ಭಾನುವಾರ, ಮೇ 16, 2021
27 °C

ಸೌಲಭ್ಯಗಳಿಲ್ಲದೇ ನಲಗುತ್ತಿರುವ ಜ್ಞಾನ ದೇಗುಲಗಳು

ಪ್ರಜಾವಾಣಿ ವಾರ್ತೆ/ ಚಿದಂಬರಪ್ರಸಾದ Updated:

ಅಕ್ಷರ ಗಾತ್ರ : | |

ಯಾದಗಿರಿ: ಶೈಕ್ಷಣಿಕವಾಗಿ ಜಿಲ್ಲೆಯ ಸಾಕಷ್ಟು ಹಿಂದುಳಿದಿದ್ದು, ಈ ಭಾಗಕ್ಕೆ ಹೆಚ್ಚಿನ ಒತ್ತು ನೀಡಬೇಕೆಂಬ ಬೇಡಿಕೆ ಕೇಳಿ ಬರುತ್ತಲೇ ಇದೆ. ಶಾಲೆಗಳಲ್ಲಿ ಶಿಕ್ಷಕರೇ ಇಲ್ಲ ಎಂಬ ಗೋಳು ಪಾಲಕರದ್ದಾದರೆ, ಶಾಲೆಯಲ್ಲಿ ಯಾವ ಸೌಲಭ್ಯಗಳೂ ಇಲ್ಲ ಎಂಬ ಕೊರಗು ವಿದ್ಯಾರ್ಥಿಗಳದ್ದಾಗಿದೆ.ಸಾಮಾನ್ಯ ಶೌಚಾಲಯ, ಬಾಲಕಿಯರ ಶೌಚಾಲಯ, ಆಟದ ಮೈದಾನ, ಗ್ರಂಥಾಲಯ, ಶಾಲೆಯ ಕಂಪೌಂಡ್, ಕುಡಿಯುವ ನೀರಿನ ಸೌಲಭ್ಯ, ಶಾಲಾ ಕೊಠಡಿ ಸೇರಿದಂತೆ ಹಲವಾರು ಸೌಲಭ್ಯಗಳು ಇನ್ನು ಬಹುತೇಕ ಶಾಲೆಗಳ ಮಕ್ಕಳಿಗೆ ಲಭ್ಯವಾಗಿಲ್ಲ. ಸರ್ವ ಶಿಕ್ಷಣ ಅಭಿಯಾನದ ಜಿಲ್ಲಾ ಅನುಷ್ಠಾನ ಸಮಿತಿ ಸಭೆಯಲ್ಲಿ ಈ ಎಲ್ಲ ವಿಷಯಗಳು ಬಹಿರಂಗವಾಗಿವೆ.ಜಿಲ್ಲೆಯ ಪ್ರಾಥಮಿಕ ಶಾಲೆಗಳಲ್ಲಿ 1,00,677 ಬಾಲಕರು ಹಾಗೂ 85,235 ಬಾಲಕಿಯರು ಸೇರಿದಂತೆ ಒಟ್ಟು 1,85,912 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಆದರೆ ಈ ಎಲ್ಲ ಮಕ್ಕಳಿಗೆ ಸೌಲಭ್ಯಗಳೇ ಇಲ್ಲದಿರುವುದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.ಪ್ರಥಮವಾಗಿ ಶಾಲೆಗಳಲ್ಲಿ ಶಿಕ್ಷಕರೇ ಇಲ್ಲದಾಗಿದೆ. ಎರಡು ತರಗತಿಗೆ ಒಬ್ಬ ಶಿಕ್ಷಕರಂತೆ ಬಹಳಷ್ಟು ಶಾಲೆಗಳು ನಡೆಯುತ್ತಿವೆ. ಇನ್ನೂ ಶಿಕ್ಷಕರ ಸಮಸ್ಯೆ ನಿವಾರಣೆ ಆಗಿಲ್ಲ. ಅಷ್ಟರಲ್ಲಿಯೇ ಸೌಲಭ್ಯಗಳ ಕೊರತೆ ಎದುರಾಗಿದೆ.ಸಾರ್ವಜನಿಕ ಶಿಕ್ಷಣ ಇಲಾಖೆಯ 935 ಶಾಲೆಗಳು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಅವುಗಳಲ್ಲಿ 574 ಶಾಲೆಗಳಲ್ಲಿ ಮಾತ್ರ ಸಾಮಾನ್ಯ ಶೌಚಾಲಯಗಳಿದ್ದು, ಇನ್ನೂ 361 ಶಾಲೆಗಳಿಗೆ ಸಾಮಾನ್ಯ ಶೌಚಾಲಯ ಬೇಕಾಗಿವೆ. 546 ಶಾಲೆಗಳಲ್ಲಿ ಬಾಲಕಿಯರ ಶೌಚಾಲಯಗಳೇ ಇಲ್ಲದಾಗಿವೆ. 523 ಶಾಲೆಗಳಲ್ಲಿ ಆಟದ ಮೈದಾನವಿಲ್ಲ. 197 ಶಾಲೆಗಳಲ್ಲಿ ಗ್ರಂಥಾಲಯ ಸೌಲಭ್ಯವಿಲ್ಲ. 570 ಶಾಲೆಗಳು ಕಂಪೌಂಡ್ ಇಲ್ಲದೇ ನಲುಗುತ್ತಿವೆ. 249 ಶಾಲೆಗಳಲ್ಲಿ ಕುಡಿಯುವ ನೀರಿನ ಸೌಲಭ್ಯವೂ ಇಲ್ಲದಾಗಿದೆ.ಶಹಾಪುರ ತಾಲ್ಲೂಕಿನಲ್ಲಿ 289 ಶಾಲೆಗಳಿವೆ. ಅದರಲ್ಲಿ 100 ಶಾಲೆಗಳಲ್ಲಿ ಸಾಮಾನ್ಯ ಶೌಚಾಲಯ, 118 ಶಾಲೆಗಳಲ್ಲಿ ಬಾಲಕಿಯರ ಶೌಚಾಲಯ, 175 ಶಾಲೆಗಳಲ್ಲಿ ಆಟದ ಮೈದಾನ, 85 ಶಾಲೆಗಳಲ್ಲಿ ಗ್ರಂಥಾಲಯ, 195 ಶಾಲೆಗಳಿಗೆ ಕಂಪೌಂಡ್, 100 ಶಾಲೆಗಳ ಮಕ್ಕಳಿಗೆ ಕುಡಿಯುವ ನೀರಿನ ಸೌಲಭ್ಯ ಇನ್ನೂ ಸಿಕ್ಕಿಲ್ಲ.ಸುರಪುರ ತಾಲ್ಲೂಕಿನಲ್ಲಿ 351 ಶಾಲೆಗಳಿದ್ದು, 143 ಶಾಲೆಗಳಲ್ಲಿ ಸಾಮಾನ್ಯ ಶೌಚಾಲಯ, 203 ಶಾಲೆಗಳಲ್ಲಿ ಬಾಲಕಿಯರ ಶೌಚಾಲಯ, 150 ಶಾಲೆಗಳಲ್ಲಿ ಆಟದ ಮೈದಾನ, 35 ಶಾಲೆಗಳಲ್ಲಿ ಗ್ರಂಥಾಲಯ, 185 ಶಾಲೆಗಳಲ್ಲಿ ಕಂಪೌಂಡ್, 82 ಶಾಲೆಗಳಲ್ಲಿ ಕುಡಿಯುವ ನೀರಿನ ಸೌಲಭ್ಯದ ಕೊರತೆ ಕಂಡು ಬಂದಿದೆ. ಇನ್ನು ಯಾದಗಿರಿ ತಾಲ್ಲೂಕಿನಲ್ಲಿ 295 ಶಾಲೆಗಳಿದ್ದು, 118 ಶಾಲೆಗಳಲ್ಲಿ ಸಾಮಾನ್ಯ ಶೌಚಾಲಯ, 225 ಶಾಲೆಗಳಲ್ಲಿ ಬಾಲಕಿಯರ ಶೌಚಾಲಯ, 198 ಶಾಲೆಗಳಲ್ಲಿ ಆಟದ ಮೈದಾನ, 77 ಶಾಲೆಗಳಲ್ಲಿ ಗ್ರಂಥಾಲಯ, 190 ಶಾಲೆಗಳಲ್ಲಿ ಕಂಪೌಂಡ್, 67 ಶಾಲೆಗಳಲ್ಲಿ ಕುಡಿಯುವ ನೀರಿನ ಸೌಲಭ್ಯಗಳು ಇಲ್ಲದಾಗಿದೆ.ಶಾಲಾ ಕೊಠಡಿಗಳೂ ಅಷ್ಟಕ್ಕಷ್ಟೇ

ಜಿಲ್ಲೆಯ ಶಾಲೆಗಳಲ್ಲಿ ಕೊಠಡಿಗಳ ಕೊರತೆಯೂ ಪ್ರಮುಖ ಸಮಸ್ಯೆಯಾಗಿ ಕಾಡುತ್ತಿದೆ. ಬಹುತೇಕ ಶಾಲೆಗಳಲ್ಲಿ ಅತಿ ಹೆಚ್ಚು ದುರಸ್ತಿಗೆ ಬಂದಿರುವ ಕೊಠಡಿಗಳು ಹಾಗೂ ಸದ್ಯಕ್ಕೆ ನಿರ್ಮಾಣ ಹಂತದಲ್ಲಿರುವ ಕೊಠಡಿಗಳ ಸಂಖ್ಯೆಯೇ ಹೆಚ್ಚಾಗಿದೆ.ಜಿಲ್ಲೆಯಲ್ಲಿರುವ 935 ಶಾಲೆಗಳಲ್ಲಿ 3,220 ಕೊಠಡಿಗಳು ಒಳ್ಳೆಯ ಸ್ಥಿತಿಯಲ್ಲಿದ್ದು, 624 ಕೊಠಡಿಗಳಿಗೆ ಸಣ್ಣ ದುರಸ್ತಿ ಮಾಡಬೇಕಾಗಿದೆ. 513 ಕೊಠಡಿಗಳು ದೊಡ್ಡ ಪ್ರಮಾಣದ ದುರಸ್ತಿಗೆ ಕಾದು ಕುಳಿತಿವೆ. ಇನ್ನೂ 542 ಕೊಠಡಿಗಳು ನಿರ್ಮಾಣ ಹಂತದಲ್ಲಿಯೇ ಉಳಿದಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.