ಶನಿವಾರ, ನವೆಂಬರ್ 23, 2019
23 °C

ಸೌದಿಯಲ್ಲಿ ನಮ್ಮವರ ಕನಸು ಛಿದ್ರ

Published:
Updated:

ಸೌದಿ ಅರೇಬಿಯಾ ತನ್ನ ಪ್ರಜೆಗಳಿಗೆ ಹೆಚ್ಚು ಉದ್ಯೋಗಗಳನ್ನು ಮೀಸಲಿರಿಸಲು ನಿರ್ಧರಿಸಿದೆ. ಹೀಗೆ ಯಾವುದಾದರೊಂದು ದೇಶ ಉದ್ಯೋಗಗಳನ್ನು ತನ್ನವರಿಗೆ ಮೀಸಲಿರಿಸುವ ನಿರ್ಧಾರ ಕೈಗೊಳ್ಳುವುದು ಹೊಸತೇನೂ ಅಲ್ಲ. ಹೆಚ್ಚು ಕಡಿಮೆ ವಿಶ್ವಾದ್ಯಂತ ಎಲ್ಲಾ ದೇಶಗಳಲ್ಲೂ ಇಂಥದ್ದೊಂದು ನಿಯಮ ಬೇರೆ ಬೇರೆ ರೂಪದಲ್ಲಿ ಜಾರಿಯಲ್ಲಿದೆ.



ಆದರೆ ಸೌದಿ ಅರೇಬಿಯಾ ಕೈಗೊಂಡ ಈ ನಿರ್ಧಾರದ ಪರಿಣಾಮ ಹೆಚ್ಚು ಕಡಿಮೆ ಇಡೀ ಭಾರತ ಉಪಖಂಡದಲ್ಲಿ ಗೋಚರಿಸುತ್ತಿದೆ. ಕೇರಳ ಸರ್ಕಾರವಂತೂ ಇದನ್ನೊಂದು ದೊಡ್ಡ ಸಮಸ್ಯೆಯಾಗಿ ಪರಿಗಣಿಸಿ ಕೇಂದ್ರಕ್ಕೆ ನಿಯೋಗವನ್ನೂ ಕೊಂಡೊಯ್ದಿದೆ. ಸಾಗರೋತ್ತರ ವ್ಯವಹಾರಗಳ ಖಾತೆಯ ಸಚಿವರಂತೂ ಈ ವಿಷಯದಲ್ಲಿ ಪ್ರತಿದಿನವೂ ಒಂದಲ್ಲ ಒಂದು ಹೇಳಿಕೆಯನ್ನು ಕೊಡುತ್ತಿದ್ದಾರೆ.



ಇಷ್ಟಕ್ಕೂ ಸೌದಿ ಸರ್ಕಾರದ ನಿರ್ಧಾರವೊಂದು ಭಾರತೀಯರನ್ನೇಕೆ ಈ ಮಟ್ಟಿಗೆ ಕಾಡಬೇಕು? ಈ ಪ್ರಶ್ನೆಯ ಉತ್ತರ ಸರಳವಾದುದಲ್ಲ. ಕೊಲ್ಲಿ ರಾಷ್ಟ್ರಗಳಿಗೆ ಹೋಗಿ ನಾಲ್ಕು ಕಾಸು ಸಂಪಾದಿಸಿ ಬದುಕನ್ನು ಗಟ್ಟಿಗೊಳಿಸಿಕೊಂಡಿರುವ ದೊಡ್ಡ ವರ್ಗ ಭಾರತದ ಕರಾವಳಿಯ ಉದ್ದಕ್ಕೂ ಇದೆ. ಹೀಗೆ ಕೊಲ್ಲಿ ರಾಷ್ಟ್ರಗಳಲ್ಲಿ ಉದ್ಯೋಗ ಸಂಪಾದಿಸಿಕೊಂಡಿರುವ ಯಾರೂ ತಂತ್ರಜ್ಞರೋ ಅಥವಾ ಆ ಬಗೆಯ ವಿಶೇಷ ಪರಿಣತಿಯುಳ್ಳವರಲ್ಲ. ಇವರೆಲ್ಲಾ ತೀರಾ ಸಾಧಾರಣವಾದ ಮನೆಗೆಲಸ, ತೋಟದ ಮಾಲಿ, ಸಣ್ಣ ಅಂಗಡಿಗಳಲ್ಲಿ ಮಾರಾಟ ಸಹಾಯಕ, ಹೊಟೇಲುಗಳಲ್ಲಿ ಸಪ್ಲೈಯರ್ ಅಥವಾ ಕ್ಲೀನರ್ ಬಗೆಯ ಕೆಲಸಗಳು ಇತ್ಯಾದಿಗಳನ್ನು ಮಾಡಿಕೊಂಡಿರುವವರು.



ಇನ್ನೊಂದು ವರ್ಗ ಚಾಲಕ, ಪ್ಲಂಬರ್, ಎ.ಸಿ. ದುರಸ್ತಿಗಾರ ಈ ಬಗೆಯ ಕೆಲಸ ಮಾಡಿಕೊಂಡಿರುವವರದ್ದು. ಇವರೆಲ್ಲರೂ ಕೊಲ್ಲಿ ರಾಷ್ಟ್ರಗಳಿಗೆ ಹೋದದ್ದು ಅವರಿಗೆ ಅಲ್ಲಿ ದೊರೆಯುವ ಸಂಬಳಕ್ಕೂ ಭಾರತದಲ್ಲಿ ಅದೇ ಕೆಲಸಕ್ಕೆ ದೊರೆಯುವ ಸಂಬಳದ ನಡುವಣ ವ್ಯತ್ಯಾಸದಿಂದ. ಹೀಗೆ ದುಡಿಯಲು ಹೋಗುವವರು ಸಾಫ್ಟ್‌ವೇರ್ ಎಂಜಿನಿಯರುಗಳಂತೆ ಕೆಲಸ ಮಾಡಲು ಅಗತ್ಯವಿರುವ ವರ್ಕ್ ಪರ್ಮಿಟ್‌ಗಳನ್ನೋ ಅದಕ್ಕೆ ಬೇಕಿರುವ ವೀಸಾಗಳನ್ನು ಪಡೆದು ಹೋಗಲಿಲ್ಲ.



ಕೊಲ್ಲಿ ರಾಷ್ಟ್ರಗಳಿಗೆ ಉದ್ಯೋಗಿಗಳನ್ನು ಒದಗಿಸುವ ಏಜೆನ್ಸಿಗಳು ಕೇಳಿದ ಹಣ ಕೊಟ್ಟು ಹೋಗಿ ಅಲ್ಲಿ ಕೆಲಸ ಮಾಡುತ್ತಿದ್ದಾರಷ್ಟೇ. ಅವರು ಅಲ್ಲಿ ದುಡಿದು ಸಂಪಾದಿಸಿ ಮನೆಗೆ ಕಳುಹಿಸುವ ಹಣದ ಮೂಲಕ ವಿದೇಶಿ ವಿನಿಮಯ ಸಂಪಾದಿಸುತ್ತಿರುವ ಭಾರತ ಸರ್ಕಾರ ಯಾವತ್ತೂ ಇವರೆಲ್ಲಾ ಹೇಗಿದ್ದಾರೆ ಎಂದು ತಲೆಕೆಡಿಸಿಕೊಂಡಿದ್ದೇ ಇಲ್ಲ. ಪ್ರವಾಸಿ ಭಾರತೀಯ ದಿವಸಗಳನ್ನು ಆಚರಿಸುತ್ತಿದ್ದಾಗಲೆಲ್ಲಾ ಶ್ರೀಮಂತ ರಾಷ್ಟ್ರಗಳಲ್ಲಿ ನೆಲೆಸಿ ಅಲ್ಲಿನ ಪೌರತ್ವ ಪಡೆದವರಿಗೆ ಭಾರತೀಯ ಪೌರತ್ವವನ್ನೂ ಕೊಡುವ ಬಗ್ಗೆ ನಡೆದಷ್ಟು ಚರ್ಚೆ ಈ ಬಡ ಅನಿವಾಸಿಗಳ ಬಗ್ಗೆ ನಡೆದೇ ಇರಲಿಲ್ಲ.



ಸೌದಿ ಅರೇಬಿಯಾ ಈಗ ಜಾರಿಗೆ ತರುತ್ತಿರುವ `ನಿತಾಕತ್' ವ್ಯವಸ್ಥೆಯನ್ನು ಸರಳವಾಗಿ ಅನುವಾದಿಸುವುದಾದರೆ `ವಿಭಾಗೀಕರಣ' ಎಂದು ಕರೆಯಬಹುದು. ಇದು ಉದ್ಯೋಗ ಒದಗಿಸುವ ಸಂಸ್ಥೆಗಳ ವಿಭಾಗೀಕರಣ ವ್ಯವಸ್ಥೆ. ಸೌದಿ ಅರೇಬಿಯಾದಲ್ಲಿರುವ ಎಲ್ಲಾ ಉದ್ಯೋಗದಾತ ಸಂಸ್ಥೆಗಳನ್ನು ನಾಲ್ಕು ವಿಭಾಗಗಳಲ್ಲಿ ಗುರುತಿಸುವ ಪ್ರಕ್ರಿಯೆ ಇದು. ಒಂದೊಂದು ವಿಭಾಗಕ್ಕೂ ಒಂದೊಂದು ಬಣ್ಣದ ಸಂಕೇತವನ್ನೂ ನೀಡಲಾಗಿದೆ. ಮೊದಲ ವರ್ಗವನ್ನು ಬಿಳಿ ಎಂದೂ ಎರಡನೆಯ ವರ್ಗವನ್ನು ಹಸಿರು ಮತ್ತು ಮೂರನೆಯ ವರ್ಗವನ್ನು ಹಳದಿ ಹಾಗೂ ನಾಲ್ಕನೆಯ ವರ್ಗವನ್ನು ಕೆಂಪು ಎಂಬ ಸಂಕೇತಗಳಲ್ಲಿ ಗುರುತಿಸಲಾಗುತ್ತದೆ.



ಉದ್ಯೋಗದಾತ ಸಂಸ್ಥೆಗಳಲ್ಲಿರುವ ಸೌದಿ ಪ್ರಜೆಗಳ ಸಂಖ್ಯೆಗೆ ಅನುಗುಣವಾಗಿ ಈ ವಿಭಾಗೀಕರಣ ನಡೆಯುತ್ತದೆ. ಸರ್ಕಾರ ನಿಗದಿ ಮೀಸಲಾತಿಯನ್ನು ಪೂರ್ಣವಾಗಿ ಜಾರಿಗೆ ತಂದ ಸಂಸ್ಥೆಗಳು `ಬಿಳಿ' ವರ್ಗದಲ್ಲಿ ಬಂದರೆ, ಪೂರ್ಣತೆಗೆ ಹತ್ತಿರದಲ್ಲಿರುವ ಸಂಸ್ಥೆಗಳು `ಹಸಿರು' ವರ್ಗಕ್ಕೆ ಸೇರುತ್ತವೆ. ಈ ಕ್ರಿಯೆಯಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸಿರುವ ಸಂಸ್ಥೆಗಳು `ಹಳದಿ' ವರ್ಗದಲ್ಲಿಯೂ ಯಾವುದೇ ಪ್ರಗತಿಯನ್ನು ಸಾಧಿಸದಿರುವ ಸಂಸ್ಥೆಗಳು ಕೆಂಪು ವರ್ಗದಲ್ಲಿ ಬರುತ್ತವೆ. ಇವು ಸರ್ಕಾರಕ್ಕೆ ದಂಡ ಪಾವತಿಸಬೇಕಾಗುತ್ತದೆ.



ಸೌದಿ ಪ್ರಜೆಗಳಿಗೆ ಉದ್ಯೋಗ ಮೀಸಲಾತಿ ನೀಡುವ ನಿಯಮಾವಳಿಗಳನ್ನು ಕಾರ್ಯರೂಪಕ್ಕೆ ತರುವ ಅವಧಿ ಕಳೆದ ವಾರ ಕೊನೆಗೊಂಡಿತು. ಅಲ್ಲಿಯ ತನಕ ಸುಮ್ಮನಿದ್ದ ಎಲ್ಲರೂ ಈಗ ಎಚ್ಚೆತ್ತುಕೊಂಡಂತೆ ಮಾತನಾಡುತ್ತಿದ್ದಾರೆ.



ಸೌದಿ ನಾಗರಿಕರಿಗೆ ಉದ್ಯೋಗದಲ್ಲಿ ಮೀಸಲಾತಿ ನಿಯಮ  ಟ್ಯುನಿಷಿಯಾದಿಂದ ಆರಂಭಗೊಂಡು ಈಜಿಪ್ಟ್ ತನಕ ವ್ಯಾಪಿಸಿದ ಅರಬ್ ವಸಂತದ ಪರಿಣಾಮ. ಈಜಿಪ್ಟ್ ಮತ್ತು ಟ್ಯುನಿಷಿಯಾದಲ್ಲಿ ಸಂಭವಿಸಿದ್ದು ತಮ್ಮಲ್ಲಿ ನಡೆಯದಿರಲಿ ಎಂದು ಸೌದಿ ಅರೇಬಿಯಾವೂ ಸೇರಿದಂತೆ ಪಶ್ಚಿಮ ಏಷ್ಯಾದ ತೈಲ ಸಮೃದ್ಧ ರಾಷ್ಟ್ರಗಳೆಲ್ಲವೂ ತಮ್ಮ ನಾಗರಿಕರಿಗೆ ಭಾರೀ ಪ್ರಮಾಣದ ಹಣಕಾಸು ಸವಲತ್ತುಗಳನ್ನು ಒದಗಿಸಿದವು. ಆದರೂ ಈ ಪ್ರಭುತ್ವಗಳ ಭಯ ಸಂಪೂರ್ಣವಾಗಿ ನಿವಾರಣೆಯಾಗಲಿಲ್ಲ. ಮುಂದೊಂದು ದಿನ ಬೀದಿಗಿಳಿಯಬಹುದಾದ ನಿರುದ್ಯೋಗಿ ಯುವಕರನ್ನು ದೃಷ್ಟಿಯಲ್ಲಿಟ್ಟುಕೊಂಡು ಹಲವು ಕ್ರಮಗಳನ್ನು ಯೋಜಿಸಲಾಯಿತು. ಅವುಗಳಲ್ಲೊಂದು ಸ್ಥಳೀಯರಿಗೆ ಉದ್ಯೋಗ ಮೀಸಲಾತಿ.



ಈ ಉದ್ಯೋಗ ಮೀಸಲಾತಿಯ ಪರಿಣಾಮ ಭಾರತೀಯ ಕಾರ್ಮಿಕರ ಮೇಲೆ ಆಗುತ್ತಿದೆ. ಸೌದಿ ಅರೇಬಿಯಾದಲ್ಲಿರುವ ಕಾರ್ಮಿಕರಲ್ಲಿ ಭಾರತೀಯರು ಅದರಲ್ಲೂ ವಿಶೇಷವಾಗಿ ಕೇರಳ ಮತ್ತು ಕರ್ನಾಟಕದ ಕರಾವಳಿಯವರೇ ಹೆಚ್ಚಾಗಿರುವುದರಿಂದ ಈ ಪ್ರದೇಶಗಳ ಆರ್ಥಿಕತೆಯ ಮೇಲೂ ಈ ಮೀಸಲಾತಿ ನೀತಿ ಪರಿಣಾಮ ಬೀರಲಿದೆ. ಸೌದಿ ಅರೇಬಿಯಾದಲ್ಲಿರುವ ಭಾರತೀಯ ಕಾರ್ಮಿಕರ ಸ್ಥಿತಿ ಉಳಿದೆಡೆಗಿಂತ ವಿಶಿಷ್ಟ. ಈ ದೇಶದಲ್ಲಿ ಯಾವುದೇ ವಿದೇಶಿ ನಾಗರಿಕ ತನ್ನದೇ ಆದ ವಾಣಿಜ್ಯ ಅಥವಾ ವ್ಯಾಪಾರ ಸಂಸ್ಥೆಯನ್ನು ಆರಂಭಿಸುವಂತಿಲ್ಲ.ಈ ಹಕ್ಕು ಇರುವುದು ಸ್ಥಳೀಯರಿಗೆ ಮಾತ್ರ.



ಆದರೆ ಸೌದಿ ಅರೇಬಿಯಾದ ಯಾವ ಊರಿನಲ್ಲಿ ನೋಡಿದರೂ ಭಾರತೀಯರು ವಿವಿಧ ಸಂಸ್ಥೆಗಳನ್ನು ನಡೆಸುತ್ತಿರುವುದು ಕಾಣಸಿಗುತ್ತದೆ. ಇದೊಂದು ಅನೌಪಚಾರಿಕ ವ್ಯವಸ್ಥೆ. ಸೌದಿ ನಾಗರಿಕನೊಬ್ಬನ ಹೆಸರಿನಲ್ಲಿ ಲೈಸನ್ಸ್ ಪಡೆದು ಆತನಿಗೆ ನಿರ್ದಿಷ್ಟ ಮೊತ್ತವನ್ನು ಪಾವತಿಸುತ್ತಾ ವ್ಯಾಪಾರಿ ಸಂಸ್ಥೆಗಳನ್ನು ಭಾರತೀಯರು ನಡೆಸುತ್ತಾರೆ. ಈಗ ಸೌದಿ ಸರ್ಕಾರ ಅಂಥ ವ್ಯಾಪಾರ ಸಂಸ್ಥೆಗಳ ಬೆನ್ನು ಹತ್ತಿದೆ.



ಎಲ್ಲಾ ವಾಣಿಜ್ಯ ಸಂಸ್ಥೆಗಳನ್ನು ಹತ್ತಕ್ಕಿಂತ ಹೆಚ್ಚು ಕೆಲಸಗಾರರಿರುವ ಸಂಸ್ಥೆಗಳು ಮತ್ತು ಹತ್ತಕ್ಕಿಂತ ಕಡಿಮೆ ಕೆಲಸಗಾರರಿರುವ ಸಂಸ್ಥೆಗಳು ಎಂದು ವಿಭಾಗೀಕರಿಸಲಾಗಿದೆ. ಭಾರತೀಯರು ನಿರ್ವಹಿಸುತ್ತಿರುವ ಅನೇಕ ಸಂಸ್ಥೆಗಳು ಹತ್ತಕ್ಕಿಂತ ಕಡಿಮೆ ಕೆಲಸಗಾರರಿರುವ ಸಂಸ್ಥೆಗಳು. ಕಾನೂನಿನ ಪ್ರಕಾರ ಇಂಥ ಸಂಸ್ಥೆಗಳಲ್ಲಿ ಕನಿಷ್ಠ ಒಬ್ಬ ಸೌದಿ ನಾಗರಿಕನಾದರೂ ಉದ್ಯೋಗಿಯಾಗಿರಬೇಕು. ಆದರೆ ಈ ನಿಯಮವನ್ನು ಪಾಲಿಸಲು ಇಂಥ ಸಂಸ್ಥೆಗಳಿಗೆ ಸಾಧ್ಯವಿಲ್ಲ.



ಏಕೆಂದರೆ ಸರ್ಕಾರ ಸ್ಥಳೀಯರಿಗಾಗಿ ನಿಗದಿ ಪಡಿಸಿರುವ ಕನಿಷ್ಠ ವೇತನದ ಪ್ರಮಾಣ ಬಹಳ ದೊಡ್ಡದು. ಈ ಸಮಸ್ಯೆಯನ್ನು ಮತ್ತಷ್ಟು ಸಂಕೀರ್ಣಗೊಳಿಸುವಂತೆ ಈ ಬಗೆಯ ಸಂಸ್ಥೆಗಳಿಗೆ ಲೈಸನ್ಸ್ ಪಡೆದಾತ ಸಂಸ್ಥೆಯಲ್ಲಿ ಪೂರ್ಣಾವಧಿ ಕೆಲಸ ಮಾಡುತ್ತಿರಬೇಕು ಎಂಬ ಮತ್ತೊಂದು ನಿಯಮವೂ ಇದೆ. ಇಲ್ಲಿಯ ತನಕ ಸೌದಿ ನಾಗರಿಕನ ಹೆಸರಲ್ಲಿ ಲೈಸನ್ಸ್ ಪಡೆದು ಸಣ್ಣ ಪುಟ್ಟ ವ್ಯವಹಾರಗಳನ್ನು ನಡೆಸುತ್ತಿದ್ದ ಎಲ್ಲರಿಗೂ ಈಗ ಸ್ವದೇಶಕ್ಕೆ ಹಿಂದಿರುಗುವ ಮಾರ್ಗ ಮಾತ್ರ ಉಳಿದಿದೆ.



ಹೊಸ ಕಾನೂನಿನಿಂದ ತೊಂದರೆಗೆ ಒಳಗಾಗುತ್ತಿರುವ ಮತ್ತೊಂದು ವರ್ಗವೆಂದರೆ `ಆಝಾದ್ ವೀಸಾ' ಅಥವಾ `ಮುಕ್ತ ವೀಸಾ'ಗಳನ್ನು ಪಡೆದುಕೊಂಡು ಕೆಲಸ ಮಾಡುತ್ತಿರುವವರು. ಇದೂ ಒಂದು ಸಂಕೀರ್ಣ ಸಮಸ್ಯೆಯೇ. ಸೌದಿ ನಾಗರಿಕರಿಗೆ ತಮಗೊಬ್ಬ ವಿದೇಶಿ ನೌಕರಿ ಬೇಕಿದ್ದರೆ ಅವನಿಗೆ ವೀಸಾ ಕೊಟ್ಟು ಕರೆಯಿಸಿಕೊಳ್ಳಬಹುದು. ಈ ಸೌಲಭ್ಯವನ್ನು ಅನೇಕ ಸೌದಿಗಳು ತಮ್ಮ ಲಾಭಕ್ಕೆ ಬಳಸಿಕೊಂಡಿದ್ದಾರೆ. ತನಗೆ ಅವಶ್ಯಕತೆ ಇಲ್ಲದಿದ್ದರೂ ವೀಸಾ ನೀಡಿ ಉದ್ಯೋಗಿಯೊಬ್ಬನನ್ನು ಕರೆಯಿಸಿಕೊಂಡು ಬೇರೆಡೆ ಕೆಲಸ ಮಾಡಲು ಬಿಟ್ಟು ತಿಂಗಳಿಗಿಷ್ಟು ಎಂದು ವಸೂಲು ಮಾಡುವುದು.



 ಈ ಬಗೆಯಲ್ಲಿ ಉದ್ಯೋಗ ಕಂಡುಕೊಂಡ ಭಾರತೀಯರ ಸಂಖ್ಯೆಯೂ ದೊಡ್ಡದಿದೆ. ಈ ವ್ಯವಸ್ಥೆಯನ್ನು ಭಾರತೀಯರು ಒಪ್ಪಿಕೊಳ್ಳುವುದಕ್ಕೂ ಕಾರಣವಿದೆ. ಪ್ರಾಯೋಜಕನಿಗೆ ಒಂದಷ್ಟು ಹಣ ಕೊಟ್ಟರೆ ಅವನು ಹೆಚ್ಚು ದುಡ್ಡು ಸಿಗುವಲ್ಲಿ ದುಡಿಯುವ ಅವಕಾಶ ಸಿಗುತ್ತದೆ. ಆದರೆ ಹೊಸ ಕಾನೂನು ಇಂಥ ಕಾರ್ಮಿಕರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಈ `ಪ್ರಾಯೋಜಕರು' ಲಾಭಗಳಿಸುವುದೇ ವಿದೇಶಿಯರಿಗೆ ವೀಸಾ ಒದಗಿಸಿಕೊಟ್ಟು.



ಆದರೆ ಕಾನೂನಿನ ಪ್ರಕಾರ ಅವರದ್ದೂ ಒಂದು ಉದ್ಯೋಗದಾತ ಸಂಸ್ಥೆ. ಅಲ್ಲಿ ಸರ್ಕಾರ ಮೀಸಲಿರಿಸಿದ ಪ್ರಮಾಣದ ಸ್ಥಳೀಯರಿಗೆ ಉದ್ಯೋಗ ನೀಡದಿದ್ದರೆ ಒಬ್ಬ ವಿದೇಶಿ ಉದ್ಯೋಗಿಗೆ 200 ರಿಯಾಲ್‌ನಂತೆ ದಂಡ ಕಟ್ಟಬೇಕು. ದುರಂತವೆಂದರೆ ಲಾಭಕ್ಕಾಗಿ ಪ್ರಾಯೋಜಕರೀಗ ದಂಡವನ್ನೂ ತಿಂಗಳ ಶುಲ್ಕದೊಂದಿಗೆ ನೀಡಬೇಕೆಂದು ಆಝಾದ್ ವೀಸಾ ಉದ್ಯೋಗಿಗಳಿಗೆ ಗಂಟು ಬಿದ್ದಿದ್ದಾರೆ. ಬೇನಾಮಿ ಪ್ರಾಯೋಜಕರ ಮೂಲಕ ಕೆಲಸ ಮಾಡುತ್ತಿರುವವರ ಮೇಲೆ ಸರ್ಕಾರ ಸತತ ದಾಳಿಗಳನ್ನೂ ನಡೆಸುತ್ತಿದೆ.



ಸಿಕ್ಕಿಬಿದ್ದವರನ್ನೆಲ್ಲಾ ಜೈಲಿನಲ್ಲಿಟ್ಟು ನೇರವಾಗಿ ಅವರ ದೇಶಗಳಿಗೆ ಹಿಂದಕ್ಕೆ ಕಳುಹಿಸಲಾಗುತ್ತದೆ. ಒಮ್ಮೆ ಹೀಗೆ ಸೌದಿಯಿಂದ ಹೊರ ತಳ್ಳಿಸಿಕೊಂಡರೆ ಮುಂದೆ ಯಾವತ್ತೂ ಅವರಿಗೆ ವೀಸಾ ದೊರೆಯುವ ಸಾಧ್ಯತೆಯೇ ಇಲ್ಲ.



ಕಳೆದ ವಾರ ನಡೆದ ಈ ಬಗೆಯ ದಾಳಿಗಳಿಂದ ಅನೇಕ ಭಾರತೀಯ ಕಾರ್ಮಿಕರು ಈಗ ಕೆಲಸಕ್ಕೆ ಹೋಗದೆ ತಮ್ಮ ವಸತಿಗಳಲ್ಲೇ ಇದ್ದು ಪರಿಸ್ಥಿತಿ ತಿಳಿಯಾಗುತ್ತದೆಯೇ ಎಂದು ಕಾಯುತ್ತಿದ್ದಾರೆ. ಭಾರತೀಯರು ನಡೆಸುತ್ತಿರುವ ಅಂಗಡಿಗಳೆಲ್ಲವೂ ಈಗ ಮುಚ್ಚಿಕೊಂಡಿವೆ. ಕಾನೂನು ಬದ್ಧವಾಗಿಯೇ ಇಲ್ಲಿ ಉದ್ಯೋಗಿಗಳಾಗಿರುವವರಿಗೂ ಈ ದಾಳಿಗಳ ಬಿಸಿ ಮುಟ್ಟಿದೆ.



ಭಾರತೀಯರ ಮಕ್ಕಳಿಗಾಗಿ ಇದ್ದ ಶಾಲೆಗಳೆಲ್ಲವೂ ಮುಚ್ಚಿವೆ. ಇದಕ್ಕೆ ಮುಖ್ಯ ಕಾರಣ ಇಲ್ಲಿ ಶಿಕ್ಷಕರಾಗಿರುವವರಲ್ಲಿ ಹೆಚ್ಚಿನವರು ಭಿನ್ನ ಉದ್ಯೋಗಗಳಿಗಾಗಿ ಸೌದಿಗೆ ಬಂದಿರುವವರ ಪತ್ನಿಯರು. ಗಂಡ ಉದ್ಯೋಗದಲ್ಲಿರುವುದರಿಂದ ಸೌದಿಗೆ ಬಂದಿರುವ ಪತ್ನಿ ಮನೆಯಲ್ಲಿ ಇರಬಹುದೇ ಹೊರತು ಹೊರಗೆ ಹೋಗಿ ಕೆಲಸ ಮಾಡುವಂತಿಲ್ಲ. ಶಾಲೆಯಲ್ಲಿ ಕಡಿಮೆ ಸಂಬಳಕ್ಕೆ ಕೆಲಸ ಮಾಡುತ್ತಿದ್ದ ಈ ಮಹಿಳೆಯರೀಗ ಮನೆಯಲ್ಲಿಯೇ ಉಳಿಯಬೇಕಾಗಿದೆ. ಪರಿಣಾಮವಾಗಿ ಶಾಲೆಗಳಲ್ಲಿ ಶಿಕ್ಷಕರಿಲ್ಲ.



ಈಗ ಸಮಸ್ಯೆ ಕೇವಲ ವಿದೇಶಿ ಕಾರ್ಮಿಕರಿಗಷ್ಟೇ ಸೀಮಿತವಾಗಿ ಉಳಿದಿಲ್ಲ. ಭಾರೀ ಪ್ರಮಾಣದ ದಾಳಿಗಳ ಪರಿಣಾಮವಾಗಿ ಸೌದಿ ಅರೇಬಿಯಾದ ಅನೇಕ ಕಟ್ಟಡ ಕಾಮಗಾರಿಗಳ ವೇಗ ಕಡಿಮೆಯಾಗಿದೆ. ಹಣದುಬ್ಬರವೂ ಹೆಚ್ಚಾಗಿದ್ದು ಜೀವನಾವಶ್ಯಕ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ವಿದೇಶಿ ಕಾರ್ಮಿಕರಿಂದಾಗಿಯೇ ನಡೆಯುತ್ತಿದ್ದ ಸೌದಿಯ ದಿನ ನಿತ್ಯದ ಬದುಕೀಗ ಅಸ್ತವ್ಯಸ್ತವಾಗಿದೆ. ಬಹುಶಃ ಇದರ ಪರಿಣಾಮವೋ ಎಂಬಂತೆ ಸರ್ಕಾರ `ಮೀಸಲಾತಿ ನೀತಿ'ಯನ್ನು ಜಾರಿಗೊಳಿಸುವ ಕಠಿಣ ಕ್ರಮಗಳನ್ನು ಸ್ವಲ್ಪ ಮುಂದಕ್ಕೆ ಹಾಕಿದೆ. ಇದು ಸ್ವಲ್ಪ ಮಟ್ಟಿಗೆ ವಿದೇಶಿ ಕಾರ್ಮಿಕರಿಗೆ ಅನುಕೂಲ ಕಲ್ಪಿಸಿದೆ. ಆದರೆ ತಲೆಯ ಮೇಲಿನ ತೂಗುಕತ್ತಿ ಮಾತ್ರ ಇನ್ನೂ ತೆರವಾಗಿಲ್ಲ.



ಭಾರತೀಯ ದೂತಾವಾಸದ ಲೆಕ್ಕಾಚಾರಗಳು ಹೇಳುವಂತೆ ಸೌದಿಯಲ್ಲಿರುವ ಒಟ್ಟು ಭಾರತೀಯರ ಶೇಕಡಾ 10ರಷ್ಟು ಮಂದಿಗೆ ಹೊಸ ಮೀಸಲಾತಿ ನೀತಿಯಿಂದ ತೊಂದರೆಯಾಗುತ್ತದೆ. ಆದರೆ ಅನಧಿಕೃತ ಲೆಕ್ಕಾಚಾರಗಳ ಪ್ರಕಾರ ಸುಮಾರು ಎರಡು ಲಕ್ಷ ಮಂದಿ ಕೆಲಸ ಕಳೆದುಕೊಳ್ಳುತ್ತಾರೆ. ಎರಡು ಲಕ್ಷ ಮಂದಿ ಒಮ್ಮೆಗೇ ಉದ್ಯೋಗ ಕಳೆದುಕೊಂಡು ಸ್ವದೇಶಕ್ಕೆ ಹಿಂದಿರುವುದು ಸಣ್ಣ ವಿಷಯವೇನಲ್ಲ. ಹಾಗೆಂದು ಅನಧಿಕೃತವಾಗಿ ಕೆಲಸ ಮಾಡುವುದನ್ನು ಹಕ್ಕು ಎಂದು ಪ್ರತಿಪಾದಿಸುವುದಕ್ಕೂ ಸಾಧ್ಯವಿಲ್ಲ.



ಈಗ ಭಾರತದಂಥ ದೇಶಗಳ ಎದುರು ಇರುವ ಏಕೈಕ ಮಾರ್ಗವೆಂದರೆ ಅನಧಿಕೃತವಾಗಿ ದುಡಿಯುತ್ತಿರುವ ಕಾರ್ಮಿಕರ ಸೇವೆಯನ್ನು ಅಧಿಕೃತಗೊಳಿಸುವ ಮಾರ್ಗವನ್ನು ಶೋಧಿಸುವುದು ಮಾತ್ರ. ಇದಕ್ಕಾಗಿ ಸೌದಿ ಅರೇಬಿಯಾದ ಜೊತೆ ರಾಜತಾಂತ್ರಿಕ ಮಾತುಕತೆಗಳನ್ನು ನಡೆಸುವುದಕ್ಕೆ ಭಾರತ ಪ್ರಯತ್ನಿಸಬೇಕು.

 

ಪ್ರತಿಕ್ರಿಯಿಸಿ (+)