ಶನಿವಾರ, ಜನವರಿ 18, 2020
20 °C
ಗ್ರಾಮಾಯಣ

ಸೌಲಭ್ಯಕ್ಕಾಗಿ ಕಾಯುತ್ತಿರುವ ‘ಹುಲಿಕೇರಾ’

ಪ್ರಜಾವಾಣಿ ವಾರ್ತೆ/ಭೀಮಶೇನರಾವ ಕುಲಕರ್ಣಿ Updated:

ಅಕ್ಷರ ಗಾತ್ರ : | |

ಸೌಲಭ್ಯಕ್ಕಾಗಿ ಕಾಯುತ್ತಿರುವ ‘ಹುಲಿಕೇರಾ’

ಹುಣಸಗಿ: ಸ್ವಾತಂತ್ರ್ಯ ಬಂದು ಆರು ದಶಕಗಳು ಗತಿಸಿದರೂ ಹಳ್ಳಿಗಳು ಮಾತ್ರ ಇನ್ನೂ ಸುಧಾರಿಸುವ ಮಟ್ಟವನ್ನು ತಲುಪುತ್ತಿಲ್ಲ. ವಿದ್ಯುತ್, ಕುಡಿಯುವ ನೀರು, ಶೌಚಾಲಯ, ರಸ್ತೆ ಸೇರಿದಂತೆ ಅಗತ್ಯ ಮೂಲಸೌಲಭ್ಯಗಳಿಗಾಗಿ ಇನ್ನೂ ಅನೇಕ ಹಳ್ಳಿಗಳು ಕಾದು ಕುಳಿತಿವೆ.ಸಮೀಪದ ಕೊಡೇಕಲ್‌ ಗ್ರಾಮದಿಂದ ಕೇವಲ 6 ಕಿ.ಮೀ. ದೂರದಲ್ಲಿರುವ ಹುಲಿಕೇರಾ ಗ್ರಾಮ ಅಗತ್ಯ ಸೌಲಭ್ಯಗಳಿಲ್ಲದೇ ನಲಗುತ್ತಿದೆ. ಉದ್ಯೋಗಾವಕಾಶ ಇಲ್ಲದೇ ಇಲ್ಲಿಯ ಜನರಿಗೆ ಗುಳೆ ತಪ್ಪುತ್ತಿಲ್ಲ. ಗ್ರಾಮದಲ್ಲಿ ನಿರ್ಮಿಸಿರುವ ಸಿಸಿ ರಸ್ತೆ ಸಮರ್ಪಕವಾಗಿಲ್ಲ. ಸುತ್ತಲೂ ಗುಡ್ಡಗಾಡು ಪ್ರದೇಶದಿಂದ ಕೂಡಿದ ಈ ಗ್ರಾಮವೂ ಮೂಲಸೌಲಭ್ಯಗಳನ್ನು ಪಡೆಯುವಲ್ಲಿ ವಿಫಲವಾಗಿದೆ.ಜೋಗುಂಡಬಾವಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಈ ಹಳ್ಳಿಯಲ್ಲಿ 160 ಮನೆಗಳಿದ್ದು, ಸುಮಾರು 800 ಜನಸಂಖ್ಯೆ ಹೊಂದಿದೆ. ಅಲ್ಪ ಸ್ವಲ್ಪ ಭೂಮಿಯನ್ನು ಹೊಂದಿರುವ ಗ್ರಾಮಸ್ಥರಿಗೆ ಗರಿಷ್ಠ ಎಂದರೆ 5 ಎಕರೆ ಭೂಮಿ ಮಾಲೀಕತ್ವ ಇದೆ. ಅದರಲ್ಲಿಯೂ 3 ಎಕರೆ ಗುಡ್ಡ ಇದ್ದು, ಕೇವಲ 2 ಎಕರೆ ಮಾತ್ರ ಸಾಗುವಳಿ ಮಾಡುವ ಅನಿವಾರ್ಯತೆ ಇಲ್ಲಿನ ಜನರದ್ದಾಗಿದೆ. ಹೆಚ್ಚಾಗಿ ಕೂಲಿಯನ್ನೇ ಅವಲಂಬಿಸಿದ್ದು, ಕೆಲಸವಿಲ್ಲದೇ  ಜೀವನ ನಿರ್ವಹಣೆಗಾಗಿ ಗುಳೆ ಹೋಗುವುದು ಸಾಮಾನ್ಯವಾಗಿದೆ.ಈ ಗ್ರಾಮದ ವಾಸಿಗಳು ಸಾಕ್ಷರತೆಯಲ್ಲಿ ಅತ್ಯಂತ ಹಿಂದುಳಿದಿದ್ದು, ಮೂಲ ಸೌಲಭ್ಯಗಳು ಕಾಣ ಸಿಗುವುದಿಲ್ಲ. ಗ್ರಾಮದಲ್ಲಿ ಬಡವರೇ ಹೆಚ್ಚಾಗಿದ್ದರಿಂದ ಬೆರಳೆಣಿಕೆ ಮಕ್ಕಳಷ್ಟೆ ಶಾಲೆಗೆ ಹಾಜರಿರುತ್ತಾರೆ. ಇನ್ನುಳಿದ ಮಕ್ಕಳು ಶಾಲೆಗೆ ಗೈರು ಹಾಜರಾಗಿ ಹೊಲದಲ್ಲಿ ಕೆಲಸಕ್ಕೆ ತೆರಳುತ್ತಾರೆ ಎನ್ನಲಾಗುತ್ತದೆ. ಹಿಂದುಳಿದ ಜನತೆಯೇ ಹೆಚ್ಚಿನ ಸಂಖ್ಯೆಯಲ್ಲಿ ಈ ಗ್ರಾಮದಲ್ಲಿದ್ದು, ಅವರ ಜಮೀನುಗಳಿಗೆ ಅಗತ್ಯ ಸೌಲಭ್ಯ ಕಲ್ಪಿಸಬೇಕಿದೆ.ಅಂಗನವಾಡಿ ಕೇಂದ್ರವಿದ್ದರೂ ಸರಿಯಾಗಿ ನಡೆಯುವದಿಲ್ಲ. ನಿತ್ಯ ದಿನಸಿ ಸೇರಿದಂತೆ ಅಗತ್ಯ ಸಾಮಾನುಗಳನ್ನು ತರಬೇಕೆಂದರೆ ಕೊಡೇಕಲ್ಲಗೆ ತೆರಳಬೇಕು. ಸರಿಯಾದ ರಸ್ತೆಯೂ ಇಲ್ಲ ಎಂದು ಗ್ರಾಮದ ಮುದುಕಪ್ಪ ಸುಣಕಲ್ ಅಸಮಾಧಾನ ವ್ಯಕ್ತಪಡಿಸುತ್ತಾರೆ.ಇದುವರೆಗೂ ಬಸ್ ಸಂಚಾರ ಇಲ್ಲದಿರುರಿಂದ ಆಸ್ಪತ್ರೆ, ಜೀವನಾವಶ್ಯಕ ವಸ್ತುಗಳು ಬೇಕೆಂದರೇ 6 ಕಿ.ಮೀ. ಕಾಲು ನಡಿಗೆಯಲ್ಲಿ ತೆರಳುವ ಅನಿವಾರ್ಯತೆ ಇದೆ. ನಮ್ಮ ಗ್ರಾಮಕ್ಕೆ ಅಗತ್ಯ ಸೌಲಭ್ಯ ಕಲ್ಪಿಸಲಿ ಎಂದು ದ್ಯಾಮಣ್ಣ ಸುಣಕಲ್, ಗ್ರಾಮ ಪಂಚಾಯಿತಿ ಸದಸ್ಯರಾದ ಚಂದ್ರಪ್ಪ ಮಾಳನೂರ, ಬಾಲಪ್ಪ ಎಮ್ಮಿ, ಮುತ್ತಪ್ಪ ಪಂಚಾಯತಿ, ಅಡಿವೆಪ್ಪ ಪೂಜಾರಿ, ಚಂದ್ರಪ್ಪ ಉಪ್ಪಲದಿನ್ನಿ, ಬಸಪ್ಪ ಪೂಜಾರಿ, ಯಲ್ಲಪ್ಪಗೌಡ ಹುಡೇದ, ಅಮಾತೆಪ್ಪ ದೊರಿ, ನಿಂಗಣ್ಣ ಸಾಹುಕಾರ, ಬೀರಪ್ಪ ಪೂಜಾರಿ ಮತ್ತಿತರರು ಒತ್ತಾಯಿಸಿದ್ದಾರೆ.‘ಗುಳೆ ಹೋಗುವುದು ಅನಿವಾರ್ಯ’

