ಸೌರಶಕ್ತಿ ಚಾಲಿತ ಔಷಧಿ ಸಿಂಪರಣಾ ಯಂತ್ರ

7

ಸೌರಶಕ್ತಿ ಚಾಲಿತ ಔಷಧಿ ಸಿಂಪರಣಾ ಯಂತ್ರ

Published:
Updated:
ಸೌರಶಕ್ತಿ ಚಾಲಿತ ಔಷಧಿ ಸಿಂಪರಣಾ ಯಂತ್ರ

ರಾಯಚೂರು: ಯಾವ ಬೆಳೆ ಬೆಳೆದರೆ ತನಗೆ ಲಾಭದಾಯಕ ಎಂದು ಹತ್ತಾರು ಬಾರಿ ಚಿಂತನೆ ಮಾಡಿ ರೈತರು ಬಿತ್ತನೆ ಮಾಡುತ್ತಾರೆ. ಬಿತ್ತನೆ ಮಾಡಿದ ಬಳಿಕ ಎದುರಾಗುವ ದೊಡ್ಡ ಸವಾಲು ಕೀಟ ನಿಯಂತ್ರಣ! ಇದಕ್ಕಾಗಿಯೇ ರೈತರು ಸಾವಿರಾರು ರೂಪಾಯಿ ಖರ್ಚು ಮಾಡಿ ಸೋತು ಹೋಗುತ್ತಾರೆ.ರೈತರ ಈ ಕಷ್ಟ ಅರಿತ ಕೃಷಿ ಕುಟುಂಬದಲ್ಲೇ ಜನಿಸಿರುವ ಮತ್ತು ಇಲ್ಲಿನ ಕೃಷಿ ವಿವಿಯ ಕೃಷಿ ತಾಂತ್ರಿಕ ಶಿಕ್ಷಣ ವಿಭಾಗದಲ್ಲಿ ತೃತೀಯ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ ಸಂಗಪ್ಪ, ಕೈಯಿಂದ ತಳ್ಳಿಕೊಂಡು ಹೋಗುವ `ಸೌರಶಕ್ತಿ ಚಾಲಿತ ಔಷಧಿ ಸಿಂಪರಣಾ ಯಂತ್ರ' ಆವಿಷ್ಕಾರ ಮಾಡಿದ್ದಾರೆ.

ಪ್ರಯೋಜನಗಳು: ರೈತರಿಗೆ ಖರ್ಚು ಕಡಿಮೆ. ಬೆನ್ನ ಮೇಲೆ ದಿನಪೂರ್ತಿ ಕೀಟನಾಶಕ ಸಿಂಪರಣಾ ಉಪರಕಣ ಹೊತ್ತು ತಿರುಗುವುದು ತಪ್ಪುತ್ತದೆ. ಭಾರ ಕಡಿಮೆ. 4 ನಾಜಲ್ ಇರುವುದರಿಂದ ಸಿಂಪರಣೆ ಬೇಗ ಆಗುತ್ತದೆ. ಒಂದು ಎಕರೆಯಲ್ಲಿ ಬೆಳೆದ ಬೆಳೆಗೆ 45 ನಿಮಿಷದಲ್ಲಿ ಸಿಂಪರಣೆ ಮಾಡುವ ವ್ಯವಸ್ಥೆ. 25 ಲೀಟರ್ ಟ್ಯಾಂಕ್ ಅಳವಡಿಕೆ ಇದೆ. ಆಯಾ ಬೆಳೆಗೆ ತಕ್ಕಂತೆ ಎತ್ತರ ಹೆಚ್ಚು ಮಾಡಲು ಮತ್ತು ಕಡಿಮೆ ಮಾಡಲು ವ್ಯವಸ್ಥೆ ಇದೆ.

ಕೇವಲ ಹಗಲು ಹೊತ್ತಿನಲ್ಲಿ ಮಾತ್ರವಲ್ಲದೇ ರಾತ್ರಿ ಹೊತ್ತು ಸಿಂಪರಣೆ ಮಾಡಲು ಅವಕಾಶವಿದೆ. ಇದಕ್ಕಾಗಿ ಈ ಯಂತ್ರದಲ್ಲಿ ಎರಡು ಎಲ್‌ಇಡಿ  ಬಲ್ಬ್, ಒಂದು ಸಿಎಫ್‌ಎಲ್ ಬಲ್ಬ್ ಅಳವಡಿಸಲಾಗಿದೆ. ಮೊಬೈಲ್ ಇಡಲು, ಚಾರ್ಜ್ ಮಾಡಲು, ಹಾಡು ಕೇಳಲು ಟೇಪ್ ರೆಕಾರ್ಡರ್ ವ್ಯವಸ್ಥೆ ಇದೆ     ಎನ್ನುತ್ತಾರೆ ವಿದ್ಯಾರ್ಥಿ ಸಂಗಪ್ಪ.

ಕಡಲೆ, ಕಬ್ಬು, ತೊಗರಿ, ಮೆಣಸಿನಕಾಯಿ, ಮೆಕ್ಕೆಜೋಳ, ಜೋಳ, ಹತ್ತಿ ಹೀಗೆ ಏನೆಲ್ಲ ಬೆಳೆಗೆ ಈ ಸೌರಶಕ್ತಿ ಚಾಲಿತ ಔಷಧಿ ಸಿಂಪರಣೆ ಬಳಕೆ ಮಾಡಬಹುದು. ಬೆಳೆಗಳ ಸಾಲು ಚಿಕ್ಕದ್ದು ಅಥವಾ ದೊಡ್ಡದು ಇದ್ದರೆ ಅದಕ್ಕೆ ತಕ್ಕಂತೆ ಹೊಂದಿಸುವ ವ್ಯವಸ್ಥೆ ಇದೆ. ಈ ಯಂತ್ರವನ್ನು ತಳ್ಳಿಕೊಂಡು ಹೋಗಬೇಕಷ್ಟೆ.

ತಾವು ಆವಿಷ್ಕರಿಸಿದ ಈ ಸೌರಶಕ್ತಿ ಸಿಂಪರಣೆ ಯಂತ್ರಕ್ಕೆ 12 ಸಾವಿರ ಖರ್ಚು ಆಗಿದೆ. ರೈತರಿಗೆ 10ರಿಂದ 12 ಸಾವಿರ ರೂಪಾಯಿಯಲ್ಲಿ ದೊರಕುತ್ತದೆ. ಕೃಷಿ ವಿವಿ ಕುಲಪತಿಗಳು, ಸಂಶೋಧನಾ ನಿರ್ದೇಶಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೃಷಿ ಮೇಳದಲ್ಲಿ ವೀಕ್ಷಿಸಿದ ರೈತರು ಇದರಿಂದ ತಮಗೆ ಹೆಚ್ಚು ಉಪಯುಕ್ತ ಆಗುತ್ತದೆ.ಬೇಗ ಮಾರುಕಟ್ಟೆಯಲ್ಲಿ ದೊರಕಿಸುವ ವ್ಯವಸ್ಥೆ ಮಾಡಿ ಎಂದು ಬೇಡಿಕೆ ಇಟ್ಟಿದ್ದಾರೆ. ತಮ್ಮ ಈ ಆವಿಷ್ಕಾರಕ್ಕೆ ಬಿಟೆಕ್ ಕಾಲೇಜಿನ ಮುಖ್ಯಸ್ಥರಾದ ವೀರನಗೌಡ, ಡಾ ಸುಶಿಲೇಂದ್ರ, ಡಾ.ಶರಣಕುಮಾರ, ಡಾ. ರವೀಂದ್ರ ಯರನಾಳೆ, ಡಾ.ಪರಸಪ್ಪ ಸಹಾಯ ಮಾಡಿದ್ದಾರೆ ಎಂದು `ಪ್ರಜಾವಾಣಿ'ಗೆ ತಿಳಿಸಿದರು.

ಕೀಟ ನಾಶಕ ಸಿಂಪರಣೆಗೆ ಒಬ್ಬ ಕೃಷಿ ಕೂಲಿಕಾರರಿಗೆ ದಿನಕ್ಕೆ 300-400 ಕೊಡಬೇಕು. ಬೆನ್ನು ಮೇಲೆ ಹೊತ್ತು ಸಿಂಪರಣೆ ಮಾಡುವ ಆ ಯಂತ್ರಗಳೇ 10ರಿಂದ 16 ಸಾವಿರ ಬೆಲೆ ಇದೆ. ನೀರು ಹೊರುವುದು, ಸುತ್ತುವುದು, ಆಯಾಸ ಯಾವುದು ಇರುವುದಿಲ್ಲ. ಈ ಯಂತ್ರ ತಳ್ಳುವ ಸೌಲಭ್ಯ ಹೊಂದಿರುವುದರಿಂದ ಯಾರಾದರೂ ಮಾಡಬಹುದು. ಕೆಲಸ  ಭಾರ ಎನಿಸುವುವುದಿಲ್ಲ. 10-12 ಸಾವಿರಕ್ಕೆ ಈ ಯಂತ್ರ ದೊರಕುತ್ತದೆ ಎಂದರೆ ರೈತರಿಗೆ ಅನುಕೂಲ ಎನ್ನುತ್ತಾರೆ ಅಫಜಲಪುರ ಹತ್ತಿರದ ಗೊರಂಕೆ ರೈತ ಅಮೃತ ನಾಯಕವಂಶಿ.ಮಾಹಿತಿಗೆ ಮೊಬೈಲ್  -89515 93601

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry