ಮಂಗಳವಾರ, ಮೇ 18, 2021
23 °C

ಸೌಲಭ್ಯಗಳ ಕೊರತೆಯಿಂದ ಸೊರಗಿದ ಆಸ್ಪತ್ರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೌಲಭ್ಯಗಳ ಕೊರತೆಯಿಂದ ಸೊರಗಿದ ಆಸ್ಪತ್ರೆ

ವಿಜಯಪುರ: ಇಲ್ಲಿನ ಬಸಪ್ಪನ ತೋಪಿನ ಸರ್ಕಾರಿ ಜಾಗದಲ್ಲಿ ನೂತನವಾಗಿ ನಿರ್ಮಿಣವಾಗಿರುವ ಸಮುದಾಯ ಆರೋಗ್ಯ ಕೇಂದ್ರವು ಸೌಲಭ್ಯಗಳ ಕೊರತೆಯಿಂದಾಗಿ ಸೊರಗಿದೆ. ಈ ಹಿಂದೆ ಇದ್ದ ಸರ್ಕಾರಿ ಸಂಯುಕ್ತ ಆಸ್ಪತ್ರೆಯನ್ನು 30 ಹಾಸಿಗೆಗಳ ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಪರಿವರ್ತಿಸಲಾಗಿದೆ. ಕರ್ನಾಟಕ ರಾಜ್ಯ ಆರೋಗ್ಯ ಪದ್ದತಿಗಳ ಅಭಿವೃದ್ಧಿ ಮತ್ತು ಸುಧಾರಣಾ ಯೋಜನೆಯಡಿ 154.80 ಲಕ್ಷ ರೂ. ಅಂದಾಜು ವೆಚ್ಚದಲ್ಲಿ ಮೇಲ್ದರ್ಜೆಗೇರಿಸಲಾಗಿದೆ. ವಿಜಯಪುರ ಪಟ್ಟಣದಲ್ಲಿ ಜನಸಂಖ್ಯೆ 40 ಸಾವಿರವನ್ನು ಮೀರಿದ್ದು ಒಂದು ಸುಸಜ್ಜಿತ ಆಸ್ಪತ್ರೆಯ ಅಗತ್ಯವನ್ನು ಬಹಳ ವರ್ಷಗಳಿಂದಲೂ ನಿರೀಕ್ಷಿಸಲಾಗಿತ್ತು.ಇದೀಗ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು 30 ಹಾಸಿಗೆಗಳ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಲಾಗಿದ್ದರೂ ಸೌಲಭ್ಯಗಳಿಲ್ಲದೆ ಸಾರ್ವಜನಿಕರು ಪರದಾಡುವಂತಾಗಿದೆ.ಮಂಜೂರು: ನೂತನ ಆಸ್ಪತ್ರೆಗೆ ಸುಮಾರು 10.5 ಲಕ್ಷ ರೂ ವೆಚ್ಚದಲ್ಲಿ 30 ಮಂಚ ಮತ್ತು ಹಾಸಿಗೆ, ವೀಲ್‌ಚೇರ್, ಸ್ಟ್ರೆಚರ್, ಆಮ್ಲಜನಕ ಸಿಲಿಂಡರ್, ಟ್ರಾಲಿ, ಶಸ್ತ್ರಚಿಕಿತ್ಸಾ ಟೇಬಲ್ ಉಪಕರಣಗಳೂ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗಿದೆ.ಉದ್ಘಾಟನೆಯಾಗಿ ತಿಂಗಳುಗಳು ಕಳೆದಿದ್ದರೂ ಸೂಕ್ತವಾಗಿ ವ್ಯವಸ್ಥೆ ಮಾಡಿಕೊಳ್ಳಲಾಗದೆ ಚಿಕಿತ್ಸಾ ಪರಿಕರಗಳು ಮೂಲೆ ಸೇರಿವೆ. ಕೆಲವು ಉಪಕರಣಗಳಂತೂ ಬಿಡುಗಡೆಯ ಭಾಗ್ಯ ಕಂಡಿಲ್ಲ.ಈ ಹಿಂದೆ ಇದ್ದ ಮೂವರು ವೈದ್ಯರು, ಫಾರ್ಮಸಿಸ್ಟ್, 3 ಮಂದಿ ಎ.ಎನ್.ಎಂ, 4 ಮಂದಿ ಸಹಾಯಕ ಸಿಬ್ಬಂದಿ ಜತೆಗೆ ಹಲ್ಲಿನ ತಜ್ಞರು, ಗೈನಕಾಲಜಿಸ್ಟ್, ಆಫೀಸ್ ಸೂಪರಿಂಟೆಂಡೆಂಟ್, ಎಕ್ಸ್‌ರೇ ತಂತ್ರಜ್ಞರುಸೇರಿದಂತೆ ಡಿ-ವರ್ಗದ ಸಿಬ್ಬಂದಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಇಷ್ಟಾದರೂ ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ ಉಂಟಾಗಿದೆ.ಸಿಬ್ಬಂದಿ ಬೇಕು: 6 ಮಂದಿ ಶೂಶ್ರಕರು, ಲ್ಯಾಬ್ ಟೆಕ್ನಿಶಿಯನ್ ಹುದ್ದೆಗಳು ತೆರವಾಗಿದ್ದು, ಖಾಲಿ ಇರುವ ಹುದ್ದೆಗಳಿಗೆ ಸಿಬ್ಬಂದಿ ನೇಮಕವಾಗಬೇಕಿದೆ. ಒಬ್ಬರು ಸಾಮಾನ್ಯ ತಜ್ಞರು, ಅನೇಸ್ತಿಯಾ ತಜ್ಞರಿಲ್ಲದೆ ರೋಗಿಗಳಿಗೆ ತೊಂದರೆಯಾಗಿದೆ.ವಿಜಯಪುರ ಪಟ್ಟಣವೊಂದೇ ಸುಮಾರು 40 ಸಾವಿರ ಜನಸಂಖ್ಯೆ ಹೊಂದಿದ್ದು ಸುತ್ತಮುತ್ತಲ ಹಳ್ಳಿಗಳಲ್ಲಿರುವ ಜನಸಂಖ್ಯೆ ಲಕ್ಷಗಳೇ ಮೀರುತ್ತದೆ. ಸ್ಕ್ಯಾನಿಂಗ್ ಹಾಗೂ ಹೆರಿಗೆಗೆ ದೂರದ ಊರಿಗೆ ಹೋಗಬೇಕಾಗಿರುವ ಪರಿಸ್ಥಿತಿ ಎದುರಾಗಿದ್ದು, ಒಂದು ಸ್ಕ್ಯಾನಿಂಗ್ ಯೂನಿಟ್‌ನ್ನು ಆರಂಭಿಸಬೇಕಿದೆ. ಇಷ್ಟಾದರೆ ಚಿಕಿತ್ಸೆ ಸಿಗದೆ ಸಾವನ್ನಪ್ಪುವವವರ ಸಂಖ್ಯೆ ಕಡಿಮೆ ಆಗಬಹುದೇನೋ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.