‘ನಮ್ಮ ಗ್ರಾಮದಲ್ಲಿ ಬಡ ಕಾರ್ಮಿಕರೇ ಹೆಚ್ಚಾಗಿದ್ದಾರೆ. ಅದಕ್ಕಾಗಿ ಕೂಲಿ ಅರಸಿ ದೂರದ ಪಟ್ಟಣಕ್ಕೆ ತೆರಳುವುದು ಅನಿವಾರ್ಯವಾಗಿದೆ. ಅಲ್ಪ ಭೂಮಿಯಲ್ಲಿ ಕೃಷಿ ಮಾಡಿಕೊಂಡು ಜೀವನ ನಡೆಸುವುದು ಕಷ್ಟ ಸಾಧ್ಯ. ನಮಗೆ ಇಲ್ಲಿಯೇ ಅಗತ್ಯ ಕೆಲಸ ದೊರಕಿಸಿ ಕೊಡಲಿ’.

–ಸಣ್ಣ ತಮ್ಮಣ್ಣ ದಳಪತಿ, ಗ್ರಾಮಸ್ಥ‘ಶೌಚಾಲಯ ನಿರ್ಮಿಸಿ’


‘ನಮ್ಮ ಗ್ರಾಮದಲ್ಲಿ ಶೌಚಾಲಯ ಇಲ್ಲದೇ ಇದ್ದರಿಂದ ನಿತ್ಯ ಮಹಿಳೆಯರು ತೊಂದರೆ ಪಡುತ್ತಿದ್ದಾರೆ. ಗ್ರಾಮದಲ್ಲಿ ಶೌಚಾಲಯ ನಿರ್ಮಿಸಬೇಕು’.

–ದ್ಯಾಮವ್ವ ಗೌಡರ, ಮಹಿಳಾ ಸಂಘದ ಅಧ್ಯಕ್ಷೆ

 

ಪ್ರತಿಕ್ರಿಯಿಸಿ (+)