ಶುಕ್ರವಾರ, ಮೇ 14, 2021
29 °C
ಪ್ರಗತಿ ಪರಿಶೀಲನಾ ಸಭೆಯಲ್ಲಿ ಕಾಗೋಡು ಖಡಕ್ ಪ್ರಶ್ನೆ

ಸೌಲಭ್ಯಕ್ಕಾಗಿ ಜನರು ಬಂದೂಕು ಹಿಡಿಯಬೇಕೆ ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಾಗರ: ಜನರು ವಿದ್ಯುತ್ ಸೌಲಭ್ಯಕ್ಕಾಗಿ ಬಿಹಾರ, ಛತ್ತೀಸಗಡ ರಾಜ್ಯದಲ್ಲಿ ಆಗುತ್ತಿರುವಂತೆ ಬಂದೂಕು ಹಿಡಿಯಬೇಕೆ ಎಂದು ಮೆಸ್ಕಾಂ ಅಧಿಕಾರಿಗಳಿಗೆ  ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಮೆಸ್ಕಾಂ ಅಧಿಕಾರಿಗೆ ಪ್ರಶ್ನೆ ಹಾಕಿದರು. ಇಲ್ಲಿನ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ನಾಡಿಗೆ ಬೆಳಕು ನೀಡಲು ತಮ್ಮ ಬದುಕನ್ನೆ ತ್ಯಾಗ ಮಾಡಿರುವ ತಾಲ್ಲೂಕಿನ ಕರೂರು ಹೋಬಳಿಯಲ್ಲಿ ಕಳೆದ ಏಳು ದಿನಗಳಿಂದ ವಿದ್ಯುತ್ ಸಂಪರ್ಕ ಇಲ್ಲದೆ ಇರುವ ವಿಷಯಕ್ಕೆ ಸಂಬಂಧಪಟ್ಟಂತೆ ಅವರು ಈ ರೀತಿ ಪ್ರಶ್ನಿಸಿದರು.ಮಳೆ ಆರಂಭವಾಗಿದ್ದು ವಿದ್ಯುತ್ ಕಂಬಗಳು ಬಿದ್ದಿರುವುದರಿಂದ ಹೀಗಾಗಿದೆ ಎಂಬ ಮೆಸ್ಕಾಂ ಅಧಿಕಾರಿಗಳ ಉತ್ತರದಿಂದ ತೃಪ್ತರಾಗದ ಕಾಗೋಡು ಬೇಸಿಗೆಯಲ್ಲಿ ಮಳೆಗಾಲವನ್ನು ನಿರೀಕ್ಷಿಸಿ ಮಾಡಬೇಕಾದ ಕೆಲಸ ನೀವು ಮಾಡಿದ್ದರೆ ಹೀಗಾಗುತ್ತಿರಲಿಲ್ಲ ಎಂದರು.ವಿದ್ಯುತ್ ಪರಿವರ್ತಕಗಳ ಕೊರತೆಯಿಂದ ಉದ್ಭವಿಸಿರುವ ಸಮಸ್ಯೆಯ ಬಗ್ಗೆ ಸೊರಬ ಕ್ಷೇತ್ರದ ಶಾಸಕ ಮಧು ಬಂಗಾರಪ್ಪ ಪ್ರಸ್ತಾಪಿಸಿ ಸರಿಯಾದ ಸಮಯಕ್ಕೆ ಪರಿವರ್ತಕಗಳನ್ನು ಪೂರೈಸದೆ ಇರುವುದರಿಂದ ಹಲವೆಡೆ ವಿದ್ಯುತ್ ಸೌಲಭ್ಯ ಇದ್ದೂ ಇಲ್ಲದಂತಾಗಿದೆ ಎಂದರು.ಅಬಕಾರಿ ಇಲಾಖೆ ಮೇಲಿನ ಚರ್ಚೆ ಸಂದರ್ಭದಲ್ಲಿ ವೈನ್‌ಶಾಪ್‌ಗಳಲ್ಲಿ ಚಿಲ್ಲರೆಯಾಗಿ ಮದ್ಯ ಮಾರಾಟ ಮಾಡುವುದನ್ನು ತಡೆಯಿರಿ, ಇದನ್ನು ಉಲ್ಲಂಘಿಸುವ ವ್ಯಕ್ತಿಗಳ ಮೇಲೆ ಕಾನೂನು ಕ್ರಮ ಜರುಗಿಸಿ ಎಂದರು. ಹಳ್ಳಿಗಳಲ್ಲಿ ಅನಧಿಕೃತವಾಗಿ ಮದ್ಯ ಮಾರುವುದನ್ನು ಕೂಡಲೇ ನಿಲ್ಲಿಸಿ ಎಂದು ಕಾಗೋಡು ಅಧಿಕಾರಿಗಳಿಗೆ ಸೂಚನೆ ನೀಡಿದರು.ಗ್ರಾಮಗಳಲ್ಲಿ ನಿವೇಶನರಹಿತರ ಪಟ್ಟಿ ಸಿದ್ಧಗೊಳಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು. ಬಗರ್‌ಹುಕುಂ ಅರ್ಜಿಗಳನ್ನು ಇತ್ಯರ್ಥಗೊಳಿಸಲು ಅಗತ್ಯವಿರುವ ಎಲ್ಲಾ ಕ್ರಮ ಕೈಗೊಂಡು ಶೀಘ್ರದಲ್ಲೇ ಬಗರ್‌ಹುಕುಂ, ಆಶ್ರಯ ಸಮಿತಿ ರಚಿಸಿ ಎಂದು ತಹಶೀಲ್ದಾರ್‌ಗೆ ಆದೇಶಿಸಿದರು. ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಮಹಾಬಲೇಶ್ವರ ಕುಗ್ವೆ, ಉಪಾಧ್ಯಕ್ಷೆ ಗೌರಮ್ಮ, ಕಾರ್ಯನಿರ್ವಹಣಾಧಿಕಾರಿ ಡಾ.ಸದಾಶಿವ, ಜಿಲ್ಲಾ ಪಂಚಾಯ್ತಿ ಸದಸ್ಯರಾದ ಲಲಿತಾ ನಾರಾಯಣ್, ಪದ್ಮಾವತಿ ಚಂದ್ರಕುಮಾರ್, ಸುಮಂಗಲಾ ರಾಮಕೃಷ್ಣ ಹಾಜರಿದ್ದರು.ಕೆಡಿಪಿ ಸಭೆಯಲ್ಲಿ ಕೇಳಿದ್ದು...

ಹೊಟ್ಟೆ ಹಸಿದಾಗ ಅನ್ನ ಕೊಟ್ಟವರನ್ನು ಹಸಿದ ವ್ಯಕ್ತಿ ಯಾವತ್ತೂ ಮರೆಯುವುದಿಲ್ಲ. ಹಾಗೆಯೇ ಅವಶ್ಯಕತೆ ಇದ್ದಾಗ ನೀರು ಕೊಡದೆ ಇದ್ದರೆ ಏನು ಪ್ರಯೋಜನ ಎಂದು ಜಿಲ್ಲಾ ಪಂಚಾಯ್ತಿ ಎಂಜಿನಿಯರ್ ಅವರನ್ನು ಕಾಗೋಡು ತರಾಟೆಗೆ ತೆಗೆದುಕೊಂಡರು.ಅಭಯಾರಣ್ಯ ಎಂದು ನೀವು ಮೆಸ್ಕಾಂ, ಲೋಕೋಪಯೋಗಿ ಇಲಾಖೆಯವರಿಗೆ ರಸ್ತೆ ಬದಿಯ ಮರ ಮುಟ್ಟಲು ಬಿಡದೆ ಇದ್ದರೆ ರಸ್ತೆ, ವಿದ್ಯುತ್ ಇಲ್ಲದೆ ನಾವೆಲ್ಲ ಹಿಮಾಲಯಕ್ಕೆ ಹೋಗಬೇಕೇನು? ಎಂದು ಅರಣ್ಯ ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸಿದರು.ಅರ್ಹರಿಗೆ ಮಾತ್ರ ಸವಲತ್ತು ಕೊಡಿ ಎಂದು ಸಭೆಯಲ್ಲಿದ್ದ ಕೃಷಿ ಅಧಿಕಾರಿಗಳಿಗೆ ತಾಕೀತು ಮಾಡಿದರು. ಹಣ ತಿಂದು ಹಲ್ಲಿಗೆ ಹತ್ತಿದವರ ಹಲ್ಲು ಮುರಿಯಬೇಕಿದೆ ಎಂದು  ನ್ಯಾಯ ಬೆಲೆ ಅಂಗಡಿ ಮಾಲೀಕರಿಗೆ ಕಾಗೋಡು ಎಚ್ಚರಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.