ಬುಧವಾರ, ನವೆಂಬರ್ 13, 2019
28 °C
ಸೌರಶಕ್ತಿ ತಂತ್ರಜ್ಞಾನ ತರಬೇತಿ ಕೇಂದ್ರದ ನಿರ್ದೇಶಕ ಡಾ.ಎಚ್.ನಾಗನಗೌಡ ಅಭಿಮತ

ಸೌರಶಕ್ತಿಯಿಂದ ವಿದ್ಯುತ್ ಕೊರತೆ ಮಾಯ

Published:
Updated:

ಬೆಂಗಳೂರು: `ರಾಜ್ಯದಲ್ಲಿ ಸೌರಶಕ್ತಿಯಿಂದ ನಿತ್ಯ 5000 ಮೆಗಾ ವಾಟ್ ವಿದ್ಯುತ್ ಉತ್ಪಾದನೆ ಮಾಡಲು ಸಾಧ್ಯವಿದ್ದು, ಸದ್ಯ 14 ಮೆಗಾ ವಾಟ್ ಮಾತ್ರ ಉತ್ಪಾದನೆ ಮಾಡಲಾಗುತ್ತಿದೆ' ಎಂದು ರಾಷ್ಟ್ರೀಯ ಸೌರಶಕ್ತಿ ತಂತ್ರಜ್ಞಾನ ತರಬೇತಿ ಕೇಂದ್ರದ ನಿರ್ದೇಶಕ ಡಾ.ಎಚ್. ನಾಗನಗೌಡ ತಿಳಿಸಿದರು.ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನಲ್ಲಿ ವಜ್ರ ಮಹೋತ್ಸವದ ಅಂಗವಾಗಿ ಏರ್ಪಡಿಸಲಾಗಿದ್ದ `ಸೌರಶಕ್ತಿ ಮತ್ತು ಅದರ ಉಪಯೋಗ' ಕುರಿತ ರಾಷ್ಟ್ರೀಯ ಕಾರ್ಯಾಗಾರದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.`ರಾಜ್ಯಕ್ಕೆ ನಿತ್ಯ 5,993 ಮೆಗಾ ವಾಟ್ ವಿದ್ಯುತ್ ಅಗತ್ಯವಿದೆ. ಸೌರಶಕ್ತಿಯನ್ನು ಸಮಪರ್ಕವಾಗಿ ಬಳಕೆ ಮಾಡಿಕೊಂಡದ್ದೇ ಆದಲ್ಲಿ ನಮಗೆ ವಿದ್ಯುತ್ ಕೊರತೆ ಎಂಬುದೇ ಇರುವುದಿಲ್ಲ' ಎಂದು ಹೇಳಿದರು. `ಹಾಲ್‌ನಲ್ಲಿ ಕುಳಿತಾಗ ಕೋಣೆಯ ಬಲ್ಬುಗಳು ಉರಿಯುವ ಅಗತ್ಯವೇನು' ಎಂದು ಕೇಳಿದ ಅವರು, `ಅಗತ್ಯವಿಲ್ಲದ ಕಡೆಗಳಲ್ಲಿ ಬಲ್ಬುಗಳನ್ನು ಆರಿಸುವ ಮೂಲಕ ವಿದ್ಯುತ್ ಉಳಿತಾಯಕ್ಕೆ ಕೊಡುಗೆ ನೀಡಬೇಕು' ಎಂದು ಸಲಹೆ ನೀಡಿದರು.`ಪ್ರತಿದಿನ ನಾವು ಬಳಕೆ ಮಾಡುತ್ತಿರುವ ವಿದ್ಯುತ್‌ನಲ್ಲಿ ಶೇ 66ರಷ್ಟು ಪ್ರಮಾಣ ಕಲ್ಲಿದ್ದಲು ಮೂಲಕ ಸಿಗುತ್ತದೆ. ಒಂದು ಯೂನಿಟ್ ವಿದ್ಯುತ್ ಉತ್ಪಾದನೆಗೆ ಒಂದು ಕೆ.