ಸೋಮವಾರ, ಮಾರ್ಚ್ 8, 2021
22 °C
ಉಭಯ ಸದನಗಳಲ್ಲಿ ಸ್ವಯಂಪ್ರೇರಿತ ಹೇಳಿಕೆ ನೀಡಿದ ಸುಷ್ಮಾ

ಸೌದಿ ಸರ್ಕಾರದ ವೆಚ್ಚದಲ್ಲಿ ಸಂತ್ರಸ್ತ ಕಾರ್ಮಿಕರು ಭಾರತಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೌದಿ ಸರ್ಕಾರದ ವೆಚ್ಚದಲ್ಲಿ ಸಂತ್ರಸ್ತ ಕಾರ್ಮಿಕರು ಭಾರತಕ್ಕೆ

ನವದೆಹಲಿ (ಪಿಟಿಐ): ಸೌದಿ ಅರೇಬಿಯಾದಲ್ಲಿ ಉದ್ಯೋಗ ಕಳೆದುಕೊಂಡು ಸಂತ್ರಸ್ತರಾಗಿರುವ ನೂರಾರು ಭಾರತೀಯರನ್ನು ಸರ್ಕಾರಿ ವೆಚ್ಚದಲ್ಲಿ ತವರಿಗೆ ಕಳುಹಿಸಿಕೊಡಲು ಸೌದಿ ಸರ್ಕಾರ ಸಮ್ಮತಿಸಿದೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಲೋಕಸಭೆ ಮತ್ತು ರಾಜ್ಯಸಭೆಗೆ ಗುರುವಾರ ಮಾಹಿತಿ ನೀಡಿದ್ದಾರೆ.ಭಾರತದ ಮನವಿಯನ್ನು ಸ್ವೀಕರಿಸಿದ ಸೌದಿ ಆಡಳಿತವು ಎರಡು ದಿನದೊಳಗೆ ಸಮಸ್ಯೆ ಇತ್ಯರ್ಥಪಡಿಸಲು ತನ್ನ ಅಧಿಕಾರಿಗಳಿಗೆ ಸೂಚಿಸಿದೆ ಎಂದು ಅವರು ಹೇಳಿದ್ದಾರೆ. ಸಂಕಷ್ಟದಲ್ಲಿರುವ ಭಾರತೀಯರಿಗೆ ಅಲ್ಲಿನ ಸರ್ಕಾರವು ನಿರ್ಗಮನ ವೀಸಾ ನೀಡಲಿದೆ. ಕ್ಯಾಂಪ್‌ಗಳಲ್ಲಿ ನೆಲೆಸಿರುವ ಉದ್ಯೋಗಿಗಳಿಗೆ ಆಹಾರ ಹಾಗೂ ಉಚಿತ ವೈದ್ಯಕೀಯ ನೆರವು ನೀಡಲಿದೆ. ಅಲ್ಲದೆ ಬೇರೆ ಕಂಪೆನಿಗಳಲ್ಲಿ ಉದ್ಯೋಗ ಹುಡುಕಿಕೊಳ್ಳಲು ಅವರಿಗೆ ಅವಕಾಶವನ್ನೂ ಕಲ್ಪಿಸಿದೆ ಎಂದು ಉಭಯ ಸದನಗಳಲ್ಲಿ ಸ್ವಯಂ ಪ್ರೇರಿತ ಹೇಳಿಕೆ ನೀಡಿದ್ದಾರೆ. ಬಿಕ್ಕಟ್ಟು ಸರಿಪಡಿಸಲು ನೆರವಾದ ಸೌದಿ ದೊರೆಗೆ ಸುಷ್ಮಾ ಅವರು ಧನ್ಯವಾದ ಹೇಳಿದ್ದಾರೆ.ವಿದೇಶಾಂಗ ಇಲಾಖೆ ರಾಜ್ಯ ಸಚಿವ ಜನರಲ್ ವಿ.ಕೆ. ಸಿಂಗ್ ಅವರು ಮಂಗಳವಾರದಿಂದ ಸೌದಿಯಲ್ಲಿದ್ದು, ಅಲ್ಲಿನ ಭಾರತೀಯ ಉದ್ಯೋಗಿಗಳ ಸಮಸ್ಯೆ ನಿವಾರಿಸಿದ ಬಳಿಕ ಅಲ್ಲಿಂದ  ವಾಪಸಾಗಲಿದ್ದಾರೆ ಎಂದು ಅವರು ತಿಳಿಸಿದರು. ‘ಭಾರತೀಯರು ತವರಿಗೆ ವಾಪಸಾಗುವ ಮೊದಲು ಬಾಕಿ ಉಳಿದಿರುವ ಅವರ ಸಂಬಳದ ಬಗ್ಗೆ ಸೌದಿ ಸರ್ಕಾರದ ಕಾರ್ಮಿಕ ಇಲಾಖೆಗೆ ದೂರು ನೀಡುವ ಸೌಲಭ್ಯವನ್ನೂ ಅಲ್ಲಿನ ಸರ್ಕಾರ ಕಲ್ಪಿಸಿದೆ. ಸೌದಿಯಲ್ಲಿರುವ ಭಾರತೀಯ ರಾಯಭಾರ ಕಚೇರಿಯು ನೌಕರರ ಬಾಕಿ ಸಂಬಳವನ್ನು ಕೊಡಿಸುವ ಸಂಬಂಧ ಮಾತುಕತೆ ನಡೆಸಲಿದೆ’ ಎಂದು ಸ್ವರಾಜ್ ಹೇಳಿದ್ದಾರೆ.ಸುಷ್ಮಾ ಮಾದರಿ ಅನುಸರಿಸಿ: ಲೋಕಸಭೆಯಲ್ಲಿ ಸರ್ಕಾರವನ್ನು ತಿವಿದಿರುವ ಕಾಂಗ್ರೆಸ್‌ನ ಜ್ಯೋತಿರಾದಿತ್ಯ ಸಿಂಧಿಯಾ ಅವರು, ಸಮಸ್ಯೆಗೆ ಸುಷ್ಮಾ ಅವರು ತಕ್ಷಣ ಪ್ರತಿಕ್ರಿಯೆ ನೀಡಿದ ರೀತಿಯನ್ನು ಉಳಿದ ಸಚಿವರೂ ಅನುಸಿರಿಸಬೇಕು ಎಂದು ಸಲಹೆ ನೀಡಿದ್ದಾರೆ. ‘ಎಲ್ಲ ವಿಷಯಗಳಲ್ಲೂ ರಾಜಕೀಯ ಮಾಡುವುದು ಸರಿಯಲ್ಲ. ಒಳ್ಳೆಯ ಕೆಲಸಗಳು ನಡೆದಾಗ ಎಲ್ಲರೂ ಪ್ರಶಂಸಿಸಬೇಕು’ ಎಂದು ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ಹೇಳಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.