ಬುಧವಾರ, ಏಪ್ರಿಲ್ 21, 2021
30 °C

ಸೌಮ್ಯ ನಡಿಗೆಯ ಶ್ವೇತನಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರ್ಗಲ್: ಈ ಮಲೆನಾಡೇ ಹೀಗೆ. ಒಂದಕ್ಕಿಂತ ಇನ್ನೊಂದು ಭಿನ್ನ. ಇದಕ್ಕಿಂತ ಅದು ಸುಂದರ, ಅದಕ್ಕಿಂತ ಇದು ಸೊಗಸು...ಏನೆಲ್ಲಾ ಚೆಲುವನ್ನು ತನ್ನಲ್ಲಿ ಅಡಗಿಸಿಕೊಂಡಿರುವ, ಮೈ-ಮನಕ್ಕೆ ಮುದ ನೀಡುವ ಕಾನನದಲ್ಲಿ ಸೌಮ್ಯ ನಡಿಗೆಯಿಂದ ಬಳುಕುತ್ತಾ ಸಾಗುತ್ತಿರುವ `ಬಿಳಿನಾರಿ~ ಎನ್ನಬಹುದಾದ ವೈಯಾರಿಯೇ `ಮಾವಿನ ಗುಂಡಿ ಜಲಪಾತ~. -ಇದು ಜೋಗ ಜಲಪಾತದ ಪಕ್ಕ ಪ್ರವಾಸಿಗರನ್ನು ಸೆಳೆಯುತ್ತಿರುವ ಮತ್ತೊಂದು ಜಲಪಾತದ ಪರಿಚಯ.

ಆಶ್ಲೇಷ ಮಳೆಯ ಅಬ್ಬರಕ್ಕೆ ಜೋಗ ಜಲಪಾತದಲ್ಲಿ ಜಲಧಾರೆ ಧುಮ್ಮಿಕ್ಕುತ್ತಾ ಪ್ರವಾಸಿಗರನ್ನು ಭಾರೀ ಸಂಖ್ಯೆಯಲ್ಲಿ ಆಕರ್ಷಿಸುತ್ತಿದ್ದರೆ, ಜಲಪಾತದಿಂದ ಕೊಂಚ ದೂರದಲ್ಲಿರುವ ಮಾವಿನ ಗುಂಡಿ ಜಲಪಾತ ಅರ್ಭಟವಿಲ್ಲದೇ ಮೈದುಂಬಿಕೊಂಡು ಸೌಮ್ಯವಾಗಿ ಶರಾವತಿ ಕಣಿವೆಯೊಳಗೆ ಜಾರುತ್ತಾ ನೋಡುಗರನ್ನು ತನ್ನತ್ತ ಸೆಳೆಯುತ್ತಿದೆ.ಜೋಗ ಜಲಪಾತಕ್ಕಿಂತ ತುಸು ಎತ್ತರ ಎಂದರೆ ತಪ್ಪಾಗಲಿಕ್ಕಿಲ್ಲವೇನೋ ಈ ಮಾವಿನ ಗುಂಡಿ ಜಲಪಾತ. ಉತ್ತರ ಕನ್ನಡ ಜಿಲ್ಲೆಯ ಮಾವಿನ ಗುಂಡಿ ಗ್ರಾಮದ ಸುತ್ತಮುತ್ತಲು ಸುರಿಯುವ ಮಳೆ ನೀರು ಒಂದೆಡೆ ಸೇರಿಕೊಂಡು ನದಿಯಂತೆ ಹರಿದು ಬಂದು, ಒಮ್ಮೆಲೆ ಶರಾವತಿ ಕಣಿವೆಯ ಶಿಖರ ಪ್ರದೇಶದಿಂದ ನುಣುಪಾದ ಹೆಬ್ಬಂಡೆಗಳ ಮೇಲೆ ಬಳುಕುತ್ತಾ ನಲಿಯುತ್ತಾ ಬಿಳಿ ಹಾಲ್ನೊರೆಯನ್ನು ಚೆಲ್ಲುತ್ತದೆ.ಹೀಗೆ, ಹಾಲ್ನೊರೆಯಂತೆ ಜಾರಿ ಬಂದು ಕಣಿವೆಯ ಆಳದಲ್ಲಿ ಶರಾವತಿ ನದಿಯೊಂದಿಗೆ ಲೀನವಾಗುವ ಈ ಜಲಪಾತ, ಅಪ್ಪಟ `ಬಿಳಿನಾರಿ~ಯ ರೂಪದಲ್ಲಿ ಕಂಡು ಬರುವುದೇ ಇದರ ವಿಶೇಷ.ಮಾವಿನ ಗುಂಡಿ ಜಲಪಾತವನ್ನು ಕೆಪ್ಪೆ ಜೋಗ ಜಲಪಾತ ಎಂದು ಕರೆಯುತ್ತಾರೆ. ಮತ್ತೆ ಕೆಲವರು ಗೇರುಸೊಪ್ಪ ಜಲಪಾತ ಎಂದು ಕರೆಯುವುದುಂಟು.ಜೋಗಕ್ಕೆ ಬರುವ ಪ್ರವಾಸಿಗರನ್ನು ಭಾರೀ ಸಂಖ್ಯೆಯಲ್ಲಿ ಸೆಳೆಯುತ್ತಿರುವ ಈ ಜಲಪಾತ ಮಳೆಗಾಲ ಮುಗಿಯುವವರೆಗೂ ಪ್ರವಾಸಿಗರ ಮನತಣಿಸುವುದರಲ್ಲಿ ಸಂಶಯವೇ ಇಲ್ಲ ಎಂದು ಇಲ್ಲಿನ ಪ್ರವಾಸಿ ಗೈಡ್ ವೇಲುಸ್ವಾಮಿ ಅಭಿಪ್ರಾಯಪಡುತ್ತಾರೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.