ಜಿ ಕಲ್ಲಿದ್ದಲು ಬೇಕಾಗುತ್ತದೆ. ಅದನ್ನು ದಹಿಸುವುದರಿಂದ ಹೊರಬೀಳುವ ರಾಸಾಯನಿಕಗಳ ಮೂಲಕ ವಾತಾವರಣದ ತಾಪವೂ ಹೆಚ್ಚುತ್ತದೆ' ಎಂದು ವಿವರಿಸಿದರು.`ವಿದ್ಯುತ್ ಉತ್ಪಾದನೆ ವ್ಯವಸ್ಥೆಯನ್ನು ವಿಕೇಂದ್ರೀಕರಣ ಮಾಡಬೇಕಿದೆ. ಏಕೆಂದರೆ, ಶೇ 34ರಷ್ಟು ವಿದ್ಯುತ್, ಗ್ರಾಹಕರನ್ನು ತಲುಪುವ ಮಾರ್ಗ ಮಧ್ಯದಲ್ಲೇ ಸೋರಿಕೆ ಆಗುತ್ತಿದೆ. ಬೆಂಗಳೂರು ಹಾಗೂ ಇತರ ಕೆಲವು ಪ್ರಮುಖ ನಗರಗಳನ್ನು ಹೊರತುಪಡಿಸಿ ರಾಜ್ಯದ ಮಿಕ್ಕೆಲ್ಲ ಭಾಗಕ್ಕೆ ಗುಣಮಟ್ಟದ ವಿದ್ಯುತ್ ಪೂರೈಕೆ ಮಾಡುವುದೂ ಸಾಧ್ಯವಾಗುತ್ತಿಲ್ಲ' ಎಂದು ವಾಸ್ತವ ಸಂಗತಿಗಳನ್ನು ಮುಂದಿಟ್ಟರು.`ನಿಸರ್ಗಕ್ಕೆ ಯಾವುದೇ ಆಪತ್ತು ಉಂಟುಮಾಡದೆ ಹೆಚ್ಚಿನ ವಿದ್ಯುತ್ ಪಡೆಯಲು ಪವನ ಮತ್ತು ಸೌರಶಕ್ತಿಗಳ ಬಳಕೆ ಹೆಚ್ಚಿಸಬೇಕು. ಸಾಧ್ಯ ಇರುವ ಕಡೆಗಳಲ್ಲಿ ಕಿರು ಜಲ ವಿದ್ಯುತ್ ಘಟಕ ಸ್ಥಾಪಿಸಬೇಕು' ಎಂದು ಸಲಹೆ ನೀಡಿದರು. `ರಾಜ್ಯದಲ್ಲಿ ಪವನ ವಿದ್ಯುತ್‌ಗೆ ಹೆಚ್ಚಿನ ಮಹತ್ವ ನೀಡಲಾಗಿದ್ದು, ಈ ಮೂಲದಿಂದ ನಿತ್ಯ 2112.26 ಮೆಗಾ ವಾಟ್ ವಿದ್ಯುತ್ ಪಡೆಯುವುದು ಸಾಧ್ಯವಾಗಿದೆ' ಎಂದು ವಿವರಿಸಿದರು.`ನೈಸರ್ಗಿಕ ಸಂಪನ್ಮೂಲಗಳ ಒಂದೇ ಸಮಸ್ಯೆ ಎಂದರೆ ಋತುಮಾನಕ್ಕೆ ತಕ್ಕಂತೆ ಉತ್ಪಾದನೆಯಲ್ಲಿ ಏರಿಳಿತವಾಗುತ್ತದೆ. ಕೆಲವೊಮ್ಮೆ ಉತ್ಪಾದನೆಯೇ ನಿಂತು ಹೋಗುತ್ತದೆ. ಆದರೆ, ಈ ಮೂಲಗಳು ಹೊಂದಿರುವ ಧನಾತ್ಮಕ ಅಂಶಗಳ ಕಡೆಗೆ ಹೆಚ್ಚಿನ ಗಮನ ಕೊಡಬೇಕು' ಎಂದು ಸಲಹೆ ನೀಡಿದರು.ಬೆಳಿಗ್ಗೆ ಕಾರ್ಯಾಗಾರ ಉದ್ಘಾಟಿಸಿದ ರಾಜ್ಯ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, `ಹೆಚ್ಚುತ್ತಿರುವ ಜನಸಂಖ್ಯೆ ಮತ್ತು ವೇಗ ಪಡೆದುಕೊಂಡ ಅಭಿವೃದ್ಧಿ ಕಾರ್ಯಗಳ ಹಿನ್ನೆಲೆಯಲ್ಲಿ ಇಂಧನದ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇಂತಹ ಸನ್ನಿವೇಶದಲ್ಲಿ ಪರ್ಯಾಯ ಇಂಧನ ಮೂಲಗಳ ಬಳಕೆಯತ್ತ ನಾವು ಗಮನಹರಿಸಬೇಕಿದೆ' ಎಂದು ಹೇಳಿದರು.`ಒಂದು ಯೂನಿಟ್ ವಿದ್ಯುತ್ ಉಳಿಸಿದರೆ ಅದು ಎರಡು ಯೂನಿಟ್ ವಿದ್ಯುತ್ ಉತ್ಪಾದನೆಗೆ ಸಮವಾಗಿದೆ. ಇಂಧನದ ಸಂರಕ್ಷಣೆ ವೆಚ್ಚ ಉತ್ಪಾದನೆಗಿಂತ ಅಗ್ಗವಾಗಿದೆ. ಸಾರ್ವಜನಿಕರಲ್ಲಿ ಈ ಕುರಿತು ಜಾಗೃತಿ ಮೂಡಬೇಕಿದೆ' ಎಂದು ಆಶಿಸಿದರು. `ಸೌರಶಕ್ತಿ ವಿದ್ಯುತ್ ಉತ್ಪಾದನೆ ವೆಚ್ಚ ಇತ್ತೀಚಿನ ದಿನಗಳಲ್ಲಿ ಕಡಿತಗೊಂಡಿದ್ದು, ಪ್ರತಿ ಮನೆಯಲ್ಲೂ ಅದರ ಬಳಕೆ ಹೆಚ್ಚಬೇಕಿದೆ' ಎಂದರು.ಡಿ.ವಿ. ಗುಂಡಪ್ಪ ಬೆಂಗಳೂರು ವಿಶ್ವವಿದ್ಯಾಲಯದ ವಿಶೇಷ ಕರ್ತವ್ಯಾಧಿಕಾರಿ ಡಾ.ಕೆ.ಆರ್. ವೇಣುಗೋಪಾಲ್, `ಜಾಗತಿಕ ತಾಪಮಾನ ಹೆಚ್ಚುತ್ತಿರುವ ಈ ದಿನಗಳಲ್ಲಿ ಪವನ ಮತ್ತು ಸೌರ ಶಕ್ತಿಗಳೇ ಅತ್ಯುತ್ತಮ ಪರ್ಯಾಯ ಇಂಧನ ಮೂಲಗಳಾಗಿವೆ' ಎಂದು ಹೇಳಿದರು. `ಎಷ್ಟು ಬಳಸಿಕೊಂಡರೂ ತೀರದ ಶಕ್ತಿಮೂಲಗಳು ಇವಾಗಿವೆ' ಎಂದು ಅಭಿಪ್ರಾಯಪಟ್ಟರು.ಪ್ರಾಚಾರ್ಯರಾದ ಪ್ರೊ.ಬಿ.ಲಲಿತಮ್ಮ ಅಧ್ಯಕ್ಷತೆ ವಹಿಸಿದ್ದರು. ಸೌರಶಕ್ತಿ ವಸ್ತು ಪ್ರದರ್ಶನಕ್ಕೆ ಕ್ರೆಡಲ್ ವ್ಯವಸ್ಥಾಪಕ ನಿರ್ದೇಶಕ ಎಂ.ಬಿ. ದ್ಯಾಬೇರಿ ಚಾಲನೆ ನೀಡಿದರು.

ಪ್ರತಿಕ್ರಿಯಿಸಿ (+)