಗೆ ಸಂಯಮ ಮತ್ತು ಸೌಜನ್ಯದಿಂದ ವರ್ತಿಸಲು ಆಗಾಗ ತಜ್ಞರಿಂದ ತರಬೇತಿಯೂ ಕೊಡಿಸಲಾಗುತ್ತಿದೆ ಎಂದರು.ಈ ಸಂದರ್ಭದಲ್ಲಿ ಡಿ.ವೈ.ಎಸ್.ಪಿ ಡಿ.ಎಲ್, ಹಣಗಿ, ಗ್ರಾಮೀಣ ಸಿ.ಪಿ.ಐ ಆರ್.ಎಸ್. ಉಜ್ಜಿನಕೊಪ್ಪ ಇತರರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry