ಮಂಗಳವಾರ, ಮಾರ್ಚ್ 2, 2021
23 °C

ಸೌದಿಯಲ್ಲಿ ಕಾರ್ಮಿಕರ ಕಷ್ಟ ದೂರಗಾಮಿ ಕ್ರಮ ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೌದಿಯಲ್ಲಿ ಕಾರ್ಮಿಕರ ಕಷ್ಟ ದೂರಗಾಮಿ ಕ್ರಮ ಅಗತ್ಯ

ಸೌದಿ ಅರೇಬಿಯಾದಲ್ಲಿ ಅತಂತ್ರ ಸ್ಥಿತಿಯಲ್ಲಿರುವ ಭಾರತೀಯ ಕಾರ್ಮಿಕರು ಮೂರು ದಿನ ಊಟವಿಲ್ಲದೆ ಹಸಿವಿನಲ್ಲಿರಬೇಕಾದಂತಹ ಬಿಕ್ಕಟ್ಟಿನ ಸ್ಥಿತಿ ಸೃಷ್ಟಿಯಾದದ್ದು  ಕಳವಳಕಾರಿ. ಟ್ವೀಟ್‌ ಮೂಲಕ ಸೌದಿಯ ಅನಿವಾಸಿ ಭಾರತೀಯರೊಬ್ಬರು ಈ ವಿಷಯವನ್ನು ಭಾರತದ ವಿದೇಶಾಂಗ ಸಚಿವರ ಗಮನಕ್ಕೆ ತಂದಿದ್ದರಿಂದ ಸರ್ಕಾರ ತಕ್ಷಣ ಸಮಸ್ಯೆಯತ್ತ ಗಮನ ಹರಿಸುವಂತಾಗಿದೆ.ನಂತರ ಭಾರತೀಯ ರಾಯಭಾರ ಕಚೇರಿಯು ಕ್ರಮ ಕೈಗೊಂಡು, ಅವರಿಗೆ ಆಹಾರ ಸಾಮಗ್ರಿ ಮತ್ತು ಸಿದ್ಧ ಆಹಾರದ ಪೊಟ್ಟಣಗಳನ್ನು ಒದಗಿಸಿದೆ. ಸಚಿವೆಯ ಕರೆ ಮೇರೆಗೆ ಅಲ್ಲಿರುವ ಭಾರತೀಯ ಸಮುದಾಯವೂ ಈ ಕಾರ್ಯದಲ್ಲಿ ನೆರವು ನೀಡಿದೆ. ಮುಖ್ಯವಾಗಿ ಸೌದಿ ಅರೇಬಿಯಾದ ಕೈಗಾರಿಕಾ ಪ್ರದೇಶ ಜೆದ್ದಾದಲ್ಲಿ  10 ಸಾವಿರ ಭಾರತೀಯ ಕಾರ್ಮಿಕರು ಕೆಲಸ ಕಳೆದುಕೊಂಡಿದ್ದಾರೆ. ಸೌದಿಯ ಪರಿಸ್ಥಿತಿಯನ್ನು ಖುದ್ದಾಗಿ ತಿಳಿದುಕೊಳ್ಳಲು ಈಗಾಗಲೇ  ಕೇಂದ್ರ ಸಚಿವರಾದ ವಿ.ಕೆ.ಸಿಂಗ್‌ ಅಲ್ಲಿಗೆ ಹೊರಟಿದ್ದಾರೆ. ಕುವೈಟ್‌ನಲ್ಲೂ ಸಾವಿರಾರು ಭಾರತೀಯರು ಉದ್ಯೋಗ ಕಳೆದುಕೊಂಡಿದ್ದು ಸಂಬಳ, ಸೌಲಭ್ಯಗಳಿಲ್ಲದೆ ಒದ್ದಾಟದ ಪರಿಸ್ಥಿತಿಯಲ್ಲಿದ್ದಾರೆಂದು ವರದಿಗಳು ತಿಳಿಸಿವೆ.ಸೌದಿ ಹಾಗೂ ಕುವೈಟ್‌ನ ಕಾರ್ಮಿಕರ ಸಂಕಷ್ಟ  ಪರಿಹರಿಸುವ ಪ್ರಯತ್ನಗಳಲ್ಲಿ ಕೇಂದ್ರದ ಇನ್ನೊಬ್ಬ ಸಚಿವ ಎಂ.ಜೆ. ಅಕ್ಬರ್‌ ಅವರೂ ಪಾಲ್ಗೊಳ್ಳಲಿದ್ದಾರೆ.  ಹೊಟ್ಟೆಪಾಡಿಗಾಗಿ ಕೊಲ್ಲಿ ದೇಶಗಳಿಗೆ ಹೋಗಿ ಹಠಾತ್ತಾಗಿ ಸಂಕಷ್ಟಕ್ಕೆ ಸಿಲುಕಿರುವ ಈ ಕಾರ್ಮಿಕರ ಬವಣೆಗೆ ಸರ್ಕಾರ ಶೀಘ್ರ ಸ್ಪಂದಿಸಿರುವುದು ಸ್ವಾಗತಾರ್ಹ.ಸೌದಿ ಅರೇಬಿಯಾ ಸಹಿತ ಕೊಲ್ಲಿ ದೇಶಗಳಲ್ಲಿ ಲಕ್ಷಾಂತರ ಭಾರತೀಯರು ಕಳೆದ ಹಲವು ದಶಕಗಳಿಂದ ದುಡಿಯುತ್ತಿದ್ದಾರೆ. ಸರ್ಕಾರದ ಅಂಕಿ ಅಂಶಗಳ ಪ್ರಕಾರ, ಸೌದಿ ಅರೇಬಿಯಾದಲ್ಲಿ ಸುಮಾರು 30 ಲಕ್ಷ ಹಾಗೂ ಕುವೈಟ್‌ನಲ್ಲಿ 8 ಲಕ್ಷದಷ್ಟು ಭಾರತೀಯರಿದ್ದಾರೆ.ಒಂದು ಕಾಲದಲ್ಲಿ ತೈಲ ಬೆಲೆ ಸ್ಥಿರವಾಗಿದ್ದಾಗ, ತಮ್ಮ ಅದೃಷ್ಟವನ್ನು ಅರಸಿಕೊಂಡು ಕೊಲ್ಲಿ ದೇಶಗಳಿಗೆ ಹೋದ ಭಾರತೀಯರು, ಅಲ್ಲಿ ದುಡಿದ ಹಣವನ್ನು ತಾಯ್ನಾಡಿಗೆ ಕಳಿಸಿ, ಭಾರತದ ವಿದೇಶಿ ವಿನಿಮಯ ಚೇತರಿಕೆಗೆ ಬಹುದೊಡ್ಡ ಕೊಡುಗೆ ನೀಡಿದ್ದಾರೆ. ಆದರೆ ಇತ್ತೀಚಿನ ವರ್ಷಗಳಲ್ಲಿ ತೈಲ ಬೆಲೆ ಕುಸಿದಿರುವುದರಿಂದ ಸೌದಿಯ ಆರ್ಥಿಕ ಪರಿಸ್ಥಿತಿ ಚೆನ್ನಾಗಿಲ್ಲ. ಸರ್ಕಾರವೇ ವೆಚ್ಚ ಕಡಿತದ ನೀತಿ ಅನುಸರಿಸುತ್ತಿದೆ.ಸೌದಿಯಲ್ಲಿ ಲಕ್ಷಾಂತರ ಭಾರತೀಯರಿಗೆ ಉದ್ಯೋಗ ಕೊಟ್ಟಿರುವ ನಿರ್ಮಾಣ ಕ್ಷೇತ್ರದ ದೈತ್ಯ ಸೌದಿ ಬಿನ್‌ಲಾಡೆನ್‌ ಕಂಪೆನಿಗೆ ಹೊಸ ಕಾಂಟ್ರಾಕ್ಟ್‌ ಕೊಡದಂತೆ ಕಳೆದ ಸೆಪ್ಟೆಂಬರ್‌ನಲ್ಲಿ ಅಲ್ಲಿನ ಸರ್ಕಾರ ನಿಷೇಧ ಹೇರಿದ್ದು ಭಾರತೀಯ ಉದ್ಯೋಗಿಗಳಿಗೆ ದೊಡ್ಡ ಪೆಟ್ಟು ನೀಡಿದಂತಹ ಕ್ರಮವಾಗಿತ್ತು. ಈ ವರ್ಷದ ಮೇ ತಿಂಗಳಲ್ಲಿ ನಿಷೇಧವನ್ನು ಹಿಂತೆಗೆದುಕೊಂಡಿದ್ದರೂ ಈಗಾಗಲೇ ಸಾವಿರಾರು ಭಾರತೀಯರು ಉದ್ಯೋಗ ಕಳೆದುಕೊಂಡಿದ್ದಾರೆ. ಉಳಿದವರ ಕೆಲಸದ ಪರ್ಮಿಟ್‌ಗಳನ್ನು ನವೀಕರಿಸಲು ಇತ್ತೀಚೆಗೆ ಕಂಪೆನಿ ನಿರಾಕರಿಸಿರುವುದೂ ಹೊಸ ಬಿಕ್ಕಟ್ಟಿಗೆ ಕಾರಣವಾಗಿದೆ. 2014ರಲ್ಲಿ ಭಾರತ ಮತ್ತು ಸೌದಿ ಅರೇಬಿಯಾ ಸರ್ಕಾರಗಳ ಮಧ್ಯೆ ಉದ್ಯೋಗ ಪರಿಸ್ಥಿತಿ ಸುಧಾರಣೆಯ ನಿಟ್ಟಿನಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.ಕಳೆದ ಎರಡು ವರ್ಷಗಳಲ್ಲಿ ಸುಮಾರು ಐದು ಲಕ್ಷ ಭಾರತೀಯರು ಸೌದಿಗೆ ಉದ್ಯೋಗ ಅರಸಿ ತೆರಳಿದ್ದಾರೆ. ಆದರೆ ಸೌದಿಯ ಹಲವು ಕಂಪೆನಿಗಳು ನೌಕರಸ್ನೇಹಿ ನೀತಿಗಳನ್ನು ಪಾಲಿಸುತ್ತಿಲ್ಲ ಎನ್ನುವ ದೂರುಗಳು ವ್ಯಾಪಕವಾಗಿವೆ.ಸಾಮಾನ್ಯವಾಗಿ ಅಮೆರಿಕ, ಯುರೋಪಿನ ದೇಶಗಳಿಗೆ ಉನ್ನತ ವಿದ್ಯಾಭ್ಯಾಸ ಪಡೆದ ಭಾರತೀಯರು ಹೆಚ್ಚಾಗಿ ಉದ್ಯೋಗ ಅರಸಿ ತೆರಳಿದರೆ, ಕೊಲ್ಲಿ ದೇಶಗಳಿಗೆ ಕೆಳ ಮತ್ತು ಮಧ್ಯಮ ವರ್ಗದ ಉದ್ಯೋಗಿಗಳ ವಲಸೆಯೇ ಹೆಚ್ಚು. ರಾಜಪ್ರಭುತ್ವದ ದೇಶಗಳಾದ್ದರಿಂದ ಇಲ್ಲಿ ಕಾರ್ಮಿಕ ಕಾಯ್ದೆಗಳ ಕಟ್ಟುನಿಟ್ಟಿನ ಅನುಷ್ಠಾನವೂ ಹೇಳಿಕೊಳ್ಳುವಂತಿಲ್ಲ.ಖಾಸಗಿ ಕಂಪೆನಿಗಳು ಮತ್ತು ವ್ಯಕ್ತಿಗಳು ಉದ್ಯೋಗಿಗಳ ಶೋಷಣೆ ಮಾಡಿದರೆ ಅದನ್ನು ಪ್ರತಿಭಟಿಸಲೂ ಇಲ್ಲಿ ಅವಕಾಶವಿಲ್ಲ. ಭಾರತೀಯ ಕಾರ್ಮಿಕರ ಉದ್ಯೋಗ ಭದ್ರತೆ ಮತ್ತು ಸೌಲಭ್ಯಗಳ ಖಾತ್ರಿಗೆ ಖಚಿತ ಕ್ರಮಗಳನ್ನು ಕೈಗೊಳ್ಳಲು ಸೌದಿ ಸರ್ಕಾರದ ಮನ ಒಲಿಸಲು ಸೌದಿಗೆ ತೆರಳಿರುವ ನಮ್ಮ ಸಚಿವರು ಪ್ರಯತ್ನಿಸಬೇಕು. ಕೊಲ್ಲಿ ದೇಶಗಳ ಅನಿಶ್ಚಿತ ಆರ್ಥಿಕ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಒಮ್ಮೆಲೆ ಲಕ್ಷಾಂತರ ಭಾರತೀಯರು ತಾಯ್ನಾಡಿಗೆ ಮರಳುವಂತಾದರೆ, ಇಲ್ಲಿಯ ಆರ್ಥಿಕತೆಯ ಮೇಲೂ ಹೊರೆ ಬೀಳುವುದು ಖಚಿತ. ಹೀಗಾಗಿ ಇಲ್ಲಿಗೆ ಮರಳಿಬರುವವರ ಉದ್ಯೋಗ ಪುನರ್ವಸತಿಗೆ ಸಂಬಂಧಿಸಿಯೂ ಸರ್ಕಾರ ದೂರಗಾಮಿ